ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬರ: ಚಿಕ್ಕಮಗಳೂರು ತಾಲ್ಲೂಕು ವಂಚಿತ

ತಾಲ್ಲೂಕಿನ ಕೆಲ ಹೋಬಳಿಯಲ್ಲಿ ಮಳೆಕುಂಠಿತ, ಇಳುವರಿ ಕುಸಿತ
ರಘು ಕೆ.ಜಿ
Published 6 ಡಿಸೆಂಬರ್ 2023, 6:41 IST
Last Updated 6 ಡಿಸೆಂಬರ್ 2023, 6:41 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯು ಪಶ್ಚಿಮಘಟ್ಟಗಳ ಸಾಲಿನ ಮಲೆನಾಡ ತಪ್ಪಲಿನಲ್ಲಿದ್ದರೂ ತಾಲ್ಲೂಕಿನ ಕೆಲವು ಕಡೆಗಳಲ್ಲಿ ವಾಡಿಕೆಯಂತೆ ಮಳೆಯಾಗದೆ ರೈತರು, ಬೆಳೆಗಾರರು ಪರಿತಪಿಸುತ್ತಿದ್ದಾರೆ. ಸರ್ಕಾರ ಈಗಾಗಲೇ ಮಳೆ ಪ್ರಮಾಣ ಹಾಗೂ ಉಪಗ್ರಹ ಸಮೀಕ್ಷೆಗಳ ವರದಿ ಆಧರಿಸಿ ಕಡೂರು, ಅಜ್ಜಂಪುರ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ ಹಾಗೂ ಕಳಸ ತಾಲ್ಲೂಕುಗಳನ್ನು ಮುಂಗಾರಿನ ತೀವ್ರ ಹಾಗೂ ಸಾಧಾರಣ ಬರಪೀಡಿತ ಎಂದು ವಿಭಾಗಿಸಿ ಘೋಷಣೆ ಮಾಡಿದೆ. ಆದರೆ, ಜಿಲ್ಲಾ ಕೇಂದ್ರದ ಸೆರಗಿನಲ್ಲಿರುವ ಚಿಕ್ಕಮಗಳೂರು ತಾಲ್ಲೂಕನ್ನು ಮಾತ್ರ ಕೈಬಿಟ್ಟಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು ತಾಲ್ಲೂಕು ಕಸಬಾ ಸೇರಿದಂತೆ ಒಟ್ಟು ಎಂಟು ಹೋಬಳಿಗಳನ್ನು ಹೊಂದಿದೆ. ಲಕ್ಯಾ, ಅಂಬಳೆ ಮತ್ತು ಕಸಬಾ ಬಯಲು ಸೀಮೆ ಪ್ರದೇಶವಾದರೆ ಉಳಿದಂತೆ ಆವತಿ, ಜಾಗರ, ಖಾಂಡ್ಯ, ವಸ್ತಾರೆ, ಆಲ್ದೂರು ಮಲೆನಾಡು ವ್ಯಾಪ್ತಿಗೆ ಸೇರಲಿವೆ. ಕಳೆದ ಜೂನ್‌–ಜುಲೈನಿಂದ ಸೆಪ್ಟಂಬರ್‌ವರೆಗೂ ನೈರುತ್ಯ ಮಾರುತ ತಗ್ಗಿದ ಪರಿಣಾಮ ಲಕ್ಯಾ, ಅಂಬಳೆ, ಕಸಬಾ ಹಾಗೂ ಖಾಂಡ್ಯ ಭಾಗದಲ್ಲಿ ಮಳೆ ಕಡಿಮೆಯಾಗಿ ತರಕಾರಿ, ರಾಗಿ, ಜೋಳ ಒಣಗಿವೆ. ಜಲಮೂಲಗಳ ಬತ್ತಿ ಕೆರೆಕಟ್ಟೆಗಳು ಖಾಲಿಯಾಗಿವೆ. ನೀರಾವರಿ ಹೊರತುಪಡಿಸಿ ಮಳೆಯಾಶ್ರಿತ ರೈತರ ಬದುಕು ದುಸ್ತರವಾಗಿದೆ.

67 ಸಾವಿರ ಹೆಕ್ಟೇರ್ ಕೃಷಿ ಭೂ ಹಿಡುವಳಿ ಇರುವ ಈ ತಾಲ್ಲೂಕಿನಲ್ಲಿ ಶೇ 62.83ರಷ್ಟು ಅತಿಸಣ್ಣ ಹಾಗೂ ಶೇ 15.90ರಷ್ಟು ದೊಡ್ಡ ಭೂಹಿಡುವಳಿದಾರರಿದ್ದಾರೆ. ರಾಗಿ, ಜೋಳ, ಭತ್ತ, ಮುಸುಕಿನ ಜೋಳ ಹಾಗೂ ತರಕಾರಿ ಬೆಳೆ ಜತೆಗೆ ಕಾಫಿ, ಕಾಳು ಮೆಣಸು ಕೂಡ ಪ್ರಧಾನ ಬೆಳೆಯಾಗಿದೆ. ನಿಗದಿತ ಅವಧಿಯಲ್ಲಿ ಮಳೆ ಬಾರದ ಪರಿಣಾಮ ಇಳುವರಿ ಕುಂಠಿತವಾಗಿ ರೈತರು ನಷ್ಟ ಅನುಭವಿಸಿದ್ದಾರೆ.

ರಾಜ್ಯ ನೈಸರ್ಗಿಕ ಉಸ್ತುವಾರಿ ವಿಕೋಪ ಕೇಂದ್ರವು ಸತತ ಮೂರು ವಾರಗಳ ಶುಷ್ಕತೆ, ತೇವಾಂಶದ ಕೊರತೆ, ಉಪಗ್ರಹ ಆಧಾರಿತ ಬೆಳೆ ಸೂಚ್ಯಾಂಕ, ಬೆಳೆಬಿತ್ತನೆ ಪ್ರದೇಶವನ್ನು ಆಧರಿಸಿ ಮೌಲ್ಯಮಾಪನ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ. ಅದರ ಅನುಸಾರ ಸಂಪುಟ ಉಪಸಮಿತಿ ತೀರ್ಮಾನದಂತೆ ಬರಪೀಡಿತ ತಾಲ್ಲೂಕು ಎಂದು ಘೋಷಣೆಯಾಗಲಿದೆ. ಆದರೆ, ಚಿಕ್ಕಮಗಳೂರು ತಾಲ್ಲೂಕಿನ ಕೆಲವೆಡೆ ಮಳೆ ಪ್ರಮಾಣ ಕೊರತೆ ಇದೆ. ಈಗಾಗಲೇ ತಾಲ್ಲೂಕಿನ 26 ಹಳ್ಳಿಗಳನ್ನು ಬರ ಸಾಧ್ಯತೆ ಎಂದು ಗುರ್ತಿಸಲಾಗಿದೆ. ಅಂಬಳೆ ವ್ಯಾಪ್ತಿಯ ಹರಿಹರದಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಖಾಸಗಿ ಬೋರ್‌ವೆಲ್‌ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ಬಿ.ಇ.ಸುಮಂತ್ ಹೇಳಿದರು.

ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಹಿಂಗಾರು ಹಂಗಾಮಿಗೆ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ದಾಸ್ತಾನು ಇದೆ. ನೀರು ಪೂರೈಕೆ ಬಗ್ಗೆ ಮುಂಜಾಗ್ರತೆ ವಹಿಸಲಾಗಿದೆ. ನರೇಗಾ ಯೋಜನೆಯಡಿ ಕೃಷಿಹೊಂಡ, ಕೆರೆಗಳ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗಿದೆ. ಮಳೆ ಪ್ರಮಾಣ ಕಡಿಮೆ ಇದೆ. ರೈತರು ಮನವಿ ಸಲ್ಲಿಸಿದ್ದಲ್ಲಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

‘ಸುಮಾರು 15 ಎಕರೆ ಜಾಗದಲ್ಲಿ ಮೆಕ್ಕೆಜೋಳ ಹಾಗೂ ಪರ್ಯಾಯ ಬೆಳೆಯಾಗಿ ಎಳ್ಳು, ಬೀನ್ಸ್, ತರಕಾರಿ ಬೆಳೆದಿದ್ದೆ. ಸಕಾಲಕ್ಕೆ ಮಳೆ ಬಾರದೆ ಬೆಳೆ ಒಣಗಿ ಇಳುವರಿ ಕುಂಠಿತವಾಯಿತು. ಬಿತ್ತನೆ ಬೀಜ, ರಸಗೊಬ್ಬರ, ಬೇಸಾಯ ಸೇರಿ ಒಂದೂವರೆ ಲಕ್ಷ ಖರ್ಚು ಮಾಡಿದ್ದೆ ಈಗ ನಷ್ಟ ಅನುಭವಿಸಿದ್ದೇನೆ’ ಎಂದು ಲಕ್ಯಾ ಗ್ರಾಮದ ರೈತ ಕಲ್ಲೇಶ್‌ ಅಳಲು ತೋಡಿಕೊಂಡರು.

ಅಂಬಳೆಯ ರೈತ ಮಂಜುನಾಥ್ ಮಾತನಾಡಿ, ‘₹25 ಸಾವಿರ ಖರ್ಚು ಮಾಡಿ ಐದು ಎಕರೆಯಲ್ಲಿ ಆಲೂಗಡ್ಡೆ, ಅವರೆ ಬೆಳೆ ಬಿತ್ತನೆ ಮಾಡಿದ್ದೆ. ಬೆಳೆ ನಷ್ಟದಿಂದ ಹಾಕಿದ ಬಂಡವಾಳವೂ ಸಿಗಲಿಲ್ಲ. ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ವಾಸ್ತವ ಸ್ಥಿತಿಗತಿ ನೋಡಿ ಕೂಡಲೇ ಚಿಕ್ಕಮಗಳೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿ ಪರಿಹಾರ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಮಳೆ ಕೊರತೆಯಿಂದ ಗೌಡನಹಳ್ಳಿ ಬಳಿ ಕೆರೆ ಕಾಲುವೆ ಬತ್ತಿ ಹೋಗಿರುವುದು
ಮಳೆ ಕೊರತೆಯಿಂದ ಗೌಡನಹಳ್ಳಿ ಬಳಿ ಕೆರೆ ಕಾಲುವೆ ಬತ್ತಿ ಹೋಗಿರುವುದು

’ಬೆಳೆನಷ್ಟವಾಗಿದ್ದಲ್ಲಿ ರೈತರು ಪರಿಹಾರ ಪಡೆಯಲು ಫ್ರೂಟ್ ತಂತ್ರಾಂಶದಲ್ಲಿ ನೊಂದಣಿಯಾಗಲು ಜಾಗೃತಿ ಮೂಡಿಸಲಾಗಿದೆ. ಹವಮಾನ ಬೆಳೆ ಮಾನದಂಡಗಳನ್ನು ಆಧರಿಸಿ ಸರ್ಕಾರದ ಹಂತದಲ್ಲಿ ಬರಪೀಡಿತ ತಾಲ್ಲೂಕು ಘೋಷಣೆಯಾಗಿವೆ.

-ಸುಜಾತ ಜಂಟಿ ಕೃಷಿ ನಿರ್ದೇಶಕಿ

ಅಡಕೆ ಕಾಫಿ ಕಾಳುಮೆಣಸು ಬೆಳೆ ರೋಗದಿಂದ ಹಾನಿಯಾಗಿ ಇಳುವರಿ ಕುಂಠಿತವಾಗಿ ಸಾಕಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಬೇಸಿಗೆಯಲ್ಲಿ ದೀರ್ಘಾವಧಿ ಬೆಳೆಗಳನ್ನು ರಕ್ಷಿಸಲು ಆವತಿ ಆಲ್ದೂರು ಭಾಗದಲ್ಲಿ ಯಾವುದೇ ಕೆರೆ–ಕಟ್ಟೆಗಳಲ್ಲಿ ನೀರಿಲ್ಲ. ಆದ್ದರಿಂದ ಸರ್ಕಾರ ಚಿಕ್ಕಮಗಳೂರು ತಾಲ್ಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು.

–ಕೆರೆಮಕ್ಕಿ ಮಹೇಶ್ ಕಾಫಿ ಬೆಳೆಗಾರ 

ಮಳೆ ಇಲ್ಲದೆ ಬೆಳೆ ನಷ್ಟ

‘ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದೆ. ಸಂಪೂರ್ಣ ಮಳೆಯಾಗಿದ್ದರೆ ಕೆರೆಕಟ್ಟೆಗಳು ತುಂಬಬೇಕಿತ್ತು. ಜಾನುವಾರುಗಳಿಗೆ ಬರಪೂರ ಮೇವು ಸಿಗಬೇಕಿತ್ತು. ಆದರೆ ಗೌಡನಹಳ್ಳಿ ಉದ್ದೇಬೋರನಹಳ್ಳಿ ಅಂಬಳೆ ಲಕ್ಯಾ ಹಿರೇಗೌಜ ಸಿಂದಿಗೆರೆ ಹಾದಿಹಳ್ಳಿ ಹಳುವಳ್ಳಿ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಮಳೆ ಇಲ್ಲದೇ ಬೆಳೆ ನಷ್ಟವಾಗಿದೆ. ತೆನೆಗಟ್ಟಿದ ರಾಗಿ ಜೋಳ ಒಣಗಿಹೋಗಿವೆ. ಆಲೂಗಡ್ಡೆ ಬೆಳೆ ನೆಲದಲ್ಲಿಯೇ ಕರಗಿದೆ ಕೆಲವೆಡೆ ಭತ್ತವನ್ನೇ ಬೆಳೆಯಲು ಸಾಧ್ಯವಾಗಿಲ್ಲ. ಸರ್ಕಾರಕ್ಕೆ ಅಧಿಕಾರಿಗಳು ವಾಸ್ತವ ಮುಚ್ಚಿಟ್ಟು ತಪ್ಪು ವರದಿ ಸಲ್ಲಿಸಿ ಸಮರ್ಥನೆ ಮಾಡುವುದು ಸರಿಯಲ್ಲ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುಶಾಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಮಗಳೂರು ತಾಲ್ಲೂಕಿನ ಮಳೆ ವಿವರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT