ಶುಕ್ರವಾರ, 28 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಿತಾಳ | ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆ

ಕವಿತಾಳ: ರಕ್ತ ಪರೀಕ್ಷೆ, ಹೆರಿಗೆಗೂ ಹಣ: ರೋಗಿಗಳ ಆರೋಪ
Published 4 ನವೆಂಬರ್ 2023, 6:29 IST
Last Updated 4 ನವೆಂಬರ್ 2023, 6:29 IST
ಅಕ್ಷರ ಗಾತ್ರ

ಕವಿತಾಳ: ಪಟ್ಟಣದ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ಮತ್ತು ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ನಿತ್ಯ ಅಂದಾಜು 200 ಹಾಗೂ ವಾರದ ಸಂತೆ ದಿನ 300ಕ್ಕೂ ಅಧಿಕ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಸದ್ಯ  ಬಿಎಎಂಎಸ್ ಮತ್ತು ಮಕ್ಕಳ ತಜ್ಞ ಇಬ್ಬರು ವೈದ್ಯರು ಲಭ್ಯವಿದ್ದಾರೆ.

‘ಮಕ್ಕಳ ತಜ್ಞ ಡಾ.ಸುಶಾಂತ್ ಆಸ್ಪತ್ರೆಗೆ ಬೆಳಿಗ್ಗೆ ತಡವಾಗಿ ಬಂದು ಬೇಗನೆ ಹೋಗುತ್ತಾರೆ, ರಾತ್ರಿ ವೇಳೆ, ಅಪಘಾತ, ಹೆರಿಗೆ ಮತ್ತಿತರ ತುರ್ತು ಸಂದರ್ಭದಲ್ಲಿ ವೈದ್ಯರಿಲ್ಲದೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಮರಣೋತ್ತರ ಪರೀಕ್ಷೆಗೆ ದಿನಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಹೀಗಾಗಿ ಎಂಬಿಬಿಎಸ್ ವೈದ್ಯರನ್ನು ತಕ್ಷಣ ನೇಮಿಸಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ನಗನೂರು ಒತ್ತಾಯಿಸಿದರು.

ಎಂಬಿಬಿಎಸ್, ಸ್ತ್ರೀರೋಗ ತಜ್ಞ, ಅರವಳಿಕೆ ತಜ್ಞ, ದಂತ ವೈದ್ಯ, ಹೋಮಿಯೋಪಥಿ ವೈದ್ಯರ ತಲಾ ಒಂದು ಹುದ್ದೆ ಮಂಜೂರಾತಿ ಇದೆ. ಈ ಹಿಂದೆ ಇಲ್ಲಿ ದಂತ ವೈದ್ಯರು ಸೇವೆ ಸಲ್ಲಿಸುತ್ತಿದ್ದರು ಆದರೆ ತಪಾಸಣೆಗೆ ಬೇಕಾದ ಯಂತ್ರಗಳು ಇರಲಿಲ್ಲ, ಕ್ಷ ಕಿರಣ ಸೌಲಭ್ಯವಿದ್ದರೂ ತಜ್ಞ ವೈದ್ಯರಿಲ್ಲ. ಫಾರ್ಮಸಿಸ್ಟ್ ಹುದ್ದೆ ಖಾಲಿಯಿದ್ದು ಔಷಧಗಳ ಮಾಸಿಕ ಬೇಡಿಕೆ ಸಲ್ಲಿಸಲು ವಿಳಂಬವಾಗಿ ಆಗಾಗ ಔಷಧ ಕೊರತೆ ಉಂಟಾಗುತ್ತದೆ.

‘ರಕ್ತ ಪರೀಕ್ಷೆಗೆ ಹಣ ಪಡೆಯುತ್ತಾರೆ ಈ ಬಗ್ಗೆ ಕೇಳಿದರೆ ಅಲ್ಲಿನ ಸಿಬ್ಬಂದಿ ಹಣ ಪಡೆದದ್ದಕ್ಕೆ ರಶೀದಿ ನೀಡುವುದಾಗಿ ಹೇಳುತ್ತಾರೆ ಮತ್ತು ಹೆರಿಗೆ ಮಾಡಿಸಿದರೆ ಹಣ ಕೇಳುತ್ತಾರೆ’ ಎಂದು ರೋಗಿಗಳು ದೂರಿದರು.

‘ಈ ಹಿಂದಿನ ವೈದ್ಯಾಧಿಕಾರಿ ಅಮೃತ್ ರಾಠೋಡ್ ಪಟ್ಟಣದ ಕೆಲವು ಗಣ್ಯರ ನೆರವಿನಿಂದ ಆಸ್ಪತ್ರೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಜತೆಗೆ ರೋಗಿಗಳಿಗೆ ಮಾಹಿತಿ ನೀಡಲು ಧ್ವನಿ ವರ್ಧಕ ಅಳವಡಿಸಿ 24x7 ಆರೋಗ್ಯ ಮಾಹಿತಿ, ಸರ್ಕಾರದ ಆರೋಗ್ಯ ಸೇವೆಗಳ ಕುರಿತು ವಿವರಣೆ ನೀಡುವ ವ್ಯವಸ್ಥೆ ಮಾಡಿದ್ದರು. ಇದೀಗ ನಿರ್ವಹಣೆ ಕೊರತೆ, ಪಾರದರ್ಶಕ ವ್ಯವಸ್ಥೆಯಿಂದ ತಮ್ಮ ಕಳ್ಳಾಟ ನಡೆಯುವುದಿಲ್ಲ ಎಂದು ಕೆಲವರು ಅವುಗಳನ್ನು ಬಂದ್ ಮಾಡಿದ್ದಾರೆ ಎನ್ನಲಾಗಿದೆ. ಆಸ್ಪತ್ರೆ ವ್ಯವಸ್ಥೆ ಸುಧಾರಣೆಗೆ ದೇಣಿಗೆ ಕೊಟ್ಟವರು ಈಗ ಮರುಕಪಡುವಂತಾಗಿದೆ, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು’ ಎಂದು ಶಿವಣ್ಣ ವಕೀಲ ಆಗ್ರಹಿಸಿದ್ದಾರೆ.

‘ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆ ವರೆಗೆ ಆಸ್ಪತ್ರೆಯಲ್ಲಿರುತ್ತೇನೆ ಮಕ್ಕಳ ತಜ್ಞನಾಗಿ ಸಾಮಾನ್ಯ ರೋಗಿಗಳನ್ನು ತಪಾಸಣೆ ಮಾಡಬೇಕಿದೆ, ವಿದ್ಯುತ್ ಪೂರೈಕೆ ಸ್ಥಗಿತವಾದಾಗ ಸಿಸಿ ಟಿವಿ ಕ್ಯಾಮೆರಾ ಬಂದ್ ಆಗುತ್ತದೆ’ ಎಂದು ಡಾ.ಸುಶಾಂತ್‌ ಹೇಳಿದರು.

ರಮೇಶ ನಗನೂರು
ರಮೇಶ ನಗನೂರು
ಡಾ.ಶರಣಬಸವ
ಡಾ.ಶರಣಬಸವ
ಎಂಬಿಬಿಎಸ್ ವೈದ್ಯರ ನೇಮಕ ಸಿಸಿ ಟಿವಿ ಕ್ಯಾಮೆರಾ ದುರಸ್ತಿ ಮತ್ತು ರೋಗಿಗಳಿಂದ ಹಣ ಪಡೆಯುವ ಸಿಬ್ಬಂದಿ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕು
ರಮೇಶ ನಗನೂರು ಪಟ್ಟಣ ಪಂಚಾಯಿತಿ ಸದಸ್ಯ
ಎಂಬಿಬಿಎಸ್ ವೈದ್ಯರ ನೇಮಕ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ರಕ್ತ ಪರೀಕ್ಷೆಗೆ ಹಣ ಪಡೆಯುವ ಸಿಬ್ಬಂದಿ ವಿರುದ್ದ ಕ್ರಮ ಕೈಗೊಳ್ಳಲಾಗುವುದು
ಡಾ.ಶರಣಬಸವ ತಾಲ್ಲೂಕು ಆರೋಗ್ಯಾಧಿಕಾರಿ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT