ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಹತ್ಯೆ: ತನಿಖೆ ಚುರುಕು

ಹುಬ್ಬಳ್ಳಿ: ಸ್ಥಳ ಮಹಜರು ನಡೆಸಿದ ಸಿಐಡಿ ಅಧಿಕಾರಿಗಳು
Published 25 ಮೇ 2024, 0:34 IST
Last Updated 25 ಮೇ 2024, 0:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಹತ್ಯೆ ನಡೆದ ಸ್ಥಳಕ್ಕೆ ಶುಕ್ರವಾರ ಆರೋಪಿ ಗಿರೀಶ ಸಾವಂತನನ್ನು ಕರೆತಂದು ಸ್ಥಳ ಮಹಜರು ನಡೆಸಿದರು.

ವೀರಾಪೂರ ಓಣಿಯಲ್ಲಿರುವ ಮನೆಯಲ್ಲಿ ಅಂಜಲಿಯನ್ನು ಹತ್ಯೆ ಮಾಡಲಾಗಿತ್ತು. ಆರೋಪಿಯನ್ನು ಅಲ್ಲಿಗೆ ಕರೆದುಕೊಂಡು ಬಂದ ಸಿಐಡಿ ಅಧಿಕಾರಿಗಳು, ಘಟನಾ ಸ್ಥಳ ಹಾಗೂ ಸುತ್ತಲಿನ ಪ್ರದೇಶ ಪರಿಶೀಲಿಸಿದರು. ಕೊಲೆ ನಡೆದ ಸಂದರ್ಭದ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದರು. ಆರೋಪಿ ಕೃತ್ಯಕ್ಕೆ ಬಳಸಿದ್ದ ಚಾಕು ಪತ್ತೆಗಾಗಿ ಓಣಿಯ ಚರಂಡಿಗಳಲ್ಲಿ ತ್ಯಾಜ್ಯ ಹೊರತೆಗೆಸಿ, ಲೋಹ ಪತ್ತೆ ಯಂತ್ರದ ಮೂಲಕ ತೀವ್ರ ಶೋಧ ನಡೆಸಿದರು.

ಈ ವೇಳೆ ಆರೋಪಿ ಗಿರೀಶನನ್ನು ಕಂಡು ಅಂಜಲಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಸಿಐಡಿ ಅಧಿಕಾರಿಗಳೇ ಅವರನ್ನು ಸಮಾಧಾನಪಡಿಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲಿಂದ, ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣಕ್ಕೆ ತೆರಳಿದ ಅಧಿಕಾರಿಗಳು, ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಿದರು. 

ಸಿಐಡಿ ಎಸ್.ಪಿ. ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಲ್ಲಿನ ಜೆಎಂಎಫ್ ನ್ಯಾಯಾಲಯದ ಆದೇಶದಂತೆ ಆರೋಪಿಯನ್ನು ಎಂಟು ದಿನ ತನ್ನ ಕಸ್ಟಡಿಗೆ ಪಡೆದಿದೆ.

ವಿಚಾರಣೆ: ‘ಸ್ಥಳ ಮಹಜರು ಮಾಡಲು ಮನೆಗೆ ಬಂದ ಸಿಐಡಿ ಅಧಿಕಾರಿಗಳು, ಹತ್ಯೆ ನಡೆದ ದಿನ ಮನೆಯ ಬಾಗಿಲನ್ನು ಯಾರು ತೆಗೆದರು? ಮನೆಯಲ್ಲಿ ಯಾರೆಲ್ಲ ಇದ್ದರು? ಎಂದು ಆರೋಪಿ ಗಿರೀಶನನ್ನು ವಿಚಾರಿಸಿದರು’ ಎಂದು ಅಂಜಲಿ ತಂಗಿ ಯಶೋಧ ಅಂಬಿಗೇರ ಸುದ್ದಿಗಾರರಿಗೆ ತಿಳಿಸಿದರು.

‘ಅಂಜಲಿ ಬಾಗಿಲು ತೆರೆದರು. ನಿದ್ದೆ ಮಾಡುತ್ತಿದ್ದ ಅಜ್ಜಿಯನ್ನು ದಾಟಿ ಅಂಜಲಿ ಮಾತನಾಡಿಸಲು ಮುಂದಾದೆ ಎಂದು ಗಿರೀಶ ತಿಳಿಸಿದ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT