ದಾವಣಗೆರೆ: ಅಭಿನಯಪೂರ್ವಕವಾಗಿ ಹಾಡುವಂತಹ ‘ರಂಗ ಸಂಗೀತ’ದ ತರಬೇತಿ ನೀಡಿರುವ ‘ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ’ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಅಂಥದ್ದೊಂದು ವಿಶಿಷ್ಟ ಪ್ರಯೋಗ ನಡೆಸಿದ್ದು, ವಿಭಿನ್ನ ಪ್ರದರ್ಶನಕ್ಕೆ ಅಣಿಯಾಗಿದೆ.

ಅಭಿನಯವನ್ನೇ ಮುಖ್ಯವಾಗಿಟ್ಟುಕೊಂಡು ಸಾವಿರಾರು ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಸಂಗೀತವನ್ನೇ ಕೇಂದ್ರವಾಗಿಟ್ಟುಕೊಂಡು ಸಾಕಷ್ಟು ಪ್ರದರ್ಶನಗಳೂ ನಡೆಯುತ್ತಿವೆ. ಆದರೆ, ಸಂಗೀತ ಹಾಗೂ ಅಭಿನಯವನ್ನು ಸಮ್ಮಿಳನಗೊಳಿಸಿ ಪ್ರದರ್ಶನ ನೀಡುವಂತಹ ಹೊಸ ಪ್ರಯೋಗಕ್ಕೆ ದಾವಣಗೆರೆ ರಂಗಾಯಣ ನಾಂದಿಹಾಡಿದೆ.

ಗುರುವಾರ (ನ.7ರಂದು) ಸಂಜೆ 6 ಗಂಟೆಗೆ ಜಯದೇವ ವೃತ್ತದ ಬಳಿಯ ಶಿವಯೋಗಿ ಮಂದಿರದಲ್ಲಿ ‘ರಂಗಸಂಗೀತ ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರ’ದ ಸಮಾರೋಪದಲ್ಲಿ ‘ಅಭಿನಯ ಸಂಗೀತ ಪ್ರದರ್ಶನ’ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

12 ನಾಟಕಗಳ 31 ರಂಗಗೀತೆಗಳನ್ನು ಕಲಾವಿದರು ಅಭಿನಯದ ಮೂಲಕ ಪ್ರಸ್ತುತಪಡಿಸಲಿದ್ದಾರೆ. ರಾಮಾಯಣ, ಮಹಾಭಾರತ, ಹೇಮರೆಡ್ಡಿ ಮಲ್ಲಮ್ಮ, ಜಗಜ್ಯೋತಿ ಬಸವೇಶ್ವರ ಸೇರಿದಂತೆ ಪೌರಾಣಿಕ, ಐತಿಹಾಸಿಕ ನಾಟಕಗಳ ಸನ್ನಿವೇಶಗಳನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ಪ್ರತಿ ಸನ್ನಿವೇಶವನ್ನೂ ನಿರೂಪಕರು ಪ್ರೇಕ್ಷಕರಿಗೆ ವಿವರಿಸಲು ಅಣಿಯಾಗಿದ್ದಾರೆ.

ಅಭಿನಯ ಸಂಗೀತ ಪ್ರದರ್ಶನದಲ್ಲಿ ಪರಂಪರಾಗತ ವಾದ್ಯಗಳಾದ ಲೆಗ್ ಹಾರ್ಮೋನಿಯಂ (ಕಾಲ್ ಪೆಟ್ಟಿಗೆ), ತಬಲಾ, ವಯಲಿನ್ಗಳನ್ನು ಮಾತ್ರವೇ ಬಳಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿರುವ ಮಾಧುರ್ಯವನ್ನು ಪ್ರೇಕ್ಷಕರಿಗೆ ಉಣಬಡಿಸುವುದೇ ಇದರ ಉದ್ದೇಶ ಎನ್ನುತ್ತಾರೆ ರಂಗಸಂಗೀತ ನಿರ್ದೇಶಕ ರಾಘವ ಕಮ್ಮಾರ.

ಹತ್ತಾರು ಕ್ಷೇತ್ರಗಳ ಸಾಧಕರ ಸಂಗಮ:

ರಂಗಸಂಗೀತ ಕಲಿಕಾ ಕಾರ್ಯಾಗಾರದಲ್ಲಿ 18 ಶಿಬಿರಾರ್ಥಿಗಳು ಪಾಲ್ಗೊಂಡು ತರಬೇತಿ ಪಡೆದಿದ್ದಾರೆ. ವಿಶೇಷವೆಂದರೆ ಇವರೆಲ್ಲ ಭಿನ್ನ ಕ್ಷೇತ್ರಗಳವರು. ಶಿಕ್ಷಕರು, ವಿದ್ಯಾರ್ಥಿಗಳು, ಕೃಷಿಕರು, ಪದವೀಧರರೂ ಕಾರ್ಯಾಗಾರದಲ್ಲಿ ಸಂಗಮಗೊಂಡಿದ್ದಾರೆ. ವಿಜಯನಗರ, ಚಾಮರಾಜನಗರ, ಮೈಸೂರು, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಶಿಬಿರಾರ್ಥಿಗಳು ರಂಗ ಸಂಗೀತ ಪ್ರದರ್ಶನಕ್ಕೆ ಕಾತರರಾಗಿದ್ದಾರೆ.

‘ಊರಲ್ಲಿ ಹೊಲ– ಮನೆ ಕೆಲಸ ಮಾಡಿಕೊಂಡಿದ್ದು, 6 ಬಾರಿ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದೆ. ಸಂಗೀತ ಮಾಸ್ತರ ಹೇಳಿದ್ದಕ್ಕೆ ಇಲ್ಲಿಗೆ ಬಂದು ಸಂಗೀತ, ಅಭಿನಯ ಕಲಿಯುತ್ತಿದ್ದೇನೆ, ಇಲ್ಲಿ ಎಲ್ಲವೂ ಹೊಸದೆನಿಸುತ್ತಿದೆ’ ಎಂದು ವಿಜಯನಗರ ಜಿಲ್ಲೆ ಹರಪನಹಳ್ಳಿಯ ರಾಗಿಮಸಲವಾಡ ಗ್ರಾಮದ ರಮೇಶ್ ಜಿ. ಹೇಳಿದರು.

‘ಬಾಲ್ಯದಲ್ಲಿಯೇ ಸಂಗೀತ ಅಭ್ಯಾಸ ಮಾಡಿದ್ದು, ಎದೆತುಂಬಿ ಹಾಡುವೆನು, ಗುಣಗಾನ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಪ್ರಶಸ್ತಿಯನ್ನೂ ಪಡೆದಿರುವೆ. 5,000ಕ್ಕೂ ಹೆಚ್ಚು ವೇದಿಕೆಗಳಲ್ಲಿ ಗಾಯನ, ನಿರೂಪಣೆ ಮಾಡಿದ್ದೇನೆ. ಅಲ್ಲೆಲ್ಲೂ ಕಾಣದ ಬೇರೆಯದ್ದೇ ಸ್ವರೂಪವನ್ನು ಇಲ್ಲಿ ಕಂಡುಕೊಂಡೆ. ಇಲ್ಲಿನ ಕಲಿಕೆಯು ಪರಿಪೂರ್ಣತೆಯ ಭಾವ ಮೂಡಿಸಿದೆ’ ಎಂದು ಮನಃಶಾಸ್ತ್ರದಲ್ಲಿ ಪಿ.ಎಚ್ಡಿ ಪೂರೈಸಿರುವ ದಾವಣಗೆರೆಯ ಶೃತಿ ರಾಜ್ ವಿವರಿಸಿದರು.

‘ಗಾಯನ, ವಾದನ, ನೃತ್ಯದ ಸಂಗಮವೇ ಸಂಗೀತ ಎಂಬುದನ್ನು ಕಾರ್ಯಾಗಾರದಲ್ಲಿ ಕಲಿತುಕೊಂಡೆ. ಇಲ್ಲಿ ಪಡೆದ ಜ್ಞಾನದಿಂದ ಸಂಗೀತ ಶಿಕ್ಷಕನಾಗುವ ಕನಸಿಗೆ ಮತ್ತಷ್ಟು ಬಲ ದೊರೆತಿದೆ’ ಎನ್ನುತ್ತಾರೆ ಮೈಸೂರು ಜಿಲ್ಲೆ ನಂಜನಗೂಡಿನ ಎಸ್. ಅರುಣ್.

‘ಡೋಲು ಬಾರಿಸುವ, ಸುಗ್ಗಿ ಪದ ಹಾಡುವ ತಂದೆ ಹಾಗೂ ಚಿಕ್ಕಪ್ಪನವರಿಂದ ಸಂಗೀತದ ಅಭಿರುಚಿ ಮೂಡಿತ್ತು. ಕಾರ್ಯಾಗಾರದಲ್ಲಿ ಅಭಿನಯ ಹಾಗೂ ಪಾತ್ರಗಳ ಗಾಂಭೀರ್ಯದ ಬಗ್ಗೆ ಕಲೆಯಲು ಸಾಧ್ಯವಾಯಿತು. ಮುಖ್ಯವಾಗಿ ರಂಗ ಸಂಗೀತದ ಶಿಸ್ತಿನ ಬಗ್ಗೆ ಅರಿವು ಮೂಡಿತು’ ಎಂದು ಚಾಮರಾಜನಗರ ಜಿಲ್ಲೆ ಚಂದಕವಾಡಿಯ ಕಾಂತರಾಜ್ ಎಂ. ಅಭಿಪ್ರಾಯಪಟ್ಟರು.

ರಂಗ ಸಂಗೀತದಲ್ಲಿ ಭಾವನೆಗಳಿಗೆ ಒತ್ತು ನೀಡಲಾಗುತ್ತದೆ. ಸಂಗೀತ ಹಾಗೂ ಅಭಿನಯದ ಮಿಶ್ರಣದ ಈ ಪರಂಪರೆಯಲ್ಲಿ ಗಾಯಕ ಸದೃಢನಾಗುತ್ತಾನೆ. ಶಿಬಿರಾರ್ಥಿಗಳ ಕಲಿಕೆಯು ಭರವಸೆ ಮೂಡಿಸುವಂತಿದೆ
–ರಾಘವ ಕಮ್ಮಾರ ರಂಗಸಂಗೀತ ನಿರ್ದೇಶಕ

ಪ್ರೇಕ್ಷಕರ ಎದುರೇ ನಡೆಯುವಂತಹ ನೈಜ ಕಲೆಗೆ ಗಟ್ಟಿತನವಿದ್ದು ಜೀವಂತ ರಸಾನುಭೂತಿಯನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಪರಂಪರೆ ಹಾಗೂ ಹೊಸತನ್ನು ಸೇರಿಸಿ ಪ್ರಯೋಗ ನಡೆಸಬೇಕಿದೆ
–ಪ್ರಕಾಶ್ ಗರುಡ ಹಿರಿಯ ರಂಗಕರ್ಮಿ (ಅಭಿನಯ ತರಬೇತುದಾರರು)

‘ರಂಗಾಯಣಕ್ಕೆ ಹೊಸ ಸ್ವರೂಪ’

‘ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣಕ್ಕೆ ಹೊಸ ಸ್ವರೂಪ ಕಂಡುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸಾಗಲು ಅಭಿನಯ ಸಂಗೀತ ಪ್ರದರ್ಶನವು ವಿನೂತನ ಪ್ರಯೋಗವಾಗಿದೆ’ ಎಂದು ರಂಗಾಯಣದ ನೂತನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ತಿಳಿಸಿದರು. ‘ಮೈಸೂರು ರಂಗಾಯಣವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಅದೇ ಮಾದರಿಯನ್ನು ಕಲಬುರಗಿ ಧಾರವಾಡ ಶಿವಮೊಗ್ಗ ರಂಗಾಯಣಗಳು ಅಳವಡಿಸಿಕೊಂಡಿವೆ. ರಂಗ ಸಂಗೀತ ಪರಂಪರೆಯನ್ನು ಉಳಿಸುವ ಅಗತ್ಯವಿದೆ’ ಎಂದರು.

‘ಅಭಿನಯ ಸಂಗೀತ ಪ್ರದರ್ಶನದ ಸನ್ನಿವೇಶಗಳನ್ನು ಚಿತ್ರೀಕರಿಸಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಜನಪ್ರಿಯಗೊಳಿಸಲು ತಂತ್ರಜ್ಞಾನದೊಂದಿಗೆ ಸಾಗುವ ಆಲೋಚನೆ ಇದೆ. ಕಲಬುರಗಿ ಬೆಳಗಾವಿ ಮೈಸೂರು ಬೆಂಗಳೂರು ಕಂದಾಯ ವಿಭಾಗಗಳಲ್ಲಿ ಸಂಗೀತ ಪ್ರಧಾನ ನಾಟಕ ಪ್ರದರ್ಶನದ ಚಿಂತನೆಯೂ ಇದೆ’ ಎಂದು ಅವರು ಭವಿಷ್ಯದ ಯೋಜನೆಗಳನ್ನು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.