ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಹೊರಗುತ್ತಿಗೆ: 5 ತಿಂಗಳಿಂದ ವೇತನ ಇಲ್ಲ

ಸಾಲ ಮಾಡಿ ಜೀವನ ನಿರ್ವಹಣೆ, ತಾಂತ್ರಿಕ ನೆಪಕ್ಕೆ ಪರದಾಡುತ್ತಿರುವ ನೌಕರರು
Published 30 ನವೆಂಬರ್ 2023, 5:55 IST
Last Updated 30 ನವೆಂಬರ್ 2023, 5:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಪ್ರಾಥಮಿಕ, ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಅಂಬುಲೆನ್ಸ್‌ ಸೇರಿದಂತೆ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕಳೆದ ಐದು ತಿಂಗಳಿಂದ ವೇತನವಿಲ್ಲದೇ ಪರದಾಡುತ್ತಿದ್ದಾರೆ. ತಾಂತ್ರಿಕ ಕಾರಣ ನೀಡಿ ವೇತನವನ್ನು ಬಿಡುಗಡೆ ಮಾಡುತ್ತಿಲ್ಲ. ಇದು ಮೇಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.

ಜೂನ್‌ ತಿಂಗಳಿಂದ ವೇತನವಿಲ್ಲದೇ ದಿನನಿತ್ಯ ಜೀವನ ನಿರ್ವಹಣೆಗೆ ಕುಟುಂಬ ಕುಟುಂಬಗಳು ಪರದಾಡುತ್ತಿವೆ. ಎರಡು ತಿಂಗಳ ಹಿಂದೆ ಹಬ್ಬದ ನೆಪ ಹೇಳಿಕೊಂಡು ವೇತನ ಪಾವತಿ ಮುಂದೂಡಲಾಗಿತ್ತು. ಆದರೆ, ಈಗ ಎಲ್ಲಾ ಹಬ್ಬಗಳು ಮುಗಿದರೂ ವೇತನ ಕೈ ಸೇರದಿರುವುದು ನೌಕರರಲ್ಲಿ ತೀವ್ರ ಸಂಕಷ್ಟವನ್ನುಂಟು ಮಾಡಿದೆ.

ಆರೋಗ್ಯ ಇಲಾಖೆಯ ಒಳಗುತ್ತಿಗೆ ನೌಕರರಿಗೆ ಕಳೆದ ಎರಡು ತಿಂಗಳ ವೇತನ ಮಾತ್ರ ಬಾಕಿ ಇದೆ. ಆದರೆ, ಹೊರಗುತ್ತಿಗೆ ನೌಕರರಿಗೆ ಕಳೆದ 5 ತಿಂಗಳಿಂದಲೂ ವೇತನ ಪಾವತಿಯಾಗದಿರುವುದು ಕೈಕೈಹಿಸಿಕೊಳ್ಳುವಂತೆ ಆಗಿದೆ.

ಸಾಲ ಮಾಡಿ ಜೀವನ: ‘ಕಳೆದ ತಿಂಗಳು ದಸರಾ, ದೀಪಾವಳಿ ಹಬ್ಬ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ನೌಕರರು ಸಾಲ ಮಾಡಿ ಜೀವನ ನಡೆಸಿದ್ದೇವೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಚನಗೌಡ.

‘ಅಧಿಕಾರಿಗಳು ದೊಡ್ಡ ವ್ಯಕ್ತಿಗಳ ವೇತನ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಾರೆ ಹೊರತು ಸಣ್ಣ ನೌಕರರ ವೇತನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದರಿಂದ ನಮಗೆ ಧ್ವನಿಯೇ ಇಲ್ಲದಂತೆ ಆಗಿದೆ ಎನ್ನುತ್ತಾರೆ ಅವರು.

ಎರಡು ತಿಂಗಳಿಗೊಮ್ಮೆ ವೇತನ: ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಪ್ರತಿ ತಿಂಗಳು ನಿಗದಿತ ದಿನಾಂಕದಂದು ವೇತನವಾಗಿರುವ ನಿದರ್ಶನಗಳೆ ಇಲ್ಲ ಎಂದು ನೌಕರರು ಹೇಳುವ ಮಾತಾಗಿದೆ.

‘ಕಳೆದ ಎರಡು ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಆಯಾ ತಿಂಗಳ ವೇತನ ಪ್ರತಿ ಎರಡು ತಿಂಗಳಿಗೊಮ್ಮೆ ಜಮಾ ಆಗಿದೆ ಹೊರತು ಪ್ರತಿ ತಿಂಗಳು ಆಗಿಲ್ಲ. ಅಲ್ಲದೇ ಕೆಲವರು ತಮಗೆ ತಿಳಿದಷ್ಟು ಹಣ ವೇತನವಾಗಿ ನೀಡುತ್ತಿದ್ದಾರೆ’ ಎಂದು ನೌಕರರೊಬ್ಬರು ಅವಲತ್ತುಕೊಂಡರು.

‘ವೇತನದ ಬಗ್ಗೆ ಯಾರೊಂದಿಗೂ ಮಾತನಾಡುವಂತೆ ಇಲ್ಲ. ಇದು ಹೇಗೊ ಏಜೆನ್ಸಿಯವರಿಗೆ ತಿಳಿದುಬಂದರೆ ನಮ್ಮ ಕೆಲಸಕ್ಕೆ ಕುತ್ತು ಬರುತ್ತದೆ. ಹೀಗಾಗಿ ವೇತನ ಆಗದಿದ್ದರೂ ಯಾರೊಂದಿಗೆ ಚರ್ಚಿಸುವಂತಿಲ್ಲ’ ಎಂದು ಹೊರ ಗುತ್ತಿಗೆ ದಾದಿಯೊಬ್ಬರು ಮಾಹಿತಿ ನೀಡಿದರು.

ಪಿಎಫ್‌, ಇಎಸ್‌ಐ ಸೌಲಭ್ಯವಿಲ್ಲ: ಒಳಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆಯಾ ಏಜೆನ್ಸಿಗಳು ಭವಿಷ್ಯ ನಿಧಿ, ಕಾರ್ಮಿಕ ವಿಮಾ ಸೌಲಭ್ಯಗಳನ್ನು ಕಲ್ಪಿಸಬೇಕು. ಆದರೆ, ಬಹುತೇಕ ಏಜೆನ್ಸಿಗಳು ಈ ನಿಯಮವನ್ನು ಗಾಳಿಗೆ ತೂರಿವೆ. ಹಲವರಿಗೆ ಪಿಎಫ್‌, ಇಎಸ್‌ಐ ಸೌಲಭ್ಯವನ್ನೇ ಕಲ್ಪಿಸಿಲ್ಲ. ಕೆಲವರಿಗೆ ತಮ್ಮ ಮೂಲ ವೇತನ ಎಷ್ಟು ಎಂದು ತಿಳಿದಿಲ್ಲ. ಇದರಿಂದ ಪಿಎಫ್‌, ಇಎಸ್‌ಐ ಎಷ್ಟು ಕಡಿತವಾಗುತ್ತದೆ ಎನ್ನುವ ಮಾಹಿತಿಯೇ ಇಲ್ಲ.

ಕುಂದು ಕೊರತೆ ಸಭೆಯಾಗಿಲ್ಲ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಕುಂದು ಕೊರತೆಗಳ ಆಹವಾಲುಗಳನ್ನು ಜಿಲ್ಲಾಮಟ್ಟದ ಸಿಬ್ಬಂದಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಾಗೂ ರಾಜ್ಯಮಟ್ಟದ ಸಿಬ್ಬಂದಿ ಯೋಜನಾ ನಿರ್ದೇಶಕರು ಆರ್ ಸಿ ಎಚ್ ಒ ಅವರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಕುಂದು ಕೊರತೆ ಸಭೆ ನಡೆಸಿ ನೌಕರರ ಅಹವಾಲು ಸ್ವೀಕರಿಸಬೇಕು. ಆದರೆ, ಜಿಲ್ಲೆಯಲ್ಲಿ ಇಂಥ ಸಭೆಗಳು ಆಗಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT