ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮಕ್ಕಳು ಹೆಚ್ಚು; ಅದಕ್ಕೆ ಮುಸ್ಲಿಮರೇ ಗುರಿ ಏಕೆ: ಮೋದಿಗೆ ಖರ್ಗೆ ಪ್ರಶ್ನೆ

Published 30 ಏಪ್ರಿಲ್ 2024, 16:12 IST
Last Updated 30 ಏಪ್ರಿಲ್ 2024, 16:12 IST
ಅಕ್ಷರ ಗಾತ್ರ

ಜಾಂಜಗೀರ್–ಚಂಪಾ (ಛತ್ತೀಸಗಢ): ‘ಆರ್ಥಿಕ ಪರಿಸ್ಥಿತಿಯ ಕಾರಣ ಬಡವರು ಹೆಚ್ಚಿನ ಮಕ್ಕಳನ್ನು ಹೊಂದಿರುತ್ತಾರೆ. ಆದರೆ ಮುಸ್ಲಿಮರನ್ನು ಮಾತ್ರ ಪ್ರಧಾನಿ ನರೇಂದ್ರ ಮೋದಿ ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದಾರೆ. ಸೋಲಿನ ಭಯ ಅವರನ್ನು ಹತಾಶೆಗೆ ನೂಕಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಜಾಂಜಗೀರ್–ಚಂಪಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಿವಕುಮಾರ್ ದಹಾರಿಯಾ ಪರವಾಗಿ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಲೋಕಸಭಾ ಚುನಾವಣೆಯಲ್ಲಿ ಮೊದಲ ಎರಡು ಹಂತದ ಮತದಾನದಲ್ಲಿ ವಿರೋಧ ಪಕ್ಷಗಳ ಇಂಡಿ ಒಕ್ಕೂಟಕ್ಕೆ ದೊಡ್ಡ ಬೆಂಬಲ ದೊರೆತಿದ್ದರಿಂದ ಪ್ರಧಾನಿ ಅವರು ದಿಕ್ಕು ತೋಚದೆ, ಮಂಗಳಸೂತ್ರ ಹಾಗೂ ಮುಸ್ಲಿಂ ವಿಷಯ ಕುರಿತು ಮಾತನಾಡುತ್ತಿದ್ದಾರೆ’ ಎಂದಿದ್ದಾರೆ.

‘400 ಕ್ಷೇತ್ರಗಳಿಗೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ. ಇದರ ಉದ್ದೇಶ ಜನ ಕಲ್ಯಾಣ ಅಲ್ಲ, ಬದಲಿಗೆ ಅವರ ಹಕ್ಕುಗಳನ್ನು ಕಸಿಯುವ ಉದ್ದೇಶ ಹೊಂದಿದ್ದಾರೆ. ಹೀಗಾಗಿ ಧರ್ಮದ ಆಧಾರದಲ್ಲಿ ವಿಭಜಿಸುವ ಮಾತುಗಳು ಪ್ರಧಾನಿ ಬಾಯಿಯಿಂದ ಬರುತ್ತಿದೆ. ಹಾಗಿದ್ದರೆ ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆಯೇ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

‘ನಾನು ನನ್ನ ತಂದೆ ತಾಯಿಗೆ ಒಬ್ಬನೇ ಮಗ. ಆದರೆ ನನಗೆ ಐವರು ಮಕ್ಕಳು. ನಮ್ಮ ಮನೆಗೆ ಬೆಂಕಿ ಬಿದ್ದಾಗ ನನ್ನ ತಾಯಿ, ಸೋದರಿ ಮತ್ತು ಚಿಕ್ಕಪ್ಪ ಮೃತಪಟ್ಟರು. ನಾನು ಮತ್ತು ತಂದೆ ಮಾತ್ರ ಬದುಕುಳಿದೆವು. ನಾನು ಒಬ್ಬನೇ ಮಗನಾದ್ದರಿಂದ, ನನ್ನ ಮಕ್ಕಳನ್ನು ನೋಡಲು ಅವರು ಬಯಸಿದ್ದರು’ ಎಂದು ಖರ್ಗೆ ಅವರು ತಮ್ಮ ಹಿಂದಿನ ಕಥೆಯನ್ನು ಹೇಳಿದರು.

‘ನಾವು ಎಲ್ಲರನ್ನೂ ಜತೆಗೆ ತೆಗೆದುಕೊಂಡೇ ಮುಂದೆ ಸಾಗಬೇಕು. ಆದರೆ ಬಿಜೆಪಿಯವರಂತೆ ದೇಶವನ್ನು ವಿಭಜಿಸುವುದಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜನರ ದುಡ್ಡು ಕಸಿದು ಹೆಚ್ಚು ಮಕ್ಕಳಿರುವವರಿಗೆ ಹಂಚುತ್ತಾರೆ ಎಂದು ರಾಜಸ್ಥಾನದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ ಈ ದೇಶದಲ್ಲಿ ಕಾಂಗ್ರೆಸ್ 55 ವರ್ಷ ಅಧಿಕಾರದಲ್ಲಿತ್ತು. ಎಂದೂ ಯಾರ ಮಂಗಳಸೂತ್ರ ಮತ್ತು ಆಸ್ತಿಯನ್ನು ಕಸಿದು ಬೇರೆಯವರಿಗೆ ಹಂಚಿಲ್ಲ. ಅಷ್ಟು ಮಾತ್ರವಲ್ಲ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಸೇರಿದಂತೆ ಸರ್ಕಾರದ ಯಾವುದೇ ಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡಿಲ್ಲ’ ಎಂದಿದ್ದಾರೆ.

‘ಜಾತಿ ಜನಗಣತಿ ನಡೆಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದವರ ಸಮೀಕ್ಷೆ ನಡೆಸಿ, ಅವರನ್ನು ಅಭಿವೃದ್ಧಿ ಪಥದತ್ತ ತರಲು ಯೋಜನೆ ರೂಪಿಸುವುದಾಗಿ ನಾವು ಹೇಳಿದ್ದೆವು. ಆದರೆ ಅದನ್ನು ಮೋದಿ ಅವರು ಅಪಹಾಸ್ಯ ಮಾಡುತ್ತಿದ್ದಾರೆ. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂದು ಹೇಳುವ ಮೋದಿ, ಯಾರ ವಿಕಾಸವನ್ನೂ ಮಾಡಿಲ್ಲ’ ಎಂದರು.

‘ಕೋವಿಡ್ ಸಂದರ್ಭದಲ್ಲಿ ಲಸಿಕೆಯನ್ನು ಪಡೆಯುವಂತೆ ಮೋದಿ ಪ್ರೇರೇಪಿಸಿದರು. ಆದರೆ ಅದರಿಂದ ಕೆಲವರು ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ. ಔಷಧ ಹಾಗೂ ಲಸಿಕೆಯಲ್ಲಿನ ದೋಷದಿಂದ ಹೃದಯಾಘಾತ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ ಎಂದು ತಜ್ಞರೇ ಹೇಳುತ್ತಿದ್ದಾರೆ. ಆದರೆ ಈ ಕುರಿತು ಕೇಂದ್ರ ಸರ್ಕಾರ ಚಕಾರ ಎತ್ತುತ್ತಿಲ್ಲ. ಬಡವರ ಪರವಾಗಿ ಮಾತನಾಡುವ ಮೋದಿ, ಅವರ ಆದಾಯ ಹೆಚ್ಚಳ ಕುರಿತು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ನಿಜವಾಗಿ ಆದಾಯ ಹೆಚ್ಚಳವಾಗಿದ್ದು ಅದಾನಿ ಮತ್ತು ಅಂಬಾನಿಯದ್ದು’ ಎಂದು ಖರ್ಗೆ ಆರೋಪಿಸಿದ್ದಾರೆ.

‘ನರೇಂದ್ರ ಮೋದಿ ಅವರು ತಮ್ಮನ್ನು ತಾವು ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ರಾಜೀವ್ ಗಾಂಧಿ ಅವರೊಂದಿಗೆ ಹೋಲಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಇವರು ಯಾವುದೇ ಕಾರಣಕ್ಕೂ ಸರಿಸಮಾನರಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್, ಪ್ರಜಾಪ್ರಭುತ್ವ ಉಳಿಸಿದ್ದು ನೆಹರೂ, ದೇಶಕ್ಕೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವ ಸಂವಿಧಾನ ನೀಡಿದ್ದ ಡಾ. ಬಿ.ಆರ್. ಅಂಬೇಡ್ಕರ್, ಇವರುಗಳ ಶ್ರಮದಿಂದಾಗಿ ಹಲವು ದೊಡ್ಡ ಕಾರ್ಖಾನೆಗಳು, ಸಾರ್ವಜನಿಕ ಸಂಸ್ಥೆಗಳು ಸ್ಥಾಪನೆಗೊಂಡವು. ದೇಶದಲ್ಲಿ ಹಸಿರು ಮತ್ತು ಶ್ವೇತ ಕ್ರಾಂತಿ ನಡೆದಿದ್ದೇ ಕಾಂಗ್ರೆಸ್ ಅವಧಿಯಲ್ಲಿ ಬಡವರಿಗೆ ನೆರವಾಗುವ ಕಾಂಗ್ರೆಸ್‌ನ ಯೋಜನೆಗಳಿಂದಲೇ ಮತ್ತು ಸಂವಿಧಾನದಿಂದಲೇ ನೀವು ಬದುಕುಳಿದಿದ್ದು ಮತ್ತು ಪ್ರಧಾನಿಯಾದದ್ದು’ ಎಂದು ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT