ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡ್ಲುಪೇಟೆ | ಬಸವ ಮಂಪಟಕ್ಕೆ ಬೇಕು ಕಾಯಕಲ್ಪ

ದೊಡ್ಡತುಪ್ಪೂರಿನ ದ್ರಾವಿಡ ಶೈಲಿ ವಿಮಾನದ ಪುರಾತನ ದೇವಾಲಯ
Published 23 ಜೂನ್ 2024, 5:35 IST
Last Updated 23 ಜೂನ್ 2024, 5:35 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ದೊಡ್ಡತುಪ್ಪೂರು ಗ್ರಾಮದಲ್ಲಿ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಲಾಗಿದ್ದ ಪುರಾತನ ಬಸವ ದೇವಾಲಯದ ಮೆಟ್ಟಿಲುಗಳು ಕುಸಿದು ಬಿದ್ದಿದ್ದು, ತುರ್ತು ಜೀರ್ಣೋದ್ಧಾರಕ್ಕೆ ಮುಂದಾಗಬೇಕಿದೆ.

 ಮೆಟ್ಟಿಲುಗಳು ಕುಸಿದಿರುವ ಪರಿಣಾಮ ಬಸವನ ಮೂರ್ತಿ ಇರಿಸಿರುವ ದೇವರ ಕೋಣೆಗೆ ಸಂಪರ್ಕ ಕಡಿತಕೊಂಡಂತಾಗಿದೆ. 17-18ನೇ ಶತಮಾನದಲ್ಲಿ ಚಿಕ್ಕದೇವರಾಜ ಒಡೆಯರು ಈ ದೇವಸ್ಥಾನ ನಿರ್ಮಾಣ ಮಾಡಿರುವ ಬಗ್ಗೆ ದಾಖಲೆಗಳು ಇವೆ. ಪಟ್ಟಣದ ಹೊರವಲಯದಲ್ಲಿ ಪೂರ್ವದಿಕ್ಕಿನಲ್ಲಿ ಸುಂದರವಾದ ನಂದಿ ಮಂಟಪ ಇದ್ದು, ಪಶ್ಚಿಮಾಭಿಮುಖವಾಗಿ ಮಂಟಪ ನಿರ್ಮಿಸಲಾಗಿದೆ.

ಒಂದೊಂದು ಮಂಟಪಕ್ಕೂ ನಾಲ್ಕು ಕಂಬಗಳಿವೆ. 16 ಕಂಬಗಳಿರುವ ಮಂಟಪವನ್ನು ನಂದಿ ಮಂಟಪ ಎಂದು ಕರೆಯಲಾಗುತ್ತದೆ. ಈ ಮಂಟಪವನ್ನು ಹತ್ತಲು ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ.  ಮಂಟಪದ ಮೇಲೆ  ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ವಿಮಾನ ಇರಿಸಿರುವುದು  ಇಲ್ಲಿನ ವಿಶೇಷ ಎನ್ನಲಾಗಿದೆ.

ದೊಡ್ಡತುಪ್ಪೂರು ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಪುರಾತನ ಬಸವ ದೇವಾಲಯಕ್ಕೆ ದೊಡ್ಡತುಪ್ಪೂರು ಹಾಗೂ ಸುತ್ತಲಿನ ಗ್ರಾಮಸ್ಥರು ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಇಲ್ಲಿದ್ದ ಬಸವನನ್ನು ಕದ್ದೊಯ್ಯಲಾಗಿತ್ತು.

ದೇವಾಲಯದ ಎದುರು ಮಹದೇಶ್ವರನ ದೇವಾಲಯ ಇರುವ ಕಾರಣ ಬಸವನ ದೇವಾಲಯವನ್ನು ಗ್ರಾಮಸ್ಥರೇ ನಿರ್ವಹಣೆ ಮಾಡುತ್ತಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಸುಣ್ಣ, ಬಣ್ಣ ಬಳಿಯಲಾಗುತ್ತಿದೆ. ಎತ್ತರವಿರುವ ಪೂರ್ಣ ಪ್ರಮಾಣದ ಕಲ್ಲಿನ ಕಟ್ಟಡದ ಮೇಲೆ ನಿಂತರೆ ಸುತ್ತಲಿನ ವಿಹಂಗಮ ನೋಟವನ್ನು ಸವಿಯಬಹುದು.

ಎರಡು ವರ್ಷಗಳ ಹಿಂದೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ದೇಗುಲದ ಬಳಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವು ಮಾಡಿದ್ದರು. ಈಗ ಮಳೆಯ ಕಾರಣ ಮೆಟ್ಟಿಲುಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ. ಇದು ಪುರಾತನ ದೇವಾಲಯವಾದ ಕಾರಣ ತಾಲ್ಲೂಕು ಆಡಳಿತ ಶೀಘ್ರ ದುರಸ್ತಿಗೆ ಕ್ರಮ ವಹಿಸಿ ಮೆಟ್ಟಿಲುಗಳನ್ನು ಪುನರ್ ನಿರ್ಮಾಣ ಮಾಡಬೇಕೆಂದು ದೊಡ್ಡತುಪ್ಪೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಪ್ರಾಚೀನ ದೇಗುಲದ ಸಂರಕ್ಷಣೆ ಅಗತ್ಯ’

ವಾಸ್ತು ರಚನೆಯ ಆಧಾರದಲ್ಲಿ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಾಣವಾಗಿರುವ ನಂದಿ ಮಂಟಪ ಅಥವಾ ಬಸವ ಮಂಟಪ ಇದಾಗಿದೆ. ಈ ಮಂಟಪಕ್ಕೆ ಸಂಬಂಧಿಸಿದ ಶಾಸನಗಳು ಇಲ್ಲ. ಇದೇರೀತಿಯ ಮಂಟಪ ಶಿವಪುರ ಗ್ರಾಮದಲ್ಲೂ ಇದೆ. ಎರಡು ಸ್ಥಳಗಳಲ್ಲಿ ಕಂಡು ಬರುವ ಮಂಟಪ ಒಂದೇ ಕಾಲದ ಅವಧಿಯಲ್ಲಿ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಇಂತಹ ಪುರಾತನ  ದೇವಾಲಯಗಳು ಮುಂದಿನ ಪೀಳಿಗೆಗೆ  ಸಂಸ್ಕೃತಿಯ ಮಾಹಿತಿ ನೀಡಬೇಕಿದ್ದು  ಇವುಗಳನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮತ್ತು ಸಂಘಸಂಸ್ಥೆಗಳು ಮಾಡಬೇಕಿದೆ ಎಂದು ಸಹಾಯಕ ಪ್ರಾಧ್ಯಾಪಕ  ಡಾ.ಮಣಿಕಂಠ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT