144 ಸೆಕ್ಷನ್ ಜಾರಿ ಹಿನ್ನಲೆಯಲ್ಲಿ ಶಿವಾನಂದ ಮಠದ ಆವರಣದಲ್ಲಿ ಹಾಕಿದ್ದ ಅಂಗಡಿಗಳನ್ನು ತೆರವುಗೊಳಿಸಿದ ಪೊಲೀಸರು
ದೂರದ ಊರುಗಳಿಂದ ಬಂದಿದ್ದ ಭಕ್ತರು ಶಿವನಿಗೆ ಹಣ್ಣು ಕಾಯಿ ಕೊಳ್ಳುತ್ತಿರುವ ದೃಶ್ಯ
ಶ್ರೀಗಳ ತಿಕ್ಕಾಟ; ಭಕ್ತರ ಬೇಸರ
ಶಿವಾನಂದ ಮಠದ ಇತಿಹಾಸದಲ್ಲೇ ರಥೋತ್ಸವ ತಪ್ಪಿರಲಿಲ್ಲ. ಉಭಯ ಶ್ರೀಗಳ ನಡುವಿನ ತಿಕ್ಕಾಟದಿಂದಾಗಿ ಮಹಾ ರಥೋತ್ಸವ ನೋಡುವ ಅವಕಾಶವನ್ನು ಕಳೆದುಕೊಳ್ಳಬೇಕಾಯಿತು’ ಎಂದು ಗದಗ ಹಾವೇರಿ ಕೊಪ್ಪಳ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಬೇಸರ ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವ ನಡೆಯುತ್ತದೆ ಎಂಬ ಆಶಾಭಾವದಿಂದ ದೂರದ ಊರುಗಳಿಂದೆಲ್ಲಾ ಟ್ರ್ಯಾಕ್ಟರ್ ಚಕ್ಕಡಿ ಕಟ್ಟಿಕೊಂಡು ಭಕ್ತರು ಬಂದಿದ್ದರು. ಆದರೆ ಇಬ್ಬರ ನಡುವೆ ಹೊಂದಾಣಿಕೆ ಮೂಡದ ಕಾರಣ ಜಾತ್ರೆಯ ಕಳೆಯೇ ಹೊರಟು ಹೋಯಿತು ಎಂದು ಆಕ್ರೋಶ ಹೊರಹಾಕಿದರು. ಶನಿವಾರ ಬೆಳಿಗ್ಗೆಯಿಂದ ಸಂಜೆವರೆಗೆ ಮಠದ ಆವರಣದೊಳಗೆ ಜಾತ್ರೆಗೆ ಕಟ್ಟಿದ್ದ ಅಂಗಡಿಗಳ ವ್ಯಾಪಾರ ವಹಿವಾಟು ನಡೆಯಿತು. ಭಕ್ತರು ಶಿವನಿಗೆ ಹಣ್ಣು ಕಾಯಿ ಅರ್ಪಿಸಿ ಪೂಜೆ ಮಾಡಿಸಿದರು. ಸಂಜೆ ಆಗುತ್ತಿದ್ದಂತೆ ಪೊಲೀಸರು ಮಠದ ಆವರಣದ ಒಳಗಿದ್ದ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿದರು. ಭಕ್ತರನ್ನೂ ಆಚೆಗೆ ಕಳಿಸಿದರು. 144 ಸೆಕ್ಷನ್ ಜಾರಿ ಹಿನ್ನಲೆಯಲ್ಲಿ ಮಠದ ಆವರಣದ ತುಂಬೆಲ್ಲಾ ಪೊಲೀಸರು ಬೀಡುಬಿಟ್ಟಿದ್ದರು.
ನಾಲ್ಕು ಕಾಸಿಗೂ ಕಲ್ಲುಬಿತ್ತು
ಜಾತ್ರೆ ಅಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಜಾತ್ರೆಗೆ ಬರುವ ತರಹೇವಾರಿ ಆಟಿಕೆಗಳು ಆಲಂಕಾರಿಕ ವಸ್ತುಗಳನ್ನು ನೋಡುವ ಕೊಳ್ಳುವ ಉಮೇದು ಇರುತ್ತದೆ. ಆದರೆ ಈ ಬಾರಿ ಮಕ್ಕಳಿಗೆ ಆ ಖುಷಿ ಸಿಗಲಿಲ್ಲ. ಉಭಯ ಶ್ರೀಗಳ ನಡುವೆ ಹಲವು ದಿನಗಳಿಂದ ತಿಕ್ಕಾಟ ನಡೆಯುತ್ತಿದ್ದ ಕಾರಣ ಹೆಚ್ಚಿನವರು ಅಂಗಡಿಗಳನ್ನು ಹಾಕಿರಲಿಲ್ಲ. ಈ ವಿದ್ಯಮಾನ ಗೊತ್ತಿಲ್ಲದ ಕೆಲವರು ಅಂಗಡಿಗಳನ್ನು ತೆರೆದಿದ್ದರು. ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿದ್ದ ಭಕ್ತರು ಮಕ್ಕಳಿಗಾಗಿ ಒಂದಷ್ಟು ಹಣವನ್ನೂ ಖರ್ಚು ಮಾಡುತ್ತಿದ್ದರು. ಆದರೆ ಈ ಬಾರಿ ರಥೋತ್ಸವ ರದ್ದುಗೊಂಡ ಕಾರಣ ಭಕ್ತರ ಸಂಖ್ಯೆಯೂ ಕಡಿಮೆ ಆಗಿತ್ತು. ಕುಟುಂಬ ನಿರ್ವಹಣೆಗಾಗಿ ಜಾತ್ರೆಯಲ್ಲಿ ಒಂದಷ್ಟು ಕಾಸು ಆಗುತ್ತಿತ್ತು. ಈ ವರ್ಷ ಅದಕ್ಕೂ ಕಲ್ಲು ಬಿತ್ತು ಎಂದು ಆಟಿಕೆ ವ್ಯಾಪಾರಿಗಳು ಅಲವತ್ತುಕೊಂಡರು.