ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಕೊಯನಾಡು ಕುಸಿತ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಗಂಟೆಯೆ?

64 ವರ್ಷಗಳ ಇತಿಹಾಸ ಹೊಂದಿರುವ ಶಾಲೆ ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕ ಸ್ಥಳಾಂತರ
Published 17 ಜುಲೈ 2024, 5:17 IST
Last Updated 17 ಜುಲೈ 2024, 5:17 IST
ಅಕ್ಷರ ಗಾತ್ರ

ಮಡಿಕೇರಿ: ತಾಲ್ಲೂಕಿನ ಕೊಯನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಭಾರಿ ಪ್ರಮಾಣ ಮಣ್ಣು ಕುಸಿದಿರುವುದು ಜಿಲ್ಲಾಡಳಿತ ಪಾಲಿಗೆ ಎಚ್ಚರಿಕೆ ಗಂಟೆಯಂತಾಗಿದೆ. ಸೋಮವಾರ ಇಡೀ ದಿನ ಈ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿದಿತ್ತು. ಸುಮಾರು 9 ಸೆಂ.ಮೀನಷ್ಟು ಭಾರಿ ಮಳೆ ದಾಖಲಾಗಿತ್ತು. ತಡರಾತ್ರಿ ದೊಡ್ಡ ಪ್ರಮಾಣದ ಮಣ್ಣು, ಕಲ್ಲುಗಳು ಶಾಲೆಯ ಮೇಲೆ ಕುಸಿದು, 5 ಕೊಠಡಿಗಳಿಗೆ ಅಪಾರ ಪ್ರಮಾಣದ ಹಾನಿ ಮಾಡಿವೆ. ಇದು ಪ್ರಸಕ್ತ ಸಾಲಿನಲ್ಲಿ ಮಳೆಯ ಕಾರಣದಿಂದ ಎದುರಾದ ಮೊದಲ ದೊಡ್ಡ ಕುಸಿತ ಎನಿಸಿದೆ.

ಒಂದು ವೇಳೆ ಹಗಲಿನಲ್ಲಿ ಶಾಲೆಗೆ ರಜೆ ಇಲ್ಲದಿದ್ದಾಗ ಏನಾದರೂ ಈ ಘಟನೆ ಸಂಭವಿಸಿದ್ದರೆ ಆಗುತ್ತಿದ್ದ ನಷ್ಟ ಹೇಳತೀರದು. ಇದು ಜಿಲ್ಲಾಡಳಿತ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಂತಿದೆ.

ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ತಹಶೀಲ್ದಾರ್ ಪ್ರವೀಣ್ ಕುಮಾರ್ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ಹಾಗೂ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕೇಂದ್ರದ ಸಿಬ್ಬಂದಿ ಶಾಲೆಯೊಳಗೆ ಇದ್ದ ಲೇಖನ ಸಾಮಗ್ರಿ ಸೇರಿದಂತೆ ಇನ್ನಿತರ ಪರಿಕರಗಳನ್ನು ಹೊರತಂದರು.

ಈ ಶಾಲೆಯಲ್ಲಿ ಮತ್ತೆ ಯಾವುದೇ ತರಗತಿಗಳನ್ನು ನಡೆಸುವುದು ಬೇಡ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದಾರೆ. ಸದ್ಯ, ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 62 ಮಕ್ಕಳೂ ಹಾಗೂ ಎಲ್‌ಕೆಜಿ, ಯುಕೆಜಿಯಲ್ಲಿ 24 ಮಕ್ಕಳು ಸೇರಿದಂತೆ ಒಟ್ಟು 86 ಮಕ್ಕಳಿದ್ದಾರೆ. ಇವರನ್ನು ಇಲ್ಲಿಂದ 2.5 ಕಿ.ಮೀ ದೂರದಲ್ಲಿರುವ ಸಂಪಾಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಲಾಗಿದೆ.

ಈಗ ಕೊಯನಾಡಿನ ಜನರು ತಮ್ಮ ಮಕ್ಕಳನ್ನು 2.5 ಕಿ.ಮೀ ದೂರದ ಶಾಲೆಗೆ ಕಳುಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

2022ರಿಂದಲೂ ಗಂಡಾಂತರದಲ್ಲಿದ್ದ ಶಾಲೆ!

ಶಾಲೆಯ ಮೇಲೆ 2022ರಲ್ಲೂ ಮಣ್ಣು ಕುಸಿತದಂತಹ ಘಟನೆ ನಡೆದಿತ್ತು. ನಂತರ, ಕಳೆದ ತಿಂಗಳೂ ಒಂದು ಕೊಠಡಿ ಮಣ್ಣು ಕುಸಿತದಿಂದ ಸಂಪೂರ್ಣ ಹಾನಿಯಾಗಿತ್ತು. ಈಗ ಮತ್ತೆ 4 ಕೊಠಡಿಗಳ ಮೇಲೆ ಮಣ್ಣು, ಕಲ್ಲುಗಳು ಕುಸಿದಿವೆ. ಹಾಗಾಗಿ, ಸುರಕ್ಷತೆಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಶಾಲೆಯನ್ನು ಸ್ಥಳಾಂತರ ಮಾಡಲಾಗಿದೆ.

64 ವರ್ಷಗಳ ಐತಿಹಾಸಿಕ ಶಾಲೆ

ಈ ಶಾಲೆಯು 1960ರಲ್ಲಿ ಪ್ರಾರಂಭವಾಗಿತ್ತು. ಈ ಹೊಸ ಕಟ್ಟಡವು 20 ವರ್ಷದ ಹಿಂದೆಯೆ ನಿರ್ಮಾಣವಾಗಿತ್ತು. ಆದರೆ, ಕಳೆದೆರಡು ವರ್ಷಗಳಿಂದ ಶಾಲೆಯ ಹಿಂದಿರುವ ಗುಡ್ಡದಂತಹ ಪ್ರದೇಶ ನಿಧಾನವಾಗಿ ಜರಿಯುತ್ತಿದೆ. ಇದರ ಕೆಳಭಾಗದಲ್ಲಿ ನೀರು ಬರುತ್ತಿರುವುದರಿಂದ ಮಣ್ಣು ಜರಿಯುತ್ತಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT