ಬೃಹತ್ ಕ್ಯಾಂಪಸ್‌ನಲ್ಲಿ ಕ್ರೀಡಾಂಗಣವೇ ಇಲ್ಲ
‘ವಿದ್ಯಾರಣ್ಯ’ ಕ್ಯಾಂಪಸ್‌ನ ಬೃಹತ್ ಗಾತ್ರ ನೋಡಿದರೆ ಇಲ್ಲಿ ಕ್ರೀಡಾಂಗಣ ಸಹಿತ ಎಲ್ಲಾ ವ್ಯವಸ್ಥೆಯೂ ಇರಬಹುದು ಎಂಬ ಊಹೆ ಮಾಡಿದರೆ ಅದರಲ್ಲಿ ತಪ್ಪಿಲ್ಲ. ಆದರೆ ಇಲ್ಲಿನ ದೊಡ್ಡ ಕೊರತೆಯೇ ಕ್ರೀಡಾಂಗಣ. ಸದ್ಯ ನ್ಯಾಕ್ ‘ಬಿ ಪ್ಲಸ್’ ಗ್ರೇಡ್‌ನಲ್ಲಿರುವ ವಿಶ್ವವಿದ್ಯಾಲಯ ಹಿನ್ನೆಡೆಗೆ ಇದೂ ಒಂದು ಕಾರಣವಾಗಿದೆ. ಸುಸಜ್ಜಿತ ಕ್ರೀಡಾಂಗಣ ಕ್ರೀಡಾ ತರಬೇತುದಾರರು ಇರುವ ಶಿಕ್ಷಣ ಸಂಸ್ಥೆ ಸುಲಭವಾಗಿ ‘ಬಿ++’ ಅಥವಾ ‘ಎ’ ಗ್ರೇಡ್ ಪಡೆಯುತ್ತದೆ ಎಂಬುದಕ್ಕೆ ಹಲವು ವಿಶ್ವವಿದ್ಯಾಲಯಗಳು ನಿದರ್ಶನವಾಗಿವೆ. ‘ಕಮಲಾಪುರ–ಪಿ.ಕೆ.ಹಳ್ಳಿ ಮುಖ್ಯ ರಸ್ತೆಯ ಹಾಸ್ಟೆಲ್ ಎದುರಿನಲ್ಲಿ ಮ್ಯೂಸಿಯಂಗೆ ಹೋಗುವ ಮಾರ್ಗದ ಬದಿಯಲ್ಲಿ 50 ಎಕರೆಯಷ್ಟು ನಿವೇಶನ ಇದ್ದು ಅಲ್ಲಿ ಒಂದು ಒಳಾಂಗಣ ಕ್ರೀಡಾಂಗಣ ಹಾಗೂ 400 ಮೀಟರ್ ಟ್ರ್ಯಾಕ್ ಹೊಂದಿರುವ ಒಂದು ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ 1 ಎಕರೆ ಜಾಗ ಬೇಕಿದ್ದು ಡಿಎಂಎಫ್ ನಿಧಿಯಿಂದ ₹2 ಕೋಟಿ ಹಣ ನೀಡುವ ಭರವಸೆ ಸಿಕ್ಕಿದೆ. ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಸಹ ಇದಕ್ಕೆ ಆಸಕ್ತಿ ತೋರಿಸಿದ್ದಾರೆ. ಪಕ್ಕದಲ್ಲಿ ಕ್ರೀಡಾಂಗಣ ನಿರ್ಮಿಸಲು ಸುಮಾರು ₹3 ಕೋಟಿಯ ಅಗತ್ಯ ಇದ್ದು ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಕಾರ್ಯಗತಗೊಂಡರೆ ವಿಶ್ವವಿದ್ಯಾಲಯದ ಜತೆಗೆ ಸುತ್ತಮುತ್ತಲಿನ ಎಲ್ಲರಿಗೂ ಪ್ರಯೋಜನ ಆಗಲಿದೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.