ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಮಾಮ್‌ ಶಾ ವಲೀ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ದಸರಾ ಆನೆಗಳು

Published : 11 ಅಕ್ಟೋಬರ್ 2024, 12:36 IST
Last Updated : 11 ಅಕ್ಟೋಬರ್ 2024, 12:36 IST
ಫಾಲೋ ಮಾಡಿ
Comments

ಮೈಸೂರು: ಅರಮನೆಯಲ್ಲಿ ಜಂಬೂಸವಾರಿಗೆ ಭರದ ಸಿದ್ದತೆಗಳು ನಡೆದಿರುವಾಗಲೇ ನಗರದ ಚಾಮರಾಜ ಮೊಹಲ್ಲಾದಲ್ಲಿರುವ ಹಜರತ್‌ ಇಮಾಮ್‌ ಶಾ ವಲೀ ದರ್ಗಾಕ್ಕೆ ಶುಕ್ರವಾರ ದಸರಾ ಆನೆಗಳು ಬಂದು ‘ಸಲಾಂ’ ಮಾಡಿದವು.

ಈ ಬಹುತ್ವದ ಹಿರಿಮೆಯನ್ನು ಸಾರುವ, ವೈವಿಧ್ಯದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಜಮಾಯಿಸಿದ್ದರು. ಸೂಫಿ ಸಂತ ಇಮಾಮ್‌ ಶಾ ವಲೀ ಅವರಿಗೆ, ಚಾಮುಂಡೇಶ್ವರಿ ದೇವಿಗೆ ಭಕ್ತರು ಜಯಕಾರ ಹಾಕಿದರು. ನೋಡಿದವರ ಎದೆಯಲ್ಲಿ ಸೌಹಾರ್ದದ ಹೂ ಅರಳಿತು.

83 ವರ್ಷಗಳಿಂದಲೂ ವಿಜಯದಶಮಿಯ ಮುನ್ನಾ ದಿನ ಆನೆಗಳು ಇಲ್ಲಿಗೆ ಬರುತ್ತಿವೆ. ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅವಧಿಯಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಯೊಂದಕ್ಕೆ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿತ್ತು. ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದ ನಂತರ ಸರಿಯಾಯಿತು. ಅಂದಿನಿಂದ ಇಂದಿನವರೆಗೂ ಆನೆಗಳು ನಿರಂತರವಾಗಿ ಪ್ರತಿ ದಸರೆಯಲ್ಲೂ ಬರುತ್ತಿವೆ.

ಅಂಬಾರಿ ಆನೆ ಕ್ಯಾಪ್ಟನ್‌ ‘ಅಭಿಮನ್ಯು’ ನೇತೃತ್ವದ 14 ಆನೆಗಳು ಅರಮನೆ ದಕ್ಷಿಣ ದ್ವಾರವಾದ ‘ಬ್ರಹ್ಮಪುರಿ’ಯಿಂದ ಆಗಮಿಸಿದವು. ಜಗನ್ಮೋಹನ ಅರಮನೆ ಹಾದಿಯಲ್ಲಿ ಕ್ರಮಿಸಿ, ಕೃಷ್ಣವಿಲಾಸ ರಸ್ತೆಯಲ್ಲಿರುವ ದರ್ಗಾಕ್ಕೆ ಬಂದವು. ಧೂಪಾರತಿ ಮಾಡಿದ ನಂತರ ವಿಭೂತಿಯನ್ನು ಹಣೆಗೆ ಹಚ್ಚಲಾಯಿತು. ದರ್ಗಾದ ಚಾದರ ಮೇಲಿಟ್ಟಿದ್ದ ನವಿಲುಗರಿಯಿಂದ ಆಶೀರ್ವಾದವನ್ನು ದರ್ಗಾದ ಮುಖ್ಯಸ್ಥ ಮೊಹಮ್ಮದ್‌ ನಖೀಬುಲ್ಲಾ ಷಾ ಖಾದ್ರಿ ಮಾಡಿದರು.

ಇದಕ್ಕೂ ಮೊದಲು ದರ್ಗಾದ ವತಿಯಿಂದ ಡಿಸಿಎಫ್ ಐ.ಬಿ.ಪ್ರಭುಗೌಡ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಶಾಲು ಹೊದಿಸಿ ಆಶೀರ್ವದಿಸಲಾಯಿತು. ಅಭಿಮನ್ಯು, ವರಲಕ್ಷ್ಮಿ, ಮಹೇಂದ್ರ, ಪ್ರಶಾಂತ, ಸುಗ್ರೀವ, ಕಂಜನ್‌, ಭೀಮ, ರೋಹಿತ್, ಹಿರಣ್ಯ, ಏಕಲವ್ಯ, ಧನಂಜಯ, ಲಕ್ಷ್ಮಿ, ಗೋಪಿ, ದೊಡ್ಡಹರವೆ ಲಕ್ಷ್ಮಿ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT