ಸೋಮವಾರ, 30 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ಶಿಥಿಲಾವಸ್ಥೆ ತಲುಪಿದ ಅಧಿಕಾರಿಗಳ ವಸತಿ ಗೃಹ

Published : 30 ಸೆಪ್ಟೆಂಬರ್ 2024, 7:05 IST
Last Updated : 30 ಸೆಪ್ಟೆಂಬರ್ 2024, 7:05 IST
ಫಾಲೋ ಮಾಡಿ
Comments

ಕುಣಿಗಲ್: ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಲೆಂದು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಅಧಿಕಾರಿಗಳ ವಸತಿ ಗೃಹಗಳು ಸಕಾಲದಲ್ಲಿ ಬಳಕೆ ಮತ್ತು ನಿರ್ವಹಣೆ ಮಾಡದ ಪರಿಣಾಮ ಶಿಥಲಾವಸ್ಥೆ ತಲುಪಿವೆ.

ತಾಲ್ಲೂಕು ಮಟ್ಟದ ಕೆಲವೇ ಕೆಲವು ಅಧಿಕಾರಿಗಳಿಗೆ ವಸತಿ ಸೌಲಭ್ಯ ಇದೆ. ಈ ವಸತಿ ಗೃಹಗಳು ಕಾಲಕ್ಕೆ ತಕ್ಕಂತೆ ಆಧುನಿಕರಣಗೊಂಡಿಲ್ಲ. ಸೂಕ್ತ ನಿರ್ವಹಣೆ ಇಲ್ಲವಾಗಿದೆ. ಹಾಗಾಗಿ ಅಧಿಕಾರಿಗಳು ಸರ್ಕಾರಿ ವಸತಿ ಗೃಹದಲ್ಲಿರಲು ಬಯಸದೆ ಬಾಡಿಗೆ ಮನೆಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿರುವ ಸಾರಿಗೆ ಸಂಸ್ಥೆ ಘಟಕಕ್ಕೆ ಹೊಂದಿಕೊಂಡಿರುವ ಘಟಕದ ವ್ಯವಸ್ಥಾಪಕರ ವಸತಿಗೃಹ ಹತ್ತು ವರ್ಷದಿಂದ ಬಳಕೆಯಾಗದೆ ಶಿಥಿಲಗೊಂಡಿದೆ. ಮನೆ ಮುಂದೆ ಗಿಡಗಂಟಿ ಬೆಳೆದು ಯಾರೂ ಪ್ರವೇಶಿಸದ ಸ್ಥಿತಿಗೆ ತಲುಪಿದೆ. ಮಲ, ಮೂತ್ರ ವಿಸರ್ಜನೆ ತಾಣವಾಗಿ ಪರಿವರ್ತನೆಯಾಗಿದೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯ ವಸತಿ ಗೃಹ ದಶಕಗಳಿಂದ ಬಳಕೆಯಾಗದೆ ಶಿಥಿಲವಾಗಿದೆ. ಸಿಬ್ಬಂದಿಗಳಿಗೆ ಇರುವ ಎಂಟು ವಸತಿ ಗೃಹಗಳು ಮೊದಲಿಗೆ ನ್ಯಾಯಾಧೀಶರು ಸೇರಿದಂತೆ ಬಿಡಿಒ, ವ್ಯವಸ್ಥಾಪಕರು, ಪಂಚಾಯಿತಿ ವಿಸ್ತರಣಾಧಿಕಾರಿಗಳು ಬಳಸುತ್ತಿದ್ದರು. ನಂತರದ ದಿನಗಳಲ್ಲಿ ಅಧಿಕಾರಿಗಳು ಬಳಕೆ ಮಾಡದ ಕಾರಣ ವಿವಿಧ ಇಲಾಖೆಗಳ ಕೆಳಹಂತದ ಸಿಬ್ಬಂದಿ ಸಣ್ಣ ಪುಟ್ಟ ದುರಸ್ತಿ ಮಾಡಿಕೊಂಡು ಬಳಸುತ್ತಿದ್ದಾರೆ.

ಕೃಷಿ ಇಲಾಖೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಸಿಬ್ಬಂದಿಗೆ ವಸತಿಗೃಹ ನಿರ್ಮಾಣವಾಗಿದೆ. ಮೊದಮೊದಲು ಅಧಿಕಾರಿ ಮತ್ತು ಸಿಬ್ಬಂದಿ ವಾಸಿಸುತ್ತಿದ್ದರು. ಕೆಲವು ವರ್ಷಗಳಿಂದ ಯಾರೂ ಬಳಕೆ ಮಾಡದ ಕಾರಣ ಶಿಥಿಲವಾಗಿವೆ. ಹಳೆ ಸಾಮಗ್ರಿ ಮತ್ತು ಇಲಾಖೆಗೆ ಬೇಡವಾದ ವಸ್ತುಗಳನ್ನು ಇಡುವ ಗೋದಾಮಾಗಿ ಪರಿವರ್ತನೆಯಾಗಿದೆ.

ಸಾಮಾಜಿಕ ವಲಯ ಅರಣ್ಯಾಧಿಕಾರಿಗಾಗಿ ನಿರ್ಮಿಸಿದ್ದ ನೂತನ ವಸತಿ ಗೃಹ ಕಚೇರಿಯಾಗಿ ಬದಲಾಗಿದೆ. ತಹಶೀಲ್ದಾರ್ ವಸತಿ ಗೃಹ ಸಹ ಹಲವು ಬಾರಿ ದುರಸ್ತಿ ಕಂಡಿದ್ದರೂ, ಮಳೆಗೆ ಸೋರುತ್ತಿದೆ. ತಹಶೀಲ್ದಾರ್ ರಶ್ಮಿ ಸದ್ಯ ಎಡೆಯೂರು ದೇವಾಲಯದ ವಸತಿಗೃಹದಿಂದಲೇ ಕೇಂದ್ರ ಸ್ಥಾನಕ್ಕೆ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ.

ಪೊಲೀಸ್‌ ಅಧಿಕಾರಿ, ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣಕ್ಕೆ ನಿವೇಶನಗಳಿದ್ದರೂ ಕಟ್ಟಡಗಳ ನಿರ್ಮಾಣಕ್ಕೆ ಕ್ರಮಕೈಗೊಂಡಿಲ್ಲ. ಡಿವೈಎಸ್‌ಪಿ ಕಚೇರಿ ಮತ್ತು ವಸತಿಗೃಹ ನಿರ್ಮಾಣಕ್ಕೆ ಪಟ್ಟಣದ ಹೊರವಲಯ ಹಳೆ ರಾಷ್ಟ್ರೀಯ ಹೆದ್ದಾರಿ 48ರ ನೀಲತ್ತಹಳ್ಳಿ ತಿರುವು ಬಳಿ ನಿವೇಶವನ್ನು ಮೀಸಲಿಟ್ಟು ಎರಡು ದಶಕ ಕಳೆದಿದ್ದರೂ ಕಚೇರಿ ಮತ್ತು ವಸತಿಗೃಹ ನಿರ್ಮಾಣಕ್ಕೆ ಇನ್ನೂ ಚಾಲನೆ ನೀಡಿಲ್ಲ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಯ ವಸತಿ ಗೃಹ
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಯ ವಸತಿ ಗೃಹ

ಪುರಸಭೆ ಹಿಂಬಾಗದಲ್ಲಿದ್ದ ವಸತಿ ಗೃಹಗಳನ್ನು ತೆರವುಗೊಳಿಸಿ ಹತ್ತಾರು ವರ್ಷ ಕಳೆದಿವೆ. ಅಂದಾನಯ್ಯ ಬಡಾವಣೆ ಮತ್ತು ಪೊಲೀಸ್ ಠಾಣೆ ಹಿಂಬಾಗದಲ್ಲಿ ಹಳೆ ವಸತಿ ಗೃಹಗಳನ್ನು ಕೆಡವಿ ತಲಾ 12 ಮನೆಗಳ ಎರಡು ವಸತಿ ಸಮುಚ್ಛಯ ನಿರ್ಮಾಣವಾಗಿದೆ. ಉಳಿದ ಜಾಗದಲ್ಲೂ ವಸತಿ ಗೃಹಗಳನ್ನು ನಿರ್ಮಿಸಲು ಅವಕಾಶಗಳಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕಿದೆ.

ಅಧಿಕಾರಿಗಳ ವಸತಿ ಗೃಹಗಳು ನಿರ್ವಹಣೆ ಇಲ್ಲದೆ ಅಧೋಗತಿ ತಲುಪಿವೆ. ಸಾರ್ವಜನಿಕರ ತೆರಿಗೆ ಹಣ ಮತ್ತೂ ಸರ್ಕಾರಿ ಅನುದಾನ ವ್ಯರ್ಥವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು
ವೈ.ಎಚ್.ರವಿಚಂದ್ರ ಕುಣಿಗಲ್ ಅಭಿವೃದ್ಧಿ ಫೋರಂ ಅಧ್ಯಕ್ಷ
ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಅಧಿಕಾರಿಗಳಿಗೆ ಕಚೇರಿ ಸಮೀಪವೇ ವಸತಿಗೃಹ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಿಥಿಲವಾಗಿವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನೂತನ ವಸತಿ ಗೃಹ ನಿರ್ಮಿಸಲಿ
ರಾಮಕೃಷ್ಣ, ಮಡಕೆಹಳ್ಳಿ
ಸರ್ಕಾರ ಅಧಿಕಾರಿಗಳಿಗೆ ಅಗತ್ಯ ಸೌಕರ್ಯ ನೀಡುತ್ತಿದ್ದು ಅವುಗಳ ಬಳಕೆಗೆ ಗಮನಹರಿಸಬೇಕು. ಸುಂದರ ಪರಿಸರದಲ್ಲಿ ಕೆಲಸ ಮಾಡುವುದು ಆರೋಗ್ಯಕರ ಬೆಳವಣಿಗೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಿದೆ
ಮಾರುತಿ ಎಲ್ಲೆಗೌಡ ನಿರ್ದೇಶಕ ಟೌನ್ ಸೊಸೈಟಿ ಕುಣಿಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT