ಹುಣಸೂರು: ದಿನದ ಕೂಲಿ ನೆಚ್ಚಿಕೊಂಡ ಶ್ರಮಿಕರು, ಬಡವರಿಗೆ ನಗರದ ಒಂಟೆಪಾಳೆ ಬೋರೆ ಬಡಾವಣೆಯ ಸಾವಿತ್ರಮ್ಮ ಸಾಕ್ಷಾತ್ ಅನ್ನಪೂರ್ಣೆ ಆಗಿದ್ದಾರೆ.

ಅವರ ‘ಇಡ್ಲಿ ಮನೆ’ಯಲ್ಲಿ ಒಂದು ಬಿಸಿ ಇಡ್ಲಿಗೆ ಕೇವಲ ₹ 2. ಮಸಾಲೆ ವಡೆಗೂ ₹ 2. ಬೆಲೆ ಏರಿಕೆಯ ನಡುವೆಯೂ ಈ ಅಗ್ಗದ ದರದ ಕಾರಣಕ್ಕೆ ಅವರ ಚಿಕ್ಕ ಮನೆಯಲ್ಲಿ ಬೆಳಿಗ್ಗೆ ಹೊತ್ತು ಕಾರ್ಮಿಕರ ದಂಡೇ ನೆರೆದಿರುತ್ತದೆ. ಕೊರೊನಾ ಸಾಂಕ್ರಾಮಿಕ ಬರುವವರೆಗೂ ಇಡ್ಲಿಗೆ ಅಲ್ಲಿ ₹ 1 ಮಾತ್ರ ದರವಿತ್ತು. ಈ ಸೇವೆ 15 ವರ್ಷದಿಂದ ನಡೆಯುತ್ತಿದೆ ಎಂಬುದು ವಿಶೇಷ.

ಬೆಳಿಗ್ಗೆ 6ರಿಂದ 11ಗಂಟೆವರೆಗೆ ನಡೆಯುವ ‘ಇಡ್ಲಿ ಮನೆ’ ಮುಂದೆ ಜನ ಸಾಲುಗಟ್ಟಿ ನಿಲ್ಲುತ್ತಾರೆ. ಆರ್ಥಿಕ ಅಶಕ್ತರಿಗಾಗಿ ಆರಂಭವಾದ ಇಡ್ಲಿ ಮನೆ ಇದೀಗ ನಗರದ ಮಧ್ಯಮ ವರ್ಗದವರನ್ನೂ ಆಕರ್ಷಿಸಿದೆ. ಬೆಳಗಿನ ವಾಯುವಿಹಾರಕ್ಕೆ ಹೋಗುವವರು, ಶಾಲಾ ಮಕ್ಕಳ ಊಟದ ಡಬ್ಬಿ, ಹೋಲ್ಸೇಲ್ ಖರೀದಿಸುವವರು ಮುಂಗಡ ಕಾಯ್ದಿರಿಸುವ ಪರಿಪಾಠ ಆರಂಭವಾಗಿದೆ.

ಸಹೋದರ ನೀಡಿದ ಚಿಕ್ಕ ಮಳಿಗೆ ಯಲ್ಲಿ ಏಕಾಂಗಿ ಜೀವನ ನಡೆಸುತ್ತಿರುವ ಅವರು, ಕೃಷಿ ಕೂಲಿಕಾರರು, ಸಾಮಿಲ್, ಪೌರಕಾರ್ಮಿಕರು ಸೇರಿದಂತೆ ಕಾಯಕ ವರ್ಗದ ಅಚ್ಚು ಮೆಚ್ಚಿನ ‘ಇಡ್ಲಿ ಸಾವಿತ್ರಮ್ಮ’.

‘ಇಡ್ಲಿ ದರ ಕಡಿಮೆಯಾದರೂ, ರುಚಿಯಲ್ಲಿ ಕಡಿಮೆಯೇನಿಲ್ಲ. ಬಾಯಿಗೆ ಹಾಕುತ್ತಿದ್ದಂತೆ ಮೃದುವಾಗಿ ಹೊಟ್ಟೆ ಸೇರುತ್ತದೆ’ ಎಂಬುದು ಗ್ರಾಹಕರ ಮೆಚ್ಚುಗೆಯ ನುಡಿ.

ಕೃಷಿ ಕೂಲಿಕಾರರಾಗಿದ್ದ ಸಾವಿತ್ರಮ್ಮ, ತನ್ನ ವಾರಿಗೆಯ ಕಾರ್ಮಿಕರು ಊಟಕ್ಕಾಗಿ ಪರದಾಡುತ್ತಿದ್ದುದನ್ನು ಕಂಡು ಕೈಗೆಟುಕುವ ದರದಲ್ಲಿ ಹೊಟ್ಟೆ ತುಂಬಿಸುವ ಸಂಕಲ್ಪವನ್ನು ಮಾಡಿದರು. ನಿತ್ಯ ಸುಮಾರು 1,500 ಇಡ್ಲಿ, 5 ಕೆ.ಜಿ. ಪಲಾವ್ ಮಾರುತ್ತಿದ್ದಾರೆ.

ಹೊಟೇಲ್ ಮತ್ತು ಫಾಸ್ಟ್ಫುಡ್ ಅಂಗಡಿಗಳಲ್ಲಿ ದುಬಾರಿಯಾದ ಇಡ್ಲಿ, ಇಲ್ಲಿ ಮಾತ್ರ ಅತಿ ಕಡಿಮೆ ದರಕ್ಕೆ ಹೇಗೆ ಸಿಗಲು ಸಾಧ್ಯ ಎಂಬ ಕುತೂಹಲ ಸಾಮಾನ್ಯ. ನಿತ್ಯ ₹ 1,500 ಬಂಡವಾಳ ಹೂಡುವ ಅವರು ಪ್ರತಿ ಕೆಜಿಗೆ ₹ 30ರಂತೆ 10 ಕೆಜಿ ಅಕ್ಕಿ, ಮಸಾಲೆವಡೆಗೆಂದು 2 ಕೆ.ಜಿ. ಕಡ್ಲೆಬೇಳೆ, ಸೊಪ್ಪು, 1 ಲೀಟರ್ ಅಡುಗೆ ಎಣ್ಣೆ ಖರೀದಿಸುತ್ತಾರೆ. ಖಾಸಗಿಯಾಗಿ ₹1,300 ಕ್ಕೆ ಅಡುಗೆ ಅನಿಲ ಸಿಲಿಂಡರ್ ಖರೀದಿಸುತ್ತಾರೆ.

‘ಎಲ್ಲ ಸೇರಿ ₹2,300 ರಿಂದ ₹2,500 ಬಂಡವಾಳ ಹೂಡುತ್ತೇನೆ. ಇತರೆ ಖರ್ಚು ವೆಚ್ಚ ತೆಗೆದು ದಿನಕ್ಕೆ ₹ 400 ರಿಂದ ₹ 500 ಉಳಿಯುತ್ತದೆ’ ಎನ್ನುತ್ತಾರೆ ಅವರು.

‘ಹಣ ಇಲ್ಲದವರಿಗೆ ಕೆಲವೊಮ್ಮೆ ಉಚಿತವಾಗಿ ಇಡ್ಲಿ ಕೊಡುವೆ. ಇಡ್ಲಿ ಮನೆಯನ್ನು ನಾನೊಬ್ಬಳೇ ನಿರ್ವಹಿಸುವುದರಿಂದ ಖರ್ಚು ಕಡಿಮೆ ಇದೆ. ಸ್ವಯಂ ಉದ್ಯೋಗದಿಂದ ಸ್ವಾಭಿಮಾನದ ಬದುಕಿಗೆ ತೃಪ್ತಿ ಸಿಗುವಷ್ಟು ಹಣ ಸಂಪಾದನೆ ಆಗುತ್ತಿದೆ’ ಎನ್ನುತ್ತಾರೆ. ಕೆಲವು ವರ್ಷಗಳ ಹಿಂದೆ ಅವರ ಪತಿ ನಿಧನರಾಗಿದ್ದಾರೆ. ತಮ್ಮ ಮಗಳಿಗೆ ಮದುವೆ ಮಾಡಿರುವ ಸಾವಿತ್ರಮ್ಮ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.