ಚಿತ್ರ: ಲಿಯೊ (ತಮಿಳು)

ನಿರ್ಮಾಣ: ಎಸ್.ಎಸ್. ಲಲಿತ್ಕುಮಾರ್, ಜಗದೀಶ್ ಪಳನಿಸ್ವಾಮಿ

ನಿರ್ದೇಶನ: ಲೋಕೇಶ್ ಕನಕರಾಜ್

ತಾರಾಗಣ: ವಿಜಯ್, ತ್ರಿಶಾ, ಗೌತಮ್ ವಾಸುದೇವ್ ಮೆನನ್, ಸಂಜಯ್ ದತ್, ಅರ್ಜುನ್ ಸರ್ಜಾ, ಜಾರ್ಜ್ ಮಾರ್ಯನ್, ಮ್ಯಾಥ್ಯು ಥಾಮಸ್, ಮಿಸ್ಕಿನ್, ಅನುರಾಗ್ ಕಶ್ಯಪ್

ಕೆನಡಿಯನ್ ನಿರ್ದೇಶಕ ಡೇವಿಡ್ ಕ್ರೊನೆನ್ಬರ್ಗ್ 2005ರಲ್ಲಿ ‘ಎ ಹಿಸ್ಟರಿ ಆಫ್ ವಯಲೆನ್ಸ್’ ಎಂಬ ಹಿಂಸಾವಸ್ತುವಿನ ಸಿನಿಮಾ ನಿರ್ದೇಶಿಸಿದ್ದರು. ಅದನ್ನು ಲೋಕೇಶ್ ಕನಕರಾಜ್ ತಮಿಳಿನ ತಮ್ಮತನದ ಟೆಂಪ್ಲೇಟ್ ಮೇಲೆ ತಂದಿಟ್ಟುಕೊಂಡು, ‘ಲಿಯೊ’ ತಮಿಳು ಚಿತ್ರ ರೂಪಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಫಿ ಕೆಫೆ ನಡೆಸುವ ನಾಯಕ ಪಾರ್ಥಿಬನ್. ಅವನ ಹೆಂಡತಿ ಸತ್ಯ. ಇಬ್ಬರಿಗೂ ಸಿದ್ದು ಎಂಬ ಹರೆಯದ ಮಗ ಹಾಗೂ ಚಿಂಟು ಎಂಬ ಪುಟಾಣಿ ಹೆಣ್ಣುಮಗಳು ಇದ್ದಾರೆ. ಪ್ರಾಣಿ ಸಂರಕ್ಷಣೆ ಮಾಡುವುದನ್ನು ಹವ್ಯಾಸ ಮಾಡಿಕೊಂಡಿರುವ ಪಾರ್ಥಿಬನ್ ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಹೈನಾವೊಂದರಿಂದ ಅನೇಕ ಜೀವಗಳನ್ನು ಉಳಿಸುತ್ತಾನೆ. ಈ ದೃಶ್ಯದ ಹೆಣಿಗೆಯಲ್ಲಿಯೇ ನಿರ್ದೇಶಕರ ಹಿಂಸಾ ಸಾವಧಾನ ಅರ್ಥವಾಗುತ್ತದೆ. ನಾಯಕ ವಿಜಯ್ ಅವರನ್ನು ತಮ್ಮ ಎಂದಿನ ತಳಿರು–ತೋರಣಗಳ ಚೌಕಟ್ಟಿನಿಂದ ಆಚೆ ತಂದು ಅವರು ಸ್ಟೈಲಿಶ್ ಆಗಿ ಪ್ರೇಕ್ಷಕರ ಮುಂದಿಡುತ್ತಾರೆ. ‘ಬ್ಲಡಿ ಸ್ವೀಟ್’ ಎಂಬ ಹಾಡು ಮುಂದಿನ ಹಿಂಸಾಕಥಾನಕದ ಮುನ್ನುಡಿಯೇ ಹೌದು.

ಪಾರ್ಥಿಬನ್ ಇಪ್ಪತ್ತು ವರ್ಷಗಳಿಂದ ನೆಮ್ಮದಿಯಾಗಿ ಬದುಕಿರುವ ಊರಿನಲ್ಲಿ ಸರಣಿ ದರೋಡೆ–ಕೊಲೆ ಪ್ರಕರಣಗಳು ನಡೆಯತೊಡಗುತ್ತವೆ. ಆ ಕೊಲೆಗಡುಕರು ನಾಯಕನ ಕಾಫಿ ಕೆಫೆಗೂ ಬರುತ್ತಾರೆ. ಅಲ್ಲಿಂದ ಕಥೆಗೆ ತಿರುವು. ತನ್ನ ಪುಟಾಣಿ ಮಗಳ ಎದುರಿಗೇ ಕೊಲೆಗಡುಕರು ಹಾಗೆ ಬಂದಾಗ ನಾಯಕ ಏನು ಮಾಡುತ್ತಾನೆ ಎನ್ನುವುದರಿಂದ ಕುತೂಹಲ ಕಾವೇರುತ್ತದೆ. ಅಲ್ಲಿಂದಾಚೆಗೆ ನಾಯಕನ ಹಿನ್ನೆಲೆ ಏನು ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಟ್ಟು, ಲೋಕೇಶ್ ಕನಕರಾಜ್ ಆಟವನ್ನು ಇನ್ನೂ ರೋಚಕಗೊಳಿಸಲು ಹೊರಡುತ್ತಾರೆ.

ತಣ್ಣಗಿನ ದೃಶ್ಯಗಳ ಜೊತೆಗೆ ಕಾವೇರಿದ ಆ್ಯಕ್ಷನ್ ಸನ್ನಿವೇಶಗಳಿಂದ ಇಡುಕಿರಿದ ಸಿನಿಮಾದ ಮೊದಲರ್ಧದ ಲಯ ಸಶಕ್ತ ಚಿತ್ರಕಥಾ ಬರವಣಿಗೆಗೆ ಹಿಡಿದ ಕನ್ನಡಿ. ಆದರೆ, ಮಧ್ಯಂತರದ ನಂತರ ನಾಯಕನ ಫ್ಲ್ಯಾಷ್ಬ್ಯಾಕ್ ಕಥನಕ್ಕೆ ನಿರೀಕ್ಷಿತ ಮಟ್ಟದ ರಕ್ತ–ಮಾಂಸ ತುಂಬಲಿಕ್ಕೆ ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ತೀರಾ ಪೇಲವವೂ ಬಾಲಿಶವೂ ಎನ್ನಿಸುವಂತಹ ಕಥಾ ವಿಸ್ತರಣೆ ಆ ಭಾಗದಲ್ಲಿ ಎದ್ದುಕಾಣುತ್ತದೆ.

ಲೋಕೇಶ್ ತಮ್ಮದೇ ‘ಸಿನಿಮ್ಯಾಟಿಕ್ ಯೂನಿವರ್ಸ್’ ಅನ್ನು ತೇಲಿಬಿಟ್ಟು ವರ್ಷಗಳೇ ಆಗಿವೆ. ‘ಖೈದಿ’, ‘ವಿಕ್ರಂ’, ‘ಮಾಸ್ಟರ್’ ಇವುಗಳೆಲ್ಲದರಲ್ಲೂ ಅವರು ಹಿಂಸಾವಸ್ತುವನ್ನಿರಿಸಿ, ಭಾವುಕ ಕಥನದ ಮೂಲಕ ಪೋಣಿಸುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ‘ಲಿಯೊ’ ಹೊಸ ಸೇರ್ಪಡೆ. ‘ಖೈದಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಾರ್ಜ್ ಮಾರ್ಯನ್ ಈ ಸಿನಿಮಾದಲ್ಲಿ ನೆಪೋಲಿಯನ್ ಎಂಬ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವರ ಸಣ್ಣ ಪಾತ್ರದ ಬರವಣಿಗೆ ಕೂಡ ಈ ಯೂನಿವರ್ಸ್ಗೆ ಒಗ್ಗಿಸುವ ರೀತಿಯಲ್ಲಿ ಇದೆ. ತ್ರಿಶಾ ಹಾಗೂ ಪುಟಾಣಿ ಚಿಂಟು ಪಾತ್ರಗಳ ಗ್ರಾಫ್ ಚಿತ್ರದುದ್ದಕ್ಕೂ ಮುಂದುವರಿಯುವ ಬಗೆ ಆಸಕ್ತಿಕರ. ವಿಜಯ್ ಮಗನ ಪಾತ್ರವನ್ನೂ ತಮ್ಮ ಯೂನಿವರ್ಸ್ನ ತೆಕ್ಕೆಗೆ ತಂದುಕೊಳ್ಳುವ ಬಗೆಯಲ್ಲೇ ಲೋಕೇಶ್ ಸೃಷ್ಟಿಸಿರುವುದಕ್ಕೂ ಅಡಿಗಡಿಗೆ ಸಾಕ್ಷ್ಯಗಳಿವೆ.

ಸಾಕಷ್ಟು ಏರಿಳಿತ ಇರುವ ಪಾತ್ರವನ್ನು ವಿಜಯ್ ಜೀವಿಸಿದ್ದಾರೆ. ತ್ರಿಶಾ ನಿಯಂತ್ರಿತ ಅಭಿನಯ ಚೆನ್ನಾಗಿದೆ. ಸಂಜಯ್ ದತ್ ಹಾಗೂ ಅರ್ಜುನ್ ಸರ್ಜಾ ಪಾತ್ರಗಳು ತುಂಬಾ ‘ಬ್ಲ್ಯಾಕ್ ಆ್ಯಂಡ್ ವೈಟ್’. ಗೌತಮ್ ವಾಸುದೇವ್ ಮೆನನ್ ಫಾರೆಸ್ಟ್ ರೇಂಜರ್ ಪಾತ್ರದಲ್ಲಿ ಕಾಡುತ್ತಾರೆ. ಎಲ್ಲರಿಗಿಂತ ಹೆಚ್ಚು ಅಂಕಗಳು ಸಲ್ಲಬೇಕಾದದ್ದು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸಿನಿಮಾಟೋಗ್ರಾಫರ್ ಮನೋಜ್ ಪರಮಹಂಸ ಅವರಿಗೆ. ಹಾಡುಗಳನ್ನು ತಲೆಗೆ ತಂದುಕೊಳ್ಳದಂತೆ ಚಿತ್ರಕಥೆ ಬರೆಯುವುದು ಲೋಕೇಶ್ ಜಾಯಮಾನ. ಹೀಗಾಗಿ ಅನಿರುದ್ಧ್ ಮೆಟಲ್ ಬ್ಯಾಂಡ್ಗಳನ್ನು ಬಳಸಿ ಮೂಡಿಸಿರುವ ಹಿನ್ನೆಲೆಯ ಸಮಕಾಲೀನ ಸಂಗೀತದ ವರಸೆ ಯುವ ರಸಿಕರನ್ನು ಹಿಡಿದಿಡಬಲ್ಲದು. ಮನೋಜ್ ಪರಮಹಂಸ ಅವರಂತೂ ಸಣ್ಣ–ಪುಟ್ಟ ಚಲನೆ, ಪಾತ್ರದ ಕದಲಿಕೆಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ ಕುಶಲತೆಯಿಂದ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಇಷ್ಟೆಲ್ಲ ಬಿಡಿಸಿ ನೋಡಿದ ನಂತರವೂ ಅನಿಸುವುದು: ಲೋಕೇಶ್ ಈ ಸಿನಿಮಾ ಬರವಣಿಗೆಯಲ್ಲಿ ಅಲ್ಲಲ್ಲಿ ದಿಕ್ಕೆಟ್ಟಂತೆ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.