ಈ ವರ್ಷದ ನೀಟ್ ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಫಲಿತಾಂಶ ಬರದೆ ಮೆಡಿಕಲ್ ಸೀಟ್ ಸಿಗಲಿಲ್ಲ. ಹಾಗಾಗಿ ಮುಂದಿನ ವರ್ಷದ ನೀಟ್ ಪರೀಕ್ಷೆಗೆ ತಯಾರಾಗುತ್ತಿದ್ದೇನೆ. ಈ ನಿರ್ಧಾರ ಸರಿಯೇ? ಓದಿದ್ದನ್ನು ಜ್ಞಾಪಕದಲ್ಲಿಟ್ಟುಕೊಳ್ಳುವುದು ಹೇಗೆ?
ವೈದ್ಯರಾಗಬೇಕೆನ್ನುವ ಗುರಿಯಿಂದ ವಿಚಲಿತರಾಗದೆ, ಅಲ್ಪವಿರಾಮದ ಮೂಲ ಹೆಚ್ಚಿನ ಪರಿಶ್ರಮ ಮತ್ತು ಕಾರ್ಯತಂತ್ರದಿಂದ ಮುಂದಿನ ನೀಟ್ ಪರೀಕ್ಷೆಗೆ ತಯಾರಾಗುವ ನಿರ್ಧಾರ ಸರಿಯಾಗಿದೆ. ಓದಿದ್ದು ಜ್ಞಾಪಕದಲ್ಲಿರಬೇಕಾದರೆ ಈ ಸಲಹೆಗಳನ್ನು ಅನುಸರಿಸಿ:
• ತರಗತಿಯಲ್ಲಿ ಭೋಧಿಸುವ ವಿಷಯ ಅರ್ಥವಾಗದಿದ್ದರೆ ಸಂಕೋಚವಿಲ್ಲದೆ ಪ್ರಶ್ನೆಗಳನ್ನು ಕೇಳಬೇಕು. ಏಕೆಂದರೆ, ಪ್ರಶ್ನೆಗಳನ್ನು ಕೇಳುವುದರಿಂದ ವಿಮರ್ಶಾತ್ಮಕ ಚಿಂತನಾ ಕೌಶಲಗಳ ಅಭಿವೃದ್ಧಿಯ ಜತೆಗೆ, ವಿಷಯದ ಬಗ್ಗೆ ಒಳನೋಟಗಳು ಲಭಿಸಿ ಕಲಿಕೆ ಪರಿಣಾಮಕಾರಿಯಾಗುತ್ತದೆ.
• ತರಗತಿಯಲ್ಲಿ ಪರಿಣಾಮಕಾರಿಯಾಗಿ ಟಿಪ್ಪಣಿ (ನೋಟ್ಸ್) ಬರೆಯುವುದರಿಂದ ಕಲಿಕೆಯ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ.
• ಪರಿಣಾಮಕಾರಿ ಓದುವಿಕೆಯ ಕಲೆಯನ್ನು ಎಸ್‌ಕ್ಯು3ಆರ್‌ನಂಥ ತಂತ್ರಗಾರಿಕೆಯ ಮೂಲಕ ರೂಢಿಸಿಕೊಳ್ಳಿ. ಇದರಿಂದ, ಜ್ಞಾಪಕ ಶಕ್ತಿಯೂ ವೃದ್ಧಿಸುತ್ತದೆ.
ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೋಗಳನ್ನು ವೀಕ್ಷಿಸಿ:
https://www.youtube.com/watch?v=3PzmKRaJHmk
https://www.youtube.com/watch?v=Y2IPeZ6lbeM
ನಾನು ಈಗಷ್ಟೇ ಬಿಎ ಪದವಿಗೆ ಸೇರಿರುವ ಗ್ರಾಮೀಣ ಭಾಗದ ವಿದ್ಯಾರ್ಥಿ. ಮುಂದೆ, ಎಂಬಿಎ ಮಾಡುವ ಯೋಜನೆಯಿದೆ. ಆದರೆ, ಇಂಗ್ಲಿಷ್ ಮಾತನಾಡುವುದರಲ್ಲಿ ಸಮಸ್ಯೆಯಿದೆ. ಸುಲಲಿತವಾಗಿ ಇಂಗ್ಲಿಷ್ ಮಾತನಾಡುವುದು ಮತ್ತು ಕಲಿಯುವುದು ಹೇಗೆ?
ಇಂಗ್ಲಿಷ್ ಭಾಷೆ ಕಬ್ಬಿಣದ ಕಡಲೆಯಲ್ಲ; ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೂಕ್ತವಾದ ಕಾರ್ಯತಂತ್ರ ಮತ್ತು ಪರಿಶ್ರಮವಿದ್ದಲ್ಲಿ, ಇಂಗ್ಲಿಷ್ ಕಲಿಯಬಹುದು. ಮೊದಲಿಗೆ, ಈ ಸಲಹೆಗಳನ್ನು ಅನುಸರಿಸಿ:
◦ ಆತ್ಮವಿಶ್ವಾಸ: ಇಂಗ್ಲಿಷ್ ಭಾಷೆಯನ್ನು ಕಲಿಯುವಾಗ ಹಿಂಜರಿಕೆಯಿಲ್ಲದೆ, ಆತ್ಮವಿಶ್ವಾಸದಿಂದ ಪ್ರಾರಂಭಿಸಿ.
◦ ಓದುವುದು: ಇಂಗ್ಲಿಷ್ ವಾರ್ತಾಪತ್ರಿಕೆಗಳನ್ನು, ಪುಸ್ತಕಗಳನ್ನು, ಲೇಖನಗಳನ್ನು ದಿನನಿತ್ಯ ಓದಿ. ಪದಬಳಕೆ, ವಾಕ್ಯ ರಚನೆ, ವ್ಯಾಕರಣವನ್ನು ಗಮನಿಸಿ. ಸಾಧ್ಯವಾದರೆ, ಉಚ್ಛಾರಣೆಗೆ ಸಹಾಯವಾಗುವಂತೆ ಜೋರಾಗಿ ಓದಿ. ಅರ್ಥವಾಗದ ಪದಗಳನ್ನು ನಿಘಂಟಿನ ಮೂಲಕ ಅರ್ಥೈಸಿಕೊಳ್ಳಿ.
◦ ಮಾತನಾಡುವುದು: ಆತ್ಮೀಯರೊಂದಿಗೆ ಸರಳವಾದ ವಿಷಯಗಳನ್ನು ಮಾತನಾಡಲು ಪ್ರಯತ್ನಿಸಿ. ತಪ್ಪು-ಒಪ್ಪುಗಳಾದಲ್ಲಿ, ಸಂಕೋಚವಿಲ್ಲದೆ ಪ್ರಯತ್ನವನ್ನು ಮುಂದುವರೆಸಿ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು, ಕನ್ನಡಿಯ ಮುಂದೆ ಆಂಗಿಕ ಭಾಷೆಯನ್ನು ಬಳಸಿ ಮಾತನಾಡಿ.
◦ ವಿಡಿಯೊ, ಚಲನಚಿತ್ರಗಳ ವೀಕ್ಷಣೆ: ಕನ್ನಡದ ಉಪಶೀರ್ಷಿಕೆಗಳಿರುವ ಇಂಗ್ಲಿಷ್ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು, ಸಾಕ್ಷ÷್ಯಚಿತ್ರಗಳನ್ನು ವೀಕ್ಷಿಸಿ. ಅದೇ ರೀತಿ, ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ಕಲಿಕೆಗೆ ನೆರವಾಗುವ ವಿಡಿಯೋಗಳನ್ನು ವೀಕ್ಷಿಸಿ. ಹಾಗೆಯೇ, ಸಾಧಕರ ಭಾಷಣಗಳನ್ನು ಕೇಳುವುದರಿಂದ ಪ್ರೇರೇಪಿತರಾಗುವುದರ ಜೊತೆಗೆ ಇಂಗ್ಲಿಷ್ ಕಲಿಯುವಿಕೆಗೆ ಸಹಾಯವಾಗುತ್ತದೆ.
◦ ಮೊಬೈಲ್ ಅಪ್ಲಿಕೇಶನ್ಸ್ ಬಳಕೆ: ಇಂಗ್ಲಿಷ್ ಕಲಿಕೆಗೆ ಅನುಕೂಲವಾಗುವ ಹಲವಾರು ಮೊಬೈಲ್ ಅಪ್ಲಿಕೇಶನ್ಸ್ಗಳಿವೆ (ಹೆಲೊ ಇಂಗ್ಲಿಷ್, ಡ್ಯುಒಲಿಂಗೊ, ಹೆಲೊ ಟಾಕ್ ಇತ್ಯಾದಿ). ಇವುಗಳನ್ನು ಬಳಸಿ.
ಈ ಸಲಹೆಗಳನ್ನು ನಿರಂತರವಾಗಿ ಕೆಲವು ತಿಂಗಳ ಕಾಲ ಅನುಸರಿಸಿದ ನಂತರ ನಿಮ್ಮ ಇಂಗ್ಲಿಷ್ ಕಲಿಕೆ ಒಂದು ಹಂತಕ್ಕೆ ತಲುಪುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=NoFcIQAFDCA
ನಾನು ಬಿಕಾಂ ಪದವಿ ಮಾಡುತ್ತಿದ್ದು, ಮುಂದೆ ಬಿ.ಇಡಿ ಮಾಡಿ ಶಿಕ್ಷಕಿಯಾಗಬೇಕು. ಬಿ.ಇಡಿ ಕೋರ್ಸ್‌ನಲ್ಲಿ ಕಲಾ ವಿಭಾಗದ ವಿಷಯವನ್ನು ತೆಗೆದುಕೊಳ್ಳಬಹುದೇ?
ನಮಗಿರುವ ಮಾಹಿತಿಯಂತೆ, ಬಿ.ಇಡಿ ಕೋರ್ಸ್‌ನಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯಗಳನ್ನು ಪದವಿಯಲ್ಲಿ ಓದಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.