ಇಂದಿರಾ ನೋಡಲು ಮುಗಿ ಬೀಳುತ್ತಿದ್ದ ಜನ
ಕಡೂರು: ಪ್ರಚಾರ ಸಂದರ್ಭದಲ್ಲಿ ಕಡೂರಿನ ಪ್ರವಾಸಿ ಮಂದಿರದಲ್ಲಿ ಹೆಚ್ಚಾಗಿ ಇಂದಿರಾ ಗಾಂಧಿ ಉಳಿಯುತ್ತಿದ್ದರು. ಇಂದಿರಾ ಗಾಂಧಿ ಅವರನ್ನು ನೋಡುವುದೇ ಭಾಗ್ಯ ಎಂದು ಭಾವಿಸಿ ಜನ ಮುಗಿ ಬೀಳುತ್ತಿದ್ದರು ಎಂದು ಕಡೂರಿನ ಜನ ನೆನಪಿಸಿಕೊಳ್ಳುತ್ತಾರೆ. ಜಮೀನಿನ ಕೆಲಸ ಬಿಟ್ಟು ಇಂದಿರಾ ಗಾಂಧಿ ನೋಡಲು ಜನ ಕಾಯುತ್ತಿದ್ದರು. ಇಂದಿರಾ ಬಂದರೆ 20–30 ಕಾರುಗಳು ಒಟ್ಟಿಗೆ ಬರುತ್ತಿದ್ದವು. ಅಷ್ಟೂ ಕಾರುಗಳನ್ನು ಕಡೂರಿನ ಜನ ಒಟ್ಟಿಗೆ ನೋಡಿದ್ದು ಇದೇ ಚುನಾವಣೆ ಸಂದರ್ಭದಲ್ಲಿ. ಯಗಟಿಯಲ್ಲಿ ಇಂದಿರಾ ಗಾಂಧಿಯವರು ಕಟ್ಟೆಯೊಂದರ ಮೇಲೆ ನಿಂತು ಭಾಷಣ ಮಾಡಿದ್ದರು. ಅದು ಇತ್ತೀಚಿನ ಕೆಲ ದಿನಗಳ ತನಕವೂ ಉಳಿದಿತ್ತು. ವಿರೇಂದ್ರ ಪಾಟೀಲರ ಪರವಾಗಿ ಪ್ರಚಾರ ಮಾಡಲು ಬಂದಿದ್ದ ಜಾರ್ಜ್ ಫರ್ನಾಂಡೀಸ್ ಕೆ.ಎಂ.ತಮ್ಮಯ್ಯ ಅವರ ಮನೆಯಲ್ಲೇ ಉಳಿಯುತ್ತಿದ್ದರು ಎಂಬುದನ್ನು ಅವರು ಕುಟುಂಬದವರು ನೆನಪಿಸಿಕೊಳ್ಳುತ್ತಾರೆ.