ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ಯಾಡಗಿ | ವೈದ್ಯರ ಸಮಸ್ಯೆ: ರೋಗಿಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ

lಬ್ಯಾಡಗಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ lರಾಣೆಬೆನ್ನೂರು, ದಾವಣಗೆರೆಯಲ್ಲಿ ವೈದ್ಯರ ವಾಸ
Published 19 ಜುಲೈ 2024, 4:18 IST
Last Updated 19 ಜುಲೈ 2024, 4:18 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ಆಸ್ಪತ್ರೆಯ ಬಹುತೇಕ ವೈದ್ಯರು ದೂರದ ರಾಣೆಬೆನ್ನೂರು ಹಾಗೂ ದಾವಣಗೆರೆಯಲ್ಲಿ ವಾಸವಿದ್ದು, ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಿ ಸಂಜೆ ಹೊರಟು ಹೋಗುತ್ತಿದ್ದಾರೆ. ಸಂಜೆಯಿಂದ ಮರುದಿನ ಬೆಳಿಗ್ಗೆವರೆಗೂ ತುರ್ತು ಸಂದರ್ಭದಲ್ಲಿ ವೈದ್ಯರು ಸಿಗದಿದ್ದರಿಂದ, ಜನರು ಪ್ರತಿ ದಿನವೂ ಸಮಸ್ಯೆ ಎದುರಿಸುತ್ತಿದ್ದಾರೆ.

100 ಬೆಡ್ ಸಾಮರ್ಥ್ಯದ ಆಸ್ಪತ್ರೆ ಇದಾಗಿದ್ದು, 86 ಕಾಯಂ ಸಿಬ್ಬಂದಿ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 38 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದಾಗಿ, ಲಭ್ಯವಿರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮ ಜನರ ಮೇಲಾಗುತ್ತಿದೆ.ನಿತ್ಯ 200ಕ್ಕೂ ಹೆಚ್ಚು ಮಕ್ಕಳು ಸೇರಿದಂತೆ ಸುಮಾರು 600 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ವೈದ್ಯರ ಕೊರತೆ ಹಾಗೂ ಸೌಕರ್ಯಗಳಿಂದ ಅಲಭ್ಯತೆಯಿಂದ ಹೊರ ರೋಗಿಗಳ ವಿಭಾಗದಲ್ಲಿ ಜನರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ. ತಮ್ಮ ಮೇಲೆ ಹೆಚ್ಚು ಒತ್ತಡವಿರುವುದಾಗಿ ಹೇಳುತ್ತಿರುವ ವೈದ್ಯರು, ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಜನರು ಆರೋಪಿಸುತ್ತಿದ್ದಾರೆ.

ವೈದ್ಯರ ಕೊರತೆ ಹೆಚ್ಚಿದೆ. ಇದರಿಂದಾಗಿ ಜನರು, ಚಿಕಿತ್ಸೆ ಪಡೆಯಲು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ಇದೆ. ಮಕ್ಕಳು, ವೃದ್ಧರೂ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ 10 ವೈದ್ಯರಿದ್ದಾರೆ. ಇದರಲ್ಲಿ ಹಲವರು ರಾಣೆಬೆನ್ನೂರು ಹಾಗೂ ದಾವಣಗೆರೆಯಲ್ಲಿ ಮನೆ ಮಾಡಿದ್ದಾರೆ. ಬೆಳಿಗ್ಗೆ ಆಸ್ಪತ್ರೆಗೆ ಬರುವ ಅವರು, ಸಂಜೆ ವಾಪಸು ತಮ್ಮೂರಿಗೆ ಹೊರಟು ಹೋಗುತ್ತಾರೆ. ಸಂಜೆಯಿಂದ ಮರುದಿನ ಬೆಳಿಗ್ಗೆಯವರೆಗೆ ಒಬ್ಬ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿರುತ್ತಾರೆ. ತುರ್ತು ಸಂದರ್ಭದಲ್ಲಿ ಯಾರಾದರೂ ರೋಗಿಗಳು ಬಂದರೆ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.

ಔಷಧ ಹೊರಗಿನಿಂದ ತರಲು ಸೂಚನೆ : ಆಸ್ಪತ್ರೆಯ ಆವರಣದಲ್ಲಿ ಜನೌಷಧಿ ಮತ್ತು ಉಚಿತ ಔಷಧ ವಿತರಣಾ ಕೇಂದ್ರಗಳಿವೆ. ಆಸ್ಪತ್ರೆಯ ವೈದ್ಯರು, ಹೊರಗಿನಿಂದ ಔಷಧಿ ತರುವಂತೆ ಚೀಟಿ ಬರೆದುಕೊಡುತ್ತಿದ್ದಾರೆ.

ವೈದ್ಯರು ಬರೆದುಕೊಟ್ಟ ಹೆಚ್ಚಿನ ಬೆಲೆಯ ಔಷಧಿಯನ್ನು ಜನರು ಖರೀದಿಸಬೇಕಾದ ಸ್ಥಿತಿ ಇದೆ. ಚೀಟಿ ಬಗ್ಗೆ ವೈದ್ಯರನ್ನು ಪ್ರಶ್ನಿಸಿದರೆ, ಔಷಧಿಗಳ ಕೊರತೆ ಇರುವುದಾಗಿ ಹೇಳುತ್ತಿದ್ದಾರೆ.

ವರ್ಗಾವಣೆಗೆ ಅರ್ಜಿ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಂತರಿಕ ಕೆಲಸಕ್ಕೆ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಿದೆ. ಇದೇ ಕಾರಣಕ್ಕೆ ಐದು ಶುಶ್ರೂಷಕಿಯರು ವರ್ಗಾವಣೆ ಕೋರಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

ಖಾಸಗಿ ಆಸ್ಪತ್ರೆಗೆ ಮೊರೆ

ಸದ್ಯ ಡೆಂಗಿ, ಚಿಕೂನ್‌ಗುನ್ಯಾ ಜ್ವರ ಹಾಗೂ ಇತರೆ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆ ಇದ್ದು, ಮಕ್ಕಳಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಬಡ ಹಾಗೂ ಮಧ್ಯಮ ವರ್ಗದ ಜನರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ.

ವಸತಿ ಗೃಹಗಳ ಕೊರತೆ: ಆಸ್ಪತ್ರೆ ಆವರಣದಲ್ಲಿ ಶುಶ್ರೂಷಕಿಯರು ಹಾಗೂ ವೈದ್ಯರಿಗೆ ಎರಡು ವಸತಿ ಗೃಹಗಳಿವೆ. ವಸತಿಗೃಹಗಳ ಕೊರತೆಯಿಂದಾಗಿ ಕೆಲ ವೈದ್ಯರು, ಬೇರೆ ಊರುಗಳಲ್ಲಿ ನೆಲೆಸಿದ್ದಾರೆ. ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ವಸತಿ ಗೃಹಗಳ ನಿರ್ಮಾಣ ಮಾಡಬೇಕೆಂಬುದು ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ.

ಡೆಂಗಿ ಬಾಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜೊತೆಗೆ ತಾಲ್ಲೂಕಿನಲ್ಲಿ ಇಲಿ ಜ್ವರ ಸಹ ಕಾಣಿಸಿಕೊಂಡಿದೆ. ಕದರಮಮಡಲಗಿ, ಶಿಡೇನೂರ, ಕೆರವಡಿ, ತಡಸ ಮಂತಾದ ಗ್ರಾಮಗಳಲ್ಲಿ ಜ್ವರದಿಂದ ಹೆಚ್ಚು ಜನರು ಬಳಲುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಅಸ್ಪತ್ರೆಯಲ್ಲಿ ವೈದ್ಯರು ಇರುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.

ಲಭ್ಯವಿರುವ ಸೌಕರ್ಯ ಹಾಗೂ ಸಿಬ್ಬಂದಿ ಬಳಸಿಕೊಂಡು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ತಾಲ್ಲೂಕು ಆಸ್ಪತ್ರೆಗೆ ಮೂರು ಬಾರಿ ಕಾಯಕಲ್ಪ ಪ್ರಶಸ್ತಿ ಬಂದಿದೆ
ಡಾ. ಪುಟ್ಟರಾಜ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಸಂಜೆಯ ನಂತರ ವೈದ್ಯರು ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ಆಸ್ಪತ್ರೆಯ ಎಲ್ಲ ವೈದ್ಯರು ಪಟ್ಟಣದಲ್ಲಿಯೇ ಮನೆ ಮಾಡಿಕೊಂಡು ವಾಸವಿರುವಂತೆ ಮಾಡಬೇಕು
ರಾಜಣ್ಣ, ಬ್ಯಾಡಗಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT