ಕೊಪ್ಪಳ: ಜಿಲ್ಲೆಯಲ್ಲಿ ಈ ವರ್ಷದ ಜನವರಿ 1ರಿಂದ ಜೂನ್ ಕೊನೆಯ ವಾರದ ವಾಡಿಕೆ ಮಳೆ 14.7 ಸೆಂ.ಮೀ. ಇದ್ದು ವಾಸ್ತವಿಕವಾಗಿ 23.06 ಸೆಂ.ಮೀ. ಮಳೆ ಬಂದಿದೆ. ನಿಗದಿಗಿಂತಲೂ ಶೇ 60ರಷ್ಟು ಹೆಚ್ಚಿನ ಮಳೆಯಾಗಿದೆ. ಆದರೆ ಹಲವು ದಿನಗಳಿಂದ ಜೋರು ಮಳೆಯಾಗದೇ ಇರುವುದು ಅನ್ನದಾತರಲ್ಲಿ ಆತಂಕ ಮೂಡಿಸಿದೆ.

ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಶಾಲೆಗಳಿಗೆ ರಜೆಯನ್ನೂ ಘೋಷಿಸಲಾಗುತ್ತಿದೆ. ಆದರೆ ಜಿಲ್ಲೆಯಲ್ಲಿ ಮೋಡಕವಿದ ವಾತಾವರಣ ಹಾಗೂ ಆಗಾಗ ಜಿಟಿಜಿಟಿ ಮಳೆಯಷ್ಟೇ ಸುರಿದಿದೆ.

ಕಳೆದ ವರ್ಷ ವ್ಯಾಪಕ ಬರಗಾಲ ಕಾಡಿದ್ದರಿಂದ ರೈತರು ಪರದಾಡಿದ್ದರು. ಈ ಸಲ ಮುಂಗಾರು ಪೂರ್ವದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಭರವಸೆ ಮೂಡಿದೆ. ಇದೇ ಭರವಸೆಯಲ್ಲಿ ರೈತರು ಬಹಳಷ್ಟು ಕಡೆ ಬಿತ್ತನೆ ಮಾಡಿದ್ದಾರೆ. ತುಂಗಭದ್ರಾ ಜಲಾಶಯ ವ್ಯಾಪ್ತಿ ಹಾಗೂ ಪಂಪ್ಸೆಟ್ ಹೊಂದಿರುವ ಕಡೆಗಳಲ್ಲಿ ಭತ್ತ ಬಿತ್ತನೆಗೆ ಸಸಿ ಮಡಿ ಮಾಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3.08 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿ ಇದೆ. ಬಿತ್ತನೆ ಶೇ.51ರಷ್ಟು ಪ್ರಗತಿಯಾಗಿದೆ. ಬಾಕಿ ಉಳಿದ ಬಿತ್ತನೆ ಕಾರ್ಯವು ಚುರುಕುಗೊಂಡಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜಕ್ಕಾಗಿ ಯಾವುದೇ ಕೊರತೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಹೇಳಿದ್ದಾರೆ. ರೈತರು ಆಗಸದತ್ತ ಮೊಗ ಮಾಡಿ ಮಳೆರಾಯನ ನಿರೀಕ್ಷೆಯಲ್ಲಿದ್ದಾರೆ.

ಕುಷ್ಟಗಿ: ಕಳೆದ ಎರಡು ವಾರಗಳಿಂದಲೂ ತಾಲ್ಲೂಕಿನ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗದ ಕಾರಣ ಮುಂಗಾರು ಬೆಳೆಗಳಿಗೆ ತೇವಾಂಶ ಕೊರತೆ ಯಾಗಿರುವುದು ಕಂಡುಬಂದಿದೆ.

ಆರಂಭದಲ್ಲಿ ಉತ್ತಮ ಮಳೆಯಾಗಿದ್ದ ರಿಂದ ಗುರಿ ಮೀರಿ ಬಿತ್ತನೆಯಾಗಿತ್ತು. ಮೊಳಕೆ ಪ್ರಮಾಣ ಮತ್ತು ಬೆಳವಣಿಗೆ ಕೂಡ ಉತ್ತಮವಾಗಿತ್ತು. ಈಗ ಮಳೆ ಅತ್ಯವಶ್ಯವಾಗಿದ್ದರೂ ಸುಳಿವೇ ಇಲ್ಲದಂತಾಗಿದೆ. ಅದಕ್ಕೆ ವ್ಯತಿರಿಕ್ತ ಎಂಬಂತೆ ಬಿಸಿಲು ಮತ್ತು ಗಾಳಿ ಜೋರಾಗಿದ್ದು ತೇವಾಂಶ ಕೊರತೆಗೆ ಇದೂ ಒಂದು ಕಾರಣ ಎನ್ನಲಾಗಿದೆ.

ಹೆಸರು, ಎಳ್ಳು ಮತ್ತು ಅಲಸಂದೆ ಅಲ್ಪಾವಧಿ ಬೆಳೆಗಳಾಗಿದ್ದು ಕೇವಲ ಎರಡೂವರೆ ತಿಂಗಳಲ್ಲಿ ಕಟಾವು ಪೂರ್ಣಗೊಳ್ಳಬೇಕು. ಸದ್ಯ ಹೂವು, ಕಾಯಿಕಟ್ಟುತ್ತಿದ್ದು ಈಗ ತೇವಾಂಶ ಕೊರತೆಯಾಗಿದೆ. ವಾರದ ಒಳಗೆ ಮಳೆ ಬಂದರೆ ಮಾತ್ರ ಈ ಬೆಳೆಗಳಿಗೆ ಅನುಕೂಲ ಇಂಥ ಪರಿಸ್ಥಿತಿಯಲ್ಲಿ ಮಳೆ ಕೈಕೊಟ್ಟರೆ ಇಳುವರಿ ಕುಂಠಿತಗೊಳ್ಳುತ್ತದೆ ಎಂಬ ಆತಂಕ ರೈತರದು.

ಮುಂಚಿತವಾಗಿ ಬಿತ್ತನೆಯಾಗಿರುವ ಸಜ್ಜೆ, ಮೆಕ್ಕೆಜೋಳ ಬೆಳೆಗಳು ಬಾಡಿರುವುದು ಮತ್ತು ತಡವಾಗಿ ಬಿತ್ತನೆಯಾಗಿರುವ ಮೆಕ್ಕೆಜೋಳ ತೇವಾಂಶ ಇಲ್ಲದ ಕಾರಣ ಇನ್ನೂ ನೆಲಬಿಟ್ಟು ಏಳದಿರುವುದು ಕಂಡು ಬರುತ್ತಿದೆ. ಹಬ್ಬುಶೇಂಗಾ, ಗೆಜ್ಜೆಶೇಂಗಾ ಬೆಳೆಗಳಿಗೂ ಮಳೆ ಅಗತ್ಯವಾಗಿದೆ.

ಜಿನುಗು ಮಳೆ ಬಂದಿದ್ದರಿಂದ ಕಳೆಯೂ ಹೆಚ್ಚಾಗಿದೆ. ಕೆಲ ಜಮೀನುಗಳಲ್ಲಿ ಬೆಳೆಗಳಿಗಿಂತ ಕಳೆ ಹೆಚ್ಚಾಗಿ ಬೆಳೆದಿದೆ. ಸ್ವಚ್ಛಗೊಳಿಸಲು ಕೂಲಿಕಾರರ ಸಮಸ್ಯೆ ಮತ್ತು ದುಬಾರಿ ಕೂಲಿ. ಬೆಳೆ ಕೈಗೆಟುಕದಿದ್ದರೆ ಮಾಡಿದ ಖರ್ಚು ಹೊರೆಯಾಗುತ್ತದೆ ಎಂಬ ಅಳಲು ಕಲಾಲಬಂಡಿ ಗ್ರಾಮದ ಹನುಮೇಶ, ಕಾಸೀಂಸಾಬ್ ಇತರೆ ರೈತರದು.

ಕೈಕೊಟ್ಟ ಮಳೆರಾಯ ಬಾಡಿದ ಬೆಳೆ

ಕುಕನೂರು: ತಾಲ್ಲೂಕಿನಲ್ಲಿ ಜುಲೈ ಆರಂಭ ಕಳೆದರೂ, ಮುಂಗಾರಿನ ಮುನ್ಸೂಚನೆ ಇಲ್ಲದೆ ಬಿತ್ತಿದ ಬೆಳೆಗಳು ಒಣಗುತ್ತಿವೆ. ಇದರಿಂದ ಮತ್ತೆ ನಷ್ಟದ ಆತಂಕ ರೈತರನ್ನು ಆವರಿಸುತ್ತಿದೆ.

ಮಳೆ ಕೈಕೊಟ್ಟಿರುವುದರಿಂದ ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಇದೇ ಪರಿಸ್ಥಿತಿ ಕೆಲ ದಿನಗಳವರೆಗೆ ಮುಂದುವರಿದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಮೇ ಹಾಗೂ ಜೂನ್ ಆರಂಭದ ತಿಂಗಳಲ್ಲಿ ವಾಡಿಕೆ ಮಳೆ 96 ಮಿ.ಮೀ. ಇದ್ದು, 133 ಮಿ.ಮೀ ಮಳೆಯಾಗಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತಮ ವಾತಾವರಣ ಒದಗಿಸಿತ್ತು.

ಉತ್ಸಾಹದಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ರೈತರು, ಹೆಸರು 10,640 ಹೆಕ್ಟೇರ್, ಮುಸುಕಿನ ಜೋಳ 9,105 ಹೆಕ್ಟೇರ್, ದ್ವಿದಳ ಧಾನ್ಯ 1,640 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದರು. ತಾಲ್ಲೂಕಿನಲ್ಲಿ ಒಟ್ಟು 45,190 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈಗಾಗಲೇ 35,817 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗಿದೆ.

ಪ್ರತಿ ದಿನ ಮೋಡ ಕವಿದ ವಾತಾವರಣವಿದ್ದು, ಇನ್ನೇನು ಮಳೆ ಬರುತ್ತದೆ ಎನ್ನುವಷ್ಟರಲ್ಲಿ ಮೋಡ ಚದುರಿ ಹೋಗಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಮೋಡವು ಮಳೆ ಹನಿಗಳನ್ನು ಸುರಿಸದೇ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ,

ಹೀಗಾಗಿ ಬಿತ್ತನೆ ಮಾಡಿದ್ದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡುತ್ತಿದೆ. ಒಂದರೆಡು ದಿನಗಳಲ್ಲಿ ಹದ ಮಳೆಯಾದರೆ ಅಲ್ಪ ಚೇತರಿಕೆ ಕಾಣಬಹುದು. ಇಲ್ಲದಿದ್ದಲ್ಲಿ ಬಿತ್ತನೆಯಾಗಿರುವ ಬೆಳೆ ಸಂಪೂರ್ಣ ಒಣಗಿಹೋಗುವ ಆಪಾಯ ಎದುರಾಗಿದೆ.

ನೀರಾವರಿ ವ್ಯವಸ್ಥೆ ಇರುವ ರೈತರು ನೀರು ಹಾಯಿಸಿ, ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಆದರೆ ವಿದ್ಯುತ್ ಕಣ್ನಾಮುಚ್ಚಾಲೆಯಿಂದ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಹೆಚ್ಚಿದ ಕೀಟ, ಕಳೆ ಬಾಧೆ

ತೇವಾಂಶ ಕೊರತೆ ಒಂದೆಡೆಯಾದರೆ ಇನ್ನೊಂದೆಡೆ ಬೆಳೆಗಳಿಗೆ ಕೀಟ ಮತ್ತು ಕಳೆ ಬಾಧೆ ಹೆಚ್ಚಾಗಿದೆ. ಹೆಸರು, ಅಲಸಂದಿ ಬೆಳೆಗಳಿಗೆ ರಸಹೀರುವ ಕೀಟ (ಕರಿಸೀರು) ಹೆಚ್ಚಾಗಿದೆ. ಸಾಮೂಹಿಕ ರೀತಿಯಲ್ಲಿ ಕ್ರಿಮಿನಾಶಕ ಸಿಂಪಡಿಸಿದರೂ ಕೀಟ ನಿಯಂತ್ರಣಕ್ಕೆ ಬಂದಿಲ್ಲ. ಕೀಟಬಾಧೆಯಿಂದ ಬಳ್ಳಿಗಳಲ್ಲಿ ಹೂವು ಬಂದಿಲ್ಲ, ಕಾಯಿಕಟ್ಟಿಲ್ಲ ಎಂದು ಟೆಂಗುಂಟಿಯ ರೈತರಾದ ಹನುಮಗೌಡ, ಬಸವರಾಜ ಇತರರು ವಿವರಿಸಿದರು.

ಸಹಕಾರ: ನಾರಾಯಣರಾವ ಕುಲಕರ್ಣಿ, ಮಂಜುನಾಥ್ ಎಸ್. ಅಂಗಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.