ತುಮಕೂರು: ‘ಹೋಯ್ತು ಜೀವ ಅನ್ಕೊಂಡೆ, ಪುಣ್ಯಕ್ಕೆ ಬಂಡೆಯ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಕ್ಕೆ ಪ್ರಾಣ ಉಳಿಯಿತು. ಯಾರಾದರೂ ಬಂದು ಕಾಪಾಡ್ತಾರೆ ಅನ್ನೋ ನಂಬಿಕೆ ಇತ್ತು’....

ತಾಲ್ಲೂಕಿನ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಹಂಸಾ ಎಸ್.ಗೌಡ (20) ಹೀಗೆ ಹೇಳುತ್ತಾ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಮಂದರಗಿರಿ ಬೆಟ್ಟದ ಹಿಂಭಾಗದ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಭಾನುವಾರ ಸಂಜೆ ಫೋಟೊ ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು, ಕೊಚ್ಚಿಕೊಂಡು ಹೋಗಿದ್ದರು. ಕೋಡಿಯಿಂದ 15ರಿಂದ 20 ಅಡಿ ಆಳದಲ್ಲಿರುವ ಬಂಡೆಯ ಮಧ್ಯೆ ಸಿಕ್ಕಿಹಾಕಿಕೊಂಡಿದ್ದರು. ಅಗ್ನಿ ಶಾಮಕ ದಳದ ನಿರಂತರ ಕಾರ್ಯಾಚರಣೆಯು ವಿದ್ಯಾರ್ಥಿನಿಯ ಜೀವ ಉಳಿಸಿದೆ. 20 ಗಂಟೆಗಳ ನಂತರ ಜೀವಂತವಾಗಿ ರಕ್ಷಿಸಿದ್ದಾರೆ.

ರಭಸವಾಗಿ ಹರಿಯುವ ನೀರು, ಬೃಹತ್ ಆಕಾರದ ಬಂಡೆಗಳ ಮಧ್ಯೆ ಒಬ್ಬಂಟಿಯಾಗಿ ಇಡೀ ರಾತ್ರಿ ಕಳೆದ ಹಂಸಾ ಆರೋಗ್ಯವಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದರು.

‘ಮುಂದೆ, ಹಿಂದೆ ಸುತ್ತ ಬಂಡೆಗಳಿದ್ದವು, ಕಾಲು ಕೆಳಗೆ ನೀರು ಹರಿಯುತ್ತಿತ್ತು. ಇಡೀ ರಾತ್ರಿ ಮಂಡಿಯೂರಿ ಕೂತಿದ್ದೆ. ಒಂದು ಕಡೆ ಮಾತ್ರ ಗಾಳಿಯಾಡುತ್ತಿತ್ತು. ಉಸಿರಾಟಕ್ಕೆ ಅವಕಾಶ ಇತ್ತು. ಬೆಳಿಗ್ಗೆ ಒಂದು ಟಾರ್ಚ್ ಬೆಳಕು ಕಾಣಿಸಿತು. ಆಗ ಬದುಕ್ತೀನಿ ಎಂಬ ನಂಬಿಕೆ ಮೂಡಿತು. ಫೋಟೊ ತಗೋಬೇಕಾದರೆ ಕಾಲು ಜಾರಿತು. ಅಷ್ಟೊಂದು ಆಳ ಇದೆ ಅಂತ ಗೊತ್ತಿರಲಿಲ್ಲ. ನನಗೆ ಈಜು ಬೇರೆ ಬರಲ್ಲ’ ಎಂದು ಘಟನೆಯ ಬಗ್ಗೆ ನೆನೆದು ಒಮ್ಮೆ ಬೆಚ್ಚಿ ಬಿದ್ದರು.

‘ಜೋರಾಗಿ ಕೂಗಿಕೊಂಡರೂ ಯಾರಿಗೂ ಕೇಳಿಸಲಿಲ್ಲ. ಆಗ ನಾನು ತುಂಬಾ ದೂರ ಬಂದಿದ್ದೇನೆ ಅನ್ನಿಸಿತು. ಆತ್ಮಸ್ಥೈರ್ಯ ಕಳೆದುಕೊಳ್ಳದೆ ಒಂದೇ ಕಡೆ ಇಡೀ ರಾತ್ರಿ ಕೂತಿದ್ದೆ. ದೇವರು ದೊಡ್ಡವನು, ಅಪ್ಪ, ಅಮ್ಮನ ಪುಣ್ಯ ನನ್ನನ್ನು ಉಳಿಸಿತು’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.

ರಭಸವಾಗಿ ಹರಿಯುತ್ತಿದ್ದ ನೀರು ರಕ್ಷಣಾ ಕಾರ್ಯಕ್ಕೆ ತೊಡಕಾಯಿತು. ಅಗ್ನಿ ಶಾಮಕ ದಳದ ಸಿಬ್ಬಂದಿ ನೀರು ಹರಿಯುವ ಜಾಗದಲ್ಲಿ ಮರಳಿನ ಮೂಟೆ ಹಾಕಿ ಮತ್ತೊಂದು ಮಾರ್ಗದಲ್ಲಿ ನೀರು ಹರಿಯಲು ಬಿಟ್ಟರು. ಇದು ಕಾರ್ಯಾಚರಣೆಗೆ ನೆರವಾಯಿತು. ಸ್ಥಳದಲ್ಲಿ ನೆರೆದಿದ್ದ ಎಲ್ಲರು ಮರಳಿನ ಚೀಲ ಹೊತ್ತು ನೀರಿಗೆ ಅಡ್ಡ ಹಾಕಿದರು. ನಂತರ ರಕ್ಷಣಾ ಕಾರ್ಯ ಚುರುಕು ಪಡೆಯಿತು.

‘ಹಂಸಾ ಇದ್ದಲಿಗೆ ಹೋಗಲು ಉಸಿರು ಕಟ್ಟಿಕೊಂಡು ನೀರಿನಲ್ಲಿ ಸಾಗಬೇಕಿತ್ತು. ಅಗ್ನಿ ಶಾಮಕ ದಳದ ಸಿಬ್ಬಂದಿ ತಮ್ಮ ಪ್ರಾಣ ಒತ್ತೆ ಇಟ್ಟು ಗುಹೆಯ ಒಳಗೆ ಹೋದರು. ನೀರಿನ ಒಂದು ಭಾಗದಲ್ಲಿ ನಿಂತು ಜೋರಾಗಿ ಕೂಗಿದರು. ಅದಕ್ಕೆ ಪ್ರತಿಯಾಗಿ ಹಂಸಾ ಸಹ ಧ್ವನಿಗೂಡಿಸಿದರು. ಇದು ಸಿಬ್ಬಂದಿಯ ಧೈರ್ಯ ಹೆಚ್ಚಿಸಿತು. ತಮ್ಮ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದರು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ರಕ್ಷಣಾ ಕಾರ್ಯಾಚರಣೆ ಶೈಲಿ ಬಿಚ್ಚಿಟ್ಟರು.

ಫಲಿಸಿದ ಪ್ರಾರ್ಥನೆ

‘ಅಂಕಲ್ ಅವಳು ಎಲ್ಲಿಗೂ ಹೋಗಲ್ಲ ಬರ್ತಾಳೆ.. ನೀವು ಹೀಗಾದ್ರೆ ಅವಳ ಮನಸ್ಸಿಗೆ ಏನು ಅನ್ನಿಸಬೇಡ’ ಎಂದು ಹಂಸಾ ಗೆಳತಿಯರು ಹಂಸಾ ತಂದೆ ಸೋಮನಾಥಯ್ಯ ಅವರನ್ನು ಸಮಾಧಾನ ಪಡಿಸುತ್ತಾ ಉಣಬಡಿಸುತ್ತಿದ್ದ ದೃಶ್ಯ ನೆರೆದವರ ಕಣ್ಣಾಲಿಗಳಲ್ಲಿ ನೀರು ಜಿನುಗಿಸಿತು. ಪೋಷಕರು ಸ್ನೇಹಿತರು ಸಂಬಂಧಿಕರ ಪ್ರಾರ್ಥನೆ ಫಲಿಸಿತು. ಹಂಸಾ ಜೀವಂತವಾಗಿ ಮರಳಿದರು. ಹಂಸಾ ಕೊಚ್ಚಿಕೊಂಡು ಹೋದ ವಿಷಯ ತಿಳಿಯುತ್ತಿದ್ದಂತೆ ಗೆಳತಿಯರ ದಂಡು ಕೆರೆಯತ್ತ ಬಂದಿತ್ತು. ಅವರ ತಂದೆ ಸೋಮನಾಥಯ್ಯ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇಡೀ ರಾತ್ರಿ ಕೆರೆಯ ಹತ್ತಿರ ಜಾಗರಣೆ ಮಾಡಿದರು. ‘ಇನ್ನು ಯಾವ ಖುಷಿಗೆ ನಾವು ಬದುಕಬೇಕು’ ಎಂದು ಆಸೆ ಬಿಟ್ಟು ಕೂತಿದ್ದ ತಂದೆ ಮಗಳನ್ನು ಕಂಡು ಕಣ್ಣೀರಾದರು. ಎಲ್ಲರು ಹಂಸಾ ಜೀವಂತವಾಗಿ ಬರುತ್ತಾಳೆ ಎಂಬ ನಂಬಿಕೆಯನ್ನು ಕೈಚೆಲ್ಲಿ ಕುಳಿತಿದ್ದರು. ಪವಾಡ ಸದೃಶ್ಯ ಎಂಬಂತೆ ಸಾವಿನಿಂದ ಪರಾಗಿದ್ದಾರೆ. ಪುನರ್ ಜನ್ಮ ಪಡೆದಿದ್ದಾರೆ.

ಅಗ್ನಿ ಶಾಮಕ ದಳದ ಕಾರ್ಯಕ್ಕೆ ಮೆಚ್ಚುಗೆ

ಭಾನುವಾರ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8ರ ವರೆಗೆ ಅಗ್ನಿ ಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಕತ್ತಲಾದ ನಂತರ ಹುಡುಕಾಟ ಸ್ಥಗಿತಗೊಳಿಸಿ ಸೋಮವಾರ ಬೆಳಿಗ್ಗೆ 7 ಗಂಟೆಯಿಂದ ಮತ್ತೆ ಆರಂಭಿಸಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ವಿದ್ಯಾರ್ಥಿನಿಯನ್ನು ರಕ್ಷಿಸಿದರು. ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ್ ನೇತೃತ್ವದ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಜೀವದ ಹಂಗು ತೊರೆದು ರಭಸವಾಗಿ ಹರಿಯುವ ನೀರಿನಲ್ಲಿ ಹುಡುಕಾಟ ಮುಂದುವರಿಸಿದ್ದರು. ಸತತ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿದ್ಯಾರ್ಥಿನಿಯನ್ನು ಜೀವಂತವಾಗಿ ರಕ್ಷಿಸಿ ಹೊರ ತರುತ್ತಿದ್ದಂತೆ ಸ್ಥಳದಲ್ಲಿದ್ದವರು ಸಿಳ್ಳೆ ಚಪ್ಪಾಳೆಯೊಂದಿಗೆ ಸಿಬ್ಬಂದಿಯನ್ನು ಅಭಿನಂದಿಸಿದರು.

ಪ್ರವೇಶ ನಿರ್ಬಂಧ

ಮೈದಾಳ ಕೆರೆ ಕೋಡಿ ಬಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುಂದೆ ಇಂತಹ ಅನಾಹುತ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಇಂತಹ ಒಂದು ಸಾವಿರ ಕೆರೆಗಳಿವೆ. ಎಲ್ಲ ಕಡೆ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಶಾಲಾ– ಕಾಲೇಜು ವಿದ್ಯಾರ್ಥಿಗಳು ನಿಷೇಧಿತ ಪ್ರದೇಶಗಳಿಗೆ ಹೋಗದಂತೆ ಪೋಷಕರು ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಶೌರ್ಯ ಪದಕಕ್ಕೆ ಆಗ್ರಹ

ತುಮಕೂರು: ತಾಲ್ಲೂಕಿನ ಮೈದಾಳ ಕೆರೆಯ ಕೋಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ವಿದ್ಯಾರ್ಥಿನಿ ಹಂಸಾ ಅವರನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಶೌರ್ಯ ಪದಕ ನೀಡಬೇಕು ಎಂದು ಶಾಸಕ ಬಿ.ಸುರೇಶ್ಗೌಡ ಒತ್ತಾಯಿಸಿದರು. ನಗರದಲ್ಲಿ ಸೋಮವಾರ ಅಗ್ನಿ ಶಾಮಕ ಠಾಣೆಗೆ ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದರು.

‘ಸಿಬ್ಬಂದಿ ಆಮ್ಲಜನಕದ ಸಹಾಯವಿಲ್ಲದೆ ತಮ್ಮ ಪ್ರಾಣ ಪಣಕ್ಕಿಟ್ಟು ಸಾಹಸ ಮೆರೆದಿದ್ದಾರೆ. ಮತ್ತೊಂದು ಜೀವ ಉಳಿಸಿದ್ದಾರೆ. ಇದು ಅದ್ಭುತವಾದ ಕರ್ತವ್ಯ ಪ್ರಜ್ಞೆ. ಮಕ್ಕಳು ಅಪಾಯಕಾರಿ ಸ್ಥಳಗಳಿಗೆ ಹೋಗಿ ರೀಲ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬಾರದು’ ಎಂದು ಮನವಿ ಮಾಡಿದರು.

ಪೋಷಕರು ತಮ್ಮ ಮಕ್ಕಳು ಇಂತಹ ಕಡೆ ಹೋಗಲು ಬಿಡಬಾರದು. ಕಾಲೇಜಿನ ಆಡಳಿತ ವರ್ಗದವರು ತಿಳಿ ಹೇಳಬೇಕು. ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಸಿಬ್ಬಂದಿಗೆ ಶೌರ್ಯ ಪದಕ ನೀಡಲು ಜಿಲ್ಲಾ ಆಡಳಿತ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದರು.

ಮುಖಂಡರಾದ ಕಾಂತರಾಜು, ಶಿವಕುಮಾರ್, ಗೋಪಾಲ್, ಮಂಜುನಾಥ್, ಶೇಷಕುಮಾರ್ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.