ಉಡುಪಿ: ಹೊಂಡಮಯ ರಸ್ತೆ, ಎಲ್ಲೆಂದರಲ್ಲಿ ಕಸದ ರಾಶಿ, ನೈರ್ಮಲ್ಯವಿಲ್ಲದ ಪರಿಸರ, ಕೆಲವೆಡೆ ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ....

ಇದು ನಗರದ ಆದಿ ಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಅವ್ಯವಸ್ಥೆ. ಇಂತಹ ಪರಿಸರದಲ್ಲೇ ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ಇಲ್ಲಿನ ವರ್ತಕರದ್ದು.

ಎಪಿಎಂಸಿ ಪ್ರಾಂಗಣದ ರಸ್ತೆಯನ್ನು ದುರಸ್ತಿಗೊಳಿಸಿ, ಮೂಲಸೌಕರ್ಯಕ್ಕೆ ಒತ್ತು ನೀಡಿ ಎಂದು ಪದೇ ಪದೇ ಅಧಿಕಾರಿಗಳನ್ನು ಒತ್ತಾಯಿಸಿದರೂ ಪರಿಸ್ಥಿತಿ ಸುಧಾರಣೆಯಾಗಿಲ್ಲ ಎಂದು ದೂರುತ್ತಾರೆ ವರ್ತಕರು.

ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ ಕೂಡ ಇಲ್ಲ. ವಾರದ ಸಂತೆಯಂದು ಮಳೆ ಬಂದರೆ ಮಳೆ ನೀರಲ್ಲಿಯೇ ಕುಳಿತು ತರಕಾರಿ ಮಾರಾಟ ಮಾಡಬೇಕಾಗುತ್ತದೆ. ಮಳೆ ನೀರಿನ ಜೊತೆ ಚರಂಡಿ ನೀರೂ ಹರಿದು ಬರುವುದರಿಂದ ರೋಗ ಭೀತಿ ಕಾಡುತ್ತಿದೆ. ಗ್ರಾಹಕರು ನಮ್ಮನ್ನೇ ಬೈಯುತ್ತಾರೆ ಎಂದು ಕೆಲವು ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಾರೆ.

ಎಪಿಎಂಸಿ ಪ್ರಾಂಗಣದೊಳಗಿನ ಜಾಗವನ್ನು ಮಾರಾಟ (ಲೀಸ್ ಕಂ ಸೇಲ್) ಮಾಡಿರುವುದೂ ಕೂಡ ವಿವಾದ ರೂಪ ಪಡೆದಿದ್ದು, ಈ ಜಾಗವನ್ನು ಅನರ್ಹರಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ವರ್ತಕರು ಹಲವು ದಿನಗಳ ಕಾಲ ತಾವು ವ್ಯಾಪಾರ ನಡೆಸುವ ಸ್ಥಳದಲ್ಲಿ ಕಪ್ಪು ಬಾವುಟ ಕಟ್ಟಿ ತರಕಾರಿ ಮಾರಾಟ ಮಾಡಿದ್ದಾರೆ.

ಎಷ್ಟು ಪ್ರತಿಭಟನೆ ನಡೆಸಿದರೂ ತಮ್ಮ ಬೇಡಿಕೆಗಳು ಈಡೇರುತ್ತಿಲ್ಲ ಎಂದು ಇಲ್ಲಿನ ವರ್ತಕರು ದೂರುತ್ತಾರೆ. ಎಪಿಎಂಸಿಯಲ್ಲಿ 25–30 ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದವರಿಗೆ ನಿವೇಶನ ನೀಡದೆ ಅನರ್ಹರಿಗೆ ನೀಡಲಾಗಿದೆ ಎಂಬುದು ಕೆಲ ವರ್ತಕರ ಗಂಭೀರ ಆರೋಪವಾಗಿದೆ.

ವರ್ತಕರ ಶೆಡ್ಗಳಿರುವ ಜಾಗವನ್ನು ಈಚೆಗೆ ಅಧಿಕಾರಿಗಳು ಸಮೀಕ್ಷೆ ಮಾಡಲು ಮುಂದಾದಾಗ ಕೆಲ ವರ್ತಕರು ನೆಲದಲ್ಲಿ ಹೊರಳಾಡಿ ಪ್ರತಿಭಟನೆ ನಡೆಸಿದ್ದರು. ಹಲವು ರಾಜಕಾರಣಿಗಳು ಕೂಡ ವರ್ತಕರಿಗೆ ಬೆಂಬಲ ಸೂಚಿಸಿದ್ದರು.

‘ಅಭಿವೃದ್ಧಿ ಕಾರ್ಯ ನಡೆಯುತ್ತಿದೆ’

ಆದಿ ಉಡುಪಿಯಲ್ಲಿರುವ ಎಪಿಎಂಸಿ ಪ್ರಾಂಗಣದಲ್ಲಿನ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಕಾರ್ಯಗಳು ಹಂತ ಹಂತವಾಗಿ ನಡೆಯುತ್ತಿವೆ. ಹೊಂಡ ಮುಚ್ಚುವ ಕಾರ್ಯವೂ ಆಗಿದೆ. ನಬಾರ್ಡ್ನ ಆರ್ಐಡಿಎಫ್ ಅನುದಾನದ ಅಡಿಯಲ್ಲಿ ಸಿ.ಸಿ. ರಸ್ತೆ ಮಂಜೂರಾಗಿದೆ. ಮಳೆಯಿಂದಾಗಿ ರಸ್ತೆಯ ಕಾಮಗಾರಿ ಸ್ಥಗಿತವಾಗಿತ್ತು. ಎಪಿಎಂಸಿ ಪ್ರಾಂಗಣದೊಳಗಿನ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರೊಬ್ಬರಿಗೆ ನೀಡಲಾಗಿದೆ. ಅವರು ಹಣ ಕಟ್ಟಿದ ಬಳಿಕ ಕಾಮಗಾರಿ ಆರಂಭಿಸಬಹುದು. ಈ ಕುರಿತು ಅವರಿಗೆ ನೋಟಿಸ್ ನೀಡಲಾಗಿದೆ. ಅಂತಿಮ ಸೂಚನೆ ನೀಡಿದ ಬಳಿಕವೂ ಕಾಮಗಾರಿ ಆರಂಭಿಸದಿದ್ದರೆ ಅವರಿಗೆ ನೀಡಿರುವ ಗುತ್ತಿಗೆಯನ್ನು ರದ್ದುಗೊಳಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ತಿಳಿಸಿದರು. ಎಪಿಎಂಸಿಯಲ್ಲಿ ಕಸದ ಸಮಸ್ಯೆ ಬಗ್ಗೆ ಗಮನಹರಿಸಲು ನಗರಸಭೆ ಪೌರಾಯುಕ್ತರಿಗೆ ಸೂಚಿಸಲಾಗಿದೆ. ಈ ಹಿಂದೆ ಅಲ್ಲಿ ಕುಂದುಕೊರತೆ ಸಭೆ ನಡೆಸಿದಾಗ ಅಲ್ಲಿನ ಯಾರೂ ಸಹಕರಿಸಿಲ್ಲ. ಎಪಿಎಂಸಿ ಪ್ರಾಂಗಣದೊಳಗಿನ ನಿವೇಶನವನ್ನು ಎಪಿಎಂಸಿ ಕಾಯ್ದೆ ಅನ್ವಯವೇ ಲೀಸ್ ಕಂ ಸೇಲ್ಗೆ ನೀಡಲಾಗಿದೆ. ನ್ಯಾಯಾಲಯದ ಆದೇಶದಂತೆ ಕಾರ್ಯ ನಿರ್ವಹಿಸಲಾಗಿದೆ. ವರ್ತಕರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಪರ್ಯಾಯವಾಗಿ ಕಟ್ಟೆಗಳನ್ನು ಕಟ್ಟಿ ಅಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಅದಕ್ಕೆ ವರ್ತಕರು ಒಪ್ಪುತ್ತಿಲ್ಲ ಎಂದು ಅವರು ವಿವರಿಸಿದರು.

‘ಎಪಿಎಂಸಿ ಜಾಗ ಮಾರಾಟ ಮಾಡಬಾರದು’

ಯಾವುದೇ ಕಾರಣಕ್ಕೂ ಎಪಿಎಂಸಿ ಪ್ರಾಂಗಣದಲ್ಲಿರುವ ಜಾಗವನ್ನು ಮಾರಾಟ ಮಾಡಬಾರದು. ಈ ಹಿಂದೆ ಎಪಿಎಂಸಿಗೆ ಸಮಿತಿ ಇದ್ದಾಗ ಜಾಗವನ್ನು ಮಾರಾಟ ಮಾಡಬಾರದು ಎಂದು ನಿರ್ಧರಿಸಲಾಗಿತ್ತು. ಆದರೆ ಅನರ್ಹರಿಗೆ ಜಾಗವನ್ನು ಲೀಸ್ ಕಂ ಸೇಲ್ಗೆ ನೀಡಲಾಗಿದೆ. ಇದರಿಂದ 30 ವರ್ಷಗಳಿಂದ ತರಕಾರಿ ಮಾರಾಟ ಮಾಡುತ್ತಿರುವ ವರ್ತಕರಿಗೆ ಅನ್ಯಾಯವಾಗಿದೆ. ಇದರಲ್ಲಿ ನಡೆದಿರುವ ಅವ್ಯವಹಾರ ಬಹಿರಂಗಗೊಳ್ಳಬೇಕು. ಈ ಕುರಿತು ಹೋರಾಟ ಮುಂದುವರಿಸುತ್ತೇವೆ. ಶಾಸಕರು ನಮ್ಮನ್ನು ಮಾತುಕತೆಗೆ ಕರೆದಿದ್ದಾರೆ. ಅವರೊಂದಿಗೆ ಚರ್ಚಿಸಿದ ಬಳಿಕ ಹೋರಾಟದ ಕುರಿತ ಮುಂದಿನ ತೀರ್ಮಾನ ತಿಳಿಸುತ್ತೇವೆ. ರಸ್ತೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕು ಎಂದು ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಸುಭಾಷಿತ್ ಕುಮಾರ್ ಹೇಳಿದರು.

‘ದೀರ್ಘ ಕಾಲ ಬಾಳ್ವಿಕೆ ಬರುವ ಕಾಮಗಾರಿ ಮಾಡಿ’

ನಾವೆಲ್ಲ ಹೋರಾಟ ನಡೆಸಿದ ಬಳಿಕ ಈಚೆಗೆ ಎಪಿಎಂಸಿ ಪ್ರಾಂಗಣದಲ್ಲಿರುವ ಶೌಚಾಲಯವನ್ನು ದುರಸ್ತಿ ಮಾಡಿದ್ದರು. ರಸ್ತೆಯನ್ನೂ ಸ್ವಲ್ಪ ರಿಪೇರಿ ಮಾಡಿದ್ದರು. ಈಗ ಅದು ಮತ್ತೆ ಹೊಂಡ ಬಿದ್ದಿದೆ. ಎಪಿಎಂಸಿ ಪ್ರಾಂಗಣದಲ್ಲಿ ಹೊಸದಾಗಿ ಹತ್ತು ಅಂಗಡಿಗಳನ್ನು ನಿರ್ಮಿಸಲಾಗಿದೆ ಆ ಕಟ್ಟಡಗಳು ಸೋರುತ್ತಿವೆ. ದೀರ್ಘ ಕಾಲ ಬಾಳ್ವಿಕೆ ಬರುವಂತೆ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕು. ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು ಎಂದು ಆದಿ ಉಡುಪಿ ಎಪಿಎಂಸಿ ವರ್ತಕ ಫಯಾಜ್ ಹೇಳಿದರು.

ಗ್ರಾಹಕರಿಂದ ದೂರವಾದ ಎಪಿಎಂಸಿ

ಕಾರ್ಕಳ: ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪಿಎಂಸಿ ಪ್ರಾಂಗಣವು ನಗರದಿಂದ ಸುಮಾರು ಒಂದೂವರೆ ಕಿ.ಮಿ.ದೂರದಲ್ಲಿದ್ದು ಗ್ರಾಹಕರಿಲ್ಲದೇ ಬಿಕೋ ಎನ್ನುತ್ತಿದೆ. ಎಪಿಎಂಸಿ ಆವರಣವಿರುವ ರಸ್ತೆಯಲ್ಲಿ ಬೆರಳೆಣಿಕೆಯಷ್ಟು ಬಸ್ಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಎಂಬಂತೆ ಓಡಾಡುವುದು ಬಿಟ್ಟರೆ ಇತರ ವಾಹನಗಳ ಓಡಾಟ ಅಷ್ಟಕ್ಕಷ್ಟೆ. ಹೀಗಾಗಿ ಕೃಷಿ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ತರಲು ಹರಸಾಹಸ ಪಡಬೇಕಾಗುತ್ತದೆ. ಬದಲಾಗಿ ರೈತಾಪಿ ವರ್ಗ ಸರಕುಗಳನ್ನು ನೇರವಾಗಿ ಪೇಟೆಗೆ ಕೊಂಡೊಯ್ಯುತ್ತಿದ್ದಾರೆ. ಇಲ್ಲಿರುವ 26 ಮಳಿಗೆಗಳಲ್ಲಿ ಕೇವಲ ಮೂರರಲ್ಲಿ ವ್ಯವಹಾರ ನಡೆಯುತ್ತಿದ್ದು ಉಳಿದವುಗಳು ಮುಚ್ಚಿವೆ. ಅಧಿಸೂಚಿತ ಉತ್ಪನ್ನಗಳಿಗೆ ಮಾತ್ರ ಪರವಾನಗಿ ನೀಡಲಾಗುವುದರಿಂದ ಇತರ ವ್ಯಾಪಾರಸ್ಥರು ಇಲ್ಲಿಗೆ ಬರುವುದಿಲ್ಲ. ಸಂಸ್ಥೆಯಲ್ಲಿ 14 ಕಾಯಂ ನೌಕರರು ಇರುವಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. 6 ಮಂದಿ ನೌಕರರು ಹೊರಗುತ್ತಿಗೆಯ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೂರಕ ಮಾಹಿತಿ: ವಾಸುದೇವ್ ಭಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.