ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | 3 ತಿಂಗಳಾದರೂ ಬಿಡುಗಡೆಯಾಗದ ‘ಗೌರವ ಧನ’

ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ಇಲ್ಲ ವೇತನ: ಶಿಕ್ಷಕರ ದಿನಾಚರಣೆಯ ಸಂಭ್ರಮ ಕಸಿದ ಸರ್ಕಾರ
Published : 22 ಸೆಪ್ಟೆಂಬರ್ 2024, 6:16 IST
Last Updated : 22 ಸೆಪ್ಟೆಂಬರ್ 2024, 6:16 IST
ಫಾಲೋ ಮಾಡಿ
Comments

ಚಾಮರಾಜನಗರ: ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ 3 ತಿಂಗಳಿನಿಂದ ಗೌರವ ಧನ ಬಿಡುಗಡೆಯಾಗಿಲ್ಲ. ಸರ್ಕಾರದ ಬಿಡಿಗಾಸು ಗೌರವಧನ ನಂಬಿಕೊಂಡು ಜೀವನ ಮಾಡುತ್ತಿರುವ ಅತಿಥಿ ಶಿಕ್ಷಕರ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ.

ಜಿಲ್ಲೆಯಲ್ಲಿ 2024–25ನೇ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಿಗೆ 170 ಹಾಗೂ ಪ್ರಾಥಮಿಕ ಶಾಲೆಗಳಿಗೆ 584 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ₹ 10,000, ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ₹ 10,500 ಗೌರವ ಧನ ನಿಗದಿಪಡಿಸಲಾಗಿದೆ.

ಶೈಕ್ಷಣಿಕ ವರ್ಷ ಆರಂಭವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ ಅತಿಥಿ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿಲ್ಲ. ಮೂರು ತಿಂಗಳ ವೇತನ ಇಲ್ಲದೆ ಅತಿಥಿ ಶಿಕ್ಷಕರು ಜೀವನ ನಿರ್ವಹಣೆ ಮಾಡಲು ಪರದಾಡುತ್ತಿದ್ದಾರೆ. ‘ಇಂದಲ್ಲ ನಾಳೆ’ ಬರಬಹುದು ಎಂಬ ಭರವಸೆಯೊಂದಿಗೆ ಪರಿಚಿತರ ಬಳಿ ಕೈಸಾಲ ಮಾಡಿಕೊಂಡಿದ್ದಾರೆ.

ಗೌರವಯುತವಾದ ಶಿಕ್ಷಕ ವೃತ್ತಿಯಲ್ಲಿದ್ದರೂ ಸ್ವಾಭಿಮಾನ ಬದಿಗಿಟ್ಟು ನಿತ್ಯದ ಖರ್ಚಿಗೂ ಪರರ ಬಳಿ ಕೈವೊಡ್ಡುವ ಪರಿಸ್ಥಿತಿ ಬಂದಿದೆ. ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಪ್ರತಿ ತಿಂಗಳು ಸಾಲ ಮಾಡುವಂತಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅತಿಥಿ ಶಿಕ್ಷಕರೊಬ್ಬರು ‘ಪತ್ರಿಕೆ’ಯೊಂದಿಗೆ ಅಳಲು ತೋಡಿಕೊಂಡರು.

ಸೆ.23ರಂದು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮಿಸಲು ಸಾಧ್ಯವೇ? ಎಂದು ಅತಿಥಿ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸಿದರು.

ಸರ್ಕಾರ ನಿಗದಿತ ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಬರುವಂತೆ ಸೂಚನೆ ನೀಡುತ್ತದೆ. ಆದರೆ, ನಿಗದಿತ ಸಮಯಕ್ಕೆ ಗೌರವ ಧನ ಬಿಡುಗಡೆ ಮಾಡಬೇಕು ಎಂಬ ಕನಿಷ್ಠ ಕಾಳಜಿ ತೋರದಿರುವುದು ವಿಪರ್ಯಾಸ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರು ಗೌರವಯುತವಾಗಿ ಬದುಕಲು ಸಮಯಕ್ಕೆ ಸರಿಯಾಗಿ ಗೌರವಧನ ಬಿಡುಗಡೆ ಮಾಡಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ಹನೂರು ಸ್ಥಿತಿ ಶೋಚನೀಯ: ಆರ್ಥಿಕವಾಗಿ ತೀರಾ ಹಿಂದುಳಿದಿರುವ ಹನೂರು ತಾಲ್ಲೂಕಿನಲ್ಲಿ ಅತಿಥಿ ಶಿಕ್ಷಕರ ಸ್ಥಿತಿ ಗಂಭೀರವಾಗಿದೆ. ಬಹುತೇಕ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಆವೃತವಾಗಿರುವ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳಿಗೆ ತೆರಳುವುದೇ ಸವಾಲು. ಒಂದೆರಡು ನಿಮಿಷ ತಡವಾಗಿ ಬಸ್‌ ತಪ್ಪಿದರೆ ಅತಿಥಿ ಶಿಕ್ಷಕರು ಶಾಲೆಗೆ ರಜೆ ಹಾಕಿ ಮನೆಯಲ್ಲಿ ಕೂರಬೇಕು. ಆ ದಿನದ ವೇತನಕ್ಕೆ ಕತ್ತರಿ ಬಿದ್ದಂತೆ.

ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ, ಕಾಡಂಚಿನ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ಅತಿಥಿ ಶಿಕ್ಷಕರು ಬಸ್‌ ಸಮಸ್ಯೆಯಿಂದ, ನಿತ್ಯದ ಖರ್ಚು ಭರಿಸಲಾಗದೆ ಶಾಲಾ ಪರಿಸರದಲ್ಲಿಯೇ ಉಳಿದುಕೊಂಡು ವಾರದ ಕೊನೆಯಲ್ಲಿ ಮನೆಗೆ ಬರುತ್ತಿದ್ದಾರೆ. ಮನೆಯ ನಿರ್ವಹಣೆಗೆ ಹಣ ಕೊಡದ ಹಿನ್ನೆಲೆಯಲ್ಲಿ ಶಿಕ್ಷಕ ವೃತ್ತಿ ತೊರೆದು, ಕೂಲಿ ಕೆಲಸಕ್ಕೆ ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ. ಕಷ್ಟಪಟ್ಟು ಓದಿ ಇಷ್ಟಪಟ್ಟು ಮಾಡುತ್ತಿರುವ ಶಿಕ್ಷಕ ವೃತ್ತಿ ಬಿಡಲು ಮನಸ್ಸಿಲ್ಲ. ಜೀವನದ ಬಂಡಿ ಮುನ್ನಡೆಸಲೂ ಸಾಧ್ಯವಾಗುತ್ತಿಲ್ಲ ಎಂದು ಕೆಲವರು ಕಣ್ಣೀರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT