ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಸ್ಕಿ | ಆಸ್ಪತ್ರೆ ಭೂವಿವಾದ: ಕಾಮಗಾರಿಗೆ ಗ್ರಹಣ

ಲಭ್ಯವಾಗದ ‘ದಾನ ಪತ್ರ’ ದಾಖಲೆ * ಪರಿಹಾರಕ್ಕೆ ಭೂಮಾಲೀಕರ ಪಟ್ಟು
Published 13 ಜುಲೈ 2024, 1:11 IST
Last Updated 13 ಜುಲೈ 2024, 1:11 IST
ಅಕ್ಷರ ಗಾತ್ರ

ಮಸ್ಕಿ: ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂವಿವಾದದ ಹಿನ್ನೆಲೆಯಲ್ಲಿ ಮೂರು ವರ್ಷಗಳಿಂದ ಗ್ರಹಣ ಹಿಡಿದಿದೆ.

ಹೆದ್ದಾರಿ ಪಕ್ಕದ ನಾಲ್ಕು ಎಕರೆ ಜಾಗವನ್ನು ಈ ಹಿಂದೆ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಾಲೀಕರು ದಾನವಾಗಿ ನೀಡಿದ್ದರು ಎನ್ನಲಾಗುತ್ತಿದೆ. 30–40 ವರ್ಷಗಳ ಹಿಂದೆ ಪ್ರಾಥಮಿಕ ಆರೋಗ್ಯ ಕೇಂದ್ರ, ಆರು ಹಾಸಿಗೆ ಆಸ್ಪತ್ರೆ, ವೈದ್ಯರ ವಸತಿಗೃಹ ನಿರ್ಮಿಸಲಾಗಿತ್ತು. ಮೂರು ವರ್ಷಗಳ ಹಿಂದೆ 30 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ಕಟ್ಟಡ ನಿರ್ಮಾಣ ವೇಳೆ ಭೂವಿವಾದ ಎದ್ದಿದೆ. ಜಾಗವನ್ನು ‘ದಾನ’ವಾಗಿ ಪಡೆದ ಬಗ್ಗೆ ಆರೋಗ್ಯ ಇಲಾಖೆಯ ಬಳಿ ‌ಯಾವುದೇ ದಾಖಲೆ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

‘ನಮಗೆ ಸೇರಿದ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಿದ್ದಾರೆ’ ಎಂದು ಭೂಮಾಲೀಕ ಅಪ್ಪಾಜಿಗೌಡ ಪಾಟೀಲ ಹೈಕೋರ್ಟ್‌ನ ಕಲಬುರಗಿ ಪೀಠದ ಮೆಟ್ಟಿಲೇರಿದ್ದರು. ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಈಗಿನ 6 ಹಾಸಿಗೆಯ ಆಸ್ಪತ್ರೆಯ ಕಟ್ಟಡ ಹೊರತುಪಡಿಸಿ ಶವಪರೀಕ್ಷೆ ಕೇಂದ್ರ ಸೇರಿದಂತೆ ಉಳಿದ ಖಾಲಿ ಜಾಗಕ್ಕೆ ಭೂಮಾಲೀಕರು ತಂತಿ ಬೇಲಿ ಹಾಕಿದ್ದಾರೆ.‌

ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಚಂದ್ರಶೇಖರ ನಾಯಕ ಹಾಗೂ ಶಾಸಕ ಆರ್.ಬಸನಗೌಡ ತುರುವಿಹಾಳ ಭೂಮಾಲೀಕರೊಂದಿಗೆ ಮಾತುಕತೆ ನಡೆಸಿ ಆಸ್ಪತ್ರೆಗೆ ಭೂಮಿ ಬಿಟ್ಟುಕೊಡುವಂತೆ ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಗಿತ್ತು. ‘ಹೆದ್ದಾರಿಗೆ ಹೊಂದಿಕೊಂಡಿರುವ ಆಸ್ಪತ್ರೆಯ ಪಕ್ಕದ ಜಾಗವನ್ನು ಮನೆ ಕಟ್ಟಲು ಎನ್‌ಎ ಮಾಡಿಕೊಡುತ್ತೇವೆ. ಉಳಿದ ಜಾಗವನ್ನು ಆಸ್ಪತ್ರೆಗೆ ಬಿಟ್ಟುಕೊಡಿ’ ಎಂದು ಜಿಲ್ಲಾಧಿಕಾರಿ ನೀಡಿದ್ದ ಪ್ರಸ್ತಾವಕ್ಕೂ ಭೂಮಾಲೀಕರು ಸ್ಪಂದಿಸಿಲ್ಲ.

ಮೂರು ವರ್ಷಗಳಿಂದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿ ಭೂವಿವಾದವನ್ನು ಬೇಗನೆ ಇತ್ಯರ್ಥಪಡಿಸಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಸ್ಕಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಮಸ್ಕಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ
ಆಸ್ಪತ್ರೆಯ ಭೂಮಿ ಮಾಲೀಕರು ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದು ಅದರ ತೆರವಿಗೆ ಪ್ರಯತ್ನಿಸಲಾಗುವುದು
ಡಾ.ಸುರೇಂದ್ರಬಾಬು ಡಿಎಚ್‌ಒ ರಾಯಚೂರು
ನಮ್ಮ ಭೂಮಿಗೆ ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಮಾತ್ರ ಆಸ್ಪತ್ರೆಗೆ ಭೂಮಿ ಬಿಟ್ಟುಕೊಡುತ್ತೇವೆ
ಅಪ್ಪಾಜಿಗೌಡ ಪಾಟೀಲ ಭೂ ಮಾಲೀಕ

‌‘ಭೂ ವಿವಾದ ಶೀಘ್ರ ಇತ್ಯರ್ಥ’

‘ಮಸ್ಕಿ ಸರ್ಕಾರಿ ಆಸ್ಪತ್ರೆ ಭೂವಿವಾದವನ್ನು ಸರ್ಕಾರದ ಗಮನಕ್ಕೆ ಈಗಾಗಲೇ ತರಲಾಗಿದ್ದು ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಲಾಗಿದೆ’ ಎಂದು ಶಾಸಕ ಆರ್.ಬಸನಗೌಡ ತುರುವಿಹಾಳ ತಿಳಿಸಿದ್ದಾರೆ.  ‘ಜಿಲ್ಲಾಧಿಕಾರಿ ಹಾಗೂ ನಾವು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಿದ್ದೇವೆ. ಆದರೆ ಭೂಮಾಲೀಕರು ಪರಿಹಾರಕ್ಕೆ ಪಟ್ಟು ಹಿಡಿದಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಶೀಘ್ರದಲ್ಲೇ ಸರ್ಕಾರ ತೀರ್ಮಾನ ಕೈಗೊಂಡು ವಿವಾದ ಇತ್ಯರ್ಥಪಡಿಸಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT