ಲಿಂಗ ಅಸಮಾನತೆ ಹೆಚ್ಚಳ
ಆದಾಯವನ್ನು ಕಾರ್ಮಿಕರ ಆದಾಯದ ಪಾಲು, ಬಂಡವಾಳದಿಂದ ಬರುವ ಪಾಲು ಎಂದು ವಿಂಗಡಿಸಿ ನೋಡುವುದರ ಜತೆಗೆ, ಅಸಮಾನತೆಯನ್ನು ಅರಿಯಲು ಇನ್ನೂ ಹಲವು ಮಾನದಂಡಗಳನ್ನು ಬಳಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾದದ್ದು ಕಾರ್ಮಿಕರ ಆದಾಯದ ಹಂಚಿಕೆ. ಅಂದರೆ, ಕಾರ್ಮಿಕರ ಆದಾಯದ ಪಾಲಿನಲ್ಲಿರುವ ಲಿಂಗ ಅಸಮಾನತೆ. ಜಾಗತಿಕ ಮಟ್ಟದಲ್ಲಿ ಕಾರ್ಮಿಕರ ಆದಾಯದಲ್ಲಿ ಗಣನೀಯ ಪ್ರಮಾಣದ ಲಿಂಗ ಅಂತರ ಕಂಡುಬಂದಿದೆ. 2005ರಲ್ಲಿ ಜಾಗತಿಕ ಮಟ್ಟದಲ್ಲಿ ಮಹಿಳೆಯರು ಮತ್ತು ಪುರುಷರ ಕಾರ್ಮಿಕ ಆದಾಯದ ಅನುಪಾತ ಶೇ 46.8ರಷ್ಟಿತ್ತು. ಅಂದರೆ, ಕಾರ್ಮಿಕ ಆದಾಯವಾಗಿ ಪುರುಷ ಗಳಿಸುವ ಪ್ರತಿ ಒಂದು ಡಾಲರ್‌ಗೆ ಮಹಿಳೆ ಅದರ ಶೇ 47ರಷ್ಟನ್ನು ಮಾತ್ರ ಗಳಿಸುತ್ತಿದ್ದಾಳೆ. 2024ರ ಹೊತ್ತಿಗೆ ಈ ಅನುಪಾತವು ಶೇ 51.8 ಆಗಿದ್ದು, ಅಲ್ಪ ಚೇತರಿಕೆ ಕಂಡಿದೆ. ಪ್ರದೇಶದಿಂದ ಪ್ರದೇಶಕ್ಕೆ ಈ ಅನುಪಾತದಲ್ಲಿ ವ್ಯತ್ಯಾಸ ಕಂಡುಬರುತ್ತದೆ.