ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ನಿರ್ವಹಣೆ ಸಮಸ್ಯೆ: ಇದ್ದೂ ಇಲ್ಲದಂತಾದ ಕ್ರೀಡಾಂಗಣ

Published : 7 ಅಕ್ಟೋಬರ್ 2024, 5:27 IST
Last Updated : 7 ಅಕ್ಟೋಬರ್ 2024, 5:27 IST
ಫಾಲೋ ಮಾಡಿ
Comments
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ನಿಂತಿರುವ ಮಳೆ ನೀರು
ಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿರುವ ಸಿಂಥೆಟಿಕ್‌ ಟ್ರ್ಯಾಕ್‌ ಮೇಲೆ ನಿಂತಿರುವ ಮಳೆ ನೀರು
ಕ್ರೀಡಾಂಗಣದಲ್ಲಿ ಸಮಸ್ಯೆಗಳಿರುವುದು ಗಮನದಲ್ಲಿದೆ. ಸಮಗ್ರ ಯೋಜನೆ ರೂಪಿಸಿ ಅಭಿವೃದ್ಧಿಪಡಿಸಲಾಗುತ್ತದೆ. ಮಳೆಗಾಲದಲ್ಲಿ ಹುಲ್ಲು ಬೆಳೆದಿದ್ದು ಶೀಘ್ರ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತದೆ
ಸುಚೇತ ಎಂ.ನೆಲವಗಿ ಸಹಾಯಕ ನಿರ್ದೇಶಕಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ
ಜಿಲ್ಲಾ ಕ್ರೀಡಾಂಗಣದ ಸಮಸ್ಯೆ ಎಷ್ಟು ಹೇಳಿದರೂ ಮುಗಿಯದಷ್ಟಿವೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಎದುರಿಸುವ ಸಮಸ್ಯೆ ನೋಡಿದರೆ ಬೇಸರವಾಗುತ್ತದೆ. ಕಲ್ಲುಮಿಶ್ರಿತ ಮರಳಿನ ಲಾಂಗ್‌ ಜಂಪ್‌ ಪಿಟ್‌ನಲ್ಲಿ ಗಾಯವಾಗುವುದು ಮಾಮೂಲಿಯಾಗಿದೆ
ಸಿ.ಶಿವಮೂರ್ತಿ ಕ್ರೀಡಾಪಟು
ಸರಿಯಾಗಿ ನಿರ್ವಹಣೆ ಮಾಡಿದರೆ ಎಲ್ಲವೂ ಸರಿಯಾಗುತ್ತದೆ. ಶೌಚಾಲಯ ಮೈದಾನ ಕ್ರೀಡಾಪಟುಗಳಿಗಿಂತ ಸಾರ್ವಜನಿಕರಿಗೆ ಬಳಕೆಯಾಗಿದ್ದೇ ಹೆಚ್ಚು. ಕಬಡ್ಡಿ ಕೋರ್ಟ್‌ಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ
ಎಸ್‌.ಎಚ್‌.ಲೋಹಿತ್‌ ಕ್ರೀಡಾಪಟು
₹ 30 ಕೋಟಿ ವೆಚ್ಚದಲ್ಲಿ ಹೊಳಲ್ಕೆರೆ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗುತ್ತಿದ್ದು ಕಾಮಗಾರಿ ಮುಗಿದ ನಂತರ ಇದು ಜಿಲ್ಲೆಯಲ್ಲಿಯೇ ಸುಂದರ ಕ್ರೀಡಾಂಗಣ ಆಗಲಿದೆ
ಎಂ.ಚಂದ್ರಪ್ಪ ಶಾಸಕ
ಶೀಘ್ರದಲ್ಲಿಯೇ ವ್ಯವಸ್ಥೆ 
ಹಿರಿಯೂರು: ಇದು ಹೆಸರಿಗೆ ಮಾತ್ರ ತಾಲ್ಲೂಕು ಕ್ರೀಡಾಂಗಣ. ಇಲ್ಲಿ ಆಟದ ಅಂಕಣ ಶುದ್ಧ ಕುಡಿಯುವ ನೀರು ಶೌಚಾಲಯ ಕ್ರೀಡಾ ತರಬೇತುದಾರ ಸೇರಿ ಯಾವುದನ್ನೇ ಕೇಳಿದರೂ ಸಿಗುವ ಸಿದ್ಧ ಉತ್ತರ ‘ಶೀಘ್ರದಲ್ಲಿಯೇ ವ್ಯವಸ್ಥೆ ಮಾಡುತ್ತೇವೆ’ ಎಂಬುದಾಗಿದೆ. ನಗರದ ಹುಳಿಯಾರು ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣ ಮಳೆ ಬಂದರೆ ಹುಲ್ಲುಗಾವಲಿನಂತೆಯೂ ಬೇಸಿಗೆಯಲ್ಲಿ ಬರಡು ಭೂಮಿಯಂತೆಯೂ ಆಗುತ್ತದೆ. ನಗರಕ್ಕೆ ಹೇಳಿಕೊಳ್ಳುವಂತಹ ಒಂದು ಕ್ರೀಡಾಂಗಣ ಬೇಡವೇ? ಎಂಬ ಪ್ರಶ್ನೆಗೆ ಹಲವು ವರ್ಷಗಳಿಂದ ಉತ್ತರ ಸಿಗುತ್ತಿಲ್ಲ. ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವಧಿಯಲ್ಲಿ ಕಾಂಪೌಂಡ್ ಗ್ಯಾಲರಿ ನಿರ್ಮಾಣ ಆಗಿದ್ದು ಬಿಟ್ಟರೆ ಬೇರೆ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮೈದಾನದ ಅಭಿವೃದ್ಧಿಗೆ ವಾಯುವಿಹಾರಿಗಳು ಸಮನ್ವಯ ಕ್ರೀಡಾ ಸಮಿತಿ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದಾರೆ. ಹಿರಿಯೂರಿನಲ್ಲಿ ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿದ್ದಾರೆ. 10 ವರ್ಷದ ಹಿಂದೆ ಕ್ರೀಡಾಪಟುಗಳು ನೆಹರೂ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದರು. ಜನಸಂಖ್ಯೆ ಹೆಚ್ಚಿದ ಕಾರಣ ಹುಳಿಯಾರು ರಸ್ತೆಯ ಕ್ರೀಡಾಂಗಣಕ್ಕೆ ಹೋಗುವುದು ಅನಿವಾರ್ಯ ಆಗಿತ್ತು. ಆದರೆ ಇಲ್ಲಿನ ಅವ್ಯವಸ್ಥೆ ಕ್ರೀಡಾಪಟುಗಳಿಗೆ ಬೇಸರ ತರಿಸಿದೆ.
ಸಿಗುತ್ತಿಲ್ಲ 6 ಎಕರೆ ಸರ್ಕಾರಿ ಜಾಗ
ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಕ್ರೀಡಾಂಗಣ ಇಲ್ಲದಿರುವುದು ಕ್ರೀಡಾಪಟುಗಳ ಭವಿಷ್ಯಕ್ಕೆ ತೊಂದರೆಯಾಗಿದೆ. ಶಾಲೆಗಳ ಆವರಣ ಹೊರತುಪಡಿಸಿ ಎಲ್ಲಿಯೂ ವ್ಯವಸ್ಥಿತ ಮೈದಾನ ಇಲ್ಲ. ಮೊಳಕಾಲ್ಮುರಿನ ಸರ್ಕಾರಿ ಪಿಯು ಕಾಲೇಜಿಗೆ ಹೊಂದಿಕೊಂಡ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ‘ಬಿ. ಶ್ರೀರಾಮುಲು ಶಾಸಕರಾಗಿದ್ದ ವೇಳೆ ಕೇಂದ್ರ ಸರ್ಕಾರದ ನಿಯೋಗ ಪ್ರಧಾನಮಂತ್ರಿ ಖೇಲ್‌ ಯೋಜನೆಯಡಿ ಕ್ರೀಡಾಂಗಣ ನಿರ್ಮಾಣದ ಸಾಧಕ- ಬಾಧಕ ಪರಿಶೀಲಿಸಿತು. ಈ ಯೋಜನೆಯಲ್ಲಿ ಕನಿಷ್ಠ 6 ಎಕರೆ ಸ್ಥಳವಿರಬೇಕು ಎಂಬ ನಿಯಮವಿರುವ ಪರಿಣಾಮ ತಿರಸ್ಕಾರವಾಯಿತು. 6 ಎಕರೆ ಸರ್ಕಾರಿ ಜಾಗ ಗುರುತಿಸಿದಲ್ಲಿ ಖೇಲ್‌ ಯೋಜನೆಯಡಿ ಕ್ರೀಡಾಂಗಣ ನಿರ್ಮಿಸಲು ಅವಕಾಶವಿದ್ದು ಈ ಬಗ್ಗೆ ತಾಲ್ಲೂಕು ಆಡಳಿತ ಗಮನ ನೀಡಬೇಕಿದೆ’ ಎನ್ನುತ್ತಾರೆ ಬಿಜೆಪಿ ಮಂಡಲಾಧ್ಯಕ್ಷ ಪಿ.ಎಂ. ಮಂಜುನಾಥ್‌.
ಕ್ರೀಡಾಂಗಣ ನಿರ್ಮಾಣ ನನೆಗುದಿಗೆ
ಹೊಳಲ್ಕೆರೆ: ಪಟ್ಟಣದ ಎಂ.ಎಂ. ಶಾಲೆ ಹಿಂಭಾಗದಲ್ಲಿ ನಡೆಯುತ್ತಿರುವ ತಾಲ್ಲೂಕು ಕ್ರೀಡಾಂಗಣದ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗ್ಯಾಲರಿ ಸಭಾಂಗಣ ನಿರ್ಮಿಸಲಾಗಿದೆ. ಗ್ಯಾಲರಿಗೆ ರೂಫಿಂಗ್ ಅಳವಡಿಸಿ ಟ್ರ್ಯಾಕ್‌ಗಳನ್ನು ನಿರ್ಮಿಸಬೇಕಿದೆ. ಈಜುಗೊಳ ನಿರ್ಮಾಣಕ್ಕೂ ಟೆಂಡರ್ ಕರೆಯಲಾಗಿದ್ದು ಕಾಮಗಾರಿ ಆರಂಭವಾಗಬೇಕಿದೆ. ಕಾಮಗಾರಿ ಪೂರ್ಣಗೊಳ್ಳದ ಕಾರಣ ಕ್ರೀಡಾಪಟುಗಳಿಗೆ ತೊಂದರೆ ಆಗಿದೆ. ಮಳೆ ಬಂದರೆ ಕ್ರೀಡಾಂಗಣದಲ್ಲಿ ಕೆಸರು ತುಂಬಿಕೊಳ್ಳಲಿದ್ದು ಆಟ ಆಡುವುದು ಕಷ್ಟವಾಗಿದೆ. ರಾಷ್ಟ್ರೀಯ ಹಬ್ಬಗಳನ್ನು ಕೊಟ್ರೆ ನಂಜಪ್ಪ ಕಾಲೇಜು ಮೈದಾನದಲ್ಲಿ ಆಚರಿಸಲಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕನ್ನಡ ರಾಜ್ಯೋತ್ಸವವನ್ನು ಹೊಸ ಕ್ರೀಡಾಂಗಣದಲ್ಲಿಯೇ ಆಚರಿಸುವಂತಾಗಲಿ ಎಂಬುದು ಕ್ರೀಡಾಪಟುಗಳ ಒತ್ತಾಯ.
ಕ್ರೀಡಾಕೂಟ ನಡೆಸಲು ಇಲ್ಲ ಸೌಲಭ್ಯ
ಹೊಸದುರ್ಗ: 8 ಎಕರೆಯಲ್ಲಿ ನಿರ್ಮಿಸಿದ್ದ ತಾಲ್ಲೂಕು ಕ್ರೀಡಾಂಗಣ ಇದೀಗ ಮೂಲಸೌಲಭ್ಯದ ಜತೆಗೆ ನಿರ್ವಹಣೆ ಕೊರತೆ ಎದುರಿಸುತ್ತಿದೆ. ಒಳಾಂಗಣ ಕ್ರೀಡಾಂಗಣ ಆರಂಭವಾದಗಿಂದಲೂ ಬಣ್ಣ ಕಂಡಿಲ್ಲ. ಗೋಡೆಗಳು ಬಿರುಕು ಬಿಟ್ಟಿದ್ದು ಹಳೆಯ ಕಟ್ಟಡದಂತಾಗಿವೆ. ತಾಲ್ಲೂಕು ಹೋಬಳಿ ಮಟ್ಟದ ಕ್ರೀಡಾಕೂಟ ನಡೆಸಲು ಸೌಲಭ್ಯವಿಲ್ಲದಂತಾಗಿದೆ. ‘200 ಮೀಟರ್‌ ಸಿಂಥೆಟಿಕ್‌ ಟ್ರ್ಯಾಕ್‌ ಕಿತ್ತು ಹೋಗಿದ್ದು ಮಳೆ ಬಂದರೆ ನೀರು ತುಂಬಿರುತ್ತದೆ. ಕುಡಿಯುವ ನೀರು ವಿದ್ಯುತ್ ಶೌಚಾಲಯ ಸೇರಿದಂತೆ ಮೂಲ ಸೌಕರ್ಯಗಳಿಲ್ಲ. ಪ್ರತ್ಯೇಕ ಜಿಮ್‌ ಕಟ್ಟಡ ಕ್ರೀಡಾ ಸಾಮಗ್ರಿಗಳ ವಿತರಣೆ ಆಗಬೇಕು. ಹೈಟೆಕ್‌ ಶೌಚಾಲಯ ನಿರ್ಮಿಸಿ ಒಂದು ವರ್ಷವಾದರೂ ಬಳಕೆಗೆ ಅವಕಾಶವಿಲ್ಲ’ ಎನ್ನುತ್ತಾರೆ ಕ್ರೀಡಾಪಟು ಚಂದ್ರಶೇಖರ್‌.
24 ವರ್ಷದ ಹಿಂದೆಯೇ ಜಮೀನು ಮೀಸಲು
ನಾಯಕನಹಟ್ಟಿ: ಹೋಬಳಿ ಕೇಂದ್ರ ಸ್ಥಾನ ನಾಯಕನಹಟ್ಟಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 24 ವರ್ಷದ ಹಿಂದೆಯೇ 3 ಎಕರೆ ಜಮೀನು ಮೀಸಲಿಡಲಾಗಿದ್ದು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. 1997-98ರಲ್ಲಿ ಅಂದಿನ ಗ್ರಾಮ ಪಂಚಾಯಿತಿ ಆಡಳಿತ ಕ್ರೀಡಾಂಗಣಕ್ಕೆ ಜಾಗ ಮೀಸಲಿರಿಸಲು ಕಂದಾಯ ಇಲಾಖೆಗೆ ಮನವಿ ಮಾಡಿತ್ತು. ಕಂದಾಯ ಇಲಾಖೆ ಪಟ್ಟಣದ ಸರ್ವೆ ನಂ. 194ರಲ್ಲಿದ್ದ 24 ಎಕರೆ ಗೋಮಾಳದಲ್ಲಿ 3 ಎಕರೆ ಪ್ರದೇಶವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ನೀಡಿ ಆದೇಶಿಸಿತ್ತು. ಅಂದಿನಿಂದ ಈವರೆಗೂ ಕ್ರೀಡಾಂಗಣ ಕ್ರೀಡಾ ಚಟುವಟಿಕೆ ನಡೆಯುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳು ಕ್ರೀಡಾಂಗಣ ನಿರ್ಮಾಣದ ವಿಷಯದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಪಟ್ಟಣದ ಎಸ್‌ಟಿಎಸ್‌ಆರ್ ವಿದ್ಯಾಸಂಸ್ಥೆ ಆವರಣ ಸದ್ಯಕ್ಕೆ ಕ್ರೀಡಾಂಗಣವಾಗಿದೆ. ಶಾಲಾ ಕ್ರೀಡಾಕೂಟಗಳು ಇದೇ ಆವರಣದಲ್ಲಿ ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT