ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಗರ

ಸನ್ನತಿ ಬೌದ್ಧ ಸ್ತೂಪ, ಬಹಮನಿ, ಮಳಖೇಡ ಕೋಟೆ ಸಂರಕ್ಷಣೆಗೆ ಕಾಣದ ಆಸಕ್ತಿ; ಮೂಲಸೌಕರ್ಯಗಳ ಅಭಿವೃದ್ಧಿಗೂ ನಿರ್ಲಕ್ಷ್ಯ
Published : 27 ಸೆಪ್ಟೆಂಬರ್ 2024, 6:35 IST
Last Updated : 27 ಸೆಪ್ಟೆಂಬರ್ 2024, 6:35 IST
ಫಾಲೋ ಮಾಡಿ
Comments

ಕಲಬುರಗಿ: ಜಿಲ್ಲೆಯನ್ನು ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿಗಳು, ಬಹಮನಿ ಸುಲ್ತಾನರು ಆಳಿದ ಪರಿಣಾಮ ಹಲವು ರಾಷ್ಟ್ರೀಯ ಸ್ಮಾರಕಗಳು ಎದ್ದು ನಿಂತಿವೆ. ಆದರೆ, ಅವುಗಳಿಗೆ ಸೂಕ್ತ ಸಂರಕ್ಷಣೆ, ನೀರು, ಶೌಚಾಲಯ, ಸಂಪರ್ಕ ರಸ್ತೆಯಂತಹ ಮೂಲಸೌಕರ್ಯ ಅಭಿವೃದ್ಧಿಯೂ ಇಲ್ಲದೇ ಇರುವುದರಿಂದ ದಿನದಿಂದ ದಿನಕ್ಕೆ ಇವುಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಕ್ಷೀಣಿಸುತ್ತಿದೆ.

ಸೆಪ್ಟೆಂಬರ್‌ 27ರಂದು ಅಂತರರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಅವಲೋಕನ ನಡೆಸಿದಾಗ, ಅಭಿವೃದ್ಧಿ ವಿಚಾರದಲ್ಲಿ ನಿರಾಸಕ್ತಿ ತೋರಿಸುತ್ತಿರುವುದು ಕಾಣಿಸುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿನಿಧಿಸುವ ಚಿತ್ತಾಪುರ ತಾಲ್ಲೂಕು ಹಲವು ಐತಿಹಾಸಿಕ ಸ್ಮಾರಕಗಳ ತವರಾಗಿದೆ. ಸಾಮ್ರಾಟ್ ಅಶೋಕನು ತನ್ನ ಪತ್ನಿ, ಕುಟುಂಬದೊಂದಿಗೆ ಇರುವ ಏಕೈಕ ಶಿಲ್ಪ ಇರುವುದು ತಾಲ್ಲೂಕಿನ ಸನ್ನತಿ ಸಮೀಪದ ನದಿ ದಡದಲ್ಲಿರುವ ಅಧೋಲೋಕ ಮಹಾಚೈತ್ಯ ಬೌದ್ಧ ಮಹಾಸ್ತೂಪವು 2 ಎರಡು ಸಾವಿರ ವರ್ಷಗಳಷ್ಟು ಹಳೆಯಾಗಿದೆ. ಅದನ್ನು ₹ 3 ಕೋಟಿ ವೆಚ್ಚದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಅಭಿವೃದ್ಧಿಪಡಿಸುತ್ತಿದೆ. ಆದರೆ, ಕಲಬುರಗಿಯಿಂದ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕಾಗಿ ಗುಣಮಟ್ಟದ ರಸ್ತೆಯಾಗಲಿ, ಬೌದ್ಧ ಸ್ತೂಪದ ಬಗ್ಗೆ ವಿವರಣೆ ನೀಡುವ ಮಾಹಿತಿಯಾಗಲಿ ಅಥವಾ ಗೈಡ್ ಆಗಲಿ ಇಲ್ಲ. ಅಲ್ಲಿನ ಭದ್ರತೆಗೆ ನಿಯೋಜಿತರಾದ ಸಿಬ್ಬಂದಿಯು ಪ್ರವಾಸಿಗರು ಸ್ತೂಪದ ಚಿತ್ರ ತೆಗೆಯಲೂ ಅಡ್ಡಿ ಮಾಡುತ್ತಾರೆ ಎಂಬ ಆರೋಪಗಳಿವೆ. ಸ್ತೂಪದ ಸಮೀಪದಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯೇ ಇಲ್ಲ.

ಕಲಬುರಗಿಯ ಬಹಮನಿ ಕೋಟೆ, ಶೋರ್ ಗುಂಬಜ್, ಸಾಥ್‌ ಗುಂಬಜ್‌ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ದಶಕಗಳ ಹಿಂದೆಯೇ ನೂರಾರು ಕುಟುಂಬಗಳು ಕೋಟೆಯನ್ನು ಅತಿಕ್ರಮಣ ಮಾಡಿಕೊಂಡಿದ್ದು, ಅವರನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯ ಇನ್ನೂ ಯಶಸ್ವಿಯಾಗಿಲ್ಲ. ಸಾಲದೆಂಬಂತೆ ಒತ್ತುವರಿದಾರರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನೂ ಕಲ್ಪಿಸಲಾಗಿದೆ! ಒತ್ತುವರಿದಾರರು ಮನೆಯ ಬಚ್ಚಲು ಮನೆಯ ನೀರನ್ನು ಕೋಟೆಯ ಪಕ್ಕದಲ್ಲಿಯೇ ಬಿಡುತ್ತಿದ್ದು, ಇದರಿಂದ ಗೋಡೆಗಳು ದಿನದಿಂದ ದಿನಕ್ಕೆ ಶಿಥಿಲವಾಗುತ್ತಿದೆ. ಯಾವುದೇ ಸಂರಕ್ಷಿತ ಸ್ಮಾರಕದ ಸುತ್ತಲಿನ 100 ಮೀಟರ್ ಸಮೀಪದಲ್ಲಿ ಯಾವುದೇ ನಿರ್ಮಾಣ ಕಾರ್ಯ, ಒತ್ತುವರಿ ನಡೆಯುವಂತಿಲ್ಲ. ಆದರೆ, ಕೋಟೆಗೆ ಹೊಂದಿಕೊಂಡಂತೆಯೇ ಶಹಾ ಬಜಾರ್ ಭಾಗದಲ್ಲಿ ಅಂಗಡಿಗಳು ತಲೆ ಎತ್ತಿದ್ದರೂ ಅದನ್ನು ತೆರವುಗೊಳಿಸಲು ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾಡಳಿತ ವಿಫಲವಾಗಿವೆ. ಇದರಿಂದ ಇನ್ನಷ್ಟು ಒತ್ತುವರಿಗೆ ಇಂಬು ನೀಡಿದಂತಾಗಿದೆ ಎನ್ನುತ್ತಾರೆ ಬಹಮನಿ ಕೋಟೆಯ ಬಗ್ಗೆಯೇ ಪಿಎಚ್‌.ಡಿ. ಮಾಡಿರುವ ಇತಿಹಾಸ ತಜ್ಞ ಶಂಭುಲಿಂಗ ವಾಣಿ.

ರಾಷ್ಟ್ರಕೂಟರ ರಾಜಧಾನಿಯಾಗಿದ್ದ ಮೆರೆದಿದ್ದ, ಕನ್ನಡದ ಮೊದಲ ಉಪಲಬ್ದ ಗ್ರಂಥ ಕವಿರಾಜಮಾರ್ಗ ಹುಟ್ಟಿಗೆ ಕಾರಣರಾದ ಅಮೋಘವರ್ಷ ನೃಪತುಂಗನ ರಾಜಧಾನಿಯಾದ ಐತಿಹಾಸಿಕ ಮಳಖೇಡ ಕೋಟೆಯು ಸೂಕ್ತ ನಿರ್ವಹಣೆಯಿಲ್ಲದೇ ಸೊರಗಿದೆ. ಅಲ್ಲಿಯೂ ಮೂಲಸೌಕರ್ಯಗಳಿಲ್ಲ. ಮುಖ್ಯರಸ್ತೆಯಿಂದ ಕೋಟೆಗೆ ಹೋಗಬೇಕಾದ ದಾರಿ ಕಿರಿದಾಗಿದ್ದು, ಸ್ವಚ್ಛತೆಯೂ ಇಲ್ಲ. ಗೈಡ್‌, ಶೌಚಾಲಯಗಳಂತಹ ವ್ಯವಸ್ಥೆಯೂ ಇಲ್ಲ. ಜೊತೆಗೆ ಈಚೆಗೆ ಸುರಿದ ಮಳೆಯಿಂದಾಗಿ ಎರಡು ಬಾರಿ ಕೋಟೆ ಕುಸಿದಿದ್ದು, ಕೋಟೆಯ ಕಟ್ಟಡವು ಪ್ರವಾಸಿಗರು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಳೆದ ಬಾರಿ ಡಾ.ಶರಣಪ್ರಕಾಶ್ ಅವರು ಸಚಿವರಾಗಿದ್ದ ಸಂದರ್ಭದಲ್ಲಿ ರಾಷ್ಟ್ರಕೂಟ ಉತ್ಸವವನ್ನು ಆಯೋಜಿಸಿದ್ದರು. ಆ ನೆಪದಲ್ಲಿ ಕೋಟೆಗೆ ಒಂದಷ್ಟು ಕಾಯಕಲ್ಪ ಸಿಕ್ಕಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉತ್ಸವ ನಿಂತು ಹೋಗಿದೆ. 

ಕಲಬುರಗಿಯ ಶಹಾಬಜಾರ್ ನಾಕಾ ಬಳಿ ಐತಿಹಾಸಿಕ ಬಹಮನಿ ಕೋಟೆ ಅತಿಕ್ರಮಣ ಮಾಡಬಾರದೆಂಬ ಎಎಸ್‌ಐ ಫಲಕದ ಹಿಂದೆಯೇ ಅಕ್ರಮ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿರುವುದು
–ಪ್ರಜಾವಾಣಿ ಚಿತ್ರ
ಕಲಬುರಗಿಯ ಶಹಾಬಜಾರ್ ನಾಕಾ ಬಳಿ ಐತಿಹಾಸಿಕ ಬಹಮನಿ ಕೋಟೆ ಅತಿಕ್ರಮಣ ಮಾಡಬಾರದೆಂಬ ಎಎಸ್‌ಐ ಫಲಕದ ಹಿಂದೆಯೇ ಅಕ್ರಮ ವಾಣಿಜ್ಯ ಮಳಿಗೆಗಳು ನಿರ್ಮಾಣಗೊಂಡಿರುವುದು –ಪ್ರಜಾವಾಣಿ ಚಿತ್ರ
ಪ್ರವಾಸೋದ್ಯಮ ಅಭಿವೃದ್ಧಿಗೆ ಉಜ್ವಲ ಅವಕಾಶವಿರುವ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಮನಮೋಹಕ ದೃಶ್ಯ
ಪ್ರವಾಸೋದ್ಯಮ ಅಭಿವೃದ್ಧಿಗೆ ಉಜ್ವಲ ಅವಕಾಶವಿರುವ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಮನಮೋಹಕ ದೃಶ್ಯ
ಚಂದ್ರಂಪಳ್ಳಿ ಜಲಾಶಯದ ಬಳಿ ಸ್ಥಳೀಯರೇ ಕಾಟೇಜ್ ನಿರ್ಮಿಸಲು ಸರ್ಕಾರ ಪ್ರೋತ್ಸಾಹಿಸಬೇಕು. ಜೊತೆಗೆ ಅಲ್ಲಿ ಲಂಬಾಣಿ ಸಮುದಾಯದವರ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿದರೆ ಉದ್ಯೋಗ ಸೃಷ್ಟಿಯಾಗುತ್ತದೆ
ಪ್ರೊ. ಗಣಪತಿ ಸಿನ್ನೂರ ಇತಿಹಾಸ ತಜ್ಞ ಸಹ ಪ್ರಾಧ್ಯಾಪಕ ಸಿಯುಕೆ
ಜಿಲ್ಲೆಯ ಪ್ರವಾಸಿ ತಾಣಗಳನ್ನು ಗಮನಿಸಿದರೆ ತೀವ್ರ ನಿರಾಸೆಯಾಗುತ್ತದೆ. ನಾಲ್ಕೈದು ವರ್ಷಗಳ ಹಿಂದೆ ವಿದೇಶಿ ಪ್ರವಾಸಿಗರು ಕಲಬುರಗಿ ತಾಣಗಳ ವೀಕ್ಷಣೆಗಾಗಿ ವಾಸ್ತವ್ಯ ಮಾಡುತ್ತಿದ್ದರು. ಈಗ ಬೀದರ್ ವಿಜಯಪುರಕ್ಕೆ ತೆರಳುತ್ತಿದ್ದಾರೆ
ಪ್ರೊ. ಶಂಭುಲಿಂಗ ವಾಣಿ ಇತಿಹಾಸ ತಜ್ಞ
ಪ್ರವಾಸಿ ಗೈಡ್‌ಗಳಿಗೆ ಸಾರಿಗೆ ಸಂಸ್ಥೆ ಮೊದಲು ರಿಯಾಯಿತಿ ದರದಲ್ಲಿ ಬಸ್ ಪಾಸ್ ಕೊಡುತ್ತಿತ್ತು. ಅದನ್ನು ನಿಲ್ಲಿಸಿದ್ದರಿಂದ ನಮಗೆ ತೊಂದರೆಯಾಗಿದೆ
ನಾರಾಯಣ ಜೋಶಿ ಹವ್ಯಾಸಿ ಛಾಯಾಗ್ರಾಹಕ

ದತ್ತ ಸನ್ನಿಧಿಯಲ್ಲೂ ಅಭಿವೃದ್ಧಿ ಇಲ್ಲ

ಜಿಲ್ಲೆಯ ಪ್ರಮುಖ ತೀರ್ಥಕ್ಷೇತ್ರವಾದ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ದತ್ತ ಸನ್ನಿಧಿಗೆ ನಿತ್ಯ ಮಹಾರಾಷ್ಟ್ರ ತೆಲಂಗಾಣ ಹಾಗೂ ರಾಜ್ಯದ ಸಹಸ್ರಾರು ಭಕ್ತರು ಭೇಟಿ ನೀಡುತ್ತಾದರೂ ಅಲ್ಲಿ ಮೂಲಸೌಲಭ್ಯಗಳಿಲ್ಲದೇ ಪರದಾಡುತ್ತಾರೆ. ದೇವಸ್ಥಾನ ಸುತ್ತಲಿನ ಪರಿಸರ ಹಾಗೂ ಗ್ರಾಮದ ಕೊಳಚೆ ನೀರು ನೇರವಾಗಿ ಭೀಮಾ ನದಿ ಸೋರುತ್ತಿದೆ. ಅಲ್ಲಿನ ಸಾರ್ವಜನಿಕ ಶೌಚಾಲಯ ಬಹುತೇಕ ಸಂದರ್ಭದಲ್ಲಿ ಬೀಗ ಬಿದ್ದಿರುತ್ತದೆ. ಪ್ರವಾಸೋದ್ಯಮ ಇಲಾಖೆಯು ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಕಟ್ಟಿಸಿದೆಯಾದರೂ ನಿರ್ಮಾಣವಾಗಿ ಹಲವು ವರ್ಷಗಳಾದರೂ ಇನ್ನೂ ಯಾತ್ರಿಗಳಿಗೆ ನೀಡುತ್ತಿಲ್ಲ. ಅಧಿಕಾರಿಗಳು ಇಲ್ಲದ ನೆಪ ಹೇಳಿ ಯಾತ್ರಿ ನಿವಾಸ ತೆರೆಯುತ್ತಿಲ್ಲ. ಗಾಣಗಾಪುರದ ಖಾಸಗಿ ಹೋಟೆಲ್ ಲಾಬಿಯೂ ಸರ್ಕಾರಿ ಸ್ವಾಮ್ಯದ ಅತ್ಯಂತ ಕಡಿಮೆ ದರದಲ್ಲಿ ದೊರೆಯುವ ಯಾತ್ರಿ ನಿವಾಸ ಆರಂಭಕ್ಕೆ ಅಡ್ಡಗಾಲು ಹಾಕಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಕೇಂದ್ರ ಸರ್ಕಾರ ಜಿಲ್ಲೆಗೊಂದು ಪ್ರವಾಸಿ ತಾಣ ಯೋಜನೆಯಡಿ ಗಾಣಗಾಪುರ ಆಯ್ಕೆ ಮಾಡಿಕೊಂಡಿದೆ. ಆದರೆ ಇನ್ನೂ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ. ಅಲ್ಲಿನ ಧರ್ಮಶಾಲೆಗಳು ಯಾವಾಗ ಬೇಕಾದರೂ ಬೀಳುವ ಹಂತದಲ್ಲಿವೆ.

ಆಗಬೇಕಾದ ಕೆಲಸಗಳೇನು?

* ಜಿಲ್ಲೆಯ ಐತಿಹಾಸಿಕ ಸ್ಥಳ ಸ್ಮಾರಕ ತೀರ್ಥಕ್ಷೇತ್ರಗಳ ಬಗ್ಗೆ ಕಿರು ಹೊತ್ತಿಗೆ ಪ್ರಕಟಿಸುವುದು

* ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಬಸ್ ನಿಲ್ದಾಣ ರೈಲು ನಿಲ್ದಾಣ ವಿಮಾನ ನಿಲ್ದಾಣಗಳಲ್ಲಿ ಪ್ರಚಾರ ಮಾಡುವುದು

* ಪ್ರಮುಖ ಪ್ರವಾಸಿ ತಾಣಗಳಿಗೆ ಬಸ್ ಸಂಚಾರ ಕಲ್ಪಿಸುವುದು

* ತಾಣಗಳಲ್ಲಿ ಶುದ್ಧ ಕುಡಿಯುವ ನೀರು ಶೌಚಾಲಯ ಉತ್ತಮ ರಸ್ತೆ ಆಸನ ಗೈಡ್ ವ್ಯವಸ್ಥೆ ಮಾಡುವುದು

* ಪ್ರವಾಸಿ ತಾಣಗಳಲ್ಲಿ ಅದರ ಮಹತ್ವ ಸಾರುವ ಆಡಿಯೊ ವಿಡಿಯೊ ಶೋ ವ್ಯವಸ್ಥೆ ಮಾಡಬೇಕು

ಒಂದಷ್ಟು ದಿಟ್ಟ ಹೆಜ್ಜೆ

ಇತಿಹಾಸ ಪ್ರೇಮಿಗಳ ಒತ್ತಾಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಒತ್ತಾಸೆಯ ಮೇರೆಗೆ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲವು ಕೆಲಸಗಳಾಗಿರುವುದು ನಿಜ. ಬಹಮನಿ ಕೋಟೆಯ ಸುತ್ತಲಿನ ಕೊಳಚೆಯನ್ನು ತೆರವುಗೊಳಿಸಲಾಗಿದೆ. ನಾಗಾವಿ ಸಮೀಪದ ಐತಿಹಾಸಿಕ 60 ಕಂಬಗಳ ದೇವಸ್ಥಾನವಿರುವ ಘಟಿಕಾಸ್ಥಾನದ ಸುತ್ತ ಸ್ವಚ್ಛಗೊಳಿಸಲಾಗಿದೆ. ಅಗ್ರಹಾರವನ್ನೂ ಸ್ವಚ್ಛಗೊಳಿಸಲಾಗಿದೆ. ನಾಗಾವಿ ಮಳಖೇಡ ಕೋಟೆಯನ್ನು ಸಂಸ್ಥೆಗಳಿಗೆ ದತ್ತು ನೀಡಲಾಗಿದೆ. ನಾಗಾವಿ ಯಲ್ಲಮ್ಮ ದೇವಸ್ಥಾನದ ಪರಿಸರ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿಯ ಫಲವಾಗಿ ಸಿಎಸ್‌ಆರ್ ಯೋಜನೆಯಡಿ ₹ 22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ರೂಪಿಸಲಾಗಿದೆ. ಕಳೆದ ಬಾರಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಆಸಕ್ತಿಯ ಫಲವಾಗಿ ನಾಗಾವಿಯಲ್ಲಿ ಪ್ರವಾಸೋದ್ಯಮ ದಿನ ಆಚರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT