‘ಭೈರಾದೇವಿ’ ಯಾವ ಜಾನರ್‌ನ ಚಿತ್ರ?
ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ. ಕಾಳಿ, ಅಘೋರಿ ಮೊದಲಾದ ವಿಷಯಗಳನ್ನು ಹೊಂದಿದೆ. ಇದರ ಜೊತೆಗೆ ಕೌಟಂಬಿಕ ಕಥೆ ಕೂಡ ಇದೆ. ಪುರುಷರು ಮಾತ್ರ ಅಘೋರಿಗಳಾಗುತ್ತಾರೆ ಎಂದುಕೊಂಡಿದ್ದೆ. ಆದರೆ ಈ ಕಥೆ ಕೇಳಿದ ಬಳಿಕ ಮಹಿಳೆಯರೂ ಅಘೋರಿಗಳಾಗುತ್ತಾರೆ ಎಂಬ ವಿಷಯ ತಿಳಿಯಿತು. ಒಂದು ವಿಭಿನ್ನ ಜಾನರ್‌ನ ಚಿತ್ರ. ಹಾಗಾಗಿ ಈ ಕಥೆ ಒಪ್ಪಿಕೊಂಡೆ.
ಸಿನಿಮಾ ವಿಳಂಬವಾಗಿದ್ದು ಯಾಕೆ?
ಶುರು ಮಾಡಿ ಹಲವು ವರ್ಷಗಳಾಗಿತ್ತು. ಆದರೆ ಚಿತ್ರೀಕರಣ ಪೂರ್ಣಗೊಂಡಿದ್ದು ಇತ್ತೀಚೆಗೆ. ಈ ಸಿನಿಮಾ ಚಿತ್ರೀಕರಣಕ್ಕೆ ಹೊರಟಾಗ ಒಂದೆಲ್ಲ ಒಂದು ತೊಂದರೆ ಎದುರಾಗುತ್ತಲೇ ಇತ್ತು. ಮೊದಲು ಕಾಳಿ ಅವತಾರದಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿದ್ದೆವು. ಅದಾದ ಬಳಿಕ ಸಂಕಷ್ಟಗಳು ಎದುರಾಯ್ತು. ನಿರ್ದೇಶಕರಿಗೆ ಆರೋಗ್ಯ ಸರಿ ಇರಲಿಲ್ಲ. ಸೆಟ್‌ನಲ್ಲಿ ನಾನು ಸಾಹಸ ಮಾಡುವಾಗ ಏಟು ತಿಂದೆ. ಮಳೆ ಬಂತು. ಕಾಳಿ ಅವತಾರಕ್ಕೆ ದಿನ 4–5 ಗಂಟೆ ಮೇಕಪ್‌ಗೆ ಬೇಕಿತ್ತು. ನಾನು ಸಾಕಷ್ಟು ತೊಂದರೆ ಅನುಭವಿಸಿದೆ. ಈ ಎಲ್ಲ ಕಾರಣಗಳಿಂದ ಸಿನಿಮಾ ತಡವಾಯ್ತು.
ಸುದೀರ್ಘ ವಿರಾಮದ ನಂತರ ಈ ಸಿನಿಮಾ ಆಯ್ದುಕೊಂಡಿದ್ದು ಏಕೆ?
ಸಾಕಷ್ಟು ಕಥೆಗಳನ್ನು ಕೇಳಿದೆ. ಯಾವುದೂ ಇಷ್ಟವಾಗಲಿಲ್ಲ. ನನಗೆ ಸಿನಿಮಾವೆಂದರೆ ಎಲ್ಲಿಯೂ ಮುಜುಗರವಿಲ್ಲದೆ ಇಡೀ ಕುಟುಂಬದವರು ನೋಡುವಂತೆ ಇರಬೇಕು. ಆ ರೀತಿ ಕಥೆಗಳನ್ನು ಆಯ್ದುಕೊಳ್ಳುತ್ತೇನೆ. ಸಿನಿಮಾ ಹೊರತಾಗಿ ನನ್ನದು ಹಲವು ಬಿಸಿನೆಸ್ ಇದೆ. ಆದರೆ ಸಿನಿಮಾ ಎಂಬುದು ನನಗೆ ಒಂದು ರೀತಿಯ ಸೆಳೆತ. ಇದನ್ನು ಬಿಟ್ಟು ಇರಲಾರೆ. ನಮ್ಮ ನಿರ್ಮಾಣ ಸಂಸ್ಥೆಯಿಂದಲೂ ಒಂದಷ್ಟು ಸಿನಿಮಾಗಳನ್ನು ಮಾಡುವ ಆಲೋಚನೆಯೊಂದಿಗೆ ಮರಳಿದೆ.
ಈ ಸಿನಿಮಾ ಗೆಲ್ಲದಿದ್ದರೆ ಚಿತ್ರರಂಗ ಬಿಡುವ ಮಾತನಾಡಿದ್ದೀರಿ?.
ಸಿನಿಮಾವನ್ನು ಜನಕ್ಕಾಗಿಯೇ ಮಾಡುವುದು. ಅವರೇ ನೋಡಿ ಇಷ್ಟಪಡದಿದ್ದರೆ ಯಾರಿಗಾಗಿ ಸಿನಿಮಾ ಮಾಡಬೇಕು ಹೇಳಿ? ಒಂದು ಸಿನಿಮಾ ಸಿದ್ಧಗೊಳ್ಳುವಲ್ಲಿ ದೊಡ್ಡ ತಂಡದ ಶ್ರಮವಿರುತ್ತದೆ. ಈ ಚಿತ್ರದಲ್ಲಿ ಮೇಕಪ್‌ಗೆ ಪ್ರತಿದಿನ 4–5 ಗಂಟೆ ವ್ಯಯಿಸಿದ್ದೇನೆ. ನೋವು, ಕಷ್ಟಗಳನ್ನು ಮೀರಿ ಚಿತ್ರೀಕರಣ ಮಾಡಿರುತ್ತೇವೆ. ಹಾಗಂತ ಜನ ಎಲ್ಲವನ್ನೂ ಒಪ್ಪಿಕೊಳ್ಳಬೇಕು ಎಂದಲ್ಲ. ಜನಕ್ಕೆ ನಮ್ಮ ಸಿನಿಮಾ ಇಷ್ಟವಾಗುತ್ತಿಲ್ಲ ಎಂದರೆ, ನಾವು ಚಿತ್ರರಂಗದಿಂದ ದೂರ ಉಳಿಯುವುದೇ ಉತ್ತಮ ಎಂದು ಅನ್ನಿಸಿದೆ. ಆ ನೋವಿನಲ್ಲಿ ಈ ಮಾತು ಹೇಳಿರುವೆ. ನನ್ನದೇ ಇನ್ನೊಂದು ಚಿತ್ರ ‘ಅಜಾಗೃತ’ ಬಿಡುಗಡೆಗೆ ಸಿದ್ಧವಿದೆ.
ಈ ಚಿತ್ರದ ಬಗ್ಗೆ ನಿಮಗೆ ಎಷ್ಟು ಆತ್ಮವಿಶ್ವಾಸವಿದೆ?
ತುಂಬ ಭಿನ್ನವಾದ ಜಾನರ್‌ನ ಸಿನಿಮಾ. ಒಂದು ಉತ್ತಮ ಚಿತ್ರ ಮಾಡಲು ಪ್ರಾಮಾಣಿಕ ಶ್ರಮ ಹಾಕಿದ್ದೇವೆ. ಜನಕ್ಕೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಮುಂದಿನ ವಾರ ಫಲಿತಾಂಶ ತಿಳಿಯುತ್ತದೆ.
ನೀವು ಚಿತ್ರೋದ್ಯಮದಲ್ಲಿ ಆಗಾಗ ಸಕ್ರಿಯರಾಗಿ, ಮತ್ತೊಂದಷ್ಟು ಕಾಲ ಕಣ್ಮರೆಯಾಗುವುದು ಏಕೆ? ಇಲ್ಲಿತನಕದ ಪಯಣ ಹೇಗಿತ್ತು?
ಚಿತ್ರರಂಗದಲ್ಲಿ ಎರಡು ದಶಕಗಳನ್ನು ಪೂರೈಸಿರುವೆ. ಒಂದಷ್ಟು ಉತ್ತಮ ಸಿನಿಮಾ ಮಾಡಿದ್ದೇನೆ. ಮೊದಲೆ ಹೇಳಿದಂತೆ ಬಿಟ್ಟೆನೆಂದರೂ ಬಿಡದೀ ಮಾಯೆ!. ನನಗೆ ಮೊದಲಿನಂದಲೂ ನಟನೆ, ನೃತ್ಯದಲ್ಲಿ ಒಲವು ಜಾಸ್ತಿ. ಹೀಗಾಗಿ ಬೇಡ ಎಂದು ಆಚೆ ಹೋದರೂ ವಾಪಾಸ್ ಕರೆದುಕೊಂಡು ಬರುತ್ತದೆ. ಎಲ್ಲಿಯೂ ಸಿಗದ ಒಂದು ರೀತಿಯ ತೃಪ್ತಿ, ಆನಂದ ಸಿನಿಮಾ, ನಟನೆಯಲ್ಲಿ ಸಿಗುತ್ತದೆ. ಚಿತ್ರರಂಗದಿಂದ ದೂರವಾಗಿದ್ದೆ. ಇಲ್ಲಿನ ಯಾರ ಸಂಪರ್ಕದಲ್ಲಿಯೂ ಇರಲಿಲ್ಲ. 2012ರಲ್ಲಿ ನಮ್ಮದೇ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿ ‘ಲಕ್ಕಿ’ ಸಿನಿಮಾದೊಂದಿಗೆ ಸಕ್ರಿಯನಾದೆ. ಅಲ್ಲಿಂದ ಮತ್ತೆ ಈ ನಂಟು ಪ್ರಾರಂಭವಾಯಿತು. ಉತ್ತಮ ಕಥೆಗಳನ್ನು ಹುಡುಕುತ್ತಿರುವೆ. ನಾಟ್ಯರಾಣಿ ಶಾಂತಲಾ, ‘ಶರಪಂಜರ’ದ ಕಲ್ಪನಾ ರೀತಿಯ ಪಾತ್ರಗಳನ್ನು ಮಾಡಬೇಕೆಂಬ ಆಸೆಯಿದೆ. ನೃತ್ಯದ ಜೊತೆಗೆ ಕಥೆ ಇರುವ ಸಿನಿಮಾಗಳನ್ನು ಮಾಡಬೇಕು.
ಈ ಚಿತ್ರದಲ್ಲಿ ರಮೇಶ್ ಪಾತ್ರವೇನು?
ರಮೇಶ್ ಅವರೇ ಈ ಚಿತ್ರದ ನಾಯಕ. ಕಥೆ ಕೇಳಿದ ತಕ್ಷಣ ಈ ಪಾತ್ರಕ್ಕೆ ಅವರೇ ಸೂಕ್ತ ಎನ್ನಿಸಿತು. ಪೊಲೀಸ್ ಇನ್‌ಸ್ಪೆಕ್ಟರ್ ಪಾತ್ರ. ಆದರೆ ಇದು ಕೇವಲ ತನಿಖೆ, ಠಾಣೆಗೆ ಸೀಮಿತವಾದ ಪಾತ್ರವಲ್ಲ. ಅವರ ಪಾತ್ರ ಹೇಗೆ ಟ್ರಾವೆಲ್ ಮಾಡುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು.
ನಿಮ್ಮ ಮುಂದಿನ ಯೋಜನೆಗಳು?
‘ಅಜಾಗೃತ’ ಬಿಡುಗಡೆಗೆ ಸಿದ್ಧವಿದೆ. ಬೇರೆ ಭಾಷೆಗಳಿಂದ ಅವಕಾಶ ಬರುತ್ತಿದೆ. ಆದರೆ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. ಈ ಚಿತ್ರದ ಫಲಿತಾಂಶದ ಮೇಲೆ ನನ್ನ ಮುಂದಿನ ಯೋಜನೆಗಳು ಅವಲಂಬಿತವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.