ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CBI ದಾಳಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ: ಚುನಾವಣಾ ಆಯುಕ್ತರಿಗೆ ಟಿಎಂಸಿ ಪತ್ರ

Published 27 ಏಪ್ರಿಲ್ 2024, 6:24 IST
Last Updated 27 ಏಪ್ರಿಲ್ 2024, 6:24 IST
ಅಕ್ಷರ ಗಾತ್ರ

ನವದೆಹಲಿ / ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ಇಂದು (ಶನಿವಾರ) ರಾಜ್ಯದ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದೆ.

‘ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ದಿನದಂದು (ಶುಕ್ರವಾರ) ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ. ಇದರಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗಿದೆ’ ಎಂದು ಪತ್ರದಲ್ಲಿ ಟಿಎಂಸಿ ದೂರಿದೆ.

ಸಂದೇ‌‌ಶ್‌ಖಾಲಿಯ ಹಲವು ಸ್ಥಳಗಳಲ್ಲಿ ‌‌ಶುಕ್ರವಾರ ‌ನಡೆ‌ದ ಶೋಧ ಕಾರ್ಯಾಚರಣೆಯಲ್ಲಿ ವಿದೇಶಿ ನಿರ್ಮಿತ ಪಿಸ್ತೂಲ್‌ ಸೇರಿದಂತೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸಿಬಿಐ ವಶಪಡಿಸಿಕೊಂಡಿತ್ತು.

ಕಳೆದ ಜನವರಿಯಲ್ಲಿ ಟಿಎಂಸಿಯ ಉಚ್ಚಾಟಿತ ನಾಯಕ ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ತಂಡದ ಮೇಲೆ‌ ನಡೆದ ಗುಂಪು ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶೋಧ ನಡೆದಿತ್ತು.

ಸಿಬಿಐ, ಬಾಂಬ್‌ ಪತ್ತೆ ದಳ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ), ಕೇಂದ್ರ ಅರೆಸೈನಿಕ ಪಡೆ ಹಾಗೂ ಪಶ್ಚಿಮ ಬಂಗಾಳದ ಪೊಲೀಸರು ಉತ್ತರ 24 ಪರಗಣ ಜಿಲ್ಲೆಯ ಸುಂದರ್ಬನ್‌ ನದಿಯ ಅಂಚಿನಲ್ಲಿರುವ ಗ್ರಾಮದಲ್ಲಿ ಶೋಧ ನಡೆಸಿದ್ದರು.

ಸಂದೇಶ್‌ಖಾಲಿಯಲ್ಲಿನ ನಿಗದಿತ ಸ್ಥಳಗಳಲ್ಲಿ ಅಧಿಕಾರಿಗಳ ತಂಡಗಳು ಶೋಧ ಕಾರ್ಯಾಚರಣೆ ಕೈಗೊಳ್ಳುತ್ತಿದ್ದಂತೆ, ಸ್ಫೋಟಕಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಎಸ್ಎಸ್‌ಜಿ ಘಟಕಗಳು ನಿಭಾಯಿಸಿದವು ಎಂದು ಅಧಿಕಾರಿಗಳು ಹೇಳಿದ್ದರು.

ಪಶ್ಚಿಮ ಬಂಗಾಳದ ಪೊಲೀಸರ ಸಹಕಾರದೊಂದಿಗೆ ಸಿಬಿಐನ ಐದು ತಂಡಗಳು ಸರ್ಬೆರಿಯಾದ ಮನೆಯೊಂದರಲ್ಲೂ ಶೋಧ ನಡೆಸಿದವು ಎಂದು ಕೋಲ್ಕತ್ತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

‘ವಿದೇಶಿ ನಿರ್ಮಿತ ಪಿಸ್ತೂಲ್ ಸೇರಿದಂತೆ 12 ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕಗಳನ್ನು ಪತ್ತೆ ಹಚ್ಚಿದ್ದೇವೆ. ಕಾರ್ಯಾಚರಣೆ ಮುಂದುವರಿದಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಸಂಗ್ರಹಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದರು.

‘ಅಬು ತಾಲಿಬ್ ಮುಲ್ಲಾ ಶೋಧಕ್ಕೊಳಗಾದ ಮನೆಯ ಮಾಲೀಕ. ಈತ ಶಹಜಹಾನ್ ಶೇಖ್‌ನ ಸಂಬಂಧಿ’ ಎಂದು ಸಿಬಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT