ಮಂಗಳವಾರ, 1 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ಮಾವು ಬೆಳೆಯಿಂದ ರೈತರು ವಿಮುಖ– ಗಿಡಗಳಿಗೆ ಕೊಡಲಿ!

ಮಾವಿನ ಇಳುವರಿ ಕುಂಠಿತ: ಅಡಿಕೆ ಬೆಳೆಯತ್ತ ಆಕರ್ಷಣೆ
Published : 1 ಅಕ್ಟೋಬರ್ 2024, 4:50 IST
Last Updated : 1 ಅಕ್ಟೋಬರ್ 2024, 4:50 IST
ಫಾಲೋ ಮಾಡಿ
Comments

ಹಾನಗಲ್: ಉತ್ಕೃಷ್ಟ ರುಚಿಯ ಆಫೂಸ್ ಮಾವಿಗೆ ಪ್ರಸಿದ್ಧಿಯಾದ ಹಾನಗಲ್ ತಾಲ್ಲೂಕು, ಬದಲಾದ ಪರಿಸ್ಥಿತಿಯಲ್ಲಿ ಮಾವು ಬೆಳೆಯಿಂದ ವಿಮುಖವಾಗುತ್ತಿದೆ. ಸಾಕಷ್ಟು ಬೆಳೆ, ಬೆಲೆ ಇದ್ದರೂ, ಇಲ್ಲಿನ ರೈತರು ಅಡಿಕೆ ಬೆಳೆಯತ್ತ ಚಿತ್ತ ಹರಿಸುತ್ತಿದ್ದಾರೆ.

ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಮಾವು ಬೆಳೆ ಫಲ ನೀಡುತ್ತಿಲ್ಲ. ಆದಾಯವೂ ಇಲ್ಲ ಎಂಬ ಕಾರಣಕ್ಕಾಗಿ ಮಾವು ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ಮಾವಿನ ಗಿಡಗಳನ್ನು ತೆರವು ಮಾಡುತ್ತಿರುವುದು ಹಾನಗಲ್ ತಾಲ್ಲೂಕಿನಿಂದ ಮಾವು ಕಣ್ಮರೆಯಾಗುವ ಆತಂಕ ಸೃಷ್ಟಿಸಿದೆ.

ತಾಲ್ಲೂಕಿನ ಮಲೆನಾಡು ಭಾಗದಲ್ಲಿ ಬಹುತೇಕ ಹರಡಿಕೊಂಡ ಮಾವಿನ ತೋಟಗಳು ಒಂದೊಂದಾಗಿ ನೆಲಸಮಗೊಳ್ಳುತ್ತಿವೆ. ಸದ್ಯ ತಾಲ್ಲೂಕಿನಲ್ಲಿ 3,248 ಹೆಕ್ಟರ್ ಮಾವು ಬೆಳೆ ಇದೆ. ನಾಲ್ಕೈದು ವರ್ಷಗಳಿಂದ 400 ಹೆಕ್ಟರ್‌ಗೂ ಅಧಿಕ ಮಾವು ಪ್ರದೇಶ ತೆರವುಗೊಂಡಿದೆ ಎಂಬುದು ತೋಟಗಾರಿಕೆ ಇಲಾಖೆಯ ವರದಿ.

ಭತ್ತದ ನಾಡು ಖ್ಯಾತಿಯ ಹಾನಗಲ್ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಗೋವಿನಜೋಳಕ್ಕೆ ಮುಗಿಬಿದ್ದ ರೈತ, ಕೊನೆಗೆ ಅಲ್ಪ ಮಳೆ ಆಶ್ರಿತ ಮಾವು ಬೆಳೆಗೆ ಮುಂದಾಗಿ ಎರಡು ಮೂರು ದಶಕಗಳಿಂದ ಕಷ್ಟಪಟ್ಟು ನಾಟಿ ಮಾಡಿ, ನೀರು ಕೊಟ್ಟು ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದ. ಆದರೆ ಕಳೆದ ಏಳೆಂಟು ವರ್ಷಗಳಿಂದ ಮಾವಿನ ಫಸಲು ಸಂಪೂರ್ಣವಾಗಿ ಕೈಕೊಟ್ಟಿದೆ. ಹೂವು ಕಟ್ಟಿಕೊಳ್ಳುವ ಹೊತ್ತಿಗೆ ಇಬ್ಬನಿ ಹಾಗೂ ಮಳೆ ಬೀಳುತ್ತಿರುವ ಕಾರಣದಿಂದ ಹೂವು ಕರಗಿ ಕರಿಯಾಗಿ ಕಾಯಿ ಹಿಡಿಯದೇ ರೈತ ಕಂಗಾಲಾಗಿದ್ದಾನೆ.

ತಾಲ್ಲೂಕಿನ ಸಾಂಸವಗಿ ಗ್ರಾಮದ ಮಾರುತಿ ಶಿಡ್ಲಾಪೂರ ತಮ್ಮ 22 ವರ್ಷದ ಮಾವಿನ ತೋಟವನ್ನು ಸಂಪೂರ್ಣವಾಗಿ ತೆರವು ಮಾಡುವ ಕೆಲಸ ಆರಂಭಿಸಿದ್ದಾರೆ. ಉತ್ತಮ ಮಾವು ಫಸಲು ಬಾರದ ಕಾರಣ ಮೂರ್ನಾಲ್ಕು ವರ್ಷಗಳ ಹಿಂದೆ ಮಾವಿನ ಗಿಡಗಳ ನಡುವೆ ಅಡಿಕೆಯನ್ನು ಮಿಶ್ರ ಬೆಳೆಯಾಗಿ ಬೆಳೆಯಲು ಮುಂದಾದರು. ಆದರೂ ಮಾವಿನಿಂದ ಒಳ್ಳೆಯ ಫಸಲು ನಿರೀಕ್ಷಿಸಿದ್ದರು. ಅದು ನಿರಾಸೆಯಾಗಿ ಶನಿವಾರದಿಂದ 5 ಎಕರೆ ಪ್ರದೇಶದ 230 ಮಾವಿನ ಗಿಡಗಳನ್ನು ಕಟಾವು ಮಾಡಿಸುತ್ತಿದ್ದಾರೆ.

ಸುಮಾರು 20 ವರ್ಷಗಳ ಹಿಂದೆ ಮಾವು ಬೆಳೆ ವಿಸ್ತೀರ್ಣಕ್ಕೆ ತೋಟಗಾರಿಕೆ ಇಲಾಖೆಯ ಯೋಜನೆ ಬಳಸಿಕೊಂಡು ತಾಲ್ಲೂಕಿನಲ್ಲಿ ರೈತರು ಮಾವಿನ ತೋಟಗಳ ಪ್ರಮಾಣ ಹೆಚ್ಚಿಸಿದ್ದರು. ಮಾವು ಬೆಳೆಗೆ ತಕ್ಕ ಹವಾಮಾನ ತಾಲ್ಲೂಕಿನ ಮಲೆನಾಡು ಪ್ರದೇಶದಲ್ಲಿ ಲಭ್ಯವಿದ್ದ ಕಾರಣಕ್ಕಾಗಿ ಉತ್ಕೃಷ್ಟ ರುಚಿಯ ಆಫೂಸ್ ಮಾವು ಉತ್ತಮ ಇಳುವರಿ ನೀಡತೊಡಗಿತ್ತು. ಇತ್ತೀಚೆಗೆ ಎನ್ಆರ್‌ಜಿ ಅಡಿಯಲ್ಲಿ ಅಡಿಕೆ ಬೆಳೆ ವಿಸ್ತೀರ್ಣ ಯೋಜನೆ ಜಾರಿಗೊಂಡ ಪರಿಣಾಮ ಮತ್ತು ಮಹತ್ವದ ಏತ ನೀರಾವರಿ ಯೋಜನೆಗಳು ಅನುಷ್ಠಾನಕ್ಕೆ ಬಂದು ಬಹುತೇಕ ರೈತರು ಅಡಿಕೆಯತ್ತ ಆಕರ್ಷಿತರಾದರು.

ಮಾವು ಬೆಳೆಯ ಜಾಗದಲ್ಲಿ ಅಡಿಕೆ ತೋಟ ಆವರಿಸಿಕೊಳ್ಳತೊಡಗಿದೆ. ಇಳುವರಿ ಇಳಿಕೆ, ಮಾರುಕಟ್ಟೆ ದರ ವ್ಯತ್ಯಾಸ, ಎರಡು ವರ್ಷದ ಕರೋನಾ ಹೊಡೆತ, ಬಳಿಕ ಬಂದ ಅಂಟು ರೋಗ, ಅಧಿಕ ಉಷ್ಣಾಂಶ, ಹೆಚ್ಚು ಮಂಜು ಆವರಿಸುವ ಕಾರಣಕ್ಕಾಗಿ ಮಾವು ಬೆಳೆಯಿಂದ ರೈತರು ವಿಮುಖರಾಗುತ್ತಿದ್ದಾರೆ.

ಹಾನಗಲ್ ತಾಲ್ಲೂಕಿನ ರೈತ ಮಾರುತಿ ಶಿಡ್ಲಾಪೂರ ತಮ್ಮ 5 ಎಕರೆ ಮಾವಿನ ತೋಟದ ಮಾವಿನ ಗಿಡಗಳನ್ನು ತೆರವುಗೊಳಿಸಿದರು
ಹಾನಗಲ್ ತಾಲ್ಲೂಕಿನ ರೈತ ಮಾರುತಿ ಶಿಡ್ಲಾಪೂರ ತಮ್ಮ 5 ಎಕರೆ ಮಾವಿನ ತೋಟದ ಮಾವಿನ ಗಿಡಗಳನ್ನು ತೆರವುಗೊಳಿಸಿದರು

ಈ ಭಾಗದಲ್ಲಿ ಮಾವು ಉತ್ತಮವಾಗಿ ಬೆಳೆಯುತ್ತದೆ. ಈಗ ಮಾವು ಬೆಳೆಯಿಂದ ವಿಮುಖರಾಗಲು ಮನಸ್ಸು ಮಾಡುವ ರೈತರ ನೆರವಿಗೆ ಸರ್ಕಾರ ಬರಬೇಕಿದೆ.

-ಅಂಬಾಜೆಪ್ಪ ಕಾಟೇಕರ ಮಾವು ಬೆಳೆಗಾರ

ರೈತರಿಗೆ ನಿರಾಸೆ ಮೂಡಿಸಿದ ಮಾವು

‘22 ವರ್ಷಗಳ ಹಿಂದೆ ಹಾಕಿದ ಮಾವು ಆರೇಳು ವರ್ಷ ಒಳ್ಳೆಯ ಫಸಲು ನೀಡಿತು. ಬರುಬರುತ್ತ ವಾತಾವರಣ ಮಾವು ಬೆಳೆಗೆ ಪೂರಕವಾಗಿ ಕಾಣಲಿಲ್ಲ. ಎಷ್ಟು ಖರ್ಚು ಮಾಡಿದರೂ ಇಳುವರಿಯಲ್ಲಿ ಪ್ರಗತಿ ಕಾಣುತ್ತಿಲ್ಲ. ಗಿಡದಲ್ಲಿ ಉತ್ತಮ ನೆನೆ ಹಿಡಿದರೂ ಕಾಯಿ ಕಚ್ಚುವ ಸಂದರ್ಭದಲ್ಲಿ ರೋಗಕ್ಕೆ ತುತ್ತಾಗುತ್ತಿದೆ. ಇಬ್ಬನಿ ಮಾವು ಬೆಳೆಗೆ ದೊಡ್ಡ ಶತ್ರು. ಇದರೊಂದಿಗೆ ಹಿಂಗಾರಿಗೆ ಅಕಾಲಿಕ ಮಳೆಯೂ ಮಾರಕವಾಗಿ ಮಾವು ಬೆಳೆಯುವ ರೈತರಿಗೆ ನಿರಾಸೆ ಮೂಡಿಸುತ್ತಿದೆ’ ಎಂದು ಸಾಂವಸಗಿಯ ರೈತ ಮಾರುತಿ ಶಿಡ್ಲಾಪೂರ ಹೇಳಿದರು.

ಸಂರಕ್ಷಣಾ ಕ್ರಮ ಕೈಗೊಳ್ಳಬೇಕು

‘ಹವಾಮಾನ ವೈಪರಿತ್ಯದ ನಡುವೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳದಿರುವುದು ಮಾವಿನ ಇಳುವರಿ ಕುಂಠಿತಗೊಳ್ಳಲು ಕಾರಣ’ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ತಿಳಿಸಿದರು. ‘ಏಪ್ರಿಲ್‌ನಿಂದ ಮೇ ವರೆಗೆ ಮಾವು ಸಿಜನ್ ಮುಗಿಯುತ್ತದೆ. ಆ ಬಳಿಕ ಮಾವಿನ ಗಿಡಗಳ ಕಾಳಜಿ ಮುಖ್ಯ. ಜುಲೈ ತಿಂಗಳಲ್ಲಿ ಅನಗತ್ಯ ರೆಂಬೆಕೊಂಬೆಗಳನ್ನು ಕತ್ತರಿಸಬೇಕು. ಜನವರಿ ವರೆಗೆ ಮೂರ್ನಾಲ್ಕು ಬಾರಿ ತೋಟಕ್ಕೆ ಉತ್ತಮ ನೀರು ಹಾಯಿಸಬೇಕು. ಅಂಟು ರೋಗ ಬಾಧಿಸದಂತೆ ಔಷಧಿ ಸಿಂಪಡಣೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT