ಕೂಡು ಕುಟುಂಬದಲ್ಲಿ ಬೆಳೆದ ನನಗೂ ಸಾಧನಾ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ನಾನು ಒಂದು ಪಾತ್ರವನ್ನು ಪ್ರತಿನಿಧಿಸುತ್ತಿದ್ದೇನೆ ಅಷ್ಟೇ. ವೈಯಕ್ತಿಕವಾಗಿ ಸಾಧನಾ (ಪಾತ್ರ) ಬಗ್ಗೆ ನನಗೂ ಅಸಮಧಾನವಿದೆ. ತನ್ನತನವನ್ನು ಉಳಿಸಿಕೊಳ್ಳಲು ಆಕೆ ಮಾಡುವ ತಂತ್ರಗಳು ಕೆಲವೊಮ್ಮೆ ನನಗೇ ಹೀಗೂ ಇರಬಹುದಾ ಎನಿಸುತ್ತದೆ. ವೀಕ್ಷಕರು ಧಾರಾವಾಹಿಗಳನ್ನು ನೋಡಿ ಹೇಗೆ ಇರಬೇಕು, ಹೇಗೆ ಇರಬಾರದು ಎಂದು ತಿಳಿದುಕೊಳ್ಳಬೇಕು. ಖಳನಾಯಕಿ ಕೂಡ ಒಂದು ಪಾತ್ರ, ಅದನ್ನು ಮನರಂಜನೆಯ ರೀತಿ ನೋಡಿದರೆ ಕಲಾವಿದರಿಗೂ ಸಾರ್ಥಕ ಭಾವವಿರುತ್ತದೆ.–ಅಮೃತಾ ರಾಮಮೂರ್ತಿ (ಸಾಧನಾ ಪಾತ್ರಧಾರಿ, ಕೆಂಡಸಂಪಿಗೆ)
ಖಳನಾಯಕಿಯಾಗಿ ಪಾತ್ರ ಮಾಡುವಾಗ ಕೆಲವು ಸನ್ನೀವೇಶ ಅತಿ ಎಂದು ಅನಿಸುತ್ತವೆ. ಹೀಗೆಲ್ಲಾ ಮಾಡಿದರೆ ಜನರು ಹೇಗೆ ನೋಡಬಹುದು ಎನ್ನುವ ಸಣ್ಣ ಅಳುಕು ನಮಗೂ ಕಾಡುತ್ತದೆ. ಕಾಲಮಾನಕ್ಕೆ ತಕ್ಕಂತೆ ಪಾತ್ರಗಳಲ್ಲಿಯೂ ಜನ ಬದಲಾವಣೆ ಕೇಳುತ್ತಾರೆ, ಹೀಗಾಗಿ ಜನರೂ ವಿಲನ್ ಪಾತ್ರಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅಭಿರುಚಿಗೆ ತಕ್ಕಂತೆ ಮನರಂಜನೆ ನೀಡುವುದು ನಮ್ಮ ಜವಾಬ್ದಾರಿ. ಆದರೂ ಕೆಲವೊಮ್ಮೆ ಸೃಷ್ಟಿಸುವ ಸಂದರ್ಭಗಳ ತೀವ್ರತೆಯನ್ನು ಕಡಿಮೆ ಮಾಡಬೇಕಾಗುತ್ತದೆ, ನನ್ನ ಪಾತ್ರದಲ್ಲಿ ನಾನು ಅದನ್ನು ಮಾಡಿದ್ದೇನೆ.–ಅರ್ಚನಾ ಗೌಡ (ಸುಹಾಸಿನಿ ಪಾತ್ರಧಾರಿ, ಗಟ್ಟಿಮೇಳ)
ಬದಲಾದ ಮನಸ್ಥಿತಿ ಧಾರಾವಾಹಿಯಲ್ಲಿ ತೋರಿಸುವ ಪಾತ್ರದಲ್ಲಿರುವಂತೆ ನಿಜ ಜೀವನದಲ್ಲಿ ಇರಲು ಸಾಧ್ಯವಿಲ್ಲ. ಒಬ್ಬ ಹೆಣ್ಣು ಈ ರೀತಿಯೂ ಮಾಡಲು ಸಾಧ್ಯವೇ ಅಂತಾ ಅನಿಸಿದ್ದುಂಟು ನನಗೆ. ಆದರೆ, ಪಾತ್ರಕ್ಕೆ ಪೂರಕವಾಗಿ, ಮನರಂಜನೆಗೆ ನಟಿಸಲೇಬೇಕಾಗುತ್ತದೆ. ಮೇಕಪ್ ಹಾಕಿ ಕ್ಯಾಮೆರಾ ಮುಂದೆ ನಿಂತಾಗ ಪಾತ್ರದಲ್ಲಿ ತೊಡಗಿದಂತೆಯೆ. ಇತ್ತೀಚೆಗೆ ಜನರ ಮನಸ್ಥಿತಿಯೂ ಬದಲಾಗಿದೆ. ಖಳನಾಯಕಿಯಾಗಿ ನಟಿಸುವವರನನ್ನು ಅದೇ ಪಾತ್ರ ನೋಡುವುದಕ್ಕಿಂತ ನಟನೆಯನ್ನು ಗುರುತಿಸಿ ಪ್ರಶಂಸಿಸುತ್ತಾರೆ.–ಜಾನ್ಸಿ ಸುಬ್ಬಯ್ಯ ( ಮಾನ್ಯತಾ ಪಾತ್ರಧಾರಿ, ರಾಮಾಚಾರಿ)
ಒಳ್ಳೆಯದು ಇದ್ದಲ್ಲಿ ಕೆಟ್ಟದ್ದು ಇದ್ದೇ ಇರುತ್ತದೆ. ಕೆಟ್ಟದ್ದರ ನಿವಾರಣೆಗೆ ಒಳ್ಳೆಯ ಪಾತ್ರಗಳಿರುತ್ತವೆ. ಅದಕ್ಕೆ ಧಾರಾವಾಹಿ ಹೊರತಲ್ಲ. ಮನರಂಜನೆಗೆಂದು ಖಳನಾಯಕಿಯರ ಪಾತ್ರ ಸೃಷ್ಟಿದ್ದರೂ ಜೀವನ ಸತ್ಯಕ್ಕೆ ಧಾರಾವಾಹಿಗಳು ಹತ್ತಿರವಾಗಿರುತ್ತವೆ. ಖಳನಾಯಕಿಯರ ಪಾತ್ರದಲ್ಲಿ ಹೆಣ್ಣುಮಕ್ಕಳನ್ನೇ ಯಾಕೆ ಹೆಚ್ಚು ತೋರಿಸುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತದೆ, ಧಾರಾವಾಹಿಗಳಲ್ಲಿ ಹೆಣ್ಣುಮಕ್ಕಳನ್ನೇ ಒಳ್ಳೆಯ ಪಾತ್ರಗಳಲ್ಲೂ ತೋರಿಸುತ್ತಾರೆ ಅದನ್ನು ನೋಡಿ ಅಳವಡಿಸಿಕೊಂಡರೆ ಒಳ್ಳೆಯದು.–ಮಾಲತಿ ಸರದೇಶಪಾಂಡೆ (ಸೀತಾ ಪಾತ್ರಧಾರಿ, ಸತ್ಯ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.