ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭ್ಯರ್ಥಿ ಸಂದರ್ಶನ | ಮೋದಿ ಅಂದ್ರೇನೇ ದೊಡ್ಡ ಗ್ಯಾರಂಟಿ: ಗಾಯತ್ರಿ ಸಿದ್ದೇಶ್ವರ

Published : 4 ಮೇ 2024, 23:12 IST
Last Updated : 4 ಮೇ 2024, 23:12 IST
ಫಾಲೋ ಮಾಡಿ
Comments
ಪ್ರ

ನಿಮ್ಮದೂ ರಾಜಕೀಯ ಕುಟುಂಬ. ರಾಜಕಾರಣ ನಿಮಗೆ ಹೊಸದಲ್ಲದಿದ್ದರೂ ಸ್ಪರ್ಧೆ ಹೊಸದಲ್ಲವೇ?

ಕಳೆದ 30 ವರ್ಷಗಳಿಂದ ಮಾವನವರಾದ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಪತಿ ಸಿದ್ದೇಶ್ವರ ಅವರ ಚುನಾವಣೆಗಳಲ್ಲಿ ಮನೆಮನೆ ಸುತ್ತಿದ್ದೇನೆ. ಜನ ನನಗೆ ಹೊಸಬರಲ್ಲ. ಜನಸಂಪರ್ಕವೂ ಹೊಸದಲ್ಲ. ಹಾಗಾಗಿ ನನ್ನ ಸ್ಪರ್ಧೆಯೂ ಹೊಸದು ಅನ್ನಿಸುತ್ತಿಲ್ಲ.

ಪ್ರ

ನಿಮ್ಮ ವಿರುದ್ಧ ಬಂಡಾಯ ಕಂಡುಬಂದಿತ್ತು. ಈಗ ಸ್ಥಿತಿ ಹೇಗಿದೆ?

ನಮ್ಮಲ್ಲಿ ಬಂಡಾಯ ಇಲ್ಲ. ನನಗೆ ಟಿಕೆಟ್ ಕೊಟ್ಟಿದ್ದಕ್ಕೆ ಯಾರಿಗೂ ಬೇಸರ ಇಲ್ಲ. ಪಕ್ಷದಲ್ಲಿರುವ ಎಲ್ಲ ಮುಖಂಡರೂ ಜೊತೆಗೇ ಬರುತ್ತಿದ್ದಾರೆ. ಒಂದಾಗಿ ಪ್ರಚಾರ ಮಾಡ್ತಿದೀವಿ.

ಪ್ರ

ಜನರು ನಿಮಗೇಕೆ ಮತ ನೀಡಬೇಕು?

ಬಿಜೆಪಿಯಿಂದ ಇದೇ‌ ಮೊದಲ ಬಾರಿಗೆ ಕ್ಷೇತ್ರದಲ್ಲಿ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಇದು ಕ್ಷೇತ್ರದ ಜನರಲ್ಲಿ ಸಂತಸ ಉಂಟುಮಾಡಿದೆ. ಹೋದಲ್ಲೆಲ್ಲಾ ಮಹಿಳೆಯರಿಂದ ಬೆಂಬಲ ಸಿಗುತ್ತಿದೆ. ನನಗೆ ಯಾಕೆ ಮತ ಹಾಕಬೇಕು ಅನ್ನೋದು ಜನರಿಗೆ ಗೊತ್ತಿದೆ. ಅಭಿವೃದ್ಧಿ ಆಗಬೇಕೆಂದರೆ ಬಿಜೆಪಿಗೆ, ಮೋದಿ ಅವರಿಗೆ ಮತ ಹಾಕಬೇಕು ಎಂದು ಜನ‌ ತೀರ್ಮಾನ ಮಾಡಿಯಾಗಿದೆ‌.

ಪ್ರ

ಕಾಂಗ್ರೆಸ್‌ನ ಗ್ಯಾರಂಟಿಗಳ ಭಯ ಇದೆಯಾ?

ಗ್ಯಾರಂಟಿಗಳು ಯಾರಿಗೂ ತಲುಪಿಲ್ಲ. ಒಂದು ಮನೆಯವರಿಗೆ ಸಿಕ್ಕರೆ ನಾಲ್ಕು ಮನೆಗೆ ಸಿಕ್ಕಿಲ್ಲ. ಬಸ್ ಚಾರ್ಜ್ ಇಲ್ಲ ಅಂತಾರೆ. ಆದರೆ ಹಳ್ಳಿಗಳಿಗೆ ಬಸ್ ಸೌಲಭ್ಯವೇ ಇಲ್ಲ. ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿದ್ದು ಜನರಿಗೆ ಗೊತ್ತಿದೆ. ಜನ ಅಭಿವೃದ್ಧಿ ಕೇಳುತ್ತಾರೆ. ಉಚಿತ ಕೊಡುಗೆ ಕೇಳಲ್ಲ. ನಾವು ಪ್ರಚಾರಕ್ಕೆ ಹೋದಲ್ಲಿ ಜನರೇ ಈ ಅಂಶಗಳನ್ನು ಒತ್ತಿ ಹೇಳುತ್ತಿದ್ದಾರೆ.

ಪ್ರ

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕಣದಲ್ಲಿದ್ದಾರೆ. ನಿಮಗೆ ಅನುಕೂಲವಾಗಲಿದೆಯೇ?

ಅವರವರ ಮತಗಳು ಅವರಿಗೆ. ನಮ್ಮ ಮತಗಳು ನಮಗೆ ಇದ್ದೇ ಇವೆ. ಇನ್ನೊಬ್ಬರ ಜಗಳ ನಮಗೆ ಲಾಭ ಆಗತ್ತೆ ಅಂತ ನಾನು ಹೇಳಲ್ಲ. ಜನರು ಬಿಜೆಪಿಗೇ ಮತ ಹಾಕಬೇಕು ಅಂತ ನಿರ್ಧಾರ ಮಾಡಿದ್ದರಿಂದ ಯಾರೇ ಜಗಳ ಆಡಿಕೊಂಡರೂ ನಮಗೆ ವ್ಯತ್ಯಾಸ ಆಗಲ್ಲ.

ಪ್ರ

ಮೋದಿ ಜನಪ್ರಿಯತೆ ಈ ಬಾರಿಯೂ ನೆರವಾಗಲಿದೆಯೇ?

ನರೇಂದ್ರ ಮೋದಿ ಅವರ ಯೋಜನೆಗಳು ಪ್ರತಿ ಫಲಾನುಭವಿಯನ್ನೂ ತಲುಪಿವೆ. ಅಂತೆಯೇ ಮೋದಿ ಹೆಸರು ಪ್ರತಿಯೊಬ್ಬರ ಬಾಯಲ್ಲೂ ಇದೆ. ಪ್ರಚಾರದ ವೇಳೆ ಅವರು ಮಾಡಿದ ಕೆಲಸಗಳ ಪೈಕಿ ನಾನು ಒಂದೆರಡನ್ನು ಮರೆತರೆ ಜನರೇ ಮಿಕ್ಕವುಗಳನ್ನ ನೆನಪಿಸುತ್ತಾರೆ. ಮೋದಿ ಅಂದ್ರೇನೇ ಒಂದು ದೊಡ್ಡ ಗ್ಯಾರಂಟಿ ಅಂತ ಜನರೇ ನಂಬಿದ್ದಾರೆ. ಅವರ ಜನಪ್ರಿಯತೆ ಖಂಡಿತ ನೆರವಾಗಲಿದೆ.

ಪ್ರ

ನಿಮಗೆ ಟಿಕೆಟ್ ಸಿಗುವ ನಿರೀಕ್ಷೆ ಇತ್ತಾ? ಅಥವಾ ಅನಿರೀಕ್ಷಿತವಾ?

ಟಿಕೆಟ್ ಸಿಕ್ಕಿದ್ದು ನಂಗೆ ಮಾಧ್ಯಮಗಳ ಮೂಲಕವೇ ಗೊತ್ತಾಗಿದ್ದು. ಖಂಡಿತ ಇದು ಅನಿರೀಕ್ಷಿತ.

ಪ್ರ

ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣವನ್ನು ರಾಜಕೀಯಕ್ಕೆ ಬಳಕೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆಯಲ್ಲ?

ನೇಹಾ ಹತ್ಯೆ ನಿಜಕ್ಕೂ ನಾಗರಿಕ ಜಗತ್ತನ್ನು ಬೆಚ್ಚಿಬೀಳಿಸಿದೆ. ಬಿಜೆಪಿಯವರು ಈ ಪ್ರಕರಣವನ್ನು ರಾಜಕೀಯವಾಗಿ ಬಳಸುತ್ತಿದ್ದಾರೆಂದು ಕಾಂಗ್ರೆಸ್ ಹೇಳುತ್ತಿದೆ. ಈ ಪ್ರಕರಣ ವೈಯಕ್ತಿಕ, ಇದೊಂದು ಲವ್ ಕೇಸ್ ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹೇಳಿದ್ದಾರೆ. ಅವರಿಗೆ ಪ್ರಕರಣದ ಗಾಂಭೀರ್ಯ ಅರ್ಥವಾಗಲಿಲ್ಲ. ಜನರನ್ನು ತಪ್ಪು ದಾರಿಗೆ ಎಳೆಯುವ ಹೇಳಿಕೆ ನೀಡಬಾರದು. ಮಹಿಳೆಯರ ರಕ್ಷಣೆಗೆ ಅಗತ್ಯ ಕಾನೂನು ಬೇಕು. ಆ ಕಾನೂನುಗಳ ಸಮರ್ಪಕ ಜಾರಿಗೆ ರಾಜ್ಯ ಸರ್ಕಾರಗಳೂ ಕಟಿಬದ್ಧವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT