ಅನುಮತಿಗೆ ವಿಳಂಬ: ಮಳೆಯಲ್ಲೂ ಹೆಜ್ಜೆ
‘ಮೈಸೂರು ಚಲೋ’ ಪಾದಯಾತ್ರೆಯು ಶುಕ್ರವಾರ ಸಂಜೆ ನಗರದ ಹೊರವಲಯಕ್ಕೆ ಬಂದಿದ್ದು ನಗರ ಪ್ರವೇಶಕ್ಕೆ ಪೊಲೀಸರು ಕೆಲಹೊತ್ತು ಅನುಮತಿ ನೀಡಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರಿಗಳು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲೇ ಕುಳಿತರು. ಮೈಸೂರು ಪ್ರವೇಶಕ್ಕೆ ನಗರ ಪೊಲೀಸರು ರಾತ್ರಿ 7ರ ಬಳಿಕ ಅನುಮತಿ ನೀಡಿದ್ದರು. ಆದರೆ ಸಂಜೆ 5ರ ವೇಳೆಗೆಲ್ಲ ಪಾದಯಾತ್ರೆ ನಗರದ ಹೊರವಲಯಕ್ಕೆ ಬಂದಿದ್ದು ಆಗಿನ್ನೂ ಕಾಂಗ್ರೆಸ್ ಸಮಾವೇಶಕ್ಕೆ ಬಂದವರು ಹೊರ ಹೋಗುತ್ತಿದ್ದುದರಿಂದ ಅನುಮತಿ ನೀಡಲಿಲ್ಲ. ನಂತರ ಪಾದಯಾತ್ರೆ ಮುಂದುವರಿದಿದ್ದು ಮಬ್ಬುಗತ್ತಲಲ್ಲಿ ಮಳೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳು ರಾತ್ರಿ 8ರ ವೇಳೆಗೆ ನಗರದ ಜೆ.ಕೆ. ಮೈದಾನಕ್ಕೆ ಬಂದು ತಲುಪಿದರು. ಏಳನೇ ದಿನದ ಪಾದಯಾತ್ರೆಯು ಶುಕ್ರವಾರ 20 ಕಿಲೋಮೀಟರ್‌ನಷ್ಟು ಕ್ರಮಿಸಿತು. ಆರಂಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಹೊರಟಿದ್ದು ನಂತರ ಒಂದಾದವು. ಮಹಿಳೆಯರು ಒನಕೆ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಜಿ ಸಂಸದ ಪ್ರತಾಪ ಸಿಂಹ ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಟಿ.ಎಸ್. ಶ್ರೀವತ್ಸ ಜಿ.ಡಿ. ಹರೀಶ್ ಗೌಡ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಿ.ಎಸ್. ಶ್ರೀರಾಮುಲು ಮತ್ತಿತರರು ಜೊತೆಯಾಗಿ ನಡೆದರು.