ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಸಂಘರ್ಷಕ್ಕೆ ನಾಂದಿಯಾದ ಕಾಲುವೆ ನೀರು

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ಪದ್ಧತಿ ಉಲ್ಲಂಘನೆ, ಮೆಣಸಿನಕಾಯಿ ಬೆಳೆಗಾರರು ಸಂಕಷ್ಟಕ್ಕೆ
ಬಿ.ಜಿ.ಪ್ರವೀಣಕುಮಾರ/ ಟಿ.ನಾಗೇಂದ್ರ
Published 10 ಜನವರಿ 2024, 6:22 IST
Last Updated 10 ಜನವರಿ 2024, 6:22 IST
ಅಕ್ಷರ ಗಾತ್ರ

ಯಾದಗಿರಿ/ ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ನೀರಿನ ಲಭ್ಯತೆ ಸದ್ಭಳಕೆ ಮಾಡಿಕೊಂಡು ಬದುಕು ಹಸಿರಾಗಿಸಿಕೊಂಡಿದ್ದಾರೆ. ಆದರೆ, ಕೃಷ್ಣಾ ಜಲ ನಿಗಮ (ಕೆಬಿಜೆಎನ್‌ಎಲ್) ಮಾರ್ಗಸೂಚಿ ಹಾಗೂ ಬೆಳೆ ಪದ್ಧತಿಯನ್ನು ಉಲ್ಲಂಘಿಸಿ ಬೆಳೆ ಬೆಳೆಯುತ್ತಿರುವುದರಿಂದ ಕಾಲುವೆ ನೀರು ರೈತರಿಗೆ ಸಂಘರ್ಷಕ್ಕೆ ನಾಂದಿಯಾಗುತ್ತಲಿದೆ.

ಪ್ರಸಕ್ತ ವರ್ಷ ಪರಿಸ್ಥಿತಿ ತುಸು ಭಿನ್ನವಾಗಿದೆ. ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಹಾಗೂ ನೆರೆಯ ಮಹಾರಾಷ್ಟ್ರದಲ್ಲಿಯೂ ಸಮರ್ಪಕವಾದ ಮಳೆ ಇಲ್ಲದ ಕಾರಣ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದಲ್ಲಿ ಸಂಗ್ರಹವಾಗಿಟ್ಟಿರುವ ನೀರಿನ ಮೇಲೆ ಎಲ್ಲರೂ ಅವಲಂಬಿತರಾಗಬೇಕಾಯಿತು.

ಮೆಣಸಿನಕಾಯಿ ಬೆಳೆ ವಾರ್ಷಿಕ ಬೆಳೆಯಾದರೂ ಅದಕ್ಕೆ ನಿರ್ವಹಣೆ ವೆಚ್ಚ ಲಕ್ಷಗಳಲ್ಲಿದೆ. ನೀರು, ರಸಗೊಬ್ಬರ ಸರಿಯಾದ ವೇಳೆಗೆ ನೀಡದಿದ್ದರೆ ಬಂದಿರುವ ಬೆಳೆ ಒಣಗಿ ಮಣ್ಣು ಪಾಲಾಗುತ್ತದೆ. ಜಮೀನು ಗುತ್ತಿಗೆ ಪಡೆದು ಮೆಣಸಿಕಾಯಿ ಬೆಳೆದಿರುವ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. 

ಜಿಲ್ಲೆಯ ಆರು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದು, ಜಲಾಶಯದಲ್ಲಿ ನೀರಿದ್ದರೂ ಕಾಲುವೆ ಜಾಲದಲ್ಲಿ ಮೆಣಸಿನಕಾಯಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

‘ಯಾವುದೇ ಖಡಕ್ ನಿರ್ಣಯಗಳನ್ನು ತೆಗೆದುಕೊಳ್ಳದ ನೀರಾವರಿ ಸಲಹಾ ಸಮಿತಿ (ಐಸಿಸಿ) ಆರಂಭದಲ್ಲಿ ವಾರ ಬಂದಿ ನಿಯಮ ಅನುಸರಿಸುವಂತೆ ಸೂಚಿಸಿ ನೀರು ಹರಿಸಲು ಆರಂಭಿಸಿದಾಗ ಭತ್ತ ಬೆಳೆಗಾರರು ಸೆಟೆದುನಿಂತು ತಮ್ಮ ರಾಜಕೀಯ ಬಲಾಢ್ಯ ಶಕ್ತಿಯನ್ನು ಬಳಸಿಕೊಂಡು ನಿಯಮ ಸಡಿಲಿಸುವಂತೆ ಮಾಡಿದರು. ಆಗ ಅದು ಸರ್ಕಾರದ ಮೊದಲ ತಪ್ಪು ನಡೆಯಾಗಿ ಪರಿಣಮಿಸಿತು’ ಎನ್ನುತ್ತಾರೆ ಕಾಲುವೆ ಜಾಲದ ನೀರು ವಂಚಿತ ರೈತ ಮುಖಂಡ ನಾಗಣ್ಣಗೌಡ ಪಾಟೀಲ ಹಯ್ಯಾಳ.

ಕಪ್ಪು ಮಿಶ್ರಿತ ಜಮೀನುಗಳಲ್ಲಿ ಹೆಚ್ಚಾಗಿ ರೈತರು ವಾಣಿಜ್ಯ ಬೆಳೆಯಾದ ಬ್ಯಾಡಗಿ, ಗುಂಟೂರು ತಳಿಯ ಮೆಣಸಿನಕಾಯಿ ಬೆಳೆಯನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಬಿತ್ತನೆ ಮಾಡಿದರು. ಇದು ಆರು ತಿಂಗಳ ಬೆಳೆಯಾಗಿದೆ. ಆರಂಭದಲ್ಲಿ ನೀರಿನ ಕೊರತೆ ಕಾಣಿಸಲಿಲ್ಲ. ಸಾಮಾನ್ಯವಾಗಿ ಫೆಬ್ರುವರಿ ತಿಂಗಳ ಅಂತ್ಯದ ತನಕ ನೀರು ಕಾಲುವೆಗೆ ಬರುತ್ತದೆ ಎಂಬ ಆಶಾಭಾವನೆ ಇತ್ತು. ಆದರೆ, ಡಿಸೆಂಬರ್‌ 9ರ ತನಕ ನೀರು ಬಿಡುಗಡೆ ಮಾಡಿ ಸ್ಥಗಿತಗೊಳಿಸಿದರು. ಹೂ, ಕಾಯಿ ಕಟ್ಟುವ ಹಂತದಲ್ಲಿ ನೀರು ಬಂದ್ ಆಗಿದ್ದರಿಂದ ಮೆಣಸಿನಕಾಯಿ ಬೆಳೆಗಾರರಿಗೆ ದಿಕ್ಕು ತೋಚದಾಯಿತು. ಹೋರಾಟದ ಹಾದಿ ಹಿಡಿದಿರುವುದು ಈಗ ಇತಿಹಾಸ. ವಿಪರ್ಯಾಸವೆಂದರೆ ನಿಷೇಧಿತ ಬೆಳೆಗೆ ನೀರು ಹರಿಸುವಂತೆ ಹೋರಾಟ ಮಾಡಿ ವಾರ ಬಂದಿ ನಿಯಮ ರದ್ದುಪಡಿಸಿದ ಕೆಲ ರೈತ ಸಂಘಟನೆಗಳು, ಈಗ ಲಘು ಬೆಳೆಗಳಿಗೆ ನೀರು ಹರಿಸುವಂತೆ ಧರಣಿ ನಡೆಸಿದರು. ಇದು ರೈತರ ನಡುವೆ ಸಂಘರ್ಷಕ್ಕೆ ನಾಂದಿಯಾಗಿದೆ.

ನೀರಿಲ್ಲದೇ ಒಣಗಿರುವ ಮೆಣಸಿನಕಾಯಿ ಬೆಳೆ
ನೀರಿಲ್ಲದೇ ಒಣಗಿರುವ ಮೆಣಸಿನಕಾಯಿ ಬೆಳೆ
ಕಾಲುವೆಗೆ ನೀರು ಹರಿಸಲು ಭೀಮರಾಯನಗುಡಿ ಬಳಿ ರೈತರ ಪ್ರತಿಭಟನೆ
ಕಾಲುವೆಗೆ ನೀರು ಹರಿಸಲು ಭೀಮರಾಯನಗುಡಿ ಬಳಿ ರೈತರ ಪ್ರತಿಭಟನೆ
ಶರಣಬಸಪ್ಪ ದರ್ಶನಾ‍ಪುರ
ಶರಣಬಸಪ್ಪ ದರ್ಶನಾ‍ಪುರ
ಭಾಸ್ಕರರಾವ ಮುಡಬೂಳ
ಭಾಸ್ಕರರಾವ ಮುಡಬೂಳ
ಯಲ್ಲಯ್ಯ ನಾಯಕ ವನದುರ್ಗ
ಯಲ್ಲಯ್ಯ ನಾಯಕ ವನದುರ್ಗ

ಜಿಲ್ಲೆಯಲ್ಲಿ 5272 ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಎಲ್ಲ ಕಡೆಯೂ ಕಾಲುವೆ ಜಾಲದಲ್ಲಿ ಇರುವುದರಿಂದ ಕಾಲುವೆಗೆ ಈಗ ನೀರು ಹರಿಸುವುದರಿಂದ ಸ್ಪಲ್ಪ ಮಟ್ಟಿಗೆ ಸಮಸ್ಯೆ ಕಡಿಮೆಯಾಗಲಿದೆ - ಎಸ್‌.ಪಿ.ಭೋಗಿ ತೋಟಗಾರಿಕೆ ಉಪನಿರ್ದೇಶಕ ಯಾದಗಿರಿ

ಶಹಾಪುರ ತಾಲ್ಲೂಕಿನಲ್ಲಿ ರೈತರು 3 ಸಾವಿರ ಹೆಕ್ಟೇರ್ ಹಾಗೂ ವಡಗೇರಾ ತಾಲ್ಲೂಕಿನಲ್ಲಿ 600 ಹೆಕ್ಟೇರ್ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಿದ್ದಾರೆ - ಸುನಿಲಕುಮಾರ ಯರಗೋಳ ಸಹಾಯಕ ಕೃಷಿ ನಿರ್ದೇಶಕ ಶಹಾಪುರ

ರೈತರು ನೀರಿನ ಮಹತ್ವ ಅರಿಯಬೇಕು ರೈತರು ಕಾಲುವೆ ನೀರಿನ ಮಹತ್ವ ಅರಿತುಕೊಳ್ಳಬೇಕು. ಅನವಶ್ಯಕವಾಗಿ ನೀರು ಪೋಲು ಮಾಡುವ ಪದ್ಧತಿಗೆ ಮುಕ್ತಿ ನೀಡಬೇಕು. ಜಲಾಶಯದಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆ ಬೆಳೆದರೆ ಯಾವುದೇ ಸಮಸ್ಯೆ ಆತಂಕ ಉಂಟಾಗುವುದಿಲ್ಲ. ಅದರಲ್ಲಿ ಬರಗಾಲದ ಪರಿಸ್ಥಿತಿಯಲ್ಲಿ ಪ್ರಥಮ ಆದ್ಯತೆಯಾಗಿ ಕುಡಿಯುವ ನೀರಿಗೆ ಕೊಡುತ್ತಿರುವಾಗ ಅಲ್ಲದೆ ಐದು ಜಿಲ್ಲೆಯ ಜನತೆಯು ಬೇಸಿಗೆ ಕಾಲದಲ್ಲಿ ಸಂಗ್ರಹವಾಗಿಟ್ಟುಕೊಂಡಿರುವ ನೀರಿನ ಮೇಲೆ ಜನತೆ ಜಾನುವಾರುಗಳು ಅವಲಂಬಿತರಾಗಿದ್ದಾರೆ ಎಂಬುವುದು ಮನಗಾಣಬೇಕು ಎನ್ನುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ. (ದರ್ಶನಾಪುರ ಫೋಟೋ)

ನೀರಿನ ಲಭ್ಯತೆ; ನಿರ್ವಹಣೆಯಲ್ಲಿ ಸೋಲು ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ನಿರ್ವಹಣೆಯಲ್ಲಿ ಸೋತಿದ್ದೇವೆ. ಬೇಕಾಬಿಟ್ಟಿಯಾಗಿ ಜಮೀನುಗಳಿಗೆ ನೀರನ್ನು ಸೆಳೆದುಕೊಂಡು ಭೂಮಿಯ ಫಲವತ್ತೆಯನ್ನು ಹಾಳು ಮಾಡಿಕೊಂಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ರೈತರಲ್ಲಿ ನೀರಿನ ಸದ್ಬಳಕೆಯ ಅರಿವಿನ ಕೊರತೆ ಇದೆ ಎನ್ನುತ್ತಾರೆ ನೀರಾವರಿ ಸಲಹಾ ಸಮಿತಿ ಮಾಜಿ ಸದಸ್ಯ ಭಾಸ್ಕರರಾವ ಮುಡಬೂಳ. 1982ರಲ್ಲಿ ಪ್ರಥಮವಾಗಿ ನಾರಾಯಣಪುರ ಎಡದಂಡೆ ಕಾಲುವೆಯ ಮೂಲಕ ನೀರು ಹರಿದು ಬಂತು. ಈಗ ಕೇವಲ 42 ವರ್ಷದಲ್ಲಿ ಯೋಜನೆ ಮಸುಕಾಗುತ್ತಲಿದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ ಹಸ್ತಕ್ಷೇಪ. ಬೆಳೆ ಪದ್ಧತಿ ಉಲ್ಲಂಘಿಸಿ ಭತ್ತ ಬೆಳೆಯುತ್ತಿರುವುದರಿಂದ ಲಘು ಬೆಳೆಗಳಿಗೆ ನೀರಿನ ಕೊರತೆ ಎದುರಿಸುವಂತೆ ಆಗಿದೆ. ಯೋಜನೆ ವ್ಯಾಪ್ತಿಯ ಐದು ಜಿಲ್ಲೆಯ ರೈತರು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಯೋಜನೆ ಉಳಿಸಬೇಕಾಗಿದೆ ಎನ್ನುತ್ತಾರೆ ಅವರು. ಕೋಟ್ಯಂತರ ರೂಪಾಯಿ ನೀರಿನ ಕರ (ತೆರಿಗೆ) ಬಾಕಿ ಇದೆ. ನಿರ್ದಿಷ್ಟಪಡಿಸಿದ ನೀರು ಕೊಟ್ಟರೆ ರೈತರು ಸ್ವಪ್ರೇರಣೆಯಿಂದ ಕರ ಪಾವತಿಸಲು ಸಿದ್ಧರಿದ್ದಾರೆ. ಅಲ್ಲದೆ ಕರ ಪಾವತಿಗೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು. ರೈತರು ಪಾವತಿಸಿದ ತೆರಿಗೆಯ ಹಣದಿಂದ ಕಾಲುವೆ ನಿರ್ವಹಣೆ ಮಾಡಲು ಸಹಕಾರಿಯಾಗುತ್ತದೆ. ನೀರಾವರಿ ಸಲಹಾ ಸಮಿತಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕು. ಅದಕ್ಕೆ ಹಿರಿಯ ಐಎಎಸ್ ಅಧಿಕಾರಿ ನಿಯೋಜಿಸಿ ಸಂಪೂರ್ಣ ಸ್ವಾತಂತ್ರ್ಯ ನೀಡಿದರೆ ಹದಗೆಟ್ಟು ಹೋಗಿರುವ ಯೋಜನೆ ತಹಬಂದಿಗೆ ತರಲು ಸಾಧ್ಯ ಎಂಬ ಸಲಹೆ ಅವರು ನೀಡುತ್ತಾರೆ. ( ಮುಡಬೂಳ ಫೋಟೋ)

ಆಡಳಿತ ಅಧಃಪತನಕ್ಕೆ ಸಾಕ್ಷಿ ಸಹಜವಾಗಿ ರೈತರು ತಮ್ಮ ಬೇಡಿಕೆಯ ಹಕ್ಕು ಮಂಡಿಸಿದ್ದಾರೆ. ಇದರಲ್ಲಿ ಯಾವುದೇ ಲೋಪವಿಲ್ಲ. ಆದರೆ ಭೀಮರಾಯನಗುಡಿ ಕೆಬಿಜೆಎನ್‌ಎಲ್ ಆಡಳಿತ ಕಚೇರಿಗೆ ಬೀಗ ಹಾಕಿದಾಗ ಅಧಿಕಾರಿಗಳು ತುಟಿ ಬಿಚ್ಚದೆ ಇರುವುದು ನಿಗಮದ ಆಡಳಿತದ ಅಧಃಪತನಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ರೈತ ಮುಖಂಡ ಯಲ್ಲಯ್ಯ ನಾಯಕ ವನದುರ್ಗ. ಜಿಲ್ಲಾಧಿಕಾರಿ ಮುಂದೆ ನೊಂದ ರೈತ ವಿಷದ ಬಾಟಲಿ ತೆಗೆದುಕೊಂಡು ಸೇವಿಸಲು ಯತ್ನಿಸುತ್ತಾರೆ. ಅಲ್ಲದೆ ಎಸ್‌ಪಿ ಅವರು ಕೈಕಟ್ಟಿಕೊಂಡು ನಿಂತಿರುವುದು ಹಾಗೂ ತಹಶೀಲ್ದಾರ್‌ ಅವರನ್ನು ಕೈ ಹಿಡಿದು ಎಳೆಯಲು ಯತ್ನಿಸುವುದು ಕಂಡರೆ ನಮ್ಮ ಆಡಳಿತ ವ್ಯವಸ್ಥೆ ಎಂತಹ ಮಟ್ಟಕ್ಕೆ ಇಳಿದಿದೆ ಎನ್ನುವುದು ತಿಳಿದುಬರುತ್ತದೆ. ಸರ್ಕಾರದಿಂದ ಸ್ಪಷ್ಟವಾದ ನಿರ್ದೇಶನವನ್ನು ತೆಗೆದುಕೊಂಡು ಬರದೆ ಇರುವುದು ಉನ್ನತಾಧಿಕಾರಿಗಳ ನಿರ್ಲಕ್ಷ್ಯದ ಪರಮಾವಧಿಯಾಗಿದೆ ಎನ್ನುವುದಕ್ಕೆ ಇದು ದೊಡ್ಡ ಪಾಠವಾಗಿದೆ. ಇಂತಹ ಕಹಿ ಘಟನೆ ನಡೆಯದಂತೆ ಜಿಲ್ಲಾಡಳಿತ ಹಾಗೂ ನಿಗಮ ಎಚ್ಚೆತ್ತುಕೊಳ್ಳುವುದು ತುರ್ತು ಕೆಲಸವಾಗಿದೆ ಎನ್ನುತ್ತಾರೆ ಅವರು. ( ವನದುರ್ಗ ಫೋಟೋ ಬಳಸಿಕೊಳ್ಳಿ)

ಜಿಲ್ಲಾಡಳಿತದ ದ್ವಂದ್ವ ನೀತಿ ಯಾದಗಿರಿ: ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ಶಹಾಪುರದ ಭೀಮರಾಯನಗುಡಿ ಬಳಿ ರೈತರು ಕಾಲುವೆ ನೀರಿಗಾಗಿ ಹಗಲಿರುಳು ಹೋರಾಟ ಮಾಡುತ್ತಿದ್ದರೆ ಇತ್ತ ಯಾದಗಿರಿ–ಗುರುಸಣಗಿ ಭೀಮಾ ಬ್ಯಾರೇಜ್ ಸುತ್ತಮುತ್ತಲಿನ ವ್ಯಾಪ್ತಿಯ ರೈತರು ಹಿಂಗಾರು ಹಂಗಾಮಿನ ಭತ್ತ ನಾಟಿ ಮಾಡುವಲ್ಲಿ ನಿರತರಾಗಿದ್ದಾರೆ. ಭತ್ತ ನಾಟಿ ಮಾಡಬಾರದು ಎಂದು ಭೀಮಾ ನದಿ ತೀರದ ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ಡಂಗೂರ ಸಾರಲಾಗಿತ್ತು. ಮುಂಗಾರು ಹಿಂಗಾರು ಮಳೆ ಸಮಪರ್ಕವಾಗದ ಕಾರಣ ಕುಡಿಯುವ ನೀರಿಗಾಗಿ ಭೀಮಾ ನದಿ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮಗಳ ರೈತರಿಗೆ ಕಂದಾಯ ಇಲಾಖೆ ಮೂಲಕ ನೋಟಿಸ್ ನೀಡಲಾಗಿತ್ತು. ಆದರೂ ರೈತರು ಈಗ ಭತ್ತದ ನಾಟಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭತ್ತ ನಾಟಿ ಮಾಡುವ ದೃಶ್ಯವನ್ನು ಯಾದಗಿರಿ ನಗರ ಹೊರ ವಲಯದ ಬೈಪಾಸ್ ರಸ್ತೆ ಮೂಲಕ ಸಂಚರಿಸುವ ಅಧಿಕಾರಿಗಳು ಕಣ್ಣಾರೆ ಕಂಡಿರುತ್ತಾರೆ. ಅತ್ತ ಬೆಳೆ ಉಳಿಸಿಕೊಳ್ಳಲು ಹೋರಾಟ ನಡೆಸಿದರೆ ಇತ್ತ ಜಿಲ್ಲಾಡಳಿತದ ಆದೇಶಕ್ಕೆ ಭತ್ತ ಬೆಳೆಗಾರರು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಭೀಮಾ ಬ್ಯಾರೇಜ್‌ನಿಂದ ಯಾದಗಿರಿ ನಗರ ಮತ್ತು ಗುರುಮಠಕಲ್ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

ಮೆಣಸಿನಕಾಯಿ ಬೆಳೆ ವಿವರ 2023–24 ತಾಲ್ಲೂಕು;ಹೆಕ್ಟೇರ್‌ಗಳಲ್ಲಿ ಗುರುಮಠಕಲ್‌;9.17 ಹುಣಸಗಿ;1018.85 ಶಹಾಪುರ;2308.16 ಸುರಪುರ;1319.51 ವಡಗೇರಾ;497.25 ಯಾದಗಿರಿ;119.66 ಒಟ್ಟು;5272.6 ಆಧಾರ: ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT