ಸಕ್ಕರೆ ನಾಡಲ್ಲಿ ಕನ್ನಡದ ಅಕ್ಕರೆ!
‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆಯಲ್ಲಿ ಶೇ 91.9ರಷ್ಟು ಮಂದಿ ಕನ್ನಡ ಭಾಷಿಕರಿದ್ದು ರಾಜ್ಯದಲ್ಲೇ ಅತಿ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ ಎನಿಸಿದೆ. ರಾಜ್ಯದಲ್ಲಿ ಪ್ರಸ್ತುತ ಶೇ 66.54ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹಾಸನ (ಶೇ 87) ಚಾಮರಾಜನಗರ (ಶೇ 86.1) ತುಮಕೂರು (ಶೇ 85) ರಾಮನಗರ (ಶೇ 83.5) ಮೈಸೂರು (ಶೇ 81) ಈ ಜಿಲ್ಲೆಗಳು ಕ್ರಮವಾಗಿ 2ರಿಂದ 6ನೇ ಸ್ಥಾನದಲ್ಲಿವೆ. ಅನ್ಯಭಾಷೆಯ ಪ್ರಭಾವ ಕಡಿಮೆ ಇರುವ ಜಿಲ್ಲೆಗಳಲ್ಲಿ ಕನ್ನಡ ಭಾಷಿಕರ ಸಂಖ್ಯೆ ಹೆಚ್ಚು ಕಂಡು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 9.3ರಷ್ಟು ಮಂದಿ ಮಾತ್ರ ಕನ್ನಡ ಮಾತನಾಡುತ್ತಾರೆ. ಆದ್ರೆ ಇಲ್ಲಿ ತುಳು ಭಾಷಿಕರು ಹೆಚ್ಚಾಗಿರುವ ಕಾರಣ ಈ ರೀತಿಯ ಅಂಕಿಅಂಶವಿದೆ ಎನ್ನಲಾಗಿದೆ. ಈ ಜನಸಂಖ್ಯೆಯಲ್ಲಿ ಬಹುಪಾಲು ಮಂದಿಯ ಮಾತೃಭಾಷೆ ತುಳುವಾಗಿದೆ. ಇದಲ್ಲದೆ ಕೊಡಗು (ಶೇ 32.7) ಉಡುಪಿ (ಶೇ 42.7) ಜಿಲ್ಲೆಯಲ್ಲೂ ಕಡಿಮೆ ಪ್ರಮಾಣದ ಮಂದಿ ಕನ್ನಡ ಮಾತನಾಡುತ್ತಾರೆ. ಬೆಂಗಳೂರು ನಗರ (ಶೇ 44.5) ಕೋಲಾರ (51.5) ಬೀದರ್ (ಶೇ 53) ಉತ್ತರ ಕನ್ನಡ (ಶೇ 55.4) ಚಿಕ್ಕಬಳ್ಳಾಪುರ (ಶೇ 59.4) ಜಿಲ್ಲೆಗಳಲ್ಲೂ ಕನ್ನಡ ಭಾಷಿಕರು ಕಡಿಮೆ ಇರುವುದನ್ನು ನೋಡಬಹುದು. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಗಡಿ ಪ್ರದೇಶವಾಗಿರುವುದರಿಂದ ತಮಿಳು ತೆಲುಗು ಭಾಷಿಕರು ಹೆಚ್ಚಾಗಿ ಸಿಗುತ್ತಾರೆ. ಇತ್ತ ಬೆಳಗಾವಿಯಲ್ಲಿ ಶೇ 68ರಷ್ಟು ಮಂದಿ ಕನ್ನಡ ಮಾತನಾಡುತ್ತಾರೆ. ಉಳಿದಂತೆ ಅಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದೆ.