ಕಲಬುರಗಿಯ ಯಡ್ರಾಮಿ ತಾಲ್ಲೂಕಿನ ಕಡಕೋಳ ಮಡಿವಾಳಪ್ಪನವರ ಜಾತ್ರೆಯ ಅಂಗವಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ಸಿಂಗ್ ಅವರನ್ನು ರುದ್ರಮುನಿ ಶಿವಾಚಾರ್ಯರು ಮಡಿವಾಳಪ್ಪನವರ ಭಾವಚಿತ್ರ ನೀಡಿದರು
ಇಳಿಸಂಜೆಯಲ್ಲಿ ರಥೋತ್ಸವ ವೈಭವ
ಇಳಿಸಂಜೆಯ ಚಳಿಯ ತಂಗಾಳಿ ಹರಡುತ್ತಿದ್ದಂತೆ ದೇವಸ್ಥಾನದ ಆವರಣದಲ್ಲಿ ಭಕ್ತರ ಸಂಭ್ರಮ ಮನೆ ಮಾಡಿತ್ತು. ನಾನಾ ಬಗೆಯ ಹೂಗಳಿಂದ ಅಲಂಕೃತಗೊಂಡ ರಥವನ್ನು ಯುವಕರು ಭಕ್ತರ ದಂಡು ಕಾಯುತ್ತಿತ್ತು. ರಥಕ್ಕೆ ಹಣ್ಣು ಉತ್ತತ್ತಿಗಳನ್ನು ಎಸೆದು ಭಕ್ತಿ ತೋರಲು ಸಾವಿರಾರು ಭಕ್ತರು ದೂರದಲ್ಲಿ ಎದುರು ನೋಡುತ್ತಿದ್ದರು. ಪಲ್ಲಕ್ಕಿಯೊಂದಿಗೆ ಮಡಿವಾಳೇಶ್ವರ ಮಠದ ರುದ್ರಮುನಿ ಶಿವಾಚಾರ್ಯರು ಬಂದು ರಥವನ್ನು ಐದು ಸುತ್ತು ಹಾಕಿದರು. ಶಿವಾಚಾರ್ಯರು ರಥವನ್ನು ಏರಿ ಕೂರುತ್ತಿದ್ದಂತೆ ಮಡಿವಾಳಪ್ಪನವರಿಗೆ ಜೈಕಾರ ಹಾಕುತ್ತಾ ನೂರಾರು ಭಕ್ತರು ರಥ ಎಳೆದರು. ರಸ್ತೆಯ ಇಕ್ಕೆಲಗಳಲ್ಲಿ ತಾರಸಿಗಳ ಮೇಲೆ ಕಟ್ಟೆಗಳ ಮೇಲೆ ದೇವಸ್ಥಾನದ ಕೋಟೆಯ ಮೇಲೆ ಎಲ್ಲೆಂದರಲ್ಲಿ ಕಿಕ್ಕಿರಿದು ಸೇರಿದ ಜನರು ಹಣ್ಣು ಉತ್ತತ್ತಿಗಳನ್ನು ಎಸೆದು ಕೈಮುಗಿದರು. ಜಿಲ್ಲೆಯ ಮೂಲೆಮೂಲೆಗಳಿಂದ ಮಾತ್ರವಲ್ಲದೆ ಕರ್ನಾಟಕದ ಹೊರ ಜಿಲ್ಲೆಗಳು ತೆಲಂಗಾಣ ಆಂಧ್ರಪ್ರದೇಶ ಮಹಾರಾಷ್ಟ್ರ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ರಥದ ವೈಭವವನ್ನು ಕಣ್ಣು ತುಂಬಿಕೊಂಡರು.