ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆಗಳು

ದುರಸ್ತಿಗೆ ಕಾದಿವೆ 2,663 ಕೊಠಡಿಗಳು, ಗಾಢ ನಿದ್ರೆಗೆ ಜಾರಿದ ಅಧಿಕಾರಿಗಳು
ಮೈಲಾರಿ ಲಿಂಗಪ್ಪ
Published 19 ಜೂನ್ 2024, 6:35 IST
Last Updated 19 ಜೂನ್ 2024, 6:35 IST
ಅಕ್ಷರ ಗಾತ್ರ

ತುಮಕೂರು: ಮಳೆ ಬಂದರೆ ಸೋರುವ ಕಟ್ಟಡ, ಸಾಮಗ್ರಿ ದಾಸ್ತಾನು ಕೊಠಡಿ ಮತ್ತು ವರಾಂಡದಲ್ಲೇ ಮಕ್ಕಳಿಗೆ ಪಾಠ, ಶೌಚಾಲಯಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರ ಪರದಾಟ...

ಈ ದೃಶ್ಯ ಕಂಡು ಬಂದಿದ್ದು, ಯಾವುದೋ ಕುಗ್ರಾಮದಲ್ಲಿ ಅಲ್ಲ! ಬದಲಾಗಿ ಸ್ಮಾರ್ಟ್ ಸಿಟಿ ಎಂದು ಕರೆಸಿಕೊಳ್ಳುವ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ. ಇಲ್ಲಿ 1ರಿಂದ 7ನೇ ತರಗತಿ ವರೆಗೆ 142 ಮಕ್ಕಳು ಓದುತ್ತಿದ್ದಾರೆ. ಆದರೆ, ಅವರ ಕಲಿಕೆಗೆ ಅಗತ್ಯವಾಗಿ ಬೇಕಾದ ಕೊಠಡಿಗಳೇ ಇಲ್ಲ. ಕೇವಲ 3 ಕೊಠಡಿಗಳಲ್ಲಿ ಇಷ್ಟು ಮಕ್ಕಳ ಕಲಿಕೆ ಸಾಗಿದೆ. ಆಟಕ್ಕೆ ಬೇಕಾದ ಮೈದಾನದ ಸೌಲಭ್ಯವೂ ಇಲ್ಲ. ಮಳೆ ಸುರಿದರೆ ಪಾಠ, ಆಟ ಎರಡೂ ಬಂದ್‌!

ಶಾಲೆಯಲ್ಲಿ ಮಕ್ಕಳು ಕುಳಿತುಕೊಂಡು ಊಟ ಮಾಡಲು ವ್ಯವಸ್ಥೆ ಇಲ್ಲ. ಆಟ, ಪಾಠ, ಊಟ ಎಲ್ಲವೂ ಒಂದೇ ಕಡೆಯಾಗುತ್ತಿದೆ. ಮಧುಗಿರಿ– ತುಮಕೂರು ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಶಾಲೆ ಅಧಿಕಾರಿಗಳ ಕಣ್ಣಿಗೆ ಕಾಣಿಸಿದಂತಿಲ್ಲ. 1965ರಲ್ಲಿ ಶುರುವಾದ ಶಾಲೆಯ ಸ್ಥಳ ಇದುವರೆಗೆ ಖಾತೆಯಾಗಿಲ್ಲ. ಶಾಲೆಯ ಹೆಸರಿಗೆ ಖಾತೆ ಮಾಡಿಸಿಕೊಳ್ಳುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಅದು ಸಾಧ್ಯವಾಗಿಲ್ಲ.

ಈ ಶಾಲೆಗೆ ಅಂತರಸನಹಳ್ಳಿಯ ಆಂಜನೇಯ ದೇವಸ್ಥಾನದ ಬಳಿ ಹೊಸದಾಗಿ ನಾಲ್ಕು ವಿವೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ಕೊಠಡಿಗಳಿಗೆ ₹41.70 ಲಕ್ಷ ಖರ್ಚು ಮಾಡಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದಾಗ ಇವುಗಳಿಗೆ ಚಾಲನೆ ನೀಡಲಾಗಿತ್ತು. ಕೊಠಡಿ ಉದ್ಘಾಟಿಸಿದ್ದು ಬಿಟ್ಟರೆ ಬೇರೆ ಯಾವುದೇ ಬೆಳವಣಿಗೆ ಕಂಡಿಲ್ಲ. ಶಾಲೆ ಸ್ಥಳಾಂತರವಾಗಿಲ್ಲ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಶಾಲೆಯಲ್ಲಿ ಕನಿಷ್ಠ ಒಂದು ಶೌಚಾಲಯ ಇಲ್ಲ, ನೀರಿನ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಕಟ್ಟಡ ಇದ್ದರೂ ಸ್ಥಳಾಂತರಿಸಲು ಹಿಂದೇಟು ಹಾಕುತ್ತಿದ್ದಾರೆ. ಇತ್ತ ಮಕ್ಕಳು ಹಳೆಯ ಶಾಲೆಯಲ್ಲಿ ಬಿಸಿಲು–ಮಳೆಗೆ ಬಳಲುತ್ತಿದ್ದಾರೆ.

‘ಶಾಸಕರು, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ದಾರೆ. ಈಗಾಗಲೇ ಹಲವು ಸರ್ಕಾರಿ ಶಾಲೆಗಳನ್ನು ಮಕ್ಕಳಿಲ್ಲದೆ ಮುಚ್ಚಲಾಗುತ್ತಿದೆ. ಅಧಿಕಾರಿಗಳು ಈಗಿರುವ ಶಾಲೆಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಸರ್ಕಾರದ ಶಾಲೆ ಬಗ್ಗೆ ಕಾಳಜಿಯೇ ಇಲ್ಲ’ ಎಂದು ಅಂತರಸನಹಳ್ಳಿಯ ರಾಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಶಿಥಿಲಾವಸ್ಥೆಗೆ ತಲುಪಿದ ಕೊಠಡಿಗಳು

ತಾಲ್ಲೂಕು;ಕೊಠಡಿ

ಚಿಕ್ಕನಾಯನಕಹಳ್ಳಿ;216

ಗುಬ್ಬಿ;172

ಕುಣಿಗಲ್‌;275

ತಿಪಟೂರು;77

ತುಮಕೂರು;312

ತುರುವೇಕೆರೆ;167

ಕೊರಟಗೆರೆ;239

ಮಧುಗಿರಿ;283

ಪಾವಗಡ;344

ಶಿರಾ;578

ಒಟ್ಟು;2,663

ತುಮಕೂರಿನ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೊಠಡಿಯ ಹೊರಗಡೆ ಕುಳಿತು ಮಕ್ಕಳು ಪಾಠ ಕೇಳುತ್ತಿರುವುದು
ತುಮಕೂರಿನ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೊಠಡಿಯ ಹೊರಗಡೆ ಕುಳಿತು ಮಕ್ಕಳು ಪಾಠ ಕೇಳುತ್ತಿರುವುದು
ತುಮಕೂರಿನ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡದ ಸ್ಥಿತಿ
ತುಮಕೂರಿನ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕಟ್ಟಡದ ಸ್ಥಿತಿ

ಜಿಲ್ಲೆಯಲ್ಲಿ 12,637 ಶಾಲಾ ಕೊಠಡಿಗಳು ತುಮಕೂರಿನಲ್ಲಿ 312 ಕೊಠಡಿ ಶಿಥಿಲಾವಸ್ಥೆಗೆ ಶಾಲೆಗಳ ಅಭಿವೃದ್ಧಿಗೆ ಅಧಿಕಾರಿಗಳು ನಿರ್ಲಕ್ಷ್ಯ

ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹೊಸ ಕಟ್ಟಡದಲ್ಲಿ ನೀರು ಶೌಚಾಲಯ ಅಗತ್ಯ ಸೌಲಭ್ಯ ಕಲ್ಪಿಸಿದರೆ ಶಾಲೆ ಸ್ಥಳಾಂತರಿಸಲಾಗುವುದು.

-ರತ್ನಮ್ಮ ಮುಖ್ಯೋಪಾಧ್ಯಾಯರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅಂತರಸನಹಳ್ಳಿ

ಶೇ 30ರಷ್ಟು ಕೊಠಡಿಗಳು ಶಿಥಿಲಾವಸ್ಥೆಗೆ

ಜಿಲ್ಲೆಯ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳ ಸಮಸ್ಯೆ ಇದೆ. ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಶೇ 30ರಷ್ಟು ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಒಟ್ಟು ಕೊಠಡಿಗಳ ಪೈಕಿ ಶೇ 32ರಷ್ಟು ಹಾಳಾಗಿವೆ. ಶಿಕ್ಷಕರು ಜೀವ ಕೈಯಲ್ಲಿಡಿದು ಪಾಠ ಮಾಡಿದರೆ ಮಕ್ಕಳು ಆತಂಕದಲ್ಲಿಯೇ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 2663 ಕೊಠಡಿಗಳು ದುರಸ್ತಿಯಾಗಬೇಕಿದೆ. ಇದರಲ್ಲಿ ಮಕ್ಕಳು ಕಲಿಕೆಗಾಗಿ ಮೊದಲ ಹೆಜ್ಜೆ ಇಡುವ ಪ್ರಾಥಮಿಕ ಶಾಲಾ ಕೊಠಡಿಗಳೇ ಹೆಚ್ಚಿವೆ. 1456 ಪ್ರಾಥಮಿಕ ಶಾಲಾ ಕೊಠಡಿಗಳು ಮಕ್ಕಳ ಕಲಿಕೆಗೆ ಯೋಗ್ಯವಾಗಿಲ್ಲ. ತುಮಕೂರು ತಾಲ್ಲೂಕಿನಲ್ಲಿಯೇ 312 ಕೊಠಡಿಗಳು ದುಸ್ಥಿತಿಯಲ್ಲಿವೆ.

ತೆವಳುತ್ತಾ ಸಾಗಿದ ವಿವೇಕ ಯೋಜನೆ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ವಿವೇಕ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಮಧುಗಿರಿ ಮತ್ತು ತುಮಕೂರು ಶೈಕ್ಷಣಿಕ ಜಿಲ್ಲೆಗೆ ಒಟ್ಟು 360 ವಿವೇಕ ಕೊಠಡಿಗಳು ಮಂಜೂರಾಗಿದ್ದು ಇದುವರೆಗೆ 234 ಕೊಠಡಿಗಳನ್ನು ಮಕ್ಕಳ ಬಳಕೆಗೆ ನೀಡಲಾಗಿದೆ. ಇನ್ನೂ 26 ಕೊಠಡಿಗಳ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ. 100 ಕೊಠಡಿಗಳು ಪ್ರಗತಿಯ ಹಂತದಲ್ಲಿದ್ದು ಕಾಮಗಾರಿ ಕುಂಟುತ್ತಾ ಸಾಗುತ್ತಿದೆ.

ಕಟ್ಟಡ ಪೂರ್ತಿ ಸೋರುತ್ತದೆ

ಮಳೆ ಬಂದರೆ ವರಾಂಡದಲ್ಲಿ ಕೂಡ ನೀರು ನಿಲ್ಲುತ್ತದೆ. ನೀರು ಹೋಗಲು ವ್ಯವಸ್ಥೆ ಇಲ್ಲ. ಮಳೆ ಸುರಿದರೆ ನೆಲದ ಮೇಲೆ ಕೂರಲು ಸಹ ಆಗುವುದಿಲ್ಲ. ಇಡೀ ಕಟ್ಟಡ ಸೋರುತ್ತದೆ. ನೀರು ನಿಲ್ಲುವುದರಿಂದ ಸರಿಯಾಗಿ ತರಗತಿ ನಡೆಯುವುದಿಲ್ಲ. ಶಿವಶಂಕರ್ ವಿದ್ಯಾರ್ಥಿ ಶೌಚಾಲಯ ಸ್ವಚ್ಛವಾಗಿರಲ್ಲ ಇರೋದು ಮೂರೇ ಕೊಠಡಿ. ಮಳೆ ಬಂದರೆ ಎಲ್ಲರೂ ಒಂದೇ ಕಡೆ ನಿಂತುಕೊಂಡಿರಬೇಕು. ಕುಳಿತುಕೊಳ್ಳಲು ಆಗುವುದಿಲ್ಲ. ಶಾಲೆಯ ಶೌಚಾಲಯವೂ ಸ್ವಚ್ಛವಾಗಿರಲ್ಲ. ತುಂಬಾ ಸಮಸ್ಯೆಯಾಗುತ್ತದೆ. ಸಚಿನ್ ವಿದ್ಯಾರ್ಥಿ ಪ್ರಯೋಜನಕ್ಕೆ ಬಾರದ ಕಟ್ಟಡ ಶಾಲೆಗೆ ಹೊಸ ಕಟ್ಟಡ ಇದ್ದರೂ ಮಕ್ಕಳ ಬಳಕೆಗೆ ಬೇಕಾದ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಇದರಿಂದ ಶಾಲೆಯ ಸ್ಥಳಾಂತರ ಸಾಧ್ಯವಾಗಿಲ್ಲ. ಉತ್ತಮ ಕಟ್ಟಡ ಇದ್ದರೂ ಯಾರಿಗೂ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಿದ್ದೇಶ್ ಪ್ರಸಾದ್ ಅಂತರಸನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT