ಒಟ್ಟು ₹9.87 ಕೋಟಿ ಅವ್ಯವಹಾರ ಆರೋಪ ಚಿಂತಾಮಣಿ ಶಾಖೆಯಲ್ಲಿ ₹2.24ಕೋಟಿ ವಂಚನೆ ದೂರು, ಎಫ್‌ಐಆರ್ ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿಗಳ ವರದಿಯಲ್ಲಿ ಉಲ್ಲೇಖ
ಡಿಸಿಸಿ ಬ್ಯಾಂಕ್‌ನ ಹಣ ದುರುಪಯೋಗ ಪ್ರಕರಣದಲ್ಲಿ 16 ನೌಕರರು ಭಾಗಿಯಾಗಿದ್ದು ಕೇವಲ ಮೂವರನ್ನು ಅಮಾನತುಗೊಳಿಸಿದ್ದಾರೆ. ಸಿಇಒ ಆಡಳಿತಾಧಿಕಾರಿ ವೈಫಲ್ಯ ಎದ್ದು ಕಾಣುತ್ತಿದೆ
ಮುನೀಶ್ ಡಿ. ದೂರುದಾರ ಕೋಲಾರ
ಸಾಲಮನ್ನಾ; ₹11 ಕೋಟಿ ವಂಚನೆ
ಸಂಬಂಧ ಸರ್ಕಾರಕ್ಕೆ ವರದಿ 2018-19 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ಅಲ್ಪಾವಧಿ ಬೆಳೆ ಸಾಲ ಮನ್ನಾ ಯೋಜನೆ ಸಂಬಂಧ ಡಿಸಿಸಿ ಬ್ಯಾಂಕ್‌ನ ಚಿಂತಾಮಣಿ ಶಾಖೆಯಲ್ಲಿ ರೈತರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹11ಕೋಟಿ ವಂಚಿಸಿದ್ದರ ಬಗ್ಗೆ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಬ್ಯಾಂಕ್‌ಗೆ ನಷ್ಟ ಉಂಟು ಮಾಡಿರುವ ವ್ಯಕ್ತಿಗಳೊಂದಿಗೆ ಶಾಮೀಲಾಗಿದೆ ಎಂದು ಆರೋಪಿಸಿ ತಳಗವಾರ ಗ್ರಾಮದ ಟಿ.ಎಸ್.ಪ್ರತಾಪ್ ಎಂಬುವರು ಶಾಖಾ ವ್ಯವಸ್ಥಾಪಕ ಜಿ.ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಬ್ಯಾಂಕ್‌ನ ಸಿಇಒ ಶೀಲಾ ಚಿಂತಾಮಣಿ ಶಾಖೆಯಲ್ಲಿ ಯಾವುದೇ ರೀತಿ ಹಣ ದುರ್ಬಳಕೆ ಆಗಿಲ್ಲವೆಂದೂ ಹಾಗೂ ಸಾಲಮನ್ನಾದ ₹11ಕೋಟಿ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮೆ ಆಗಿದೆ ಎಂದೂ ಈಚೆಗೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಈ ಕಾರಣಕ್ಕಾಗಿ ಪ್ರಕರಣ ಸಂಬಂಧ 2018-19ರಿಂದ ಇಲ್ಲಿವರೆಗೆ ಬ್ಯಾಂಕ್‌ನ ಆಂತರಿಕ ಪರಿವೀಕ್ಷಣಾಧಿಕಾರಿಗಳು ಮತ್ತು ಸಹಕಾರ ಇಲಾಖೆ ಅಧಿಕಾರಿಗಳು ಕೈಗೊಂಡ ಕ್ರಮಗಳ ಕ್ರೋಡೀಕೃತ ವರದಿಯನ್ನು ಅವರು ಸರ್ಕಾರಕ್ಕೆ ನೀಡಿದ್ದರು.