ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯನಗರ: ಧ್ವನಿಬೆಳಕಿನ ಪ್ರಭೆಗೆ ನಿರ್ವಹಣೆಯ ಕತ್ತಲು

ಕಮಲಾಪುರದ ಮಯೂರ ಹೋಟೆಲ್‌ ಬಳಿ ಡಾರ್ಮೆಟರಿ: 200 ಮಂದಿ ತಂಗಲು ಅವಕಾಶ
Published : 19 ಸೆಪ್ಟೆಂಬರ್ 2024, 4:59 IST
Last Updated : 19 ಸೆಪ್ಟೆಂಬರ್ 2024, 4:59 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹಂಪಿಯ ಪ್ರಮುಖ ಸ್ಮಾರಕಗಳ ಬಳಿ ಧ್ವನಿಬೆಳಕಿನ ವ್ಯವಸ್ಥೆಗೆ ಕಲಬುರಗಿಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತು ₹45 ಕೋಟಿ ಅನುದಾನ ಒದಗಿಸಲು ನಿರ್ಧರಿಸಿದ್ದಕ್ಕೆ ಒಂದಿಷ್ಟು ಖುಷಿ ಇದ್ದರೂ, ನಿರ್ವಹಣೆ ಸವಾಲನ್ನೂ ಎದುರಿಸುವಂತಹ ಯೋಜನೆಯೂ ಇರಬೇಕು ಎಂಬ ಸಲಹೆಯೂ ಕೇಳಿಬಂದಿದೆ.

ವಿರೂಪಾಕ್ಷ ದೇವಸ್ಥಾನ ಮುಂಭಾಗದ ಸಾಲುಮಂಟಪಗಳಲ್ಲಿ ಖಾಸಗಿಯವರಿಂದ ಧ್ವನಿಬೆಳಕು ವ್ಯವಸ್ಥೆ ಕಳೆದ ಪ್ರವಾಸಿ ಋತುವಿನಲ್ಲಿ ನಡೆಯುತ್ತಿತ್ತು. ಆದರೆ ₹70 ಲಕ್ಷದಷ್ಟು ವಿದ್ಯುತ್ ಬಿಲ್‌ ಪಾವತಿ ವಿಚಾರ ದೊಡ್ಡ ವಿವಾದವಾಯಿತು. ಹೊಸ ಯೋಜನೆಯಲ್ಲಿ ಅಂತಹ ತೊಡಕು ಇರದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ಸ್ಥಳೀಯರು ಮತ್ತು ಪ್ರವಾಸಿಗರದು.

ಕಮಲಾಪುರದ ಮಯೂರ ಹೋಟೆಲ್‌ ಸಮೀಪ ₹15 ಕೋಟಿ ವೆಚ್ಚದಲ್ಲಿ ಡಾರ್ಮೆಟರಿ ನಿರ್ಮಿಸಲು ಸಹ ಒಪ್ಪಿಗೆ ಸೂಚಿಸಿದ್ದು, ಪ್ರವಾಸಿಗರ ದಟ್ಟಣೆ ಅವಧಿಯಲ್ಲಿ ವಸತಿ ವ್ಯವಸ್ಥೆ ಸಿಕ್ಕೀತು ಎಂಬ ಆಶಾಭಾವನೆ ಮೂಡಿದೆ.

ರೂಪುರೇಷೆ ಸಿದ್ಧ:

‘ಹಂಪಿಯಲ್ಲಿ ಹತ್ತಾರು ಸ್ಮಾರಕಗಳಿದ್ದು, ಯಾವುದಕ್ಕೆಲ್ಲ ಧ್ವನಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂಬ ಬಗ್ಗೆ ಇದೀಗ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತ ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಮಲಾಪುರದಲ್ಲಿ ಡಾರ್ಮೆಟರಿ ನಿರ್ಮಿಸಿ, ಅಲ್ಲಿ ಏಕಕಾಲದಲ್ಲಿ 200 ಮಂದಿ ತಂಗಬಹುದಾದ ವ್ಯವಸ್ಥೆ ಕಲ್ಪಿಸಲಾಗುವುದು. ಕೆಲವು ದಿನಗಳಲ್ಲಿ ಸ್ಪಷ್ಟ ಚಿತ್ರಣ ಲಭಿಸಲಿದೆ’ ಎಂದು ಅವರು ಹೇಳಿದರು.

ನಿರ್ವಹಣೆಯೇ ಸವಾಲು:

‘ಹಂಪಿ ಬಯಲು ವಸ್ತುಸಂಗ್ರಹಾಲಯ ಎಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಬಂಡೆಗಲ್ಲುಗಳು, ಸ್ಮಾರಕಗಳಿಗೆ ಬೆಳಕಿನ ಚಿತ್ತಾರವೂ ಸೇರಿದರೆ ಅದರ ಸೌಂದರ್ಯಕ್ಕೆ ಮಿತಿ ಇಲ್ಲ. ಈ ಹಿಂದೆ ವಿರೂಪಾಕ್ಷದಿಂದ ವಿಜಯವಿಠ್ಠಲ, ರಾಯರ ತುಲಾಭಾರ ತನಕ ಧ್ವನಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ದುಬಾರಿ ಪ್ರವೇಶ ಶುಲ್ಕ, ನಿರ್ವಹಣೆ ಕೊರತೆಗಳಿಂದಾಗಿ ಯೋಜನೆ ಮೂಲೆಗುಂಪಾಯಿತು. ಇಂತಹ ತೊಡಕುಗಳನ್ನು ನಿವಾರಿಸಿಕೊಂಡು ಹೊಸ ಪರಿಕಲ್ಪನೆಯೊಂದಿಗೆ ನಿರ್ವಹಣೆ ಮಾಡುವ ಚಿಂತನೆಯೊಂದಿಗೆ ಯೋಜನೆ ರೂಪಿಸುವ ಅಗತ್ಯ ಇದೆ’ ಎಂದು ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಪ್ರವಾಸಿ ಮಾರ್ಗದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಉಳಿದಂತೆ ಕೊಟ್ಟೂರಿಗೆ ಪ್ರಜಾಸೌಧ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದ್ದು ಬಿಟ್ಟರೆ ವಿಜಯನಗರ ಜಿಲ್ಲೆಗೆ ಹೇಳಿಕೊಳ್ಳುವಂತಹ ಯಾವುದೇ ಕೊಡುಗೆಯೂ ಸಿಕ್ಕಿಲ್ಲ. ಹೀಗಾಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಕಲಬುರಗಿ ಸಂಪುಟ ಸಭೆ ಹಂಪಿಗೆ ಒಂದಿಷ್ಟು ಖುಷಿ ತರಿಸಿದ್ದರೆ, ಜಿಲ್ಲೆಯ ಇತರ ಭಾಗಗಳಿಗೆ ನಿರಾಸೆಯನ್ನೇ ತಂದಿದೆ.

ಸಂಪುಟ ಸಭೆಯಲ್ಲಿ ಘೋಷಿಸಲಾಗಿರುವ ಅನುದಾನದಲ್ಲಿ ಜಿಲ್ಲೆಯ ಪಾಲು ಎಷ್ಟು ಎಂಬ ಪೂರ್ಣ ಮಾಹಿತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ
ಎಂ.ಎಸ್‌.ದಿವಾಕರ್‌ ಜಿಲ್ಲಾಧಿಕಾರಿ
ಮಹಿಳಾ ಕಾಲೇಜು ಕಟ್ಟಡದ ಕನಸು ಸಾಕಾರ
‘ಸಂಪುಟ ಸಭೆಯಲ್ಲಿ ವಕ್ಫ್‌ ಬೋರ್ಡ್‌ನಲ್ಲಿ ಜಮೆ ಆಗಿರುವ ಬಡ್ಡಿ ಮೊತ್ತ ₹47.76 ಕೋಟಿಯಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿಪೂರ್ವ ಕಾಲೇಜುಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ದೊರೆತಿದೆ. ಪ್ರತಿ ಕಾಲೇಜಿಗೆ ₹3.18 ಕೋಟಿ ಪಾಲು ಸಿಗಲಿದೆ. ನಗರದ ಜಂಭುನಾಥನಹಳ್ಳಿಯ ಸ.ನಂ. 27/ಬಿ2 ರಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿಯ 2.17 ಎಕರೆ ನಿವೇಶನವಿದ್ದು ಇಲ್ಲಿ ಮಹಿಳಾ ಕಾಲೇಜು ಸ್ಥಾಪನೆಯಾಗಲಿದೆ’ ಎಂದು ಅಂಜುಮನ್ ಕಮಿಟಿಯ ಅಧ್ಯಕ್ಷ ಎಚ್‌.ಎನ್‌.ಎಫ್‌. ಮೊಹಮ್ಮದ್ ಇಮಾಮ್ ನಿಯಾಜಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT