ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾರಿಪುರ | ಡೆಂಗಿ ಪ್ರಕರಣ ಹೆಚ್ಚಳ: ಚಿಕಿತ್ಸೆಗಾಗಿ ರೋಗಿಗಳ ಪರದಾಟ

Published 18 ಜೂನ್ 2024, 15:29 IST
Last Updated 18 ಜೂನ್ 2024, 15:29 IST
ಅಕ್ಷರ ಗಾತ್ರ

ಶಿಕಾರಿಪುರ: ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಗಳು ಮುಗಿ ಬೀಳುತ್ತಿರುವ ದೃಶ್ಯ ಕಾಣಸಿಗುತ್ತಿದೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಸರ್ಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಾರ್ಡ್ ಸೇರಿ ಬಹುತೇಕ ವಾರ್ಡ್‌ಗಳಲ್ಲಿ ಡೆಂಗಿ ಸೇರಿದಂತೆ ಜ್ವರದ ಲಕ್ಷಣ ಹೊಂದಿರುವ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಆದರೆ, ದಾಖಲಾಗುವ ರೋಗಿಗಳಿಗೆ ಅಗತ್ಯ ಬೆಡ್‌ಗಳು ದೊರೆಯುತ್ತಿಲ್ಲ. ಬೆಡ್ ಇಲ್ಲದ ಕಾರಣ ಸಾರ್ವಜನಿಕರು ಓಡಾಡುವ ಜಾಗದಲ್ಲಿ, ನೆಲದಲ್ಲೇ ಬೆಡ್ ಹಾಕಿಕೊಂಡು ಚಿಕಿತ್ಸೆ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಶಿಕಾರಿಪುರ ತಾಲ್ಲೂಕಿನವರು ಅಲ್ಲದೇ ನೆರೆಯ ಹಿರೇಕೆರೂರು, ರಟ್ಟೀಹಳ್ಳಿ, ಸೊರಬ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ಚಿಕಿತ್ಸೆಗೆ ಬರುತ್ತಾರೆ. ಈ ಕಾರಣದಿಂದಲೂ ತಾಲ್ಲೂಕಿನ ರೋಗಿಗಳಿಗೆ ಬೆಡ್‌ಗಳ ಕೊರತೆ ಹಲವು ತಿಂಗಳುಗಳಿಂದ ಉಂಟಾಗುತ್ತಿದೆ.

ಆಸ್ಪತ್ರೆಯಲ್ಲಿ 150 ಬೆಡ್ ವ್ಯವಸ್ಥೆ ಇದೆ. ಮಳೆಗಾಲ ಆರಂಭವಾಗಿದ್ದರಿಂದ ಡೆಂಗಿ ಸೇರಿ ಇತರ ಜ್ವರದ ಪ್ರಕರಣಗಳು ಹೆಚ್ಚಾಗಿವೆ. ಆದಕಾರಣ ಕಳೆದ ವಾರ ರೋಗಿಗಳಿಗೆ ಬೆಡ್ ಸಮಸ್ಯೆ ಎದುರಾಗಿತ್ತು. ಒತ್ತಡವಿದ್ದರೂ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗುಣ ಮುಖರಾದವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೂ ಕಳಿಸಲಾಗುತ್ತಿದೆ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಅರುಣಕುಮಾರ್ ತಿಳಿಸಿದ್ದಾರೆ.

ನೂತನ ಕಟ್ಟಡ ಉದ್ಘಾಟನೆಯಾಗಲಿ

ಸರ್ಕಾರಿ ಆಸ್ಪತ್ರೆಯ ಹಿಂದಿದ್ದ ಹಳೇ ಕಟ್ಟಡ ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಇರುವ ಆಸ್ಪತ್ರೆಯ ಈ ಕಟ್ಟಡದಲ್ಲಿ ಸ್ಥಳಾವಕಾಶ ಇರುವಷ್ಟು ಮಾತ್ರ ಬೆಡ್‌ಗಳನ್ನು ಹಾಕಲಾಗಿದೆ. ಡೆಂಗಿ ಪ್ರಕರಣಗಳು ಹೆಚ್ಚಿರುವ ಸಂದರ್ಭದಲ್ಲಿ ಮಾತ್ರವಲ್ಲದೇ ಇತರೆ ದಿನಗಳಲ್ಲೂ ರೋಗಿಗಳು ನೆಲದ ಮೇಲೆ ಹಾಸಿಗೆ ಹಾಕಿಕೊಂಡು ಚಿಕಿತ್ಸೆ ಪಡೆಯುತ್ತಿರುವುದು ಸಾಮಾನ್ಯವಾಗಿದೆ. ಆಸ್ಪತ್ರೆ ನೂತನ ಕಟ್ಟಡದ ಕಾಮಗಾರಿ ಶೀಘ್ರ ಪೂರ್ಣಗೊಂಡು ಉದ್ಘಾಟನೆಯಾದರೆ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಡೆಂಗಿ ಪ್ರಕರಣಗಳು ಕಂಡುಬಂದಿದ್ದವು. ಆ ಗ್ರಾಮಗಳಲ್ಲಿ ಲಾರ್ವಾ ಸಮೀಕ್ಷೆ ಹಾಗೂ ಫಾಗಿಂಗ್ ಮಾಡಲಾಗಿದೆ. ಡೆಂಗಿ ನಿಯಂತ್ರಣಕ್ಕಾಗಿ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ನವೀದ್ ಖಾನ್, ತಾಲ್ಲೂಕು ವೈದ್ಯಾಧಿಕಾರಿ ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT