ಐತಿಹಾಸಿಕ ಮಧಗದ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿರುವುದು
ಅಂಕಿ–ಅಂಶ 1,853ಜಿಲ್ಲೆಯಲ್ಲಿರುವ ಒಟ್ಟು ಕೆರೆ 124 ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು 1729ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೆಗಳು
ತುಂಬಿ ತುಳುಕಿದ ಐತಿಹಾಸಿಕ ಕೆರೆಗಳು
ಕಡೂರು: ಈ ಬಾರಿ ಉತ್ತಮ ಮಳೆಯಾಗಿರುವುದು ರೈತರಿಗೆ ಅತೀವ ಸಂತಸ ತಂದಿದೆ. ತಾಲ್ಲೂಕಿನ ಎರಡು ಜೀವನಾಡಿ ಕೆರೆಗಳು ಭರ್ತಿಯಾಗಿವೆ. ಈ ಕೆರೆಯ ಆಶ್ರಿತ ಕೆರೆಗಳೂ ಸಹ ಕೆಲವೇ ದಿನಗಳಲ್ಲಿ ತುಂಬಿ ನಳನಳಿಸಲಿವೆ. ಅಯ್ಯನಕೆರೆಯ ನೀರು ವೇದಾನದಿ ಮೂಲಕ ಹರಿಯುತ್ತದೆ. ಈ ನಡುವೆ ಕೆರೆಯಿಂದ ಕಾಲುವೆಗಳ ಮೂಲಕ ಹಲವಾರು ಕೆರೆಗಳಿಗೆ ನೀರುಣಿಸುತ್ತದೆ. ಹಳೇ ಮಧಗದ ಕೆರೆ ಭರ್ತಿಯಾಗಿ ಕೋಡಿ ಹರಿಯಲಾರಂಭಿಸಿದೆ. ಇದೇ ನೀರು ಚಿಕ್ಕಂಗಳ ಅಂದೇನಹಳ್ಳಿ ಸಂತೆಕೆರೆ ಚೆನ್ನೇನಹಳ್ಳಿ ಚೆನ್ನಾಪುರ ಬುಕ್ಕಸಾಗರ ತಂಗಲಿ ಎಂ.ಕೋಡಿಹಳ್ಳಿ ಬಿಳುವಾಲ ಯಗಟಿಪುರ ಮುಂತಾದ ಪ್ರಮುಖ ಕೆರೆಗಳಿಗೆ ಪ್ರಮುಖ ಆಧಾರ. ಈ ಕೆರೆಗಳಲ್ಲಿ ತಂಗಲಿ ಹೊರತು ಪಡಿಸಿ ಉಳಿದ ಕೆರೆಗಳಿಗೆ ಅಯ್ಯನಕೆರೆಯ ನೀರಿನ ಹರಿಯುತ್ತದೆ. ಎರಡೂ ಕೆರೆಯ ನೀರು ತಾಲ್ಲೂಕಿನ ಆಶ್ರಿತ ಕೆರೆಗಳ ಒಡಲು ತುಂಬಿಸಿ ನಂತರ ಚಿತ್ರದುರ್ಗಕ್ಕೆ ಹರಿಯುತ್ತದೆ. ಈ ಎರಡೂ ಕೆರೆಗಳ 60ಕ್ಕೂ ಹೆಚ್ಚಿನ ಆಶ್ರಿತ ಕೆರೆಗಳಲ್ಲಿ ಈಗಾಗಲೇ ಶೇ 50ಕ್ಕೂ ಹೆಚ್ಚು ನೀರು ತುಂಬಿದ್ದು ಕೆಲವೇ ದಿನಗಳಲ್ಲಿ ಅವು ಕೂಡ ಭರ್ತಿಯಾಗುವ ಸಾಧ್ಯತೆ ಇದೆ.
ಅಂತರ್ಜಲಕ್ಕೆ ಎರಡು ವರ್ಷ ಕೊರತೆ ಇಲ್ಲ
ತರೀಕೆರೆ: ಕಳೆದ ಸಾಲಿನಲ್ಲಿ ಮಳೆಯ ಕೊರತೆಯಿಂದ ಕೆರೆ ಕಟ್ಟೆಗಳಲ್ಲಿ ನೀರು ಇಲ್ಲದೆ ಅಂತರ್ಜಲ ಬತ್ತಿ ಹೋಗಿ ಕೊಳವೆ ಬಾವಿಗಳಲ್ಲಿ ನೀರು ಇಲ್ಲವಾಗಿತ್ತು. ತಾಲ್ಲೂಕಿನ ಕೆಲವು ಭಾಗಗಳಲ್ಲಿ ಕುಡಿಯುವ ನೀರಿಗೂ ಆಹಾಕಾರ ಉಂಟಾಗಿತ್ತು. ಆದರೆ ಕಳೆದೆರಡು ತಿಂಗಳಿಂದ ವಾಡಿಕೆಗೂ ಮೀರಿ ಸುರಿದ ಮಳೆಯಿಂದ ತಾಲೂಕಿನ ಭಾಗಶಃ ಎಲ್ಲ ಕೆರೆಕಟ್ಟೆಗಳು ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಕೊರತೆ ನೀಗಿಸಿದಂತಾಗಿದೆ. ಇನ್ನೂ ಒಂದು ವರ್ಷ ನೀರಿಗೆ ಯಾವುದೇ ಕೊರತೆ ಉಂಟಾಗಲಾರದು. ಇದರಿಂದ ಜನ ಜಾನುವಾರುಗಳಿಗೆ ನೀವು ಮತ್ತು ನೀರಿನ ಕೊರತೆಯಾಗುವುದಿಲ್ಲ ಎಂಬುದು ಸ್ಥಳೀಯರ ಅಂದಾಜು. ತಾಲೂಕಿನ ಪ್ರಮುಖ ಜಲಾಶಯವಾದ ಜಂಬದಹಳ್ಳ ಜಲಾಶಯವು ಸುಮಾರು ಒಂದುವರೆ ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಈ ಜಲಾಶಯವು ಸುಮಾರು ಹದಿನೈದು ಸಾವಿರ ಎಕರೆಗೆ ನಿರೋದಗಿಸುತ್ತದೆ. ಅದೇ ರೀತಿ ಭದ್ರಾ ಜಲಾಶಯ ಕೂಡ ಭರ್ತಿಯಾಗುವ ಹಂತದಲ್ಲಿದ್ದು ಲಕ್ಕವಳ್ಳಿ ಹೋಬಳಿಯ ಎಲ್ಲ ಗ್ರಾಮಗಳಿಗೂ ತರೀಕೆರೆ ಪಟ್ಟಣದ ಕುಡಿಯುವ ನೀರಿಗೂ ಎರಡು ವರ್ಷ ನೀರಿನ ತೊಂದರೆ ಇಲ್ಲವಾಗಿದೆ. ಇನ್ನುಳಿದ ಅಮೃತಪುರ ಕಸಬಾ ಲಿಂಗದಹಳ್ಳಿ ಹೋಬಳಿಯ ಎಲ್ಲಾ ಕೆರೆಕಟ್ಟೆಗಳು ಭರ್ತಿ ಆಗಿರುವುದರಿಂದ ಯಾವುದೇ ರೀತಿಯ ನೀರಿನ ಕೊರತೆ ಆಗಲಾರದು. ತಾಲೂಕಿನ ಪ್ರಮುಖ ಬೆಳೆಗಳಾದ ಅಡಿಕೆ ತೆಂಗು ಕಾಫಿ ಮತ್ತು ಮಳೆಯಾಶ್ರಿತ ಬೆಳೆಗಳಾದ ಜೋಳ ನೆಲಗಡಲೆ ರಾಗಿ ಮತ್ತು ತರಕಾರಿ ಬೆಳೆಗೆ ಅನುಕೂಲ ಆಗಿದೆ.