ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜನರ ಜೀವನ ಸಮೃದ್ಧಗೊಳಿಸಲು ಆದ್ಯತೆ: ಸಂಸದ ಯದುವೀರ್‌

ರಾಜ್ಯ ಸರ್ಕಾರಿ‌ ನೌಕರರ ಸಂಘದಿಂದ ಜನಪ್ರತಿನಿಧಿಗಳಿಗೆ ಅಭಿನಂದನೆ, ಪ್ರತಿಭಾ ಪುರಸ್ಕಾರ
Published 13 ಜುಲೈ 2024, 16:18 IST
Last Updated 13 ಜುಲೈ 2024, 16:18 IST
ಅಕ್ಷರ ಗಾತ್ರ

ಮೈಸೂರು: ‘ಇಲ್ಲಿನ ಪ್ರಾಚೀನ ಸಂಸ್ಕೃತಿ ಮತ್ತು ಪ್ರಗತಿಪರ ಒಲವನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮ ಆದ್ಯತೆ. ಜನರ ಜೀವನವನ್ನು ಸಮೃದ್ಧಗೊಳಿಸುವುದು ನಮ್ಮ ಮುಂದಿನ ಮುಖ್ಯ ಕೆಲಸ’ ಎಂದು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ನಗರದ ಕಲಾಮಂದಿರದಲ್ಲಿ ರಾಜ್ಯ ಸರ್ಕಾರಿ‌ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಶನಿವಾರ ನಡೆದ ನೂತನ ಜನಪ್ರತಿನಿಧಿಗಳಿಗೆ ಅಭಿನಂದನೆ ಹಾಗೂ ಎಸ್‌ಎಸ್ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಪ್ರಾಚೀನ ಸಂಸ್ಕೃತಿಯಷ್ಟೇ ಅಲ್ಲ, ಇಲ್ಲಿನ ಪ್ರಗತಿಪೂರಕ ನಿಲುವು ದೇಶದಲ್ಲಿ ಮೈಸೂರನ್ನು ಭಿನ್ನವಾಗಿ ನಿಲ್ಲಿಸಿದೆ. ಇದನ್ನು ಅಭಿವೃದ್ಧಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

‘2047ರೊಳಗೆ ವಿಕಸಿತ ಭಾರತದ ನಿರ್ಮಾಣ ಮಾಡಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ನಾವು ಬೆಂಬಲಿಸಬೇಕು. ನಮ್ಮ ಕ್ಷೇತ್ರವೂ ಈ ನಿಟ್ಟಿನಲ್ಲಿ ಮುನ್ನಡೆ ಸಾಧಿಸಲು ನನ್ನ ಕೈಲಾದ ಸಹಕಾರ ಮಾಡುತ್ತೇನೆ. ಸರ್ಕಾರಿ ನೌಕರರ ಬೇಡಿಕೆಯನ್ನು ಪರಿಶೀಲಿಸಿ, ಸೂಕ್ತ ಬೆಂಬಲ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಅವರನ್ನು ಸಂಘದಿಂದ ಅಭಿನಂದಿಸಲಾಯಿತು. ಅವರು ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆಂದು ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡಿದರು.

ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ‘ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾದ ಕಾರ್ಯಕ್ರಮ ಇಂದು ರಾಜ್ಯದಾದ್ಯಂತ 9 ಸಾವಿರ ಮಕ್ಕಳನ್ನು ತಲುಪಿದೆ. ಎಲ್ಲೆಡೆ ಸ್ಪರ್ಧೆ ವ್ಯಾಪಕವಾಗಿದ್ದು, ಪ್ರತಿ ಅಂಕವೂ ಅಮೂಲ್ಯವಾಗಿದೆ. ಭವಿಷ್ಯದಲ್ಲಿ ಉತ್ತಮ ಸ್ಥಾನ ಹೊಂದಲು ಎಸ್ಎಸ್ಎಲ್‌ಸಿ ಮತ್ತು ಪಿಯು ಉತ್ತಮ ಘಟ್ಟವಾಗಿದ್ದು, ಇಲ್ಲಿ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬೇಕು’ ಎಂದರು.

‘ವಿದ್ಯಾರ್ಥಿಗಳು ತಮಗೆ ಶಿಕ್ಷಣ, ಉತ್ತಮ ಜೀವನ ಕಲ್ಪಿಸಿದ ತಂದೆ ತಾಯಿಯನ್ನು ಗೌರವಿಸುವ, ಪ್ರೀತಿಸುವ ಸಂಸ್ಕಾರವನ್ನು ಹೊಂದಬೇಕು. ಈ ದೇಶವನ್ನು ಉ‌ನ್ನತ ಸ್ಥಾನಕ್ಕೆ ಕೊಂಡೊಯ್ಯಲು ಯುವಶಕ್ತಿಯ ಪ್ರಯತ್ನ ಅಗತ್ಯ. ಮಾದಕ ವಸ್ತುಗಳು, ಮೊಬೈಲ್ ಗೀಳಿಗೆ ಬಲಿಯಾಗದೆ ಓದಿನೊಂದಿಗೆ ಸುಭದ್ರ ಸಮಾಜ ಕಟ್ಟಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ‘ಸರ್ಕಾರವೂ 7ನೇ ವೇತನ ಆಯೋಗದ ಶಿಫಾರಸನ್ನು ಜಾರಿ ಮಾಡಬೇಕು. ಒಪಿಎಸ್ ಜಾರಿಗೆ ತರಬೇಕು. ಆರೋಗ್ಯ ಸಂಜೀವಿನಿ ಜಾರಿಗೆ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.

350 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ರಾಜ್ಯ ಸಂಘದ ಉಪಾಧ್ಯಕ್ಷ ಎಂ.ವಿ.ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸ್‌, ಖಜಾಂಚಿ ಸಿದ್ದರಾಮಣ್ಣ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಶಾಖೆಯ ಗೌರವಾಧ್ಯಕ್ಷ ಎಲ್‌.ಎಲ್‌.ಉಮೇಶ್‌, ಪ್ರಧಾನ ಕಾರ್ಯದರ್ಶಿ ರೇವಣ್ಣ ಇದ್ದರು.

ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ 350 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ತಂದೆ, ತಾಯಿಯನ್ನು ಗೌರವಿಸಿ, ಸಂಸ್ಕಾರ ಬೆಳೆಸಿಕೊಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT