ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಕೊಲೆ ಪ್ರಕರಣ; ಕಡತ ಪರಿಶೀಲನೆ

ಗಿರೀಶ ಮುಖಾಂತರ ಅಂಜಲಿ ಕೊಲೆ: ಡಿಜಿಪಿಗೆ ಮನವಿ ಸಲ್ಲಿಸಿದ ಸಮತಾ ಸೇನಾ
Published 28 ಮೇ 2024, 16:15 IST
Last Updated 28 ಮೇ 2024, 16:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಮತ್ತು ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳಿಗೆ ಎರಡು ದಿನಗಳಿಂದ ಮಾರ್ಗದರ್ಶನ ನೀಡುತ್ತಿರುವ ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರು, ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಮತ್ತೊಮ್ಮೆ ಸಭೆ ನಡೆಸಿದರು. ಪ್ರಕರಣದ ತನಿಖೆ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.

ನೇಹಾ ಕೊಲೆಯಾದ ಇಲ್ಲಿನ ಬಿವಿಬಿ ಕಾಲೇಜು ಆವರಣಕ್ಕೆ ಸಿಐಡಿ ಅಧಿಕಾರಿಗಳೊಂದಿಗೆ ತೆರಳಿದ ಡಿಜಿಪಿ ಸಲೀಂ, ಸ್ಥಳ ಪರಿಶೀಲಿಸಿದರು. ಸ್ಥಳ ಮಹಜರು ಕಡತ, ಆರೋಪಿ ಫಯಾಜ್‌ ಹೇಳಿಕೆ, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಕಾಲೇಜಿನ ಪ್ರಾಚಾರ್ಯರ ಹಾಗೂ ಕೆಲವು ಸಾಕ್ಷಿಗಳ ಹೇಳಿಕೆ, ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿ, ಕೃತ್ಯಕ್ಕೆ ಬಳಸಿದ ಚಾಕುವಿನ ಮಾಹಿತಿ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸೇರಿ ಹಲವು ವಿಷಯಗಳ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.

ನಂತರ ನೇಹಾ ಅವರ ನಿವಾಸಕ್ಕೆ ತೆರಳಿ, ಕುಟುಂಬದವರಿಂದ ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನೇಹಾಗೆ ಆರೋಪಿಯ ಪರಿಚಯ, ಮಾತುಕತೆ ಹಾಗೂ ಕುಟುಂಬದ ಜೊತೆಗಿನ ಒಡನಾಟದ ಕುರಿತು ಚರ್ಚಿಸಿದರು. ಈಗಾಗಲೇ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ ಆಧರಿಸಿ, ನೇಹಾ ತಂದೆ ನಿರಂಜನಯ್ಯ ಹಿರೇಮಠ ಅವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿರುವುದಾಗಿ ತಿಳಿದು ಬಂದಿದೆ.

ಚಾರ್ಜ್‌ಶೀಟ್‌ ಸಲ್ಲಿಸಲಿ: ‘ಮಗಳ ಕೊಲೆ ಪ್ರಕರಣದ ದೋಷಾರೋಪ ಪಟ್ಟಿಯನ್ನು ಸಿಐಡಿ ಕೋರ್ಟ್‌ಗೆ ಸಲ್ಲಿಕೆ ಮಾಡಲಿ. ಆಗ ನಾವು ಹೇಳಿದ್ದೇನು, ಅವರು ಸೇರಿಸಿದ್ದೇನು ಎಂದು ತಿಳಿಯಲಿದೆ. ನಂತರ ಮುಂದಿನ ನಿರ್ಧಾರ ತಿಳಿಸುತ್ತೇನೆ’ ಎಂದು ನಿರಂಜನಯ್ಯ ಹಿರೇಮಠ ಸುದ್ದಿಗಾರರಿಗೆ ತಿಳಿಸಿದರು.

‘ನೇಹಾ ಕೊಲೆ ಪೂರ್ವ ನಿಯೋಜಿತ ಕೃತ್ಯ ಎಂದು ನಾನು ಆರಂಭದಿಂದಲೂ ಹೇಳುತ್ತ ಬಂದಿದ್ದೇನೆ. ಸಿಐಡಿ ವಿಚಾರಣೆ ವೇಳೆಯೂ  ಅದನ್ನೇ ಹೇಳಿದ್ದೇನೆ. ಸಿಐಡಿ ತಂಡ ನಗರದಲ್ಲಿ ಬೀಡು ಬಿಟ್ಟಿದ್ದು, ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದೆ ಎಂದು ಭಾವಿಸಿದ್ದೇನೆ. ಆದಷ್ಟು ಬೇಗ ದೋಷಾರೋಪ ಪಟ್ಟಿ ಸಲ್ಲಿಕೆಯಾಗಲಿ. ಇಂತಹ ವಿಚಾರದಲ್ಲಿ ನನ್ನ ಮಗಳ ಕೊಲೆಯೇ ಅಂತ್ಯವಾಗಬೇಕು’ ಎಂದು ಹೇಳಿದರು.

ಸಮತಾ ಸೇನಾ ಮನವಿ: ‘ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ ಯುವತಿ ಕೊಲೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಯಾರ‍್ಯಾರು ಇದ್ದಾರೆ ಎಂದು ಸಂಪೂರ್ಣ ತನಿಖೆ ನಡೆಸಬೇಕು’ ಎಂದು ಸಮತಾ ಸೇನಾ ಕರ್ನಾಟಕ ಮತ್ತು ವಿವಿಧ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳ ಸಿಐಡಿ ಡಿಜಿಪಿ ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿತು.

ಸುದ್ದಿಗಾರರ ಜೊತೆ ಮಹಾಮಂಡಳದ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘2021ರಲ್ಲಿ ಅಂಜಲಿಯ ಅಜ್ಜಿ ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಅದರ ದೋಷಾರೋಪ ಪಟ್ಟಿಯಲ್ಲಿ ಈರಣ್ಣ ಅಲಿಯಾಸ್‌ ವಿಜಯ ಕಲ್ಲನಮಠ ಅವರು ಪ್ರಮುಖ ಆರೋಪಿ ಎಂದು ನಮೂದಿಸಲಾಗಿದೆ. ಅದರ ವಿಚಾರಣೆ ಮುಂದಿನ ತಿಂಗಳು 18ರಂದು ನಡೆಯಲಿದೆ. ಅಂಜಲಿಯನ್ನು ಕೊಲೆ ಮಾಡಿದರೆ, ಪ್ರಕರಣವೇ ಮುಚ್ಚಿಹೋಗಲಿದೆ. ಜೀವಾವಧಿ ಶಿಕ್ಷೆಯಿಂದ ಪಾರಾಗಬಹುದೆಂದು ಆರೋಪಿ ಈರಣ್ಣ, ಗಿರೀಶಗೆ ಮುಂದಿಟ್ಟುಕೊಂಡು ಅಂಜಲಿಯನ್ನು ಕೊಲೆ ಮಾಡಿಸಿರುವ ಮಾಹಿತಿಯಿದೆ’ ಎಂದರು.

ಸತ್ಯಾಂಶ ಬಹಿರಂಗವಾಗಲಿ: ‘ಪ್ರಕರಣ ದಾಖಲಾದಾಗ ಆರೋಪಿ ಈರಣ್ಣಗೆ ಜಾಮೀನು ನೀಡಿದವರು ಯಾರು, ಅವನು ಯಾರ ಜೊತೆ ಕೆಲಸ ಮಾಡುತ್ತಿದ್ದ, ಅವನು ಈಗ ಯಾಕೆ ತಲೆ ಮರೆಸಿಕೊಂಡ, ಅಂಜಲಿ ಪೋಷಕರಿಗೆ ಅವನ ಹೆಸರು ಹೇಳದಂತೆ ತಡೆದಿದ್ದು ಯಾರು, ಅವನ ಮೊಬೈಲ್‌ ನಂಬರ್‌ ಸಿಡಿಆರ್‌ಗೆ ಹಾಕಿ ಪರಿಶೀಲನೆ ನಡೆಸಿದರೆ ಸತ್ಯಾಂಶ ಬಹಿರಂಗವಾಗಲಿದೆ’ ಎಂದು ಹೇಳಿದರು.

‘ಗಿರೀಶ ಜೊತೆ ಈರಣ್ಣ ನಿರಂತರ ಸಂಪರ್ಕದಲ್ಲಿದ್ದ. ಅಂಜಲಿ ಕೊಲೆಯಾದ ನಂತರ ಈರಣ್ಣ ತಲೆಮರೆಸಿಕೊಂಡಿದ್ದಾನೆ. ಅವನು ನಿರಂಜನಯ್ಯ ಹಿರೇಮಠ ಅವರ ಆಪ್ತ ಸಹಾಯಕ ಎನ್ನುವ ಮಾಹಿತಿ ನನಗೆ ಗೊತ್ತಿಲ್ಲ. ಆದರೆ, ಅಂಜಲಿ ಕೊಲೆಯಾದಾಗ ನಡೆದ ಪ್ರತಿಭಟನೆಯಲ್ಲಿ ನಿರಂಜನಯ್ಯ ಅವರೇ ಮುಂಚೂಣಿಯಲ್ಲಿದ್ದರು. ಅವರು ಸಹ ಕೊಲೆ ಹಿಂದೆ ಕಾಣದ ಕೈಗಳಿವೆ ಎಂದು ಆರೋಪಿಸಿದ್ದರು. ಅವಳು ಕೊಲೆಯಾದ ತಕ್ಷಣ, ಈರಣ್ಣನ ಹೆಸರು ಕೇಳಿಬಂದಿತ್ತು. ಸಿಐಡಿ ಯಾರ ಒತ್ತಡಕ್ಕೂ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಮಂಜುನಾಥ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ಇಮ್ತಿಯಾಜ್ ಬಿಜಾಪುರ, ಕವಿತಾ ನಾಯ್ಕರ್, ರವಿ ಕದಂ, ರಮೇಶ ಪವಾರ, ಫಾರೂಕ್ ಬೇಪಾರಿ ಇದ್ದರು.

Quote - ಮುಖ್ಯಮಂತ್ರಿ ಮತ್ತು ಗೃಹಸಚಿವರು ಪರಿಶಿಷ್ಟ ಸಮುದಾಯದ ವಿರೋಧಿಗಳು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವಳಿನಗರದ ಪರಿಶಿಷ್ಟ ಸಮುದಾಯದ ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. –ಗುರುನಾಥ ಉಳ್ಳಿಕಾಶಿ ರಾಜ್ಯಾಧ್ಯಕ್ಷ ವಿವಿಧ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳ

ಕಮಿಷನರ್‌ ಜೊತೆ ಡಿಜಿಪಿ ದಿಢೀರ್‌ ಸಭೆ

‘ಅಂಜಲಿ ಕೊಲೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಗಿರೀಶನನ್ನು ಮುಂದಿಟ್ಟುಕೊಂಡು ಅಂಜಲಿಯನ್ನು ಕೊಲೆ ಮಾಡಲಾಗಿದೆ’ ಎಂದು ಆರೋಪಿ ವಿವಿಧ ದಲಿತ ಸಂಘ–ಸಂಸ್ಥೆಗಳ ಮಹಾಮಂಡಳ ಸಿಐಡಿ ಡಿಜಿಪಿ ಸಲೀಂ ಅವರಿಗೆ ಮನವಿ ಸಲ್ಲಿಸಿದ ಕೆಲವೇ ಹೊತ್ತಿನಲ್ಲಿ ಡಿಜಿಪಿ ಸಲೀಂ ಅವರು ಪ್ರವಾಸಿ ಮಂದಿರದಲ್ಲಿ ಹು–ಧಾ ಮಹಾನಗರ ಪೊಲೀಸರ್‌ ಘಟಕದ ಹಿರಿಯ ಅಧಿಕಾರಗಳ ಜೊತೆ ದಿಢೀರ್‌ ಸಭೆ ನಡೆಸಿದರು. ಪೊಲೀಸ್‌ ಕಮಿಷನರ್‌ ರೇಣುಕಾ ಸುಕುಮಾರ್‌ ಡಿಸಿಪಿಗಳಾದ ಕುಶಾಲ ಚೌಕ್ಸೆ ಮತ್ತು ರವೀಶ್ ಸಿ.ಆರ್‌ ಎಸಿಪಿ ಶಿವಪ್ರಕಾಶ ನಾಯ್ಕ ಹಾಗೂ ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್‌ ಮಾರುತಿ ಗುಳ್ಳಾರಿ ಪಾಲ್ಗೊಂಡಿದ್ದರು. 2021ರ ಡಿಸೆಂಬರ್‌ನಲ್ಲಿ ಬೆಂಡಿಗೇರಿ ಠಾಣೆಯಲ್ಲಿ ದಾಖಲಾದ(ಅಪರಾಧ ಸಂಖ್ಯೆ– 0166/2021) ಪ್ರಕರಣದ ತನಿಖೆಯ ಕಡತಗಳನ್ನು ಪರಿಶೀಲಿಸಿದ ಡಿಜಿಪಿ ಅಗತ್ಯ ಮಾಹಿತಿಗಳನ್ನು ಪಡೆದರು. ತನಿಖೆ ಪೂರ್ಣಗೊಂಡಿರುವ ಕುರಿತು ಹಾಗೂ ಕೋರ್ಟ್‌ಗೆ ಸಲ್ಲಿಕೆಯಾದ ದೋಷಾರೋಪ ಪಟ್ಟಿಯಲ್ಲಿನ ವರದಿಯನ್ನು ಸಹ ಗಮನಿಸಿ ಆರೋಪಿ ಈರಣ್ಣ ಅಲಿಯಾಸ್‌ ವಿಜಯ್ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ದಾವಣಗೆರೆಯಲ್ಲಿ ಚಾಕುವಿಗಾಗಿ ಶೋಧ

ಅಂಜಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಸಂಗ್ರಹಕ್ಕಾಗಿ ಹಾಗೂ ಕೊಲೆಗೆ ಬಳಸಿದ ಚಾಕುವಿನ ಪತ್ತೆಗಾಗಿ ಸಿಐಡಿ ಅಧಿಕಾರಿಗಳು ಆರೋಪಿ ಗಿರೀಶ ಸಾವಂತನ್ನು ಮಂಗಳವಾರ ದಾವಣಗೆರೆಗೆ ಕರೆದೊಯ್ದರು. ಹುಬ್ಬಳ್ಳಿಯಲ್ಲಿ ಅಪರಾಧ ಕೃತ್ಯ ಎಸಗಿ ಆರೋಪಿ ತಲೆ ಮರೆಸಿಕೊಂಡಿದ್ದ. ನಂತರ ಮೈಸೂರಿನಿಂದ ಗೋವಾಕ್ಕೆ ತೆರಳುವಾಗ ವಿಶ್ವಮಾನವ ರೈಲು ಹತ್ತಿದ್ದ. ದಾವಣಗೆರಿ ಸಮೀಪದ ಮಾಯಕೊಂಡ ರೈಲು ನಿಲ್ದಾಣದ ಬಳಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಅವರಿಗೆ ಚಾಕು ಹಾಕಿದ್ದ. ರೈಲು ಪ್ರಯಾಣಿಕರಿಂದ ಹಲ್ಲೆಗೊಳಗಾಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ರೈಲಿನಿಂದ ಜಿಗಿದು ಗಾಯಗೊಂಡಿದ್ದ. ನಂತರ ರೈಲ್ವೆ ಪೊಲೀಸರು ಅವನನ್ನು ಹುಬ್ಬಳ್ಳಿ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅಂಜಲಿ ಕೊಲೆಗೆ ಬಳಸಿದ ಚಾಕು ಹಾಗೂ ಮಹಿಳೆ ಮೇಲೆ ಹಲ್ಲೆ ನಡೆಸಿದ ಚಾಕು ಎರಡೂ ಒಂದೇ ಅಥವಾ ಬೇರೆಯದೇ ಎನ್ನುವ ಮಾಹಿತಿಯನ್ನು ಆರೋಪಿ ಇನ್ನೂ ಬಾಯ್ಬಿಟ್ಟಿಲ್ಲ. ಅಂಜಲಿ ಮನೆ ಸುತ್ತ ಹಾಗೂ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣದ ಸುತ್ತಲೂ ಚಾಕುವಿಗಾಗಿ ಶೋಧ ನಡೆಸಲಾಗಿದೆ. ಆದರೂ ಪತ್ತೆಯಾಗಿಲ್ಲ. ಚಾಕು ಪ್ರಮುಖ ಸಾಕ್ಷ್ಯವಾಗಿದ್ದು ಇದೀಗ ದಾವಣಗೆರಿಗೆ ಆರೋಪಿಯನ್ನು ಕರೆದೊಯ್ದು ಸದರ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT