ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ದಡ್ ನನ್ ಮಗ: ಪವನ್ ಕಲ್ಯಾಣ್ ಗೆಲುವಿನ ಬೆನ್ನಲ್ಲೇ ಉಪೇಂದ್ರ ಪೋಸ್ಟ್

Published 6 ಜೂನ್ 2024, 13:27 IST
Last Updated 6 ಜೂನ್ 2024, 13:27 IST
ಅಕ್ಷರ ಗಾತ್ರ

ಬೆಂಗಳೂರು: ‘ಪವನ್ ಕಲ್ಯಾಣ್‌ ಅವರನ್ನು ಗೆಲ್ಲಿಸಲು ತೆಲುಗಿನ ಜನ 14 ವರ್ಷ ತೆಗೆದುಕೊಂಡರು, ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಎಷ್ಟು ವರ್ಷ ತೆಗೆದುಕೊಳ್ಳುತ್ತಾರೋ’ ಎಂಬ ಸಾಮಾಜಿಕ ಜಾಲತಾಣವೊಂದರ ಪೋಸ್ಟ್‌ ಅನ್ನು ಹಂಚಿಕೊಂಡಿರುವ ನಟ ಉಪೇಂದ್ರ, ತಮ್ಮ ಪಕ್ಷ ‘ಪ್ರಜಾಕೀಯ’ದ ಸಿದ್ದಾಂತ ಬಗ್ಗೆ ಜನರಿಗೆ ಅರ್ಥವಾಗದೇ ಇರುವುದರ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಈ ಪೋಸ್ಟ್‌ ಅನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ‘ನನ್ನ ಸೋಲು–ಗೆಲುವಿನ ಬಗ್ಗೆ ತುಂಬಾ ಚಿಂತೆ ಮಾಡುತ್ತಿದೀರಾ?. ಎಂತಹ ನಿಸ್ವಾರ್ಥ, ತ್ಯಾಗ ಮನೋಭಾವ ನಿಮ್ಮದು. ನಿಮ್ಮೆಲ್ಲರ ಪಾದಕ್ಕೆ ಅಡ್ಡಬೀಳುವೆ’ ಎಂದು ಪರೋಕ್ಷವಾಗಿ ಕುಟುಕಿದ್ದಾರೆ.

‘ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್... ನಾನು ಗೆಲ್ಲಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವು ಹೇಳಿದ ಹಾಗೆ ಮಾಡುತ್ತೇನೆ. ಗೆದ್ದೆ ಗೆಲ್ಲುತ್ತೇನೆ. ನೀವು ಗೆಲ್ಲೋದು ಯಾವಾಗ ಅಂತ ನೀವು ಯೋಚನೆ ಮಾಡಿ. ಮುಂದಿನ ಚುನಾವಣೆಯಲ್ಲಿ ನನಗೆ ಕೆಲಸ ಕೊಡುತ್ತಿರಾ ಅಂದ್ರೆ ನಿಲ್ಲುತ್ತೇನೆ. ಆಗಲೂ ನೀವು ಎಮೋಷನಲ್‌ ಪ್ರಚಾರ ಮಾಡಬೇಕು. ಸಭೆ ಸಮಾರಂಭ ಎಲ್ಲವನ್ನು ಮಾಡಿ. ಕಷ್ಟಪಡಿ.. ಆಮೇಲೆ ಐದು ವರ್ಷ ನೀವೇನು ಬೇಕಾದರೂ ಮಾಡಿಕೊಳ್ಳಿ ನಾನು ಕೇಳುವುದಕ್ಕೆ ಬರಲ್ಲ ಅಂದರೆ... ಉಸ್‌..ಏನು ಬರೀಬೇಕೋ ಗೊತ್ತಾಗುತ್ತಿಲ್ಲ. ಈ ದಡ್ಡ ನನ್ನ ಮಗಂಗೆ ಯಾವನಾದ್ರೂ ಇನ್ನು ಮೇಲೆ ಬುದ್ದಿವಂತಾ ಅಂದರೆ ಅಷ್ಟೇ... ಸೆಂದಾಗಿರಕ್ಕಿಲ್ಲಾ’ ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ.

ಪ್ರಜಾಕೀಯದ ಸಿದ್ದಾಂತವನ್ನು ಅರ್ಥ ಮಾಡಿಕೊಳ್ಳದೇ ಎಲ್ಲರ ಹಾಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎಂಬ ಅಭಿಪ್ರಾಯದ ವಿರುದ್ಧ ಉಪೇಂದ್ರ ಗುಡುಗಿದ್ದಾರೆ.

ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಪವನ್ ಕಲ್ಯಾಣ್‌ ಅವರ ಜನಸೇನಾ ಪಕ್ಷಕ್ಕೆ ಅಭೂತ ಪೂರ್ವ ಫಲಿತಾಂಶ ಬಂದಿದ್ದು, ಇದಾದ ಬೆನ್ನಲ್ಲೇ ಉಪೇಂದ್ರ ಅವರ ಪ್ರಜಾಕೀಯ ಪಕ್ಷವನ್ನು ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಹೋಲಿಸಿ ಅನೇಕ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಪಕ್ಷ ಬೆಳೆಸುವುದರಲ್ಲಿ ಪವನ್‌ ಕಲ್ಯಾಣ್ ಅವರಿಗಿದ್ದ ಆಸಕ್ತಿಯನ್ನು ಉಪೇಂದ್ರ ಅವರು ತೋರಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು.

2018ರಲ್ಲಿ ‘ಉತ್ತಮ ಪ್ರಜಾಕೀಯ ಪಕ್ಷ’ವನ್ನು ಕಟ್ಟಿ ಬೆಳೆಸಿದ್ದ ಉಪೇಂದ್ರ ಅವರು, 2019 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಇಲ್ಲಿಯವರೆಗೆ ನಡೆದ ಯಾವುದೇ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಗೆಲುವು ದಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT