ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರಲ್ಲಿ 3 ವರ್ಷಗಳಲ್ಲಿ ಫಿಲಂ ಸಿಟಿ ನಿರ್ಮಾಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 3 ಅಕ್ಟೋಬರ್ 2024, 11:13 IST
Last Updated : 3 ಅಕ್ಟೋಬರ್ 2024, 11:13 IST
ಫಾಲೋ ಮಾಡಿ
Comments

ಮೈಸೂರು: ನಂಜನಗೂಡು ತಾಲ್ಲೂಕಿನ ಇಮ್ಮಾವು ಬಳಿಯ 160 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು (ಚಿತ್ರ ನಗರಿ) ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದಸರಾ ಮಹೋತ್ಸವದ ಕೆಎಸ್ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನ ಬಾರಿ ನಾನು ಮುಖ್ಯಮಂತ್ರಿ ಆಗಿದ್ದಾಗ, ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಿಸಲು ತೀರ್ಮಾನಿಸಿ, ಇಮ್ಮಾವು ಗ್ರಾಮದಲ್ಲಿ 110 ಎಕರೆ ವಿಸ್ತೀರ್ಣದ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇದರೊಂದಿಗೆ ಹೆಚ್ಚುವರಿಯಾಗಿ ಎರಡನೇ ಹಂತದ ವಿಸ್ತಣೆಗೆ 50 ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ. ಮಾದರಿ ಸಿನಿಮಾ ನಗರಿಯನ್ನು ನಿರ್ಮಿಸುವುದು ಸರ್ಕಾರ ಹಾಗೂ ಚಿತ್ರರಂಗದವರ ಉದ್ದೇಶವಾಗಿದ್ದು ಎಂದರು.

ಕನ್ನಡ ಚಿತ್ರಗಳು ಹೆಚ್ಚು ಬರಬೇಕು:

ಚಿತ್ರರಂಗದ ಬೆಳವಣಿಗೆ ಸರ್ಕಾರ ಎಲ್ಲರೀತಿಯ ಬೆಂಬಲವನ್ನು ನೀಡುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಚಿತ್ರರಂಗ ಬೆಳೆಯಬೇಕು. ಜನರು ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿಯೇ ವೀಕ್ಷಿಸಬೇಕೆಂದು ತಿಳಿಸಿದರು.

4ರಿಂದ 10ವರೆಗೆ ಸಿನಿಮಾ ಪ್ರದರ್ಶನ:

ದಸರಾ ಚಲನಚಿತ್ರೋತ್ಸವ ಅ.4ರಿಂದ 10ರವರೆಗೆ ನಡೆಯಲಿದ್ದು, ದೇಶ ವಿದೇಶಗಳ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಚಲನಚಿತ್ರೋತ್ಸವದಲ್ಲಿ ಹಳೆಯ ಹಾಗೂ ಹೊಸ ಸಿನಿಮಾಗಳನ್ನು ವೀಕ್ಷಿಸುವ ಸುವರ್ಣ ಅವಕಾಶವಿದ್ದು, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

ಕನ್ನಡ ಚಿತ್ರರಂಗ ಮರೆಯಲಾಗದ ವ್ಯಕ್ತಿ ದ್ವಾರಕೀಶ್:

ನಟ, ನಿರ್ಮಾಪಕ ದಿವಂಗತ ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈ ಬಾರಿ ದಸರಾ ಚಿತ್ರೋತ್ಸವವನ್ನು ದ್ವಾರಕೀಶ್ ಅವರ ಗೌರವಾರ್ಥವಾಗಿ ಹಮ್ಮಿಕೊಳ್ಳಲಾಗಿದೆ. ಅವರು ಕನ್ನಡ ಚಿತ್ರರಂಗದಲ್ಲಿ ಮರೆಯಲಾಗದ ವ್ಯಕ್ತಿ ಎಂದರು.

1983ರಲ್ಲಿ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ದ್ವಾರಕೀಶ್ ಅವರ ಜೊತೆ ಪ್ರಯಾಣಿಸಿದ ನೆನಪು‌ ಮಾಡಿಕೊಂಡ‌ ಅವರು, ಅವರೊಂದಿಗಿದ್ದ ಸ್ನೇಹ ಬಾಂಧವ್ಯದ ಬಗ್ಗೆ ತಿಳಿಸಿದರು.

ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ,‌ ಕೆ.ವೆಂಕಟೇಶ್, ಕೆ.ಎಚ್. ಮುನಿಯಪ್ಪ,‌ ಚಲನಚಿತ್ರ ‌ನಟರಾದ ರಮೇಶ್ ಅರವಿಂದ್, ಸಾಧುಕೋಕಿಲಾ, ಸಪ್ತಮಿ ಗೌಡ, ಅಕ್ಷಿತಾ ಬೋಪಯ್ಯ, ಶರಣ್ಯಾ ಶೆಟ್ಟಿ, ಶಾಸಕರು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT