ರಾಜ್ಯದ ಪ್ರಮುಖ ಪ್ರವಾಸಿ ತಾಣಗಳ ತವರು ಮೈಸೂರು. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಹಾಗೂ ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವೈವಿಧ್ಯ ತಾಣಗಳನ್ನು ಹೊಂದಿರುವ ಜಿಲ್ಲೆ. ಪ್ರಾಕೃತಿಕ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆಯ ಈ ಜಿಲ್ಲೆಯ ತಾಣಗಳ ಚಿತ್ರಣವನ್ನು ಬಿ.ಜೆ. ಧನ್ಯಪ್ರಸಾದ್ ಇಲ್ಲಿ ನೀಡಿದ್ದಾರೆ.

ದಕ್ಷಿಣ ಭಾರತದ ಹೃದಯ ಭಾಗದಲ್ಲಿರುವ ಮೈಸೂರು ಜಿಲ್ಲೆಯು ಪ್ರವಾಸಿತಾಣಗಳ ಬೀಡು, ಪ್ರವಾಸಿಗರ ಸ್ವರ್ಗ. ಅರಸರ ಆಳ್ವಿಕೆಯ ಕಾಲದಲ್ಲಿ ಮೈಸೂರು ನಾಡಿನ ಶಕ್ತಿ ಕೇಂದ್ರವಾಗಿತ್ತು. ನಾಡಿನ ಸಾಂಸ್ಕೃತಿಕ ರಾಜಧಾನಿ, ಯೋಜಿತ ನಗರ ಮತ್ತು ದೇಶದ ನಂ.1 ಸ್ವಚ್ಛ ನಗರಿ ಎಂಬ ಗರಿ ಹೊಂದಿರುವ ಈ ಊರು ವಿಶ್ವ ಪ್ರವಾಸಿ ಭೂಪಟದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಇತಿಹಾಸ, ಸಂಸ್ಕೃತಿ ಹೊಂದಿರುವ ಈ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳ ಚಿತ್ರಣ ಇಲ್ಲಿದೆ.

ಅಂಬಾವಿಲಾಸ ಅರಮನೆ

ರಾಜವಂಶಸ್ಥರ ನಿವಾಸ ಮೈಸೂರು ಅರಮನೆ (ಅಂಬಾವಿಲಾಸ ಅರಮನೆ) ಪ್ರವಾಸಿಗರ ಆಕರ್ಷಣೆಯ ಪ್ರಮುಖ ತಾಣ. ರಾಜಮಾತೆ ಕೆಂಪನಂಜಮ್ಮಣ್ಣಿ (ವಾಣಿ ವಿಲಾಸ ಸನ್ನಿಧಾನ) ಕಾಲದಲ್ಲಿ (1912ರಲ್ಲಿ) ಈ ಅರಮನೆ ನಿರ್ಮಾಣಗೊಂಡಿದೆ. ಇಂಡೋ–ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಿರುವ ಈ ಕಟ್ಟಡ ಶ್ರೀಗಂಧ, ದಂತ, ಚಿನ್ನದ ಅಲಂಕೃತ ಕೆತ್ತನೆಗಳಿಂದ ಕಂಗೊಳಿಸುತ್ತಿದೆ. ಹಿಂದೂ, ಮುಸ್ಲಿಂ, ರಜಪೂತ್ ಹಾಗೂ ಗೋಥಿಕ್ ಶೈಲಿಗಳನ್ನು ಹೊಂದಿದೆ. ಮಹಾರಾಜರ ಖಾಸಗಿ ವಸ್ತುಸಂಗ್ರಹಾಲಯ, ದರ್ಬಾರ್ ಹಾಲ್, ಶಸ್ತ್ರಾಗಾರದಲ್ಲಿನ ವಿವಿಧ ಆಯುಧಗಳು, ಚಿನ್ನದ ಸಿಂಹಾಸನ, ದೇಗುಲಗಳು ಇಲ್ಲಿನ ಪ್ರಮುಖ ಆಕರ್ಷಣೆಗಳು.

ಜಗನ್ಮೋಹನ ಅರಮನೆ

ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು 1861ರಲ್ಲಿ ಜಗನ್ಮೋಹನ ಅರಮನೆಯನ್ನು ಕಟ್ಟಿಸಿದರು. ಇದು ಅರಮನೆಯ ಕೋಟೆಯ ಬ್ರಹ್ಮಪುರಿ ದ್ವಾರದ ಎದುರಿಗೆ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ವಿವಾಹ ಮತ್ತು ಪಟ್ಟಾಭಿಷೇಕ ಮಹೋತ್ಸವ ಇಲ್ಲಿ ನೆರವೇರಿತ್ತು. ಚಿತ್ರಗಳ ಗ್ಯಾಲರಿ (ಜಯಚಾಮರಾಜೇಂದ್ರ ಚಿತ್ರಶಾಲೆ) ವಸ್ತು ಸಂಗ್ರಹಾಲಯ ಇಲ್ಲಿದೆ. ವೈವಿಧ್ಯಮಯ ಗಡಿಯಾರಗಳು, ಅಪರೂಪದ ವರ್ಣಚಿತ್ರಗಳು, ಸಂಗೀತ ಸಾಧನಗಳು, ಪೀಠೋಪಕರಣ, ಗಾಜಿನ ವಸ್ತುಗಳು ಇವೆ. ರಾಜಾರವಿವರ್ಮ, ನಂದನಲಾಲ್ ಬೋಸ್, ಸ್ವೆಟೋಸ್ಲಾವ್ ರೋರಿಚ್, ಹಲ್ಡೇಂಕರ್ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ಲಲಿತ ಮಹಲ್

ಲಲಿತ ಮಹಲ್ ಅರಮನೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿದೆ. ಇದನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1922ರಲ್ಲಿ ಕಟ್ಟಿಸಿದರು. ನಗರದಿಂದ 5 ಕಿ.ಮೀ ದೂರದಲ್ಲಿದೆ. ಈ ಐಷಾರಾಮಿ ಹೋಟೆಲಿನ ವಿನ್ಯಾಸ ಮನೋಹರ. ಕಂಬಗಳು, ತೂಗುದೀಪ, ಚಾವಣಿ ಗಮನಸೆಳೆಯುತ್ತದೆ.

ಚಾಮುಂಡಿ ಬೆಟ್ಟ

ನೈಸರ್ಗಿಕ ಸಿರಿಯ ಚಾಮುಂಡಿಬೆಟ್ಟ ಮೈಸೂರಿನಿಂದ 13 ಕಿಲೋ ಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ 1074 ಮೀಟರ್ ಎತ್ತರದಲ್ಲಿರುವ ಈ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನ ಇದೆ. ಈ ಬೆಟ್ಟ ಏರಲು 1,000 ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ದೇಗುಲದ ಸಮೀಪದಲ್ಲೇ ಮಹಾಬಲೇಶ್ವರ ಗುಡಿ ಇದೆ.

ಮಹಿಷಾಸುರನ ಪ್ರತಿಮೆ ಇದೆ. ಇದು 3.5 ಮೀಟರ್ ಎತ್ತರ ಇದೆ. ಚಾಮುಂಡಿ ಬೆಟ್ಟದ ಮತ್ತೊಂದು ಪ್ರಮುಖ ಆಕರ್ಷಣೆ ನಂದಿ ವಿಗ್ರಹ. ಎತ್ತರದ ಪೀಠದ ಮೇಲೆ ಕುಳಿತಂತೆ ಕೆತ್ತಲಾಗಿರುವ ಈ ವಿಗ್ರಹ 16 ಅಡಿ ಎತ್ತರ ಇದೆ.

ಸಂತ ಫಿಲೋಮಿನಾ ಚರ್ಚ್

ದಕ್ಷಿಣ ಭಾರತದ ಅದ್ವಿತೀಯ ಕಟ್ಟಡ ಎಂಬ ಹೆಗ್ಗಳಿಕೆಯನ್ನು ಸಂತ ಫಿಲೋಮಿನಾ ಚರ್ಚ್ ಹೊಂದಿದೆ. ಸಂತ ಫಿಲೋಮಿನಾ ಮಾತೆಯ ಸ್ಮರಣಾರ್ಥ 1933ರಲ್ಲಿ ಈ ದೇವಾಲಯವನ್ನು ನಿರ್ಮಿಸಲಾಯಿತು. ಗೋಥಿಕ್ ಶೈಲಿಯ ಈ ಕಟ್ಟಡದ ಪ್ರವೇಶ ದ್ವಾರದಲ್ಲಿ 175 ಅಡಿ ಎತ್ತರದ ಅವಳಿ ಗೋಪುರಗಳು ಇವೆ.

ಶತಮಾನ ಕಂಡ ಮೈಸೂರು ವಿಶ್ವವಿದ್ಯಾನಿಲಯ

ರಾಜ್ಯದ ಮೊದಲ ಮತ್ತು ದೇಶದ ಆರನೇ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇದೆ. ಮೈಸೂರು ಸಂಸ್ಥಾನದ ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದರ್ಶಿತ್ವದ ಫಲವಾಗಿ 1916 ಜುಲೈ 27ರಂದು ಈ ವಿ.ವಿ ಸ್ಥಾಪನೆ ಆಯಿತು. ಮಾನಸಗಂಗೋತ್ರಿ ಆವರಣ 750 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ.

ಪ್ರಾಚ್ಯವಿದ್ಯಾ ಸಂಶೋಧನಾಲಯ

ಮಹಾರಾಜ ಕಾಲೇಜಿನ ಗೋರ್ಡಾನ್ ಪಾರ್ಕ್ ಬಳಿ ಪ್ರಾಚ್ಯ ವಿದ್ಯಾ ಸಂಶೋಧನಾಲಯ ಇದೆ. 1891ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಯಿತು. ಇದನ್ನು ಬಹಳ ಕಾಲದವರೆಗೆ ಸರ್ಕಾರಿ ಓರಿಯಂಟಲ್ ಲೈಬ್ರರಿ ಎಂದು ಕರೆಯಲಾಗುತ್ತಿತ್ತು. ಭಾರತೀಯ ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಪ್ರಾಚೀನ ಕೃತಿಗಳನ್ನು ಪತ್ತೆಹಚ್ಚಿ ಸಂಪಾದಿಸಿ ಪ್ರಕಟಿಸುವ ಉದ್ದೇಶದಿಂದ ಈ ಸಂಸ್ಥೆ ಸ್ಥಾಪಿಸಲಾಯಿತು. ಸಂಸ್ಥೆಯಲ್ಲಿ ಉನ್ನತವಾದ ಗ್ರಂಥ ಭಂಡಾರ ಇದೆ. 60 ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳು, 30 ಸಾವಿರಕ್ಕೂ ಹೆಚ್ಚು ಸಂಸ್ಕೃತ. ಇಂಗ್ಲಿಷ್, ಕನ್ನಡ, ತೆಲುಗು, ಹಿಂದಿ ಮರಾಠಿ, ತಮಿಳು ಭಾಷೆಯ ಗ್ರಂಥಗಳು ಇಲ್ಲಿವೆ.

ಜಾನಪದ ವಸ್ತು ಸಂಗ್ರಹಾಲಯ

ಮಾನಸಗಂಗೋತ್ರಿ ಆವರಣದಲ್ಲಿನ ಜಯಲಕ್ಷ್ಮೀ ವಿಲಾಸ ಕಟ್ಟಡದಲ್ಲಿ ಜಾನಪದ ವಸ್ತು ಸಂಗ್ರಹಾಲಯ ನೆಲೆಗೊಂಡಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ 1967–68ನೇ ಸಾಲಿನಲ್ಲಿ ಸ್ಥಾಪಿತವಾಯಿತು. ದಕ್ಷಿಣಪೂರ್ವ ಏಷ್ಯಾದ ಅತಿದೊಡ್ಡ ಮತ್ತು ಸುಸಜ್ಜಿತ ಜಾನಪದ ವಸ್ತುಸಂಗ್ರಹಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಸೂತ್ರದ ಗೊಂಬೆಗಳು, ತೊಗಲು ಗೊಂಬೆಗಳು, ಆಭರಣಗಳು, ಮರದ ಕೆತ್ತನೆಗಳು ಸೇರಿದಂತೆ ಜಾನಪದಕ್ಕೆ ಸಂಬಂಧಪಟ್ಟ ಸುಮಾರು 6,500 ವಸ್ತುಗಳು ಇಲ್ಲಿವೆ.

ರೈಲ್ವೆ ಮ್ಯೂಸಿಯಂ

ಮೈಸೂರಿನಲ್ಲಿ 1979ರಲ್ಲಿ ರೈಲ್ವೆ ವಸ್ತು ಸಂಗ್ರಹಾಲಯವು ಸ್ಥಾಪನೆಗೊಂಡಿತು. ಹಿಂದೆ ಬಳಕೆಯಲ್ಲಿದ್ದ ರೈಲು ಎಂಜಿನ್‌ಗಳು, ಬೋಗಿಗಳು ಮತ್ತು ರೈಲ್ವೆ ಇಲಾಖೆಯಲ್ಲಿ ಬಳಸುತ್ತಿದ್ದ ಅಪರೂಪದ ವಸ್ತುಗಳ ಸಂಗ್ರಹವಿದೆ. ರೈಲ್ವೆ ಇಲಾಖೆ ವಿವಿಧ ಕಾಲಘಟ್ಟಗಳಲ್ಲಿ ಬೆಳೆದ ರೋಚಕ ಕಥನ ಪರಿಚಯಿಸುತ್ತದೆ.

ಸಂಗ್ರಹಾಲಯ

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಪ್ರಾದೇಶಿಕ ಪ್ರಾಕೃತಿಕ ವಿಜ್ಞಾನ ವಸ್ತು ಸಂಗ್ರಹಾಲಯವನ್ನು 1995 ರಲ್ಲಿ ಸ್ಥಾಪಿಸಿತು. ಜೀವ ವಿಕಾಸ, ಪ್ರಾಣಿಗಳ ಚರಿತ್ರೆ, ಪರಿಸರ ಸಿರಿ ಕುರಿತು ಅರಿವು ಮೂಡಿಸುವ ಈ ಮ್ಯೂಸಿಯಂ ವಿಜ್ಞಾನಕ್ಕೆ ಸಂಬಂಧಿತ ವಿಷಯಗಳ ಆಗರ ವಾಗಿದೆ. ದಕ್ಷಿಣ ಭಾರತದ ಜೀವ ವೈವಿಧ್ಯದ ಬಗೆಗೆ ಒತ್ತು ನೀಡಿ, ಅವುಗಳ ಇರುವಿಕೆ ಮತ್ತು ಸಂರಕ್ಷಣೆಯ ಮಹತ್ವದ ಭೌಗೋಳಿಕ ಸಸ್ಯ–ಪ್ರಾಣಿ ಪರಂಪರೆಯನ್ನು ಇಲ್ಲಿ ಬಿಂಬಿಸಲಾಗಿದೆ. ಮೈಸೂರು– ತಿ. ನರಸೀಪುರ ರಸ್ತೆಯ ಸಿದ್ದಾರ್ಥ ನಗರದಲ್ಲಿ ಹಾಲಿನ ಡೇರಿ ಸನಿಹದಲ್ಲಿ ಈ ಮ್ಯೂಸಿಯಂ ಇದೆ.

ರಾಷ್ಟ್ರೀಯ ಮಾನವ ಸಂಗ್ರಹಾಲಯ

ರಾಷ್ಟ್ರೀಯ ಮಾನವ ಸಂಗ್ರಹಾಲಯವು 2001ರಲ್ಲಿ ಆರಂಭವಾಯಿತು. ನಗರದ ಇರ್ವಿನ್ ರಸ್ತೆಯಲ್ಲಿರುವ (ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ) ಈ ಮ್ಯೂಸಿಯಂ ಮನುಕುಲದ ವಿಕಸನವನ್ನು ಪರಿಚಯಿಸುತ್ತದೆ. ವಿಕಾಸದ ಹಾದಿಯಲ್ಲಿ ಮಾನವ ಬಳಸಿದ ಸಾಮಗ್ರಿಗಳ ಪ್ರದರ್ಶನವಿದೆ. ಪುರಾಣ, ಕಲೆ ಇತ್ಯಾದಿ ಕುರಿತು ಮಾಹಿತಿಗಳು ಇಲ್ಲಿವೆ.

ವ್ಯಾಕ್ಸ್ ಮ್ಯೂಸಿಯಂ

ಚಾಮುಂಡಿಬೆಟ್ಟಕ್ಕೆ ಸಾಗುವ ಮಾರ್ಗದಲ್ಲಿ (ಕುರುಬಾರಹಳ್ಳಿ ಮುಖ್ಯರಸ್ತೆ) ಸಂಗೀತ ಮತ್ತು ಸಂಗೀತ ವಾದ್ಯಗಳನ್ನು ಆಧರಿಸಿದ ಮಾಧುರ್ಯ ಲೋಕದ ಮೇಣದ ವಸ್ತುಸಂಗ್ರಹಾಲಯ (ಮೆಲೋಡಿ ವರ್ಲ್ಡ್ ಆಫ್ ವ್ಯಾಕ್ಸ್ ಮ್ಯೂಸಿಯಂ) ಇದೆ. ಇಲ್ಲಿ ಸಜೀವ ಪ್ರಮಾಣದ 100 ಅರಗಿನ ಮೂರ್ತಿಗಳು ಇವೆ. ಭಾರತದ ಶಾಸ್ತ್ರೀಯ ವಾದ್ಯಗಳು, ಪಂಜಾಬಿ, ಭಾಂಗ್ರಾ, ಜಾಝ್, ರಾಕ್, ಮಧ್ಯ–ಪೂರ್ವ ಪ್ರಾಂತ್ಯದ ಸುಮಾರು 300 ವಿವಿಧ ವಾದ್ಯಗಳನ್ನು ಪ್ರದರ್ಶಿಸಲಾಗಿದೆ.

ಮೃಗಾಲಯ

1892ರಲ್ಲಿ ಮೈಸೂರಿನಲ್ಲಿ ಮೃಗಾಲಯ ಸ್ಥಾಪಿಸಲಾಯಿತು. 1909ರಲ್ಲಿ ಚಾಮರಾಜೇಂದ್ರ ಮೃಗಾಲಯ ಎಂದು ನಾಮಕರಣ ಮಾಡಲಾಯಿತು. ನಗರದ ಹೃದಯ ಭಾಗದಲ್ಲಿರುವ ದೇಶ ವಿದೇಶಗಳ ವಿವಿಧ ಪ್ರಭೇದಗಳ ಪಕ್ಷಿಗಳು, ಪ್ರಾಣಿಗಳು, ಉರಗಗಳು, ಅಪರೂಪದ ವನ್ಯಜೀವಿಗಳಿವೆ.

ಕಾರಂಜಿ ಕೆರೆ

ಚಾಮರಾಜೇಂದ್ರ ಮೃಗಾಲಯಕ್ಕೆ ಹೊಂದಿಕೊಂಡಂತೆ ಕಾರಂಜಿ ಕೆರೆ ಇದೆ. ವನರಾಶಿಯಿಂದ ಆವೃತವಾಗಿರುವ ಪ್ರಶಾಂತ ಪರಿಸರ ಇಲ್ಲಿದೆ. ಪಂಜರದಲ್ಲಿ ಬಂಧಿಯಾಗಿರುವ ಬಾನಾಡಿಗಳ ಚಿಲಿಪಿಲಿ ಇಂಚರ, ಮನಮೋಹಕ ನಿಸರ್ಗ ಸೊಬಗು ಕಣ್ಮನ ಸೆಳೆಯುತ್ತವೆ.

ಚಿಟ್ಟೆ ಉದ್ಯಾನ, ದೋಣಿ ವಿಹಾರ, ಹುಲ್ಲುಹಾಸುಗಳು, ಮಕ್ಕಳ ಮೋಜಿನ ಉದ್ಯಾನ, ವಿಹಾರಕ್ಕೆ ಕಾಲ್ನಡಿಗೆ ಪಥ ಇಲ್ಲಿನ ಪ್ರಮುಖ ಆಕರ್ಷಣೆಗಳು.

ಫ್ಯಾಂಟಸಿ ಪಾರ್ಕ್

ಮನೋರಂಜಕ ಜಲಕ್ರೀಡೆಗಳ ಮೋಜಿನ ತಾಣ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್. ನಗರದಿಂದ 7 ಕಿ.ಮೀ ದೂರದಲ್ಲಿದೆ. ಕೆಆರ್‌ಎಸ್ ರಸ್ತೆಯಲ್ಲಿ ಸಾಗಿದರೆ ರಿಂಗ್ ರೋಡ್‌ನ ಬಲ ಬದಿಯಲ್ಲಿ ಈ ಪಾರ್ಕ್ ಇದೆ. 34 ಎಕರೆ ವಿಸ್ತೀರ್ಣದಲ್ಲಿ ಈ ಪಾರ್ಕ್ ಹರಡಿಕೊಂಡಿದೆ. ಬಹುಪಥದ ರೇಸಿಂಗ್ ಜಾರುಗಳು, ಬೆಚ್ಚಗಿನ ಕೊಳ, ಅಲೆಗಳು ಬೀಚ್, ಲೇಜಿ ರಿವರ್, ಮಕ್ಕಳ ಕೊಳ ಮೊದಲಾದವು ಇವೆ. ರೆಡ್ ಇಂಡಿಯನ್ ಜಲಪಾತ ಇಲ್ಲಿನ ಪ್ರಮುಖ ಆಕರ್ಷಣೆ.

ಶ್ರೀಕಂಠೇಶ್ವರ ದೇಗುಲ ನಂಜನಗೂಡು

ರಾಜ್ಯದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾದ ಶ್ರೀಕಂಠೇಶ್ವರ (ನಂಜುಂಡೇಶ್ವರ) ದೇಗುಲವು ಜಿಲ್ಲೆಯ ಕಪಿಲಾ ನದಿ ತಟದ ನಂಜನ ಗೂಡಿನಲ್ಲಿದೆ. ಜಿಲ್ಲಾ ಕೇಂದ್ರದಿಂದ 23 ಕಿ.ಮೀ ದೂರದಲ್ಲಿ ಇದೆ. ಕರ್ನಾಟಕದ ಮೊದಲ ಆಯುರ್ವೇದ ಕೇಂದ್ರ ನೆಲೆ ಎಂಬ ಖ್ಯಾತಿ ಈ ಸ್ಥಳಕ್ಕೆ ಇದೆ. ಕಪಿಲಾ ಮತ್ತು ಗುಂಡ್ಲುಹೊಳೆ ಸಂಗಮದ ಬಳಿ ಪರಶುರಾಮ ಕ್ಷೇತ್ರ ಇದೆ.

ತಲಕಾಡು

ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ತಲಕಾಡು ಪುಣ್ಯಕ್ಷೇತ್ರವು ತಿ. ನರಸೀಪುರ ತಾಲ್ಲೂಕಿನಲ್ಲಿದೆ. ಕಾವೇರಿ ನದಿಯ ಎಡದಂಡೆಗೆ ಹೊಂದಿಕೊಂಡಿದೆ. ಮೈಸೂರಿನಿಂದ 45 ಕಿ.ಮೀ. ದೂರದಲ್ಲಿದೆ. ದ್ರಾವಿಡ ಮತ್ತು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿರುವ ವೈದ್ಯನಾಥೇಶ್ವರ, ಮರಳೇಶ್ವರ, ಪಾತಾಳೇಶ್ವರ, ಅರ್ಕೇಶ್ವರ ಗೋಕರ್ಣೇಶ್ವರ ದೇಗುಲಗಳಿವೆ. 12 ವರ್ಷಕ್ಕೊಮ್ಮೆ ಕ್ಷೇತ್ರದಲ್ಲಿ ಪಂಚಲಿಂಗದರ್ಶನ ನಡೆಯುತ್ತದೆ.

ಸೋಮನಾಥಪುರ

ತಿ. ನರಸೀಪುರ ತಾಲ್ಲೂಕಿನಲ್ಲಿರುವ ಸೋಮನಾಥಪುರ ಚಾರಿತ್ರಿಕ ಮಹತ್ವದ ಸ್ಥಳವಾಗಿದೆ. ಜಿಲ್ಲಾ ಕೇಂದ್ರದಿಂದ 40 ಕಿ.ಮೀ ದೂರದಲ್ಲಿರುವ ಈ ತಾಣವನ್ನು ದೇವಾಲಯಗಳು ಊರು ಎಂದು ಹೇಳಲಾಗುತ್ತದೆ. ಇಲ್ಲಿನ ಪ್ರಖ್ಯಾತ ಕೇಶವ ದೇವಾಲಯವನ್ನು 1268ರಲ್ಲಿ ನಿರ್ಮಿಸಲಾಗಿದೆ. ಇದು ಹೊಯ್ಸಳ ರಾಜವಂಶದ ಅತ್ಯುತ್ತಮ ಸ್ಮಾರಕಗಳಲ್ಲೊಂದಾಗಿದೆ. ಮೂರು ಗೋಪುರಗಳ ಈ ತ್ರಿಕೂಟಾಚಲ ದೇವಾಲಯವನ್ನು ನಕ್ಷತ್ರಾಕಾರದಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತ, ಭಾಗವತ ಕಥಾನಿರೂಪಣೆಗಳ ಕೆತ್ತನೆಗಳು ಇವೆ. ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರಗಳನ್ನು ಹೊಯ್ಸಳ ವಾಸ್ತುಶಿಲ್ಪದ ಸುವರ್ಣ ತ್ರಿಕೋನಗಳು ಎಂದು ಕರೆಯಲಾಗುತ್ತದೆ.

ಬೈಲುಕುಪ್ಪೆ

ದಕ್ಷಿಣ ಭಾರತದ ಟಿಬೆಟ್ ನಿರಾಶ್ರಿತರ ಅತಿದೊಡ್ಡ ಬೈಲುಕುಪ್ಪೆ ಪುನರ್ವಸತಿ ಕೇಂದ್ರವು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿದೆ. ಈ ಸ್ಥಳವು ಮೈಸೂರಿನಿಂದ 90 ಕಿ.ಮೀ ದೂರದಲ್ಲಿದೆ. ಇದು ಬೌದ್ಧ ವಿಹಾರ, ಕರಕುಶಲ ಸಾಮಗ್ರಿಗಳು, ಕಾರ್ಪೆಟ್ ಹಾಗೂ ಅಗರ ಬತ್ತಿ ಕಾರ್ಖಾನೆಗಳಿಗೆ ಪ್ರಸಿದ್ಧವಾಗಿದೆ. ಇಲ್ಲಿ ಸೇರಾಜೆ ಮತ್ತು ಸೇರಾವೋ ಮಹಾಗೋಂಪ ಬೌದ್ಧ ಮಠಗಳು ಇವೆ. ಇಲ್ಲಿನ ಸ್ವರ್ಣಮಂದಿರದ ಗೋಡೆಗಳು ವರ್ಣಮಯ ಚಿತ್ರರಚನೆಗಳಿಂದ ಕಂಗೊಳಿಸುತ್ತಿವೆ.

ಸುತ್ತೂರು

ಸುತ್ತೂರು ಶ್ರೀಕ್ಷೇತ್ರ ನಂಜನಗೂಡು ತಾಲ್ಲೂಕಿನಲ್ಲಿದೆ. ಈ ಊರು ಕಪಿಲಾ ನದಿಯ ತಟದಲ್ಲಿದ್ದು, ನಗರದಿಂದ 26 ಕಿ.ಮೀ ದೂರದಲ್ಲಿದೆ. ಸುತ್ತೂರು ಮಹಾಸಂಸ್ಥಾನವು ಗುರು ಪರಂಪರೆ ಕ್ಷೇತ್ರವಾಗಿದೆ. ಮಠವು ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾಗಿದೆ. ಪ್ರತಿವರ್ಷ ಫೆಬ್ರುವರಿಯಲ್ಲಿ ನಡೆಯುವ ಸುತ್ತೂರು ಜಾತ್ರೆಗೆ ನಾಡಿನ ವಿವಿಧೆಡೆಗಳಿಂದ ಭಕ್ತರು ಬರುತ್ತಾರೆ.

ಅವಧೂತ ದತ್ತಪೀಠ

ಸಚ್ಚಿದಾನಂದ ಆಶ್ರಮವು ನಂಜನಗೂಡು ರಸ್ತೆಯಲ್ಲಿದ್ದು, ನಗರದಿಂದ 3 ಕಿ.ಮೀ ದೂರದಲ್ಲಿದೆ. ಇಲ್ಲಿ ದತ್ತಾತ್ರೇಯ ಮತ್ತು ವೆಂಕಟರಮಣ ಸ್ವಾಮಿ ದೇವಸ್ಥಾನ, ನಾದಮಂಟಪ, ಪ್ರಾರ್ಥನಾ ಮಂದಿರ, ಬೊನ್ಸಾಯ್ ಉದ್ಯಾನ, ವಸ್ತುಸಂಗ್ರಹಾಲಯ ಇದೆ.

ಗೊಮ್ಮಟಗಿರಿ

ಗೊಮ್ಮಟಗಿರಿಯು ಹುಣಸೂರು ತಾಲ್ಲೂಕಿನಲ್ಲಿದ್ದು, ಬಂಡೆಯ ಮೇಲೆ 18 ಅಡಿ ಎತ್ತರದ ಬಾಹುಬಲಿಯ ಏಕಶಿಲಾ ಮೂರ್ತಿಇದೆ. ಮೂರ್ತಿಗೆ ಪ್ರತಿವರ್ಷ ಮಸ್ತಕಾಭಿಷೇಕ ನಡೆಯುತ್ತದೆ. ಈ ಸ್ಥಳವು ಮೈಸೂರಿನಿಂದ 22 ಕಿ.ಮೀ ದೂರದಲ್ಲಿದೆ.

ಚುಂಚನಕಟ್ಟೆ

ಕಾವೇರಿ ನದಿಗೆ ಇರುವ ಜಲಪಾತ ಇದು. ಕೆ.ಆರ್. ನಗರ ತಾಲ್ಲೂಕಿನಲ್ಲಿದೆ. ಮೈಸೂರಿನಿಂದ 55 ಕಿ.ಮೀ ದೂರದಲ್ಲಿದೆ.ಇಲ್ಲಿ ಪ್ರತಿವರ್ಷ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ ನಡೆಯುತ್ತದೆ. ಜಿಲ್ಲಾ ಕೇಂದ್ರದಿಂದ 62 ಕಿ.ಮೀ ದೂರ ಇದೆ.

ರಾಷ್ಟ್ರೀಯ ಉದ್ಯಾನ

ಕಪಿಲಾ ಮತ್ತು ಕಬಿನಿ ಜಲಾಶಯದ ಹಿನ್ನೀರಿಗೆ ಹೊಂದಿ ಕೊಂಡಿರುವ ನಾಗರಹೊಳೆಯ ರಾಜೀವಗಾಂಧಿ ರಾಷ್ಟ್ರೀಯ ಉದ್ಯಾನ ಇದೆ. ಈ ಸ್ಥಳವು ಹೆಗ್ಗಡದೇವನ ಕೋಟೆ ತಾಲ್ಲೂಕಿನಲ್ಲಿದ್ದು ಮೈಸೂರಿನಿಂದ 93 ಕಿ.ಮೀ ದೂರದಲ್ಲಿದೆ. ಇಲ್ಲಿ ಲಭ್ಯ ಇರುವ ಜೀಪ್ ಸಫಾರಿ, ಆನೆ ಸವಾರಿ, ತೇಲುಬುಟ್ಟಿಗಳ ವಿಹಾರ, ನಿಸರ್ಗ ನಡಿಗೆ ಇತ್ಯಾದಿಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಕಬಿನಿ ಜಲಾಶಯ

ಕಬಿನಿ ಜಲಾಶಯವು ಹೆಗ್ಗಡದೇವನಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿ ಇದೆ. ಕಪಿಲಾ ನದಿಗೆ ನಿರ್ಮಿಸಿರುವ ಅಣೆಕಟ್ಟೆ ಇದು. ನಗರದಿಂದ 65 ಕಿ.ಮೀ. ದೂರದಲ್ಲಿದೆ. ಹೆಗ್ಗಡದೇವನಕೋಟೆ ತಾಲ್ಲೂಕಿನ ಬೀರ್ವಾಳು ಗ್ರಾಮದ ಬಳಿ ನುಗು ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ನುಗು ಜಲಾಶಯವು ಮೈಸೂರಿನಿಂದ 67 ಕಿ. ಮೀ. ದೂರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.