ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Mysuru Dasara| ಕೆಡವುವುದು ಸುಲಭ, ಕಟ್ಟುವುದು ಕಷ್ಟ: ಪ್ರೊ.ಹಂಪನಾ

Published : 3 ಅಕ್ಟೋಬರ್ 2024, 23:25 IST
Last Updated : 3 ಅಕ್ಟೋಬರ್ 2024, 23:25 IST
ಫಾಲೋ ಮಾಡಿ
Comments

ಮೈಸೂರು: ರಾಜ್ಯದಲ್ಲಿ ತುಂಬಿರುವ ನದಿ, ಜಲಾಶಯಗಳು ಮೂಡಿಸಿರುವ ಸಮೃದ್ಧಿ–ಸಂತಸದ ಭಾವದೊಂದಿಗೆ, ನಗರದ ಚಾಮುಂಡಿ ಬೆಟ್ಟದಲ್ಲಿ ಗುರುವಾರ ಉದ್ಘಾಟನೆಗೊಂಡ ನಾಡಹಬ್ಬ ದಸರಾ ಉತ್ಸವವು, ಚುನಾಯಿತ ಸರ್ಕಾರವನ್ನು ಉಳಿಸಬೇಕೆಂಬ ಚಿಂತನೆಯೊಂದಿಗೆ, ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳ ಕುರಿತ ಚರ್ಚೆಗೆ ವೇದಿಕೆ ಸಾಕ್ಷಿಯಾಯಿತು.

‘ನಾಡಿನಲ್ಲಿ ಮತ್ತಷ್ಟು ಮಳೆ–ಬೆಳೆ ಯಾಗಲಿ’ ಎಂಬ ಸದಾಶಯದೊಂದಿಗೆ, ಯುದ್ಧ, ಮಹಿಳಾ ಅಸಮಾನತೆ ಮತ್ತು ನಿರುದ್ಯೋಗದ ವಿರುದ್ಧ ದಿಟ್ಟ ನಿಲು ವನ್ನೂ ದಾಖಲಿಸುವ ಮೂಲಕ ಉತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರಕಿತು.

ಅಗಲಿದ ತಮ್ಮ ಪತ್ನಿ ಪ್ರೊ.ಕಮಲಾ ಅವರನ್ನು ಭಾವುಕರಾಗಿ ಸ್ಮರಿಸಿ, ತಮಗೆ ದೊರೆತ ಉತ್ಸವ ಉದ್ಘಾಟನೆಯ ಗೌರವವನ್ನು ಅವರಿಗೇ ಅರ್ಪಿಸಿ, ಉತ್ಸವಕ್ಕೆ ಚಾಲನೆ ನೀಡಿದ 88ರ ಹಸನ್ಮುಖಿ ಪ್ರೊ.ಹಂ.ಪ.ನಾಗರಾಜಯ್ಯ, ‘ಕೆಡವುವುದು ಸುಲಭ, ಕಟ್ಟುವುದು ಕಷ್ಟ. ಮೊದಲೇ ದೊಡ್ಡ ಹೊರೆಗಳಿಂದ ಬಳಲಿ ಬಸವಳಿದಿರುವ ಶ್ರೀಸಾಮಾನ್ಯರ ಹೆಗಲಿಗೆ ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಇನ್ನಷ್ಟು ಭಾರ ಹೇರಿದರೆ ಕುಸಿಯುತ್ತಾ ರಷ್ಟೆ. ಯಾವ ಪಕ್ಷವೂ ಶಾಶ್ವತವಾಗಿ ಅಧಿಕಾರದಲ್ಲಿ ಇರುವುದು ಅಸಾಧ್ಯ’ ಎಂದು ಹೇಳಿದರು.

ಸಂಸ್ಕೃತದ ಭಾಸ ಕವಿಯ ನಾಟಕದ ‘ಚಕ್ರಾರ ಪಂಕ್ತಿರಿವ ಗಚ್ಛತಿ ಭಾಗ್ಯ ಪಂಕ್ತಿಃ’ (ಅದೃಷ್ಟದ ರೇಖೆಗಳು ಬಂಡಿಯ ಗಾಲಿಯ ಅರಗಳಂತೆ ನಿರಂತರ ವಾಗಿ ಚಲಿಸುತ್ತಿರುತ್ತವೆ) ಮಾತನ್ನು ಉಲ್ಲೇಖಿಸಿ, ‘ಸೋತ ಪಕ್ಷವು ಮತ್ತೆ ಅಧಿಕಾರಕ್ಕೆ ಬರಲು. ಜನಮನವನ್ನು ತಮ್ಮ ಪರವಾಗಿ ಒಲಿಸಿಕೊಳ್ಳಲು ಐದು ವರ್ಷದಲ್ಲಿ ಸಜ್ಜಾಗಬಹುದು’ ಎಂದರು.

ಚಾಮುಂಡೇಶ್ವರಿದೇವಿಯನ್ನು ‘ಲೋಕಮಾತೆ’ ಎಂದು ಕರೆದು, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನೆದು ಮಾತನಾಡಿ, ‘ಇಸ್ರೇಲ್- ಪ್ಯಾಲೆಸ್ಟೀನ್, ರಷ್ಯಾ-ಉಕ್ರೇನ್‌ ಯುದ್ಧ, ಅಮಾಯಕರ ಮಾರಣಹೋಮ ನಿಲ್ಲಲಿ, ಅದಕ್ಕಾಗಿ ರಾಷ್ಟ್ರ ನಾಯಕರು ಜೀವಪರ ಧೋರಣೆ ತಳೆಯಲು ಚಾಮುಂಡಿ ಪ್ರೇರಣೆ ನೀಡಲಿ, ಹೆಣ್ಣು ಭ್ರೂಣ ಹತ್ಯೆ ತಡೆಯಲು ತಾಯಿತಂದೆಯರಿಗೆ‌ ಸದ್ಬುದ್ಧಿ ಅನುಗ್ರಹಿಸಲಿ’ ಎಂಬ ಕೋರಿಕೆಗಳನ್ನು ಮಂಡಿಸಿದರು.

‘ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರು ಗಳಿಗೂ ಬಲಿಷ್ಠರನ್ನು ಕಂಡರೆ ಭಯ. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ’ ಎಂದು ವಿಷಾದಿಸಿದರು.

‘ಸ್ವಾತಂತ್ರ್ಯ ಬಂದು ಇಷ್ಟು ವರ್ಷ ವಾದರೂ ಶಾಸನ ಸಭೆ ಲೋಕಸಭೆಯಲ್ಲಿ ಸ್ತ್ರೀಯರಿಗೆ ಸೂಕ್ತ ಪ್ರಾತಿನಿಧ್ಯ ಕೊಡುವ ಮಸೂದೆಗೆ ಅಡ್ಡಿ ಮಾಡುತ್ತಲೇ ಇದ್ದಾರೆ. ಹೆಣ್ಣುಮಕ್ಕಳು ಶಾಲೆಗೆ ಹೋಗ ಕೂಡದೆಂದು ಬೆದರಿಸುವ ದೇಶವೂ ಇದೆಯೆಂಬುದು ಶೋಚನೀಯವಷ್ಟೇ ಅಲ್ಲ, ಖಂಡನೀಯ ಕೂಡ’ ಎಂದರು.

‘ಸಂವಿಧಾನದ ಆಶಯಗಳಂತೆಯೇ ಕಾರ್ಯಕ್ರಮಗಳನ್ನು ಆಯೋಜಿಸ ಲಾಗಿದೆ’ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಸಂವಿಧಾನ ಪ್ರಸ್ತಾವನೆಯ ಪ್ರತಿಜ್ಞಾ ವಿಧಿಯನ್ನು ಕಾರ್ಯಕ್ರಮದಲ್ಲಿ ಬೋಧಿಸಿದ್ದು ಗಮನ ಸೆಳೆಯಿತು.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಪ್ರೊ.ಹಂ.ಪ.ನಾಗರಾಜಯ್ಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತೀರ್ಥಕರರ ಪುತ್ಥಳಿ ನೀಡಿ ಸನ್ಮಾನಿಸಿದರು. ಸಚಿವ ಕೆ.ವೆಂಕಟೇಶ್‌ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಸಚಿವ ಎಚ್‌.ಕೆ.ಪಾಟೀಲ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮುಡಾ ಅಧ್ಯಕ್ಷ ಕೆ.ಮರಿಗೌಡ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಚಿವರಾದ ಕೆ.ಎಚ್‌.ಮುನಿಯಪ್ಪ ಶಿವರಾಜ ತಂಗಡಗಿ ಶಾಸಕ ರವಿಶಂಕರ್‌ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಗುರುವಾರ ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಪ್ರೊ.ಹಂ.ಪ.ನಾಗರಾಜಯ್ಯ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತೀರ್ಥಕರರ ಪುತ್ಥಳಿ ನೀಡಿ ಸನ್ಮಾನಿಸಿದರು. ಸಚಿವ ಕೆ.ವೆಂಕಟೇಶ್‌ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಸಚಿವ ಎಚ್‌.ಕೆ.ಪಾಟೀಲ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಮುಡಾ ಅಧ್ಯಕ್ಷ ಕೆ.ಮರಿಗೌಡ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸಚಿವರಾದ ಕೆ.ಎಚ್‌.ಮುನಿಯಪ್ಪ ಶಿವರಾಜ ತಂಗಡಗಿ ಶಾಸಕ ರವಿಶಂಕರ್‌ ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ನವದುರ್ಗೆಯರ ಕೃಪಾಶೀರ್ವಾದದರಿಂದ ಕಾಂಗ್ರೆಸ್ ಸರ್ಕಾರ ಇನ್ನೂ 9 ವರ್ಷ ಅಬಾಧಿತವಾಗಿರಲಿದೆ
–ಡಿ.‌ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಉಸ್ತುವಾರಿ

ಹಂಪನಾ ಕೋರಿಕೆಗಳು

l ನಿರುದ್ಯೋಗದಿಂದ ಯುವಜನ ಹತಾಶರಾಗಿದ್ದಾರೆ. ನಿರುದ್ಯೋಗ ನಿವಾರಣೆಗೆ ಆದ್ಯತೆಯಿತ್ತು, ಕೇಂದ್ರ ಸರ್ಕಾರವು ಕ್ರಮ ಕೈಗೊಳ್ಳುವಂತೆ ದೇವಿ ಪ್ರೇರೇಪಿಸಲಿ

l ಕನ್ನಡ ನಾಡು, ನುಡಿ, ನೆಲ, ಜಲ, ಕಲೆ, ಸಂಸ್ಕೃತಿ ಸಂರಕ್ಷಣೆಗಾಗಿ ಹೋರಾಡು ವವವರನ್ನು ಕೊಲೆಗಾರರಂತೆ ಕಾಣದೆ, ಪ್ರೀತಿ, ಅಭಿಮಾನಗಳಿಂದ ಕಾಣುವಂತೆ ಆಡಳಿತಾಂಗಕ್ಕೆ ಚಾಮುಂಡೇಶ್ವರಿ ಪ್ರೇರಣೆ ಕೊಡಲಿ

l ದೋಷಾರೋಪಣೆ, ವೈಯಕ್ತಿಕ ನಿಂದನೆ, ಅವಾಚ್ಯ ಶಬ್ದ ಬಳಸುವ ಪದ್ಧತಿ ನಿಂತು, ಸಮಾಜಮುಖಿ ಚಿಂತನೆಯನ್ನು ಒಳಗೊಂಡು, ಸಮೃದ್ಧ ರಾಷ್ಟ್ರ ನಿರ್ಮಾಣದ ‌‌ಯೋಜನೆಗಳನ್ನು ನಿರೂಪಿಸುವಂತೆ ಸ್ಫೂರ್ತಿ ಕೊಡಲಿ

‘ದಸರೆ ನಿಲ್ಲದಿರಲಿ’
‘ಮುಂದಿನ ತಲೆಮಾರಿಗೆ ಸಿಗದೆ ಮರೆಯಾಗಬಹುದಾದ ಈ ಮಣ್ಣಿನ, ಈ ನೆಲದ ಘಮಲು, ದೇಸಿ ಸೊಗಡು ತುಂಬಿರುವ ನಾಡಹಬ್ಬ ನಿಲ್ಲಬಾರದು. ಕುಸ್ತಿಗೆ ಹೆಚ್ಚು ಪ್ರೋತ್ಸಾಹ ಕೊಡಬೇಕು’ ಎಂದ ಪ್ರೊ.ಹಂಪನಾ, ಬಾಲ್ಯದಲ್ಲಿ ಪೈಲ್ವಾನ್‌ ಆಗಲು ಹೋಗಿ ತಲೆ ಬೋಳಿಸಿಕೊಂಡ ಪ್ರಸಂಗವನ್ನು ಹೇಳಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು. ‘ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎದೆಗುಂದದೆ ಸಡ್ಡು ಹೊಡೆದು ಗಟ್ಟಿಯಾಗಿ ನಿಂತಿರುವುದನ್ನು ನೋಡಿದರೆ ಅವರೂ ಕೂಡ ಗರಡಿಮನೆಯಲ್ಲಿ ಸಾಮು ಮಾಡಿರಬೇಕೆಂಬ ಗುಮಾನಿ ನನಗಿದೆ’ ಎಂದು ಹೇಳಿ ಮತ್ತೆ ನಗೆ ಉಕ್ಕಿಸಿದರು. ತೀರ್ಥಂಕರರ ಪುತ್ಥಳಿ ನೀಡಿ‌ ಹಂಪನಾ ಅವರನ್ನು‌ ಸ್ವಾಗತಿಸಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT