ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಬರ: ನೆರವಿನ ನಿರೀಕ್ಷೆಯಲ್ಲಿ ಬೆಳೆಗಾರ

ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸಾಧಾರಣ ಬರ, ಉಳಿದೆರಡು ತಾಲ್ಲೂಕುಗಳ ಸ್ಥಿತಿ ಭಿನ್ನವಾಗಿಲ್ಲ
Published 18 ಸೆಪ್ಟೆಂಬರ್ 2023, 11:46 IST
Last Updated 18 ಸೆಪ್ಟೆಂಬರ್ 2023, 11:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ 2016 ಭೀಕರ ಬರ ಪರಿಸ್ಥಿತಿ ಉಂಟಾಗಿತ್ತು. ಹನೂರು ಭಾಗದಲ್ಲಿ ಮೇವಿನ ಕೊರತೆಯಾಗಿ ಜಾನುವಾರುಗಳು ಮೃತಪಟ್ಟಿದ್ದವು. 2017ರಲ್ಲೂ ಬರ ಪರಿಸ್ಥಿತಿ ಮುಂದುವರಿದಿತ್ತು. ಆ ನಂತರದ ವರ್ಷದಲ್ಲಿ ಜಿಲ್ಲೆಯಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿ ರೈತರಿಗೆ ಅನುಕೂಲವಾಗಿತ್ತು. ಈ ವರ್ಷ ಮತ್ತೆ ಬರ ಪರಿಸ್ಥಿತಿ ತಲೆದೋರಿದ್ದು, ಸಾವಿರಾರು ರೈತರು ಬೆಳೆನಷ್ಟ ಅನುಭವಿಸಿದ್ದಾರೆ. ಈಗ ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ. 

ಮುಂಗಾರು ಅವಧಿಯಲ್ಲಿ ಶೇ 28ರಷ್ಟು ಮಳೆ ಕೊರತೆಯಾಗಿ, ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವುದರಿಂದ ಸರ್ಕಾರ ಗುಂಡ್ಲುಪೇಟೆ, ಹನೂರು ಮತ್ತು ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ಸಾಧಾರಣ ಬರ ಪರಿಸ್ಥಿತಿ ಇದೆ ಎಂದು ಘೋಷಿಸಿದೆ. ಚಾಮರಾಜನಗರ ತಾಲ್ಲೂಕಿನಲ್ಲಿ ಬೆಳೆ ಹಾನಿ ಹೆಚ್ಚಾಗಿದ್ದರೂ, ಮಳೆ ಕೊರತೆ ಇಲ್ಲದಿರುವ ಕಾರಣಕ್ಕೆ ಬರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಯಳಂದೂರು ತಾಲ್ಲೂಕಿನಲ್ಲಿ ಬೆಳೆಹಾನಿ ಸಂಭವಿಸಿಲ್ಲ. ಮಳೆ ಕೊರತೆ ಪ್ರಮಾಣ ಕಡಿಮೆ ಇರುವುದರಿಂದ ಸರ್ಕಾರದ ಪ್ರಕಾರ ಅಲ್ಲೂ ಬರ ಪರಿಸ್ಥಿತಿ ಇಲ್ಲ.

ಈ ತಿಂಗಳ ಆರಂಭದಲ್ಲಿ ಸ್ವಲ್ಪ ಮಳೆಯಾಗಿರುವುದರಿಂದ ಅಲ್ಲಲ್ಲಿ ಬಿತ್ತನೆ ಚುರುಕುಗೊಂಡಿದೆ. ಈಗ ಬಿತ್ತನೆ ಮಾಡಿದ ಬೆಳೆಗಳಿಗೆ ಹಿಂಗಾರು ಅವಧಿಯಲ್ಲಿ ಮಳೆಯಾಗದಿದ್ದರೆ, ಬೆಳೆ ನಷ್ಟವಾಗಲಿದೆ ಎಂಬ ಆತಂಕದಲ್ಲಿ ರೈತರಿದ್ದಾರೆ.

ಈ ವರ್ಷ ಮುಂಗಾರು ಪೂರ್ವದಿಂದಲೇ ಮಳೆ ಕೈಕೊಟ್ಟಿದೆ. ಮಾರ್ಚ್‌ ಮತ್ತು ಮೇ ತಿಂಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಆ ಸಂದರ್ಭದಲ್ಲಿ ಬಿತ್ತನೆ ಮಾಡಿದ ಬೆಳೆಗೆ ಜೂನ್‌, ಜುಲೈ ಮತ್ತು ಆಗಸ್ಟ್‌ ಅವಧಿಯಲ್ಲಿ ಸಾಕಷ್ಟು ಮಳೆಯಾಗದ ಕಾರಣ, ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಹೆಸರು, ಉದ್ದು, ಎಳ್ಳು, ಅಲಸಂದೆ ಬೆಳೆಗಳು ಹಾನಿಗೀಡಾಗಿವೆ.

ಅಲ್ಲಲ್ಲಿ ಮಳೆಯಾಗುತ್ತಿರುವುದರಿಂದ ಸದ್ಯ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿಲ್ಲ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯೂ ಕಾಡಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಬೇಸಿಗೆ ಅವಧಿಯಲ್ಲಿ ತುಂಬಾ ಕಷ್ಟವಾಗಲಿದೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಜಿಲ್ಲೆಯ ಜನ.

ಶೇ 90ರಷ್ಟು ಬೆಳೆ ನಷ್ಟ

ಗುಂಡ್ಲುಪೇಟೆ ತಾಲ್ಲೂಕಿನಾದ್ಯಂತ ಎರಡು ತಿಂಗಳಲ್ಲಿ ಒಂದೆರಡು ಮಳೆ ಮಾತ್ರ ಆಗಿದ್ದು, ಮಳೆ ನಂಬಿದ್ದ ರೈತರ ಬೆಳೆಗಳು ಒಣಗಿ ನಿಂತಿವೆ. ಕಳೆದ ವರ್ಷ ಉತ್ತಮ ಮಳೆಯಾದ ಕಾರಣ ಅನೇಕ ರೈತರು ಮಳೆ ನಂಬಿ ಬೆಳೆ ಬೆಳೆಯಲು ಮುಂದಾಗಿದ್ದರು. ಸಕಾಲದಲ್ಲಿ ಮಳೆಯಾಗದೆ ಸೂರ್ಯಕಾಂತಿ, ಜೋಳ, ಹತ್ತಿ, ನೆಲಗಡಲೆ ಸೇರಿದಂತೆ ಇನ್ನಿತರ ಬೆಳೆಗಳು ನೆಲಕಚ್ಚಿ ಭಾರಿ ನಷ್ಟ ಉಂಟಾಗಿದೆ. ಶೇ 90ರಷ್ಟು ಬೆಳೆ ಹಾಳಾಗಿದೆ. 

ಗುಂಡ್ಲುಪೇಟೆ ತಾಲ್ಲೂಕು ಪೂರ್ಣವಾಗಿ ಮಳೆಯಾಶ್ರಿತ. ಇದನ್ನು ಸರ್ಕಾರ ಸಾಧಾರಣ ಬರಪೀಡಿತ ಎಂದು ಘೋಷಿಸಿರುವುದಕ್ಕೆ ತಾಲ್ಲೂಕಿನ ರೈತರಿಂದ ವಿರೋಧ ವ್ಯಕ್ತವಾಗುತ್ತಿದೆ.

ಸರ್ಕಾರ ಬರ ತಾಲ್ಲೂಕು ಘೋಷಣೆ ಮಾಡುವುದಕ್ಕೂ ರಾಜಕೀಯ ಮಾಡಿದೆ. ಪ್ರಭಾವಿ ರಾಜಕಾರಣಿಗಳು ಇರುವ 161 ತಾಲ್ಲೂಕನ್ನು ತೀವ್ರ ಬರ, ಉಳಿದ 34 ತಾಲೂಕನ್ನು ‘ಸಾಧಾರಣ ಬರಗಾಲ’ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಶೇ 25ರಷ್ಟು ಮಳೆ ಕೊರತೆ

ಹನೂರು ತಾಲ್ಲೂಕಿನಲ್ಲಿ ಮುಂಗಾರು ಅವಧಿಯಲ್ಲಿ ಶೇ 25ರಷ್ಟು ಮಳೆ ಕೊರತೆ ಉಂಟಾಗಿದೆ. ತಾಲ್ಲೂಕಿನ ಮೂರು ಹೋಬಳಿಗಳಲ್ಲೂ ಕಡಿಮೆ ಮಳೆಯಿಂದಾಗಿ ಜಮೀನಿನಲ್ಲಿ ಬೆಳೆದಿರುವ ಫಸಲೆಲ್ಲಾ ಒಣಗುತ್ತಿದ್ದು ರೈತರನ್ನು ಚಿಂತಗೀಡು ಮಾಡಿದೆ.

ಲೊಕ್ಕನಹಳ್ಳಿ, ಹನೂರು  ಹಾಗೂ ರಾಮಾಪುರ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಬೆಳೆದಿರುವ ಫಸಲು ಸಂಪೂರ್ಣ ಒಣಗಿ ಹಾಳಾಗಿದೆ. ಮೂರು ಹೋಬಳಿ ಪೈಕಿ ಯಾವ ಹೋಬಳಿಯಲ್ಲಿ ಮಳೆ ಕಡಿಮೆಯಾಗಿದ್ದರೂ, ಲೊಕ್ಕನಹಳ್ಳಿ ಹೋಬಳಿಯಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿತ್ತು. ಆದರೆ ಈ ಬಾರಿ ಆ ಭಾಗದ ರೈತರು ಸಹ ಆಕಾಶದತ್ತ ಮುಖ ಮಾಡಿ ಕುಳಿತಿದ್ದಾರೆ.

ತರಕಾರಿ ಬೆಳೆಗೆ ಹೆಸರುವಾಸಿಯಾಗಿದ್ದ ಆಂಡಿಪಾಳ್ಯ, ಪಿ.ಜಿ ಪಾಳ್ಯ, ಒಡೆಯರಪಾಳ್ಯ ಹಾಗೂ ಬೈಲೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ಈ ಬಾರಿ ಬರ ಪರಿಸ್ಥಿತಿ ಎದುರಾಗಿದೆ. ಬಿತ್ತನೆ ಮಾಡಿದ್ದ ಆಲೂಗೆಡ್ಡೆ, ಬೆಳ್ಳುಳ್ಳಿ ಹಾಗೂ ಇನ್ನಿತರೆ ತರಕಾರಿ ಫಸಲು ಹಾಳಾಗಿವೆ. ಲೊಕ್ಕನಹಳ್ಳಿ ಗ್ರಾಮದ ಸುತ್ತಮುತ್ತ ಆಗಸ್ಟ್, ಸೆಪ್ಟೆಂಬರ್‌ ವೇಳೆ ಹತ್ತಿ ಬೆಳೆಯಲಾಗುತ್ತಿತ್ತು. ಆದರೆ, ಮಳೆ ಕೊರತೆಯಿಂದಾಗಿ ಹತ್ತಿ ಬೆಳೆಯುತ್ತಿದ್ದ ಜಮೀನು ಈಗ ಪಾಳು ಬಿದ್ದಿವೆ.

ಉಳಿದಂತೆ ಹನೂರು ಹೋಬಳಿಯ ಶಾಗ್ಯ, ಬಂಡಳ್ಳಿ, ಮಣಗಳ್ಳಿ ರಾಮಾಪುರ ಹೋಬಳಿಯ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಮಾರ್ಟಳ್ಳಿ ಹಾಗೂ ಮಹದೇಶ್ವರ ಬೆಟ್ಟ ಸುತ್ತಮುತ್ತಲಿನ ಗ್ರಾಮಗಳ ಪರಿಸ್ಥಿತಿಯೂ ಬಹುತೇಕ ಇದೇ ರೀತಿ ಇದೆ. ಮಳೆಯಿಲ್ಲದೇ ಕಂಗಲಾಗಿದ್ದ ರೈತರಿಗೆ ಜಲಾಶಯಗಳಲ್ಲೂ ನೀರು ಕಡಿಮೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ರೈತರ ಮುಖ ಆಕಾಶದತ್ತ 

ಕೊಳ್ಳೇಗಾಲ ತಾಲ್ಲೂಕಿನ ಬಹುಪಾಲು ಪ್ರದೇಶ ಕಬಿನಿ ನೀರಾವರಿ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಮಳೆ ಕೊರತೆ ಇದ್ದರೂ, ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಆದರೆ, ಈ ಬಾರಿ ಮುಂಗಾರು ಅವಧಿಯಲ್ಲಿ ಶೇ 36ರಷ್ಟು ಮಳೆ ಕೊರತೆಯಾಗಿದೆ. ನಾಲೆ ನೀರು ಬರುವುದು ವಿಳಂಬವಾಗಿದ್ದರಿಂದಲೂ ಕೃಷಿಗೆ ತೊಂದರೆಯಾಗಿದೆ. 

ಕಸಬಾ ಹಾಗೂ ಪಾಳ್ಯ ಹೋಬಳಿಗಳಲ್ಲೂ ಕೆಲವು ರೈತರು ಈ ಬಾರಿ ‌ಬಿತ್ತನೆ ಮಾಡಲು ಮುಂದಾಗಿಲ್ಲ.

ಈ ಭಾಗದಲ್ಲಿ ನದಿ ಸೇರಿದಂತೆ ನೂರಾರು ಕೆರೆಗಳಿವೆ. ಹೆಚ್ಚಾಗಿ ನದಿ ನೀರು ಹಾಗೂ ಕೆರೆ ನೀರನ್ನೇ ನಂಬಿ ರೈತರು ವ್ಯವಸಾಯ ಮಾಡುತ್ತಾರೆ. ಈ ಸಲ ಮಳೆಯಾಗದ ಕಾರಣ ಯಾವ ಕೆರೆಯಲ್ಲೂ ನೀರಿಲ್ಲ. ಪಂಪ್ ಸೆಟ್ ಹಾಗೂ ಕಬಿನಿ ಕಾಲುವೆ ಸಮೀಪದಲ್ಲಿ ಇರುವ ಜಮೀನಿನವರು ಕೃಷಿ ಮಾಡಲು ಮುಂದಾಗಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ರೈತರು ಕೃಷಿ ಮಾಡುತ್ತಿಲ್ಲ.

ಕಬಿನಿ ನಾಲೆಯಲ್ಲಿ ನೀರು ಬರಲು ಆರಂಭವಾಗಿದೆ. ಆದರೆ ನಾಲೆಯನ್ನು ಸ್ವಚ್ಛ ಮಾಡದ ಕಾರಣ ನೀರು ಬಂದರೂ ಸಹ ಕೆರೆಗಳು ತುಂಬುತ್ತಿಲ್ಲ ಸಮೀಪದ ಜಮೀನಿನವರೇ ನೀರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ವ್ಯವಸಾಯ ಮಾಡಲು ಕಷ್ಟವಾಗುತ್ತಿದೆ.

ಮೊಳಕೆ ಕಟ್ಟದ ಕಾಳು

ಕಬಿನಿ ನೀರಾವರಿ ಪ್ರದೇಶವಾಗಿರುವ ಯಳಂದೂರು ತಾಲ್ಲೂಕಿನಲ್ಲೂ ಈ ಬಾರಿ ರೈತರಿಗೆ ಮಳೆ ಕೊರತೆ ಬಿಸಿ ಮುಟ್ಟಿದೆ. ಕಾಲುವೆಯಲ್ಲೂ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ. ತಾಕಿನಲ್ಲಿ ಉಷ್ಣಾಂಶ ಹೆಚ್ಚಾಗಿ ಬಿತ್ತನೆ ಮಾಡಿದ ಬೆಳೆ ಮೊಳಕೆ ಕಟ್ಟದಾಗಿದೆ. ರಾಗಿ ಮತ್ತು ಭತ್ತದ ಬೆಳೆಗಳು ಕಾಣದಾಗಿದೆ. ಉಳಿದಂತೆ ಕಬ್ಬು ಮುಸುಕಿನ ಜೋಳ ತೋಟಗಾರಿಕಾ ಬೆಳೆಗಳು ಒಣಗುತ್ತಿದ್ದು, ಇಳುವರಿ ಕುಸಿಯುವ ಆತಂಕ ಎದುರಾಗಿದೆ. ತಡವಾಗಿ ಆರಂಭವಾದ ಮುಂಗಾರಿನಿಂದ ಬಿತ್ತನೆ ಬೀಜ ಕೊಳ್ಳುವವರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದೆ. ವಾಡಿಕೆ ಬೆಳೆಗಳಾದ ಭತ್ತ ಮತ್ತು ರಾಗಿ ರೈತರಿಗೆ ಕೈ ಸೇರದಂತಾಗಿದೆ.

ಚಾಮರಾಜನಗರ ತಾಲ್ಲೂಕಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ. ತಾಲ್ಲೂಕಿನ ಸಂತೇಮರಹಳ್ಳಿ ಹೋಬಳಿ ಕಬಿನಿ ನೀರಾವರಿಗೆ ಒಳಪಟ್ಟಿದೆ. ಉಳಿದ ನಾಲ್ಕು ತಾಲ್ಲೂಕುಗಳಿಗೆ ಹೋಲಿಸಿದರೆ ಈ ಬಾರಿ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ ತಾಲ್ಲೂಕಿನಲ್ಲೂ ಶೇ 7ರಷ್ಟು ಕಡಿಮೆ ಮಳೆಯಾಗಿದೆ. ತಾಲ್ಲೂಕಿನಲ್ಲೂ 7,143 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಜೋಳ, ಮೆಕ್ಕೆಜೋಳ, ಸೂರ್ಯಕಾಂತಿ, ಉದ್ದು, ಅಲಸಂದೆ, ಹೆಸರುಕಾಳು ಬೆಳೆದಿರುವ ರೈತರು ಕೈಸುಟ್ಟುಕೊಂಡಿದ್ದಾರೆ.  

ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಪಂಚಾಯಿತಿಯ ರೈತ ಶಿವರಾಮು ಅವರು ಪೈರು ಮೊಳಕೆ ಒಡೆಯದಿರುವುದನ್ನು ತೋರಿಸಿದರು
ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಪಂಚಾಯಿತಿಯ ರೈತ ಶಿವರಾಮು ಅವರು ಪೈರು ಮೊಳಕೆ ಒಡೆಯದಿರುವುದನ್ನು ತೋರಿಸಿದರು
ಮಳೆ ಕಡಿಮೆಯಾಗಿ ಒಣಗುತ್ತಿರುವ ಹತ್ತಿ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿರುವುದು
ಮಳೆ ಕಡಿಮೆಯಾಗಿ ಒಣಗುತ್ತಿರುವ ಹತ್ತಿ ಬೆಳೆಯನ್ನು ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸುತ್ತಿರುವುದು
ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದ ಮಹಾದೇವಪ್ಪ ಅವರ ಜಮೀನಿನಲ್ಲಿ ರಾಗಿ ಪೈರು ಒಣಗಿ ನಿಂತಿರುವುದು
ಹನೂರು ತಾಲ್ಲೂಕಿನ ಚೆನ್ನಾಲಿಂಗನಹಳ್ಳಿ ಗ್ರಾಮದ ಮಹಾದೇವಪ್ಪ ಅವರ ಜಮೀನಿನಲ್ಲಿ ರಾಗಿ ಪೈರು ಒಣಗಿ ನಿಂತಿರುವುದು

ರೈತರು ಏನಂತಾರೆ?

ತೀವ್ರ ಬರ ಎಂದು ಘೋಷಿಸಿ ನದಿ ಮೂಲ ಇರುವ ಜಿಲ್ಲೆ ಮತ್ತು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡಿ ಮಳೆಯಾಶ್ರಿತ ಪ್ರದೇಶ ಬರಡು ಭೂಮಿ ಗುಂಡ್ಲುಪೇಟೆಯನ್ನು ಸಾಧಾರಣ ಬರಗಾಲ ಎಂದು ಘೋಷಣೆ ಮಾಡಿರುವ ಸರ್ಕಾರ ಕ್ರಮ ಸರಿಯಲ್ಲ. ಆದ್ದರಿಂದ ಸರ್ಕಾರ ಪುನರ್ ಪರಿಶೀಲನೆ ನಡೆಸಿ ತಾಲ್ಲೂಕನ್ನು ತೀವ್ರ ಬರಪೀಡಿತ ಎಂದು ಘೋಷಣೆ ಮಾಡಬೇಕು

–ಮಹದೇವಪ್ಪ ಶಿವಪುರ ರೈತ ಮುಖಂಡ

ಬಿತ್ತನೆ ಬೀಜ ಮೊಳೆತಿಲ್ಲ ಎರಡು ಎಕರೆಯಲ್ಲಿ ರಾಗಿ ಬೆಳೆದಿದ್ದ ಮಳೆಯಿಲ್ಲದೇ ಕೆಲವು ಕಡೆ ಪೈರು ಬಂದಿಲ್ಲ. ಮಳೆಯಾಗದಿದ್ದರೆ ಬಂದಿರುವ ಪೈರು ಸಹ ಒಣಗಿ ಹಾಳಾಗಲಿದೆ. ಆಗಿರುವ ಬೆಳೆನಷ್ಟಕ್ಕೆ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು

–ಮಹಾದೇವಪ್ಪ ಚೆನ್ನಾಲಿಂಗನಹಳ್ಳಿ ಹನೂರು ತಾಲ್ಲೂಕು

ಮಳೆ ಬಾರದಿದ್ದರೆ ಸಂಕಟ ಹೆಚ್ಚು ಈಚಿನ ವಾರದಲ್ಲಿ ಒಂದೆರಡು ಮಳೆಯಾಗಿದೆ. ಕಾಡಂಚಿನ ಕೃಷಿಕರು ಮತ್ತು ಸೋಲಿಗರು ಕಾಳು ಬಿತ್ತನೆ ಮಾಡಿದ್ದಾರೆ. ಸಕಾಲದಲ್ಲಿ ಮಳೆಯಾದರೆ ಕಾಫಿ ಮೆಣಸು ರಾಗಿ ಮನೆ ಬಳಕೆಗೆ ಸಿಗಲಿದೆ. ಮಳೆ ಕೈ ಕೊಟ್ಟರೆ ಬೇಸಾಯಗಾರರ ಸಂಕಟ ಹೆಚ್ಚಾಗಲಿದೆ.

–ಜಡೇಗೌಡ ಈರಣ್ಣನ ಕಟ್ಟೆ ಪೋಡು ಯಳಂದೂರು ತಾಲೂಕು

ಪರಿಹಾರ ನೀಡಲಿ ಮಳೆ ಇಲ್ಲದೆ ಬೆಳೆ ಬೆಳೆಯಲು ಆಗುತ್ತಿಲ್ಲ ನಾವು ವ್ಯವಸಾಯ ಮಾಡಿಕೊಂಡೆ ಸುಮಾರು ವರ್ಷಗಳಿಂದಲೂ ಜೀವನ ನಡೆಸುತ್ತಿದ್ದೇವೆ. ಹಾಗಾಗಿ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ನಾವು ಕೆರೆ ನೀರು ಕಾಲುವೆ ನೀರನ್ನೆ ನಂಬಿ ಬೆಳೆ ಬೆಳೆಯುತ್ತಿದ್ದವು. ಈ ಬಾರಿ ಮಳೆ ಇಲ್ಲದೆ ನೀರು ಬರುತ್ತಿಲ್ಲ. 

–ಸುಂದರ್ ಕೆಂಪನಪಾಳ್ಯ ಕೊಳ್ಳೇಗಾಲ ತಾಲ್ಲೂಕು

ಗೋಶಾಲೆ ಆರಂಭಿಸಿ ಮಳೆ ಇಲ್ಲದೇ ಬರ ಆವರಿಸಿದೆ. ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿಗೆ ತೊಂದರೆಯಾಗುತ್ತದೆ. ಹೀಗಾಗಿ ನಮ್ಮ ಭಾಗವನ್ನೂ ಬರಪೀಡಿತ ಎಂದು ಘೋಷಣೆ ಮಾಡಿ ರೈತರಿಗೆ ನಷ್ಟ ತುಂಬಿಸಿಕೊಡಬೇಕು. ಜತೆಗೆ ಗೋ ಶಾಲೆ ಆರಂಭಿಸಬೇಕು.

–ಜಗದೀಶ್ ತೆಳ್ಳನೂರು ಚಾಮರಾಜನಗರ ತಾಲ್ಲೂಕು

ಕೃಷಿಕರಿಗೆ ನೆರವಾಗಬೇಕು ರಾಗಿ ಬಿತ್ತನೆ ಮಾಡಿ 15 ದಿನಗಳು ಕಳೆದಿವೆ. ಅತಿಯಾದ ತಾಪದಿಂದಾಗಿ ಬೀಜ ಒಣಗಿದ್ದು ಮಳೆಬಿದ್ದರೂ ಸಸಿ ಅರಳದಂತಾಗಿದೆ. ಇದರಿಂದ ಭೂಮಿ ಹಸನಗೊಳಿಸಲು ಹಾಗೂ ಬಿತ್ತನೆ ಬೀಜ ಕೊಳ್ಳಲು ಮಾಡಿದ ಖರ್ಚು ಕೈ ಸೇರದಂತಾಗಿದೆ. ಖರ್ಚು ವೆಚ್ಚ ಸರಿದೂಗಿಸಲು ರೈತ ಸಾಲ ಮಡುವಂತಾಗಿದೆ. ಸರ್ಕಾರ ಈ ದೆಸೆಯಲ್ಲಿ ಕೃಷಿಕರಿಗೆ ನೆರವಾಗಲಿ.

–ಮಧುರಾಜ್ ಬೂದಿತಿಟ್ಟು ಗ್ರಾಮ ಯಳಂದೂರು ತಾಲೂಕು

ಅಧಿಕಾರಿಗಳು ಏನಂತಾರೆ?

ಬೆಳೆನಷ್ಟಕ್ಕೆ ಪರಿಹಾರ ಸಿಗಲಿದೆ. ಎನ್‌ಡಿಆರ್‌ಎಫ್‌ ಎಸ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಅನ್ವಯ ಸರ್ಕಾರ ನಮ್ಮ ಜಿಲ್ಲೆಯಲ್ಲಿ ಮೂರು ತಾಲ್ಲೂಕುಗಳಲ್ಲಿ ಸಾಧಾರಣ ಬರಪೀಡಿತ ಎಂದು ಘೋಷಿಸಿದೆ. ಚಾಮರಾಜನಗರ ಮತ್ತು ಯಳಂದೂರಿನಲ್ಲಿ ಮಳೆಯಾಗಿರುವುದರಿಂದ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿಲ್ಲ. ಸೆಪ್ಟೆಂಬರ್‌ ತಿಂಗಳಲ್ಲಿ ಜಿಲ್ಲೆಯಾದ್ಯಂತ ಸ್ವಲ್ಪ ಮಳೆಯಾಗಿದೆ. ಮಳೆ ಕೊರತೆಯಿಂದ ಬೆಳೆಹಾನಿಯಾಗಿರುವ ರೈತರಿಗೆ ಇನ್‌ಪುಟ್‌ ಸಬ್ಸಿಡಿ ಬರಲಿದೆ. –ಆಬಿದ್‌ ಎಸ್‌.ಎಸ್‌. ಕೃಷಿ ಇಲಾಖೆ ಜಂಟಿ ನಿರ್ದೇಶಕ ಇನ್ನೊಂದು ತಂಡದಿಂದ ಭೇಟಿ ರೈತರ ಜಮೀನುಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈ ಬಾರಿ ಬೆಳೆದ ಸೂರ್ಯಕಾಂತಿ ಹತ್ತಿ ನೆಲಗಡಲೆ ಅಲಸಂದೆ ಮೊದಲಾದ ಬೆಳೆಗಳು ಶೇ80ರಿಂದ 85 ರಷ್ಟು ಭಾಗ ಒಣಗಿ ನಷ್ಟವಾಗಿದೆ. ಮುಂದಿನ ವಾರದಿಂದ ಇನ್ನೊಂದು ತಂಡ ಭೆಟಿ ನೀಡಿ ಪರಿಶೀಲನೆ ಮಾಡಿದ ನಂತರ ರೈತರಿಗೆ ಪರಿಹಾರ ಸಿಗಲಿದೆ –ಕಿರಣ್ ಕುಮಾರ್ ಕೃಷಿ ಅಧಿಕಾರಿ ಗುಂಡ್ಲುಪೇಟೆ

ಅಂಕಿ ಅಂಶ

1,17,897 ಹೆಕ್ಟೇರ್‌

ಮುಂಗಾರು ಅವಧಿಗೆ ಜಿಲ್ಲೆಯಲ್ಲಿ ಬಿತ್ತನೆಗೆ ನಿಗದಿಪಡಿಸಲಾಗಿದ್ದ ಗುರಿ

84 ಸಾವಿರ ಹೆಕ್ಟೇರ್‌

ಬಿತ್ತನೆ ನಡೆದಿರುವ ಪ್ರದೇಶ

25,367 ಹೆಕ್ಟೇರ್‌

ಬೆಳೆ ಹಾನಿಯಾಗಿರುವ ಪ್ರದೇಶ

ನಿರ್ವಹಣೆ: ಸೂರ್ಯನಾರಾಯಣ ವಿ. 

ಪೂರಕ ಮಾಹಿತಿ: ಅವಿನ್‌ ಪ್ರಕಾಶ್‌ ಎಂ, ನಾ.ಮಂಜುನಾಥಸ್ವಾಮಿ, ಮಹದೇವ್‌ ಹೆಗ್ಗವಾಡಿಪುರ, ಬಿ.ಬಸವರಾಜು, ಮಲ್ಲೇಶ ಎಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT