ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು| ಇಲ್ಲ ಸುಸಜ್ಜಿತ ಆಸ್ಪತ್ರೆಯ ಸವಲತ್ತು!

ತಜ್ಞ ವೈದ್ಯರ ಕೊರತೆ, ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ತೆರಳುತ್ತಿರುವ ರೋಗಿಗಳು, ಸುಸಜ್ಜಿತ ಆಸ್ಪತ್ರೆಗೆ ಬೇಡಿಕೆ
Published 1 ಅಕ್ಟೋಬರ್ 2023, 5:35 IST
Last Updated 1 ಅಕ್ಟೋಬರ್ 2023, 5:35 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಹತ್ತಾರು ಗ್ರಾಮಗಳನ್ನು ಒಳಗೊಂಡ ದಕ್ಷಿಣ ಕೊಡಗಿನ ಪ್ರಮುಖ ವಾಣಿಜ್ಯ ಕೇಂದ್ರ ಗೋಣಿಕೊಪ್ಪಲು. ಇದರ ಸುತ್ತಮುತ್ತಲಿನ ಗ್ರಾಮಗಳ ಒಟ್ಟು ಜನಸಂಖ್ಯೆ ಅಂದಾಜು 20 ಸಾವಿರ ದಾಟಲಿದೆ. ಈ ಎಲ್ಲ ಜನರ ಚಿಕಿತ್ಸೆಗೆ ಆಸರೆಯಾಗಿರುವುದು ಇಲ್ಲಿನ ಏಕೈಕ ಸಮುದಾಯ ಆರೋಗ್ಯ ಕೇಂದ್ರ ಮಾತ್ರ.

ಆದರೆ, ಇಲ್ಲಿ ಆಂಬುಲೆನ್ಸ್ ಕೆಟ್ಟಿದೆ, ತಜ್ಞ ವೈದ್ಯರ ಕೊರತೆ ಇದೆ. ಹೀಗಾಗಿ, ಈ ಭಾಗದಲ್ಲಿ ಹೆಚ್ಚಿರುವ ಕಾರ್ಮಿಕರು, ಬಡವರು ಚಿಕಿತ್ಸೆಗಾಗಿ ಅಲೆಯಬೇಕಾದ ಸ್ಥಿತಿ ಇದೆ. ಕೂಡಲೇ ಆಸ್ಪತ್ರೆಯಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು, ಆಂಬುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಎನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ.

ತಾಲ್ಲೂಕು ಆಸ್ಪತ್ರೆಗಾಗಿ ಗೋಣಿಕೊಪ್ಪಲು ಮಾತ್ರವಲ್ಲ ಕೇರಳದ ಗಡಿ ಭಾಗದ ಕುಟ್ಟ, ಬಿರುನಾಣಿಯಿಂದ ವಿರಾಜಪೇಟೆಗೆ ಬರಬೇಕಿದೆ. ಸರಿಸುಮಾರು 45 ಕಿ.ಮೀಗೂ ಹೆಚ್ಚು ದೂರದವರೆಗೆ ಒಂದೇ ಒಂದು ತಾಲ್ಲೂಕು ಆಸ್ಪತ್ರೆ ಇಲ್ಲ. ಕೂಗಳತೆ ದೂರದ ಪೊನ್ನಂಪೇಟೆ ತಾಲ್ಲೂಕಾಗಿ 5 ವರ್ಷ ಕಳೆದರೂ ಇಲ್ಲೊಂದು ತಾಲ್ಲೂಕು ಆಸ್ಪತ್ರೆ ನಿರ್ಮಾಣವಾಗಿಲ್ಲ. ಹಾಗಾಗಿ, ತಾಲ್ಲೂಕಾದರೂ ಸಮುದಾಯ ಆರೋಗ್ಯ ಕೇಂದ್ರವನ್ನೇ ಚಿಕಿತ್ಸೆಗೆ ಬಡವರು ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ.

30 ವರ್ಷಗಳ ಹಿಂದೆ ಗೋಣಿಕೊಪ್ಪಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಂದು ರಾಜ್ಯದ ಕಾನೂನು ಸಚಿವರಾಗಿದ್ದ ಎಂ.ಸಿ.ನಾಣಯ್ಯನವರು ಮೇಲ್ದರ್ಜೆಗೇರಿಸಿ ಸಮುದಾಯ ಆರೋಗ್ಯ ಕೇಂದ್ರ ಮಾಡಿದರು. ಆರಂಭದಲ್ಲಿ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಸೌಲಭ್ಯಗಳಿದ್ದವು, ತಜ್ಞ ವೈದ್ಯರಿದ್ದರು. ಗ್ರಾಮೀಣ ಪ್ರದೇಶದ ಬಡ ಜನತೆ ಕೂಗಳತೆಯ ದೂರದಲ್ಲಿ ಹಣಕಾಸಿನ ಹೊರೆ ಇಲ್ಲದೆ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ, ಈಗ ಸ್ತ್ರೀರೋಗ, ಅರವಳಿಕೆ ತಜ್ಞರು ಹಾಗೂ ಒಬ್ಬರು ಫಿಜಿಷಿಯನ್‌ ಇದ್ದಾರೆ. ಈ ಆಸ್ಪತ್ರೆಗೆ ಬರುವವರು ಹೆಚ್ಚಿನ ಸಂಖ್ಯೆಯಲ್ಲಿ ಕೈಕಾಲು ನೋವು ಮಾಡಿಕೊಂಡವರೇ ಆಗಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡಲು ಮೂಳೆ ತಜ್ಞರಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಆರೋಗ್ಯ ಕೇಂದ್ರ ತಜ್ಞ ವೈದ್ಯರಿಲ್ಲದೆ ರೋಗಿಗಳಿಂದ ದೂರವಾಗುತ್ತಿದೆ. ಹೀಗಾಗಿ, ಖಾಸಗಿ ನರ್ಸಿಂಗ್ ಹೋಂಗಳು ತಲೆ ಎತ್ತುತ್ತಿವೆ. ಇದರಿಂದ ಮಧ್ಯಮ ಮತ್ತು ಕೂಲಿಕಾರ್ಮಿಕ ವರ್ಗದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.

ಆಸ್ಪತ್ರೆಯಲ್ಲಿ ಸಕಲ ಸೌಲಭ್ಯಗಳಿವೆ, ಎಕ್ಸರೆ ಇದೆ. ಶಸ್ತ್ರಚಿಕಿತ್ಸಾ ಕೊಠಡಿ ಮೊದಲಾದ ಹಲವು ಬಗೆಯ ಅನುಕೂಲಗಳಿವೆ. ವೈದ್ಯರಿಗೆ ಮತ್ತು ಸಿಬ್ಬಂದಿಗಳಿಗೆ ಆಸ್ಪತ್ರೆಯ ಆವರಣದಲ್ಲಿಯೇ ವಸತಿ ಗೃಹಗಳಿವೆ. ಆಸ್ಪತ್ರೆಗೆ 5 ಮಂದಿ ತಜ್ಞ ವೈದ್ಯ ಹುದ್ದೆಗಳು ಮಂಜೂರಾಗಿವೆ. ಆದರೆ, ಈಗ ಇರುವುದು ಕೇವಲ ಇಬ್ಬರು ಮಾತ್ರ. 3 ಹುದ್ದೆಗಳು ಖಾಲಿ ಉಳಿದಿವೆ. ಶುಶ್ರೂಷಕರಿಯರ ಕೊರತೆಯೂ ಇದೆ. ದಕ್ಷಿಣ ಕೊಡಗಿನ ಕೇಂದ್ರ ಸ್ಥಾನದಲ್ಲಿರುವ ಈ ಆಸ್ಪತ್ರೆಗೆ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಆಗಮಿಸುತ್ತಾರೆ. ಅದರಲ್ಲಿಯೂ ಕಾರ್ಮಿಕರೇ ಹೆಚ್ಚು.

‘ತುರ್ತು ಚಿಕಿತ್ಸೆಗೆ ರೋಗಿಗಳನ್ನು ಕರೆ ತರುತ್ತಿದ್ದ 108 ಆಂಬುಲೆನ್ಸ್ ಒಂದು ತಿಂಗಳಿನಿಂದ ಟೈರ್ ಇಲ್ಲದೆ ನಿಂತಲ್ಲೆ ಇದೆ’ ಎಂದು ದೂರುತ್ತಾರೆ ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಫಿಲಿಪೋಸ್ ಮ್ಯಾಥ್ಯು.

ಆಸ್ಪತ್ರೆ ನಿರ್ವಹಣೆಗಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಕ್ಷಾ ಸಮಿತಿ ಇದೆ. ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಈ ಸಮಿತಿಯ ಸದಸ್ಯರಾಗಿದ್ದಾರೆ. ಆದರೆ, ಒಂದು ವರ್ಷದಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯ ಸದಸ್ಯರೇ ಇಲ್ಲದ್ದರಿಂದ ರಕ್ಷಾ ಸಮಿತಿ ನೆನೆಗುದಿಗೆ ಬಿದ್ದಿದೆ.

ದಕ್ಷಿಣ ಕೊಡಗಿನ ತಿತಿಮತಿ, ಬಾಳೆಲೆ, ಹುದಿಕೇರಿ, ಕಾನೂರು, ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಪಾಲಿಬೆಟ್ಟ ಮೊದಲಾದ ಗ್ರಾಮಗಳ ಜನತೆ ಹೆಚ್ಚಿನ ಚಿಕಿತ್ಸೆಗೆ ಅವಲಂಬಿಸಿರುವುದು ಇದೇ ಆಸ್ಪತ್ರೆಯನ್ನು. ಮರಣೋತ್ತರ ಪರೀಕ್ಷೆ ನಡೆಯುವುದು ಇಲ್ಲಿಯೇ. ಈ ವೈದ್ಯರು ರಜೆ ಹಾಕಿದರೆ ಮರಣೋತ್ತರ ಪರೀಕ್ಷೆಗೆ ದಿನ ಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ.


ಟೈರ್ ಇಲ್ಲದೆ ಕೆಟ್ಟು ನಿಂತಿರುವ 108 ಆಂಬುಲೆನ್ಸ್.
ಟೈರ್ ಇಲ್ಲದೆ ಕೆಟ್ಟು ನಿಂತಿರುವ 108 ಆಂಬುಲೆನ್ಸ್.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಹೊರ ನೋಟ
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಹೊರ ನೋಟ
ಡಾ.ಯತಿರಾಜ್
ಡಾ.ಯತಿರಾಜ್
ಮಂಜುಳಾ
ಮಂಜುಳಾ
ಪ್ರಭು ಕೆಂಬಟ್ಟಿ
ಪ್ರಭು ಕೆಂಬಟ್ಟಿ

ತಜ್ಞ ವೈದ್ಯರಿಲ್ಲದೇ ರೋಗಿಗಳು ಹೈರಾಣು ಕಾರ್ಮಿಕರು, ಬಡವರಿಗೆ ಹೊರೆ ಸುಸಜ್ಜಿತ ಆಸ್ಪತ್ರೆಯನ್ನಾಗಿಸಲು ಆಗ್ರಹ

ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಜನರೇಟರ್ ಕೆಟ್ಟು ಹೋದರೆ ತಿಂಗಳುಗಟ್ಟಲೆ ದುರಸ್ತಿಯಾಗುವುದೇ ಇಲ್ಲ. ಇದರಿಂದ ಬಡರೋಗಿಗಳ ಚಿಕಿತ್ಸೆಗೆ ತೊಂದರೆಯಾಗುತ್ತಿದೆ.
ಪ್ರಭು ಕೆಂಬಟ್ಟಿ ಮಾಜಿ ಸೈನಿಕ ಜೋಡು ಬೀಟಿ.
ಆಸ್ಪತ್ರೆಯಲ್ಲಿ ಹೆರಿಗೆ ವಿಭಾಗ ಉತ್ತಮವಾಗಿದೆ. ಇಲ್ಲಿನ ತಜ್ಞ ವೈದ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಅನುಕೂಲವಾಗುತ್ತಿದೆ.
ಮಂಜುಳಾ ಗ್ರಾಮ ಪಂಚಾಯಿತಿ ಸದಸ್ಯೆ
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ನೂರಾರು ಮಂದಿ ಚಿಕಿತ್ಸೆಗೆ ಸಾಲು ಗಟ್ಟಿ ನಿಂತಿರುತ್ತಾರೆ. ಮಕ್ಕಳು ತಜ್ಞರು ಪಿಜಿಷಿಯನ್ ತಜ್ಞರ ಕೊರತೆ ಇದೆ. ಸುತ್ತಮುತ್ತಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರನ್ನು ನಿಯೋಜಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ
. ಡಾ.ಯತಿರಾಜ್ ತಾಲ್ಲೂಕು ಆರೋಗ್ಯಾಧಿಕಾರಿ ವಿರಾಜಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT