ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಗ್ಗಿ ಹಬ್ಬಕ್ಕೆ ಸಂಭ್ರಮದ ಸ್ವಾಗತ

ಹುತ್ತರಿ ಸಂಭ್ರಮ... ಎಲ್ಲೆಡೆ ಪೊಲಿ ಪೊಲಿ ದೇವಾ... ಉದ್ಘೋಷ
Last Updated 8 ಡಿಸೆಂಬರ್ 2022, 8:37 IST
ಅಕ್ಷರ ಗಾತ್ರ

ಮಡಿಕೇರಿ: ಸುಗ್ಗಿ ಹಬ್ಬ ‘ಹುತ್ತರಿ’ಯ ಸಂಭ್ರಮ ಕೊಡಗು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗರಿಗೆದರಿತು. ನೆರೆಕಟ್ಟುವುದು, ಕದಿರು ತೆಗೆಯುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳಿಗೆ ಇಲ್ಲಿನ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಮುನ್ನುಡಿ ಬರೆಯುತ್ತಿದ್ದಂತೆ, ಜಿಲ್ಲೆಯ ಎಲ್ಲೆಡೆ ಸಂಭ್ರಮ ಮೇಳೈಸಿತು. ಇನ್ನೂ ಹಲವು ದಿನಗಳ ಕಾಲ ಹುತ್ತರಿಯ ಸಡಗರ ಜಿಲ್ಲೆಯಲ್ಲಿ ಮನೆ ಮಾಡಲಿದೆ.

ಚುಮುಚುಮು ಚಳಿಯ ನಡುವೆ, ಆವರಿಸಿದ್ದ ಇಬ್ಬನಿಯ ಮಧ್ಯೆ ‘ಪೊಲಿ ಪೊಲಿಯೇ ದೇವ’ ಎಂಬ ಉದ್ಘೋಷಗಳು ಮುಗಿಲು ಮುಟ್ಟಿದವು. ಅಬ್ಬರದ ಪಟಾಕಿ, ಬಾನಬಿರುಸುಗಳ ಸಿಡಿತಗಳೊಂದಿಗೆ ಕೋವಿಯಿಂದ ಹೊಮ್ಮಿದ ಕುಶಾಲತೋಪುಗಳು ಸಂಭ್ರಮಕ್ಕೆ ಕಳಸವನ್ನಿಟ್ಟವು. ಐನ್‌ಮನೆ ಗಳು, ದೇವಾಲಯಗಳು, ವಿವಿಧ ಸಮಾಜಗಳ ಸಭಾಂಗಣಗಳಲ್ಲಿ ಸಾಮೂ ಹಿಕ ಆಚರಣೆಗಳ ಜತೆಗೆ ಕೊಡಗಿನಲ್ಲಿ ವಾಸಿಸುವ ಎಲ್ಲ ರೈತಾಪಿ ವರ್ಗದವರೂ ತಮ್ಮ ತಮ್ಮ ಮನೆಗಳಲ್ಲಿ ಹುತ್ತರಿಯನ್ನು ಸಡಗರದಿಂದ ಆಚರಿಸಿದರು.

ಸಾಂಪ್ರದಾಯಿಕ ದಿರಿಸಿನಲ್ಲಿ ಮಹಿಳೆಯರು ಹಾಗೂ ಪುರುಷರು ಗದ್ದೆಯಿಂದ ಭತ್ತದ ತೆನೆಯನ್ನು ಮೆರವಣಿಗೆ ಮೂಲಕ ತಂದು ಪೂಜೆ ಸಲ್ಲಿಸಿ, ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡರು. ನಂತರ ವಿವಿಧ ಬಗೆಯ ಜಾನಪದ ನೃತ್ಯಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.

ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕಣಿಯಂಡ, ಕೋಳೆ ಯಂಡ, ಕಲಿಯಂಡ, ಐರೀರ, ಐಕೊ ಳಂಡ, ಬೊಳ್ಳಿನಮ್ಮಂಡ ಸೇರಿದಂತೆ ಅಮ್ಮಂಗೇರಿಯ ಹತ್ತು
ಕುಟುಂಬದ ವರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ವಿವಿಧ ಕುಟುಂಬಗಳ ಮಹಿಳೆಯರು ‘ತಳಿಯಕ್ಕಿ ಬೊಳಕ್’ ಹಿಡಿದು ದೇವಾಲಯಕ್ಕೆ ಆಗಮಿಸಿದರು. ದುಡಿಕೊಟ್ ಪಾಟ್, ವಿಶೇಷ ಪ್ರಾರ್ಥನೆ, ಸಾಂಪ್ರದಾಯಿಕ ನೆರೆಕಟ್ಟುವ ಕಾರ್ಯದ ಬಳಿಕ 8.20ಕ್ಕೆ ಕುಶಾಲುತೋಪು ಹಾರಿಸಿ ‘ಪೊಲಿಪೊಲಿ ಬಾ’ ಘೋಷಣೆಗಳ ನಡುವೆ ಕದಿರನ್ನು ಕಟಾವು ಮಾಡಲಾಯಿತು.

ಮಡಿಕೇರಿಯ ಓಂಕಾರೇಶ್ವರ ದೇಗುಲ, ಪಾಲೂರು ಮಹಾಲಿಂಗೇಶ್ವರ, ಮಕ್ಕಿಶಾಸ್ತಾವು, ಕಕ್ಕುಂದ ಕಾಡು ವೆಂಕಟೇಶ್ವರ ದೇವಾಲಯ, ನಾಪೋಕ್ಲು, ಕುಶಾಲನಗರ ಕೊಡವ, ಗೌಡ ಸಮಾಜಗಳಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಯಿತು.

ಎತ್ತುಪೋರಾಟ

ನಾ‍ಪೋಕ್ಲು ವರದಿ: ಇಲ್ಲಿನ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇಗುಲದಲ್ಲಿಯೂ ಸಂಭ್ರಮದ ಆಚರಣೆ ನಡೆಯಿತು. ಇದಕ್ಕೂ ಮುನ್ನ ಕಲ್ಲಾಡ್ಚ ಹಬ್ಬವನ್ನು ಮಂಗಳವಾರ ಸಾಂಪ್ರದಾಯಿಕವಾಗಿ ಶ್ರದ್ದಾಭಕ್ತಿಯಿಂದ ಆಚರಿಲಾಯಿತು. ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವತಕ್ಕರಾದ ಪರದಂಡ ಕುಟುಂಬಸ್ಥರ ಎತ್ತುಪೋರಾಟ ನಡೆಯಿತು. ಭಕ್ತರು ತುಲಾಭಾರ ಸೇವೆ, ಹಾಲು ಬಲಿವಾಡು, ಹರಕೆ ಇನ್ನಿತರ ಪೂಜೆಗಳನ್ನು ನೆರವೇರಿಸಿದರು. ಮಧ್ಯಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿಯ ದರ್ಶನ ಬಳಿಕ ತಕ್ಕ ಮುಖ್ಯಸ್ಥರು ಭಕ್ತರು ದೇವರ ಆದಿ ನೆಲೆ ಮಲ್ಮ ಬೆಟ್ಟಕ್ಕೆ ಶ್ರದ್ದಾಭಕ್ತಿಯಿಂದ ತೆರಳಿದರು. ಪೇರೂರು ಹಾಗೂ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದ ತಕ್ಕ ಮುಖ್ಯಸ್ಥರು ಎತ್ತುಪೋರಾಟದೊಂದಿಗೆ ಮಲ್ಮಕ್ಕೆ ಆಗಮಿಸಿದರು. ನಾಡಿನ ಸುಭಿಕ್ಷಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜಾ ವಿಧಿ ವಿಧಾನಗಳನ್ನು ಮುಖ್ಯ ಅರ್ಚಕ ಕುಶ ಭಟ್, ಜಗದೀಶ್ , ಶ್ರೀನಿವಾಸ್ ಹೆಬ್ಬಾರ್ ನೆರವೇರಿಸಿದರು. ಡಿನ, ದೇವಾಲಯದ ತಕ್ಕ ಮುಖ್ಯಸ್ಥರು, ಭಕ್ತಜನ, ಪದಾಧಿಕಾರಿಗಳು ಇದ್ದರು.

ಭೋಜನಗೃಹ ಉದ್ಘಾಟನೆ: ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘ ಆರಂಭಗೊಂಡು 100 ವರ್ಷ ತುಂಬಿದ ನೆನಪಿಗಾಗಿ ದಾನಿಗಳು ಸಹಕಾರದಿಂದ ವಿವಿಧ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಭಕ್ತ ಜನಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ಹೇಳಿದರು. ಸಂಘದಿಂದ ₹ 38 ಲಕ್ಷದಲ್ಲಿ ನಿರ್ಮಿಸಿದ ಭೋಜನ ಗೃಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶತಮಾನದ ನೆನಪಿಗಾಗಿ ಭೋಜನಗೃಹ, ಸಂಘದ ಕಚೇರಿ, ಸಮಿತಿ ಕಚೇರಿ ಹಾಗೂ ಕೈ ತೊಳೆಯುವ ಹಜಾರದ ನಿರ್ಮಾಣ ಮಾಡಲಾಗಿದೆ ಎಂದರು.

ದೇವರ ಅಭಿಷೇಕಕ್ಕಾಗಿ ದಾನಿಗಳ ನೆರವಿನಿಂದ ಎರಡು ಬೆಳ್ಳಿಯ ಬಿಂದಿಗೆ ಗಳನ್ನು ತಯಾರಿಸಿದ್ದು ದೇವಾಲಯಕ್ಕೆ ಅರ್ಪಿಸಲಾಯಿತು. ಭಕ್ತ ಜನ ಸಂಘದ ಉಪಾಧ್ಯಕ್ಷ ಪರದಂಡ ಡಾಲಿ, ಪ್ರಧಾನ ಕಾರ್ಯದರ್ಶಿ ಬೊಳಂದಂಡ ಲಲಿತ ನಂದಕುಮಾರ್, ಖಜಾಂಚಿ ನಂಬಡಮಂಡ ಸುಬ್ರಮಣಿ ನಿರ್ದೇಶಕ ರಾದ ಕಲಿಯಂಡ ಹ್ಯಾರಿಮಂದಣ್ಣ, ಕೋಡಿಮಣಿಯಂಡ ಸುರೇಶ್, ಬಾಚಮಂಡ ಲವ ಚಿಣ್ಣಪ್ಪ, ಬಡಕಡ ಸುರೇಶ್, ಡಾ.ಸಣ್ಣುವಂಡ ಕಾವೇರಪ್ಪ, ಕಲಿಯಂಡ ಸುನಂದಾ ಇದ್ದರು.

ಶ್ರದ್ಧಾಭಕ್ತಿಯಿಂದ ಹುತ್ತರಿ ಆಚರಣೆ

ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳ ವ್ಯಾಪ್ತಿಯಲ್ಲಿ ಹುತ್ತರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಬುಧವಾರ ಆಚರಿಸಲಾಯಿತು.

ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ಹೊಸ ಬಡಾವಣೆಯ ನಿವಾಸಿಗಳು ಪ್ರತಿವರ್ಷದಂತೆ ಈ ವರ್ಷವೂ ಯಾವುದೇ ಬೇಧವಿಲ್ಲದೆ ಸಾಮೂಹಿಕವಾಗಿ ಹುತ್ತರಿ ಹಬ್ಬವನ್ನು ಆಚರಿಸುವ ಮೂಲಕ ಸಂಭ್ರಮಿಸಿದರು. ಸಂಜೆ 7:50ಕ್ಕೆ ನೆರೆ ಕಟ್ಟುವುದಕ್ಕೆ ಬಡಾವಣೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೊಳ್ಳಂಡ ರಾಜ ತಿಮ್ಮಯ್ಯ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ನೆರೆ ಕಟ್ಟಿದ ಬಳಿಕ ಫಲಹಾರವನ್ನು ಸ್ವೀಕರಿಸಲಾಯಿತು.

ರಾತ್ರಿ 8.50ಕ್ಕೆ ಬಡಾವಣೆಯಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಕದಿರು ತೆಗೆಯುವ ವಿಧಿವಿಧಾನಕ್ಕೆ ಚಾಲನೆ ನೀಡಲಾಯಿತು. ಕದಿರು ತೆಗೆಯುವ ಮುನ್ನ ಧಾನ್ಯಲಕ್ಷ್ಮಿಯನ್ನು ಪೂಜಿಸಿ, ಶ್ರದ್ಧಾಭಕ್ತಿಯಿಂದ ಕದಿರನ್ನು ತೆಗೆಯಲಾಯಿತು. ಬಳಿಕ ‘ಪೊಲಿ ಪೊಲಿಯೇ ಬಾ....’ ಎಂದು ಧಾನ್ಯಲಕ್ಷ್ಮಿಯನ್ನು ಹಾಗೂ ಸಮೃದ್ಧಿಯನ್ನು ಆಹ್ವಾನಿಸುತ್ತಾ ಪಟಾಕಿ ಸಿಡಿಸುತ್ತಾ ಹೊಸ ಧಾನ್ಯವನ್ನು ಭಕ್ತಿಯಿಂದ ಮನೆ ತುಂಬಿಸಿಕೊಳ್ಳಲಾಯಿತು.

ರಾತ್ರಿ ಸುಮಾರು 9.50ರ ಸುಮಾರಿಗೆ ಹೊಸ ಅಕ್ಕಿಯನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಲಾಯಿತು. ಈ ಸಂದರ್ಭ ಬಡಾವಣೆಯ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪೊಯ್ಯೆಟಿರ ಡಾಲು, ಕಾರ್ಯದರ್ಶಿ ಮಾಲೇಟಿರ ಸುಖಿನ್, ಪುರಸಭೆಯ ಸದಸ್ಯೆ ಯಶೋಧಾ, ಹಿರಿಯರಾದ ಸೀತಾರಾಂ ರೈ, ರವಿ, ಐಚಂಡ ವಾಸು ಮತ್ತಿತ್ತರರು ಇದ್ದರು.
ಪಟ್ಟಣದ ಕೊಡವ ಸಮಾಜ, ವಿವಿಧ ಬಡಾವಣೆಗಳು ಸೇರಿದಂತೆ ಮನೆಮನೆಗಳಲ್ಲಿ ಸಂಭ್ರಮದಿಂದ ಹುತ್ತರಿಯನ್ನು ಆಚರಿಸಲಾಯಿತು.

ಭದ್ರಕಾಳಿ ದೇವಸ್ಥಾನದಲ್ಲಿ ‘ಹುತ್ತರಿ’

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ದೇವಸ್ಥಾನದಲ್ಲಿ ಶ್ರದ್ಧಾಭಕ್ತಿಯಿಂದ ಹುತ್ತರಿ ಹಬ್ಬವನ್ನು ಆಚರಿಸಲಾಯಿತು. ದೇವಸ್ಥಾನದ ಸಮೀಪವಿರುವ ಮೂಕಳೇರ ರಾಜ ಉತ್ತಪ್ಪನವರ ಭತ್ತದ ಗದ್ದೆಯಲ್ಲಿ ಬುಧವಾರ ಸಂಜೆ ಊರಿನವರು ಹಾಗೂ ನೆರೆ ಊರಿನವರು ಸೇರಿ ಸಾಮೂಹಿಕ ಕದಿರು ತೆಗೆದರು. ಈ ವೇಳೆ ಊರು ತಕ್ಕರಾದ ಚಮ್ಮಟಿರ ಕುಟುಂಬ ಸೇರಿದಂತೆ ಮೂಕಳೇರ, ಮಚ್ಚಿಯಂಡ, ಕೂಕಂಡ, ಚೇಂದಿಮಾಡ, ಕೊಳೇರ, ಸಣ್ಣುವಂಡ, ಮನೆಯಪಂಡ ಸೇರಿದಂತೆ ವಿವಿಧ ಕುಟುಂಬದವರು ಇಲ್ಲಿ ಭಾಗವಹಿಸಿ ದೇವರ ಕದಿರನ್ನು ಮನೆಗೆ ಕೊಂಡೋಯ್ದರು.

ಸಂಜೆಯಾಗುತ್ತಿದ್ದಂತೆ ಕಾಡು ಪ್ರಾಣಿಗಳ ಉಪಟಳ ಹಾಗೂ ಊರಿನ ಮನೆ ಮನೆಗಳಲ್ಲಿ ಕದಿರು ತೆಗೆಯುವ ಹಿನ್ನಲೆಯಲ್ಲಿ ಅನಾದಿಕಾಲದಿಂದಲೂ ಇಲ್ಲಿ ಮೊದಲು ಊರಿನ ದೇವಸ್ಥಾನದಲ್ಲಿ ಕದಿರು ತೆಗೆಯಲಾಗುತ್ತದೆ. ನಂತರ, ಇಗ್ಗುತಪ್ಪ ದೇವಸ್ಥಾನದಲ್ಲಿ ಕದಿರು ತೆಗೆದ ಬಳಿಕ ಊರಿನ ಮನೆ ಮನೆಗಳಲ್ಲಿ ಕದಿರು ತೆಗೆಯಲಾಗುತ್ತದೆ.

ಓಂಕಾರೇಶ್ವರ ದೇಗುಲದಲ್ಲಿ ಹಬ್ಬದ ಸಂಭ್ರಮ

ಮಡಿಕೇರಿಯ ಓಂಕಾರೇಶ್ವರ ದೇಗುಲದಲ್ಲೂ ಸಂಭ್ರಮದ ಹುತ್ತರಿ ಆಚರಣೆ ನಡೆಯಿತು. ಜಾನಪದ ವಾದ್ಯಗಳೊಂದಿಗೆ ಮೆರವಣಿಗೆ, ಕದಿರು ತೆಗೆಯುವುದು, ವಿವಿಧ ಪೂಜಾವಿಧಿಗಳನ್ನು
ಸೇರಿದ್ದ ಜನಸಮೂಹ ಕಣ್ತುಂಬಿಕೊಂಡರು.

ಮಡಿಕೇರಿ ನಗರದಲ್ಲಿ ಪಟಾಕಿ, ಬಾಣಬಿರುಸಗಳ ಅಬ್ಬರ ಹೆಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT