ಸಂದರ್ಶನ: ವಿನಾಯಕ ಕೆ.ಎಸ್.
ಈ ಚಿತ್ರದಲ್ಲಿ ನಿಮ್ಮ ಪಾತ್ರವೇನು? ಕಥೆ ಯಾವುದಕ್ಕೆ ಸಂಬಂಧಿಸಿದೆ?
ಓರ್ವ ಸಾಮಾನ್ಯ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತೀವ್ರತೆ ಹೊಂದಿರುವ ಪಾತ್ರ. ಸಮಾಜ, ಕಚೇರಿಯಿಂದ ಹಿಡಿದು ಎಲ್ಲೆಡೆ ದಿನನಿತ್ಯದ ಬದುಕಿನಲ್ಲಿ ಮಹಿಳೆ ಎದುರಿಸುವ ಸಮಸ್ಯೆಗಳ ಬಗ್ಗೆ ಚಿತ್ರ ಮಾತನಾಡುತ್ತದೆ. ನೈಜತೆಗೆ ಹತ್ತಿರವಾದ ಕಥೆ.
ಶೀರ್ಷಿಕೆಯಲ್ಲಿರುವ ಸಮಸ್ಯೆ ಕುರಿತು ಚಿತ್ರ ಮಾತನಾಡುತ್ತದೆಯಾ?
ಮೂಲದಲ್ಲಿ ನೋಡಿದಾಗ ಹೆಣ್ಣೊಬ್ಬಳಿಗೆ ‘ಶೀಲ’ ಎಂದರೆ ‘ಅಸ್ತಿತ್ವ’. ಶೀಲ ಎಂಬುದನ್ನು ಕೇವಲ ದೈಹಿಕ ಹಿಂಸೆಗೆ ಸೀಮಿತವಾಗಿ ನೋಡಬಾರದು. ಹೆಣ್ಣಿನ ಮೇಲಿನ ದೌರ್ಜನ್ಯ ಎಂದರೆ ಕೇವಲ ಅತ್ಯಾಚಾರವೆಂದಲ್ಲ. ಹಿಂಸೆಯ ಹಲವು ರೂಪಗಳಿವೆ. ಬೇರೆ ಬೇರೆ ರೀತಿಯ ದೌರ್ಜನ್ಯಗಳಿವೆ. ಸಮಾಜ, ಚಾರಿತ್ರ್ಯ ಹೀಗೆ ಹಲವು ಆಯಾಮಗಳಿವೆ. ಹೆಣ್ಣು–ಗಂಡು ಸಮಾನ ಎಂದು ಮಾತನಾಡುತ್ತೇವೆ. ಆದರೆ ತಣ್ಣನೆಯ ಸಮಸ್ಯೆಗಳು ಸಾಕಷ್ಟಿವೆ. ಹೆಣ್ಣೊಬ್ಬಳು ತನ್ನನ್ನು ತಾನು ಹೇಗೆ ನಿಭಾಯಿಸಿಕೊಳ್ಳಬೇಕು? ಹೇಗೆ ತನ್ನೆಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಸಿನಿಮಾ ಮಾತಾಡುತ್ತದೆ.
ಮಲಯಾಳಂನಲ್ಲಿ ಮೊದಲು ಬಿಡುಗಡೆಯಾಗಿದ್ದೇಕೆ? ಮೂಲ ಮಲಯಾಳಂ ಸಿನಿಮಾವೇ?
ಮಲಯಾಳಂ ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ಚಿತ್ರೀಕರಣಗೊಂಡ ಸಿನಿಮಾ. ಆದರೆ ಮೂಲ ಕಥೆ, ತಂಡ ಮಲಯಾಳಂನದ್ದು. ಕೇರಳದಲ್ಲಿ ಚಿತ್ರೀಕರಣಗೊಂಡಿದ್ದು. ಹೀಗಾಗಿ ಹಿಂದಿನ ವಾರ ಮಲಯಾಳಂನಲ್ಲಿ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಆದರೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸುವಾಗ ನಡೆಯುವ ಕಥೆ. ಹೀಗಾಗಿ ಮಲಯಾಳಂ ಅವತರಣಿಕೆಯ ಸಾಕಷ್ಟು ಕಡೆ ಕನ್ನಡದಲ್ಲಿ ಮಾತನಾಡಿದ್ದೇವೆ. ಕಥೆ ನಡೆಯುವ ರೆಸಾರ್ಟ್ ಕೂಡ ಚಿತ್ರದಲ್ಲಿ ಒಂದು ಪಾತ್ರ. ಅಲ್ಲಿಯೂ ಕನ್ನಡಕ್ಕೆ ಸಂಬಂಧ ಇದೆ.
ಸತತ ಸಿನಿಮಾ ಮಾಡುತ್ತಿದ್ದವರು 4 ವರ್ಷಗಳ ಅಂತರ ಕೊಟ್ಟಿದ್ದು ಏಕೆ?
2 ವರ್ಷ ಕೋವಿಡ್‌ನಲ್ಲಿ ಕಳೆದುಹೋಯಿತು. ಕೆಲ ಚಿತ್ರ ಸಿದ್ಧವಿದ್ದರೂ ಬಿಡುಗಡೆಗೆ ಸಮಯ ಕೂಡಿ ಬಂದಿರಲಿಲ್ಲ. ಇಲ್ಲಿ ಅಂತರ, ಸಮಯ ಮುಖ್ಯವಲ್ಲ. ಉತ್ತಮ ಚಿತ್ರ ಮುಖ್ಯ.
ನಿಮ್ಮ ಮುಂದಿನ ಸಿನಿಮಾಗಳ ಮಾಹಿತಿ?
ಕನ್ನಡದಲ್ಲಿ ‘ಸಾರಿ ಕರ್ಮ ರಿಟರ್ನ್ಸ್’, ‘ಬಿಂಗೊ’ ಚಿತ್ರಗಳು ಬಿಡುಗಡೆಗೆ ಸಿದ್ಧವಿವೆ. 3 ತಮಿಳು ಸಿನಿಮಾ ಮುಗಿಸಿರುವೆ. ಒಂದು, ನಟ ‘ಸಂತಾನಂ’ ಜೊತೆ; ಇನ್ನೊಂದು, ಅನುರಾಗ್ ಕಶ್ಯಪ್ ಜೊತೆ ತಮಿಳಿನಲ್ಲಿ; ದೊಡ್ಡ ಸ್ಟಾರ್ ಜೊತೆ ತೆಲುಗಿನಲ್ಲಿಯೂ ನಟಿಸಿರುವೆ. ಶೀಘ್ರದಲ್ಲೇ ಆ ಚಿತ್ರದ ಮಾಹಿತಿ ಹೊರಬರಲಿದೆ. ಹಿಂದಿಯಲ್ಲಿ ಒಂದು ಚಿತ್ರ ಸಿದ್ಧವಿದೆ. ಮೋಹನ್‌ಲಾಲ್ ಜೊತೆ ತೆಲುಗಿನ ‘ವೃಷಭ’ ಚಿತ್ರದಲ್ಲಿ ನಟಿಸುತ್ತಿರುವೆ.
ಈವರೆಗಿನ ನಿಮ್ಮ ಸಿನಿಮಾ ಪಯಣ ಹೇಗನ್ನಿಸಿದೆ?
ಈವರೆಗೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವೆ. ಒಳ್ಳೆಯ ಸಿನಿಮಾ, ಕೆಟ್ಟ ಸಿನಿಮಾ ಎರಡನ್ನೂ ಕಂಡಿರುವೆ. ಸೋಲು, ಗೆಲುವನ್ನು ನೋಡಿರುವೆ. ಇಲ್ಲಿ ಸೋಲು, ಗೆಲುವು ಮುಖ್ಯವಲ್ಲ. ನಿರಂತರ ಪಯಣ ಅತ್ಯಂತ ಮುಖ್ಯ.
‘ಶೀಲ’ ಚಿತ್ರ ಬಿಡುಗಡೆಯಲ್ಲಿ ನಿಮ್ಮ ಶ್ರಮ ಹೆಚ್ಚಿದೆ ಎನ್ನಿಸುತ್ತಿದೆಯಲ್ಲಾ? ನಿರ್ಮಾಣದ ಆಲೋಚನೆ ಇದೆಯಾ?
ಇದರಲ್ಲಿ ನಟಿ ಮಾತ್ರ. ಆದರೆ ನಿರ್ಮಾಪಕರಿಗೆ ಬೆಂಬಲವಾಗಿ ನಿಂತಿದ್ದೇನೆ. ಒಂದು ಸಿನಿಮಾ ಗೆದ್ದರೆ ಮಾತ್ರ ಮತ್ತಷ್ಟು ನಿರ್ಮಾಪಕರು ಬರುತ್ತಾರೆ. ಮೊದಲು ನಿರ್ಮಾಪಕರು ಉಳಿದುಕೊಳ್ಳಬೇಕು. ಜೀವನದಲ್ಲಿ ಬೇರೆ ಬೇರೆ ಆಲೋಚನೆಗಳು ಇವೆ. ನಿರ್ದೇಶನ, ನಿರ್ಮಾಣ ಇತ್ಯಾದಿ ಕುರಿತು ಶೀಘ್ರದಲ್ಲಿಯೇ ಶುಭ ಸುದ್ದಿ ನೀಡುವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.