ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀರೂರು | ಸಂಕ್ರಾಂತಿ ಸಂಭ್ರಮ; ಎಳ್ಳು-ಬೆಲ್ಲ ವಿನಿಮಯ

Published 15 ಜನವರಿ 2024, 13:27 IST
Last Updated 15 ಜನವರಿ 2024, 13:27 IST
ಅಕ್ಷರ ಗಾತ್ರ

ಬೀರೂರು: ಪಟ್ಟಣದಲ್ಲಿ  ಸಂಕ್ರಾಂತಿ ಹಬ್ಬವನ್ನು ಸೋಮವಾರ ಸಡಗರದಿಂದ ಆಚರಿಸಲಾಯಿತು. ಮುಂಜಾನೆ ಮನೆಗಳಲ್ಲಿ ಮನೆದೇವರಿಗೆ ಪೂಜೆ ಸಲ್ಲಿಸಿ ಎಳ್ಳುಬೆಲ್ಲದ ನೈವೇದ್ಯ ಅರ್ಪಿಸಿ ಕುಟುಂಬದವರೊಂದಿಗೆ ದೇವಾಲಯಗಳಿಗೆ ತೆರಳಿ ಭಕ್ತಿ ಸಮರ್ಪಿಸಿದರು.

ಪಟ್ಟಣದ ಆರಾಧ್ಯದೈವ ಶ್ವೀರಭದ್ರಸ್ವಾಮಿ, ಮೈಲಾರಲಿಂಗಸ್ವಾಮಿ ಮತ್ತು ಅಂತರಘಟ್ಟಮ್ಮ ದೇವಾಲಯಗಳಲ್ಲಿ ನೂರಾರು ಭಕ್ತರು ಬೆಳಿಗ್ಗೆಯೇ ಹಣ್ಣು, ಕಾಯಿ, ಎಳ್ಳು-ಬೆಲ್ಲ ಅರ್ಪಿಸಿದರು. ದೇವಾಲಯದಲ್ಲಿ ಭೇಟಿಯಾದ ಹಿರಿಯರು, ಪರಿಚಿತರಿಗೆ ಎಳ್ಳುಬೆಲ್ಲ ನೀಡಿ ಸಂಕ್ರಾಂತಿ ಶುಭಾಶಯ ಕೋರಿದರು. ವೀರಭದ್ರಸ್ವಾಮಿ ದೇವಾಲಯದಲ್ಲಿ ಮಹಿಳೆಯರು ಸಂಕ್ರಾಂತಿ ಶುಭಾಷಯದ ರಂಗೋಲಿ ಬಿಡಿಸಿದ್ದರೆ, ಮೈಲಾರಲಿಂಗಸ್ವಾಮಿ ದೇವಾಲಯದಲ್ಲಿ ಕಲಾವಿದ ರಾಜಶೇಖರ್ ಮೈಲಾರಲಿಂಗಸ್ವಾಮಿಯವರ ಚಿತ್ರವನ್ನು ರಂಗೋಲಿಯಲ್ಲಿ ಅರಳಿಸಿದ್ದರು.

ಬೀರೂರು ಪಟ್ಟಣದ ಮೈಲಾರಲಿಂಗಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಕಲಾವಿದ ರಾಜಶೇಖರ್ ವರ್ಣ ಮತ್ತು ರಂಗೋಲಿಯಲ್ಲಿ ಮೈಲಾರಲಿಂಗಸ್ವಾಮಿಯವರ ಚಿತ್ರ ಬಿಡಿಸಿದ್ದರು.
ಬೀರೂರು ಪಟ್ಟಣದ ಮೈಲಾರಲಿಂಗಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಕಲಾವಿದ ರಾಜಶೇಖರ್ ವರ್ಣ ಮತ್ತು ರಂಗೋಲಿಯಲ್ಲಿ ಮೈಲಾರಲಿಂಗಸ್ವಾಮಿಯವರ ಚಿತ್ರ ಬಿಡಿಸಿದ್ದರು.

ಕರಗಲ್ ಬೀದಿಯಲ್ಲಿ ನೆಲೆಸಿರುವ ಬೇಟೆ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ  ಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ಬೆಳಿಗ್ಗೆಯಿಂದಲೇ ದೇವರ ಮೂಲಮೂರ್ತಿಗೆ ಅಭಿಷೇಕ, ಬೆಣ್ಣೆ ಅಲಂಕಾರ, ಪುಷ್ಪಾಲಂಕಾರ ಮತ್ತು ಮಹಾ ಮಂಗಳಾರತಿ ನೆರವೇರಿದವು. ಸಂಜೆ ಪೂಜಾ ಕಾರ್ಯಗಳು ನೆರವೇರಿಸಿದ ನಂತರ ಅಜ್ಜಂಪುರ ರಸ್ತೆಯಲ್ಲಿರುವ ಮಹಾನವಮಿ ಬಯಲಿಗೆ ವಾದ್ಯಗೋಷ್ಠಿಗಳೊಂದಿಗೆ  ಸ್ವಾಮಿಯ ಉತ್ಸವ  ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಅಲ್ಲಿ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಸ್ವಾಮಿಯವರನ್ನು ಬೇಟೆಯಾಡಲು ಮೊಲ ಬಿಡುವ (ಸಾಂಕೇತಿಕವಾಗಿ ತೆಂಗಿನಕಾಯಿಯನ್ನು ಉರುಳಿ ಬಿಡುವ) ಮತ್ತು ಅದನ್ನು ಸ್ವಾಮಿ ಬೇಟೆ ಆಡುವ ಪದ್ಧತಿ ಆಚರಿಸಲಾಯಿತು.

ಬೀರೂರು ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಶುಭಾಷಯ ಕೋರಲು ಹೂವು ಮತ್ತು ಬಣ್ಣಗಳಿಂದ ವಿಶೇಷ ರಂಗೋಲಿಚಿತ್ರ ಬಿಡಿಸಲಾಗಿತ್ತು.
ಬೀರೂರು ಪಟ್ಟಣದ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಅಂಗವಾಗಿ ಶುಭಾಷಯ ಕೋರಲು ಹೂವು ಮತ್ತು ಬಣ್ಣಗಳಿಂದ ವಿಶೇಷ ರಂಗೋಲಿಚಿತ್ರ ಬಿಡಿಸಲಾಗಿತ್ತು.

ಮೂಲ ಸ್ಥಾನಕ್ಕೆ ಹಿಂದಿರುಗಿದ ನಂತರ ಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತು. ಸಂಜೆ ಬಂಧುಗಳ ಮನೆಗೆ ತೆರಳಿ ಹಲವರು ಎಳ್ಳುಬೆಲ್ಲ ಹಂಚಿ ಶುಭಾಶಯ ಕೋರಿದರು. ಮಕ್ಕಳು ಮನೆಗಳಿಗೆ ತೆರಳಿ ಸಿಹಿ ವಿತರಿಸಿ ಹಿರಿಯರ ಆಶೀರ್ವಾದ ಪಡೆದರು. ಬಸಪ್ಪ ಬಡಾವಣೆಯಲ್ಲಿ ಮಕ್ಕಳಿಗೆ ಸುಗ್ಗಿಹಬ್ಬದ ಎಳ್ಳುಬೆಲ್ಲ, ಕಬ್ಬು, ಅವರೆಕಾಯಿ, ಸಿಹಿಪೊಂಗಲ್ ಹಾಗೂ ಕಾರದ ಹುಗ್ಗಿಯ ಆಹಾರದ ಸೊಗಡಿನ ರೈತರ ಜಾನಪದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆ ಕುರಿತಂತೆ ಕಾರ್ಯಕ್ರಮ ನಡೆಸಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT